ಕ್ಯಾನ್ಸರ್ ಬಗ್ಗೆ ತಮ್ಮ ಸುತ್ತ ಹಬ್ಬಿರುವ ಸುದ್ದಿಯ ಕುರಿತು ಇದೇ ಮೊದಲ ಬಾರಿಗೆ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಮೌನ ಮುರಿದಿದ್ದಾರೆ. ‘ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಿಕೊಂಡು ನಾನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೆನೆಂದು ಮಾಧ್ಯಮಗಳು ಸುಳ್ಳು ಸುದ್ದಿ ಹರಡಿವೆ' ಎಂದು ಚಿರಂಜೀವಿ ಹೇಳಿದ್ದಾರೆ.
ಈ ಬಗ್ಗೆ ತೆಲುಗಿನಲ್ಲಿ ಟ್ವೀಟ್ ಮಾಡಿರುವ ನಟ ಚಿರಂಜೀವಿ, ‘ಹಿಂದೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾಗ ಕ್ಯಾನ್ಸರ್ ಅಲ್ಲದ ಅಂಶಗಳು ಪತ್ತೆಯಾಗಿದ್ದು, ತಕ್ಷಣ ಅವುಗಳನ್ನು ತೆಗೆಯಲಾಗಿತ್ತು. ಒಂದು ವೇಳೆ ಅವುಗಳನ್ನು ಹಾಗೆ ಬಿಟ್ಟಿದ್ದರೆ ಅವುಗಳು ಕ್ಯಾನ್ಸರ್ ಗಡ್ಡೆಗಳಾಗಿ ಮಾರ್ಪಾಡಾಗುವ ಸಂಭವವಿತ್ತು. ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟನೆ ಮಾಡುವಾಗ ನಾನು ಹೇಳಿದ್ದು ಇದನ್ನೇ. ಆದರೆ, ಮಾಧ್ಯಮಗಳು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ನನಗೆ ಕ್ಯಾನ್ಸರ್ ಇದ್ದು, ಅದರಿಂದ ಗುಣ ಮುಖನಾಗಿದ್ದೆ ಎಂಬಂತೆ ಸುದ್ದಿ ಪ್ರಸಾರ ಮಾಡಿದ್ದವು' ಎಂದು ಬರೆದುಕೊಂಡಿದ್ದಾರೆ.
‘ಕ್ಯಾನ್ಸರ್ ಕೇಂದ್ರ ಉದ್ಘಾಟನೆ ಮಾಡುವಾಗ ಕ್ಯಾನ್ಸರ್ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು ಎಂದು ಹೇಳಿದ್ದೆ. ನಿಯಮಿತ ವೈದ್ಯಕೀಯ ಪರೀಕ್ಷೆಯಿಂದ ಕ್ಯಾನ್ಸರ್ ಬಾರದಂತೆ ತಡೆಗಟ್ಟಬಹುದು. ನಾನು ಈ ಬಗ್ಗೆ ಜಾಗೃತನಾಗಿದ್ದು, ಕೊಲೊನ್ ಸ್ಕೋಪ್ ಪರೀಕ್ಷೆ ಒಳಪಟ್ಟಿದ್ದೇನೆ. ಪರೀಕ್ಷೆ ಮಾಡದಿದ್ದರೆ ನಾನು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿತ್ತು. ಅದಕ್ಕಾಗಿ ಪ್ರತಿಯೊಬ್ಬರು ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದಿದ್ದೆ' ಎಂದು ತಾವು ಹೇಳಿರುವ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
కొద్ది సేపటి క్రితం నేనొక క్యాన్సర్ సెంటర్ ని ప్రారంభించిన సందర్భంగా క్యాన్సర్ పట్ల అవగాహన పెరగాల్సిన అవసరం గురించి మాట్లాడాను. రెగ్యులర్ గా మెడికల్ టెస్టులు చేయించుకుంటే క్యాన్సర్ రాకుండా నివారించవచ్చు అని చెప్పాను. నేను అలర్ట్ గా వుండి కొలోన్ స్కోప్ టెస్ట్…
— Chiranjeevi Konidela (@KChiruTweets) June 3, 2023
‘ಕೆಲವು ಸುದ್ದಿ ಸಂಸ್ಥೆಗಳು ನಾನು ಹೇಳಿರುವುದನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ‘ಕ್ಯಾನ್ಸರ್‌ಗೆ ತುತ್ತಾದ ಚಿರಂಜೀವಿ‘ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಅಲ್ಲದೇ ಚಿಕಿತ್ಸೆ ನಂತರ ನಾನು ಗುಣಮುಖನಾಗಿದ್ದೆ ಎಂಬಂತೆ ಬರೆದುಕೊಂಡಿದ್ದವು. ಈ ವಿಷಯ ಅನಗತ್ಯ ಗೊಂದಲವನ್ನೇ ಸೃಷ್ಟಿಸಿದೆ. ನನ್ನ ಹಿತೈಷಿಗಳು ನನಗೆ ಕರೆ ಮಾಡಿ ಹಾಗೂ ಸಂದೇಶ ಕಳುಹಿಸುವುದರ ಮೂಲಕ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ನಾನು ಈಗ ಸ್ಟಷ್ಟನೆ ಕೊಡುತ್ತಿರುವುದು ಅವರೆಲ್ಲರಿಗಾಗಿ' ಎಂದಿದ್ದಾರೆ.
'ನಾನು ಮಾಧ್ಯಮ ಸಂಸ್ಥೆಗಳಿಗೆ ಹೇಳುವುದೆನೆಂದರೆ ವಿಷಯ ಸರಿಯಾಗಿ ಅರ್ಥೈಸಿಕೊಳ್ಳದೆ ಯಾವುದನ್ನು ಬರೆಯಬೇಡಿ. ನಿಮ್ಮ ತಪ್ಪಿನಿಂದ ಹಲವಾರು ಜನರು ಭಯ ಪಡುತ್ತಾರೆ. ಕೆಲವರಿಗೆ ಇದರಿಂದ ನೋವಾಗುತ್ತದೆ' ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.