ಮಂಗಳವಾರ, ಮೇ 18, 2021
30 °C
ಸುರಪುರದ ರಾಘವೇಂದ್ರ ಮಾಚಗುಂಡಾಳ ನಾಯಕ ನಟ

ನಿರೀಕ್ಷೆ ಮೂಡಿಸಿದ ‘ಚಿ.ಸೌ.ಕನ್ಯಾಕುಮಾರಿ’ ಚಲನಚಿತ್ರ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕಲ್ಯಾಣ ಕರ್ನಾಟಕದ ಉದಯೋನ್ಮುಖ ಕಲಾವಿದರನ್ನು ಬಳಸಿಕೊಂಡು ನಿರ್ಮಿಸುತ್ತಿರುವ ‘ಚಿ.ಸೌ.ಕನ್ಯಾಕುಮಾರಿ’ ಚಲನಚಿತ್ರ ಈ ಭಾಗದ ಚಿತ್ರ ರಸಿಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.

ಉತ್ತರ ಕರ್ನಾಟಕದ ಭಾಗದ ಮಹಿಳೆಯರು ಅನುಭವಿಸುವ ಕಷ್ಟ ನಷ್ಟ, ಆಚಾರ ವಿಚಾರಗಳನ್ನು ವಸ್ತು ವಿಷಯವನ್ನಾಗಿ ಇಟ್ಟುಕೊಂಡು, ನೈಜ ಘಟನೆಗಳ ಆಧಾರದ ಮೇಲೆ ತಾಲ್ಲೂಕಿನ ಕೆಂಭಾವಿಯ ಲೆಮನ್ ಪರಶುರಾಮ ಚಿತ್ರಕಥೆ ಹೆಣೆದಿದ್ದಾರೆ. ಜತೆಗೆ ನಿರ್ದೇಶನ, ಸಾಹಿತ್ಯದ ಹೊಣೆ ಹೊತ್ತಿದ್ದಾರೆ.

ತಾಲ್ಲೂಕಿನ ನಡಕೂರ ಗ್ರಾಮದ ಎಸ್.ಆರ್. ಪಾಟೀಲ, ನಾಯಕ ನಟ ರಾಘವೇಂದ್ರ ಜೊತೆಗೆ ಅಯ್ಯಣ್ಣ ಬೆಲ್ಲದ ಮತ್ತು ಬಸವರಾಜ ಪುಜಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಳಗಾವಿಯ ಶ್ರುತಿ ಪಾಟೀಲ ನಾಯಕ ನಟಿ.

ಜಾನಪದ ಗಾಯಕ ಗುರುರಾಜ ಹೊಸಕೋಟೆ, ನಾಟಕ ಕಲಾವಿದ ನಟರಾಜ ದಾವಣಗೆರೆ, ಸುಜಾತಾ ಹಿರೇಮಠ, ರೇಣು ಶಿಕಾರಿ, ಗಂಗಾಧರ ಗೋಗಿ, ರಾಕ್ಸ್ ಮನು, ಬಸವರಾಜ ಗುಡ್ಡಪ್ಪನವರ್, ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ತಾಲ್ಲೂಕಿನ ದೇವತ್ಕಲ್ ಗ್ರಾಮದ ವೆಂಕಟೇಶ ಸಹ ಕಲಾವಿದರು.

ಶ್ರೀರಾಮ ಜಂಬಗಿ ಅವರ ಛಾಯಾಗ್ರಹಣ ಗಮನ ಸೆಳೆದಿದೆ. ಎ.ಟಿ. ರವೀಶ ಸಂಗೀತ ನಿರ್ದೇಶನದಲ್ಲಿ ಈಗಾಗಲೆ 5 ಹಾಡುಗಳು ಧ್ವನಿ ಮುದ್ರಣಗೊಂಡಿದ್ದು ಇಂಪಾಗಿವೆ. ಹಿನ್ನೆಲೆ ಗಾಯಕರಾದ ಅನನ್ಯ ಭಟ್, ಅನುರಾಧಾ ಭಟ್, ಸಂತೋಷ ವೆಂಕಿ ಧ್ವನಿ ನೀಡಿದ್ದಾರೆ.

ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿರುವ ದೊಡ್ಡ ದೊಡ್ಡ ಮನೆಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ತಾಲ್ಲೂಕಿನ ಕೆಂಭಾವಿ, ಮಾಚಗುಂಡಾಳ, ಹೆಬ್ಬಾಳ ಪರಮಾನಂದ ಜಾತ್ರೆ ಸೇರಿದಂತೆ ಬಹುತೇಕ ಈ ಭಾಗದಲ್ಲೆ ಚಿತ್ರೀಕರಣ ನಡೆಸಲಾಗಿದೆ.

‘ಶೇ 80ರಷ್ಟು ಚಿತ್ರೀಕರಣ ಮಗಿದಿದೆ. ಅತಿಥಿ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಇಲ್ಲವೇ ಸುದೀಪ್ ನಟಿಸಲಿದ್ದಾರೆ.  ದಸರಾ ಅಥವಾ ದೀಪಾವಳಿಗೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ’ ಎಂದು ನಿರ್ದೇಶಕ ಪರಶುರಾಮ ಹೇಳುತ್ತಾರೆ.

ಲಿಮ್ಕಾ ಖ್ಯಾತಿಯ ಪರಶುರಾಮ: ಚಿತ್ರದ ನಿರ್ದೇಶಕ ಪರಶುರಾಮ 2008ರಲ್ಲಿ, 5 ನಿಮಿಷದಲ್ಲಿ 25 ನಿಂಬೆಹಣ್ಣುಗಳನ್ನು ತಿಂದು ಲಿಮ್ಕಾ ದಾಖಲೆ ಸೇರಿದ್ದರು. ತಮ್ಮ 10ನೇ ವರ್ಷದಲ್ಲಿ ಚಿತ್ರರಂಗದ ಕನಸು ಕಂಡಿದ್ದ ಅವರು ಬೆಂಗಳೂರಿಗೆ ತೆರಳಿ ಕಳೆದ 15 ವರ್ಷಗಳಿಂದ ಚಿತ್ರರಂಗದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈಗ ಸ್ವತಂತ್ರ ನಿರ್ದೇಶಕರಾಗಿ ‘ಚಿ.ಸೌ.ಕನ್ಯಾಕುಮಾರಿ’ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ನಾಯಕ ನಟ ರಾಘವೇಂದ್ರ ಅವರಿಗೆ ಚಿಕ್ಕಂದಿನಿಂದಲೆ ಸಿನಿಮಾ ಗೀಳು. ಅನೇಕ ಸಲ ಬೆಂಗಳೂರಿಗೆ ತೆರಳಿ ಚಲನಚಿತ್ರಗಳಿಗೆ ಎಡಿಶನ್ ಕೊಟ್ಟಿದ್ದಾರೆ. ಗಾಡ್‍ಫಾದರ್ ಇಲ್ಲದ ಕಾರಣ ಯಾವ ಚಿತ್ರಕ್ಕೂ ಆಯ್ಕೆಯಾಗಿರಲಿಲ್ಲ.

ಒಮ್ಮೆ ಎಡಿಶನ್ ಕೊಡುವಾಗ ಪರಶುರಾಮ ಅವರ ಆಕಸ್ಮಿಕ ಭೇಟಿ ಆಯಿತು. ಇಬ್ಬರೂ ಚಿತ್ರ ನಿರ್ಮಾಣದ ಮಾತುಕತೆಯಾಡಿ ಈ ಭಾಗದ ತಂಡ ಕಟ್ಟಿಕೊಂಡು ಧೈರ್ಯ ಮಾಡಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪರಶುರಾಮ ಅವರಿಂದ ರಾಘವೇಂದ್ರ ಅವರ ಕನಸು ನನಸಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು