ಭಾನುವಾರ, ಜುಲೈ 25, 2021
25 °C

ಜನಾಂಗೀಯ ದ್ವೇಷ: ನೋಡಲೇ ಬೇಕಾದ 5 ಸಿನಿಮಾಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಜಾರ್ಜ್ ಫ್ಲಾಯ್ಡ್‌ ಸಾವಿನ ಪ್ರಕರಣವು ಇಂದಿಗೂ ವಿಶ್ವದಲ್ಲಿ ಜನಾಂಗೀಯ ತಾರತಮ್ಯ ಜೀವಂತವಾಗಿರುವುದಕ್ಕೆ ಕನ್ನಡಿ ಹಿಡಿದಿದೆ. ವಿಶ್ವದಾದ್ಯಂತ ಈ ಅನಿಷ್ಟ ಪದ್ಧತಿಯ ವಿರುದ್ಧ ಆಕ್ರೋಶ ಹೆಚ್ಚಿದೆ. ಬಿಳಿಯರ ದೌರ್ಜನ್ಯದ ವಿರುದ್ಧ ಹೋರಾಟದ ಕೂಗು ದುಪ್ಪಟ್ಟುಗೊಂಡಿದೆ. ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ವರ್ಣಭೇದ ನೀತಿಯ ವಿರುದ್ಧ ಸಾವಿರಾರು ಜನರು ಹೋರಾಡಿ ಜೀವತೆತ್ತಿದ್ದರೂ ಇನ್ನೂ ಮೂಲೋತ್ಪಾಟನೆಯಾಗಿಲ್ಲ.

ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವರ್ಣಭೇದ ನೀತಿ ಮತ್ತು ಜನಾಂಗೀಯ ದೌರ್ಜನ್ಯವನ್ನು ಪರದೆ ಮೇಲೂ ತೋರಿಸಲು ಹಲವು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಜನಾಂಗೀಯ ದ್ವೇಷ ಕುರಿತ ಬಹುತೇಕ ಸಿನಿಮಾಗಳು ಸತ್ಯ ಘಟನೆಗಳನ್ನೇ ಆಧರಿಸಿವೆ. ಮನುಕುಲಕ್ಕೆ ಕಂಟಕವಾಗಿರುವ ವರ್ಣಭೇದದ ಸುತ್ತ ನಿರ್ಮಿಸಿದ ನೋಡಲೇ ಬೇಕಾದ ಐದು ಇಂಗ್ಲಿಷ್‌ ಸಿನಿಮಾಗಳು ಇಲ್ಲಿವೆ.

ಗೆಟ್‌ ಔಟ್‌(Get out)

ಈ ಚಿತ್ರ ತೆರೆಕಂಡಿದ್ದು 2017ರಲ್ಲಿ. ಜೋರ್ಡಾನ್‌ ಪೀಲೆ ಇದರ ನಿರ್ದೇಶಕ. ಅಂದಹಾಗೆ ಇದು ಆತ ನಿರ್ದೇಶಿಸಿದ ಮೊದಲ ಚಿತ್ರವೂ ಹೌದು. ಈ ಹಾರರ್‌ ಚಿತ್ರವು ಅಮೆರಿಕದ ಸಮಾಜದಲ್ಲಿ ಪ್ರಚಲಿತದಲ್ಲಿರುವ ಜನಾಂಗೀಯ ತಾರತಮ್ಯದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಯುವ ಆಫ್ರಿಕನ್‌–ಅಮೆರಿಕನ್‌ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೋದಾಗ ನಡೆಯುವ ಘಟನಾವಳಿಗಳೇ ಇದರ ಹೂರಣ.

ಬ್ಲ್ಯಾಕ್‌ಕೆಕ್ಲಾನ್ಸ್‌ಮನ್ (BlacKkKlansman)

ಈ ಚಿತ್ರ ನಿರ್ದೇಶಿಸಿದ್ದು ಸ್ಪೈಕ್‌ ಲೀ. ಇದು 2018ರಲ್ಲಿ ತೆರೆಕಂಡಿತು. ಆಫ್ರಿಕನ್‌–ಅಮೆರಿಕನ್‌ ಪೊಲೀಸ್‌ ಅಧಿಕಾರಿಯ ತನಿಖೆಯ ಸುತ್ತ ಇದರ ಕಥೆ ಹೆಣೆಯಲಾಗಿದೆ. ಆಫ್ರಿಕನ್‌– ಅಮೆರಿಕನ್ ಜನರನ್ನು ದ್ವೇಷಿಸುವ ಸ್ಥಳೀಯ ಗುಂಪಿನ(Ku Klux Klan) ಚಟುವಟಿಕೆ ಭೇದಿಸುವುದೇ ಈ ಅಧಿಕಾರಿಯ ಕೆಲಸ. ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ. ವರ್ಣಭೇದ ನೀತಿ, ಬಡತನ, ರಾಜಕೀಯದ ಸುತ್ತ ಚಿತ್ರಕಥೆ ಹೆಣೆಯುವುದರಲ್ಲಿ ಸ್ಪೈಕ್‌ ಲೀ ಎತ್ತಿದ ಕೈ. ಇದರಲ್ಲಿ ಅವರು ಹಾಸ್ಯದ ಮೂಲಕ ಜನಾಂಗೀಯ ತಾರತಮ್ಯದ ಕಥೆಯನ್ನು ಬಿಡಿಸಿಟ್ಟಿದ್ದಾರೆ.

12 ಇಯರ್ಸ್‌ ಎ ಸ್ಲೇವ್‌ (2 Years a Slave)

ಇದು ಜೀತ ಪದ್ಧತಿಯ ಕರಾಳಮುಖವನ್ನು ತೆರೆದಿಡುವ ಚಿತ್ರ. ಇದನ್ನು ನಿರ್ದೇಶಿಸಿದ್ದು ಸ್ಟೀವ್ ಮೆಕ್‌ಕ್ವೀನ್. ಮೂಲತಃ ಇದು ನಾಟಕ. ಇದನ್ನು ತೆರೆಯ ಮೇಲೆ ತಂದಿದ್ದು ಸ್ಟೀವ್ ಮೆಕ್‌ಕ್ವೀನ್ ಅವರ ಹೆಗ್ಗಳಿಕೆ. ಅಂದಹಾಗೆ ಇದು ತೆರೆಕಂಡಿದ್ದು 2014ರಲ್ಲಿ.

ಸೆಲ್ಮಾ(Selma)

ಈ ಚಿತ್ರಕ್ಕೆ ಆ್ಯಕ್ಷನ್‌ ಹೇಳಿದ್ದು ಅವ ಡುವೆರ್ನ್. ಜೇಮ್ಸ್ ಬೆವೆಲ್, ಹೊಸಿಯಾ ವಿಲಿಯಮ್ಸ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಜಾನ್ ಲೆವಿಸ್ ನೇತೃತ್ವದಡಿ ಕರಿಯ ಜನಾಂಗದವರಿಗೂ ಮತದಾನದ ಹಕ್ಕುಗಳನ್ನು ನೀಡುವಂತೆ 1965ರಲ್ಲಿ ನಡೆದ ಹೋರಾಟವೇ ಇದರ ಕಥಾಹಂದರ. 2014ರಲ್ಲಿ ಈ ಚಿತ್ರ ತೆರೆಕಂಡಿತು.

ಮಾಲ್ಕಮ್ ಎಕ್ಸ್ (Malcolm X)

ಆಫ್ರಿಕನ್-ಅಮೆರಿಕನ್ ಕಾರ್ಯಕರ್ತ ಮಾಲ್ಕಮ್ ಎಕ್ಸ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಈತ ಅಮೆರಿಕದಲ್ಲಿ ನಡೆದ ನಾಗರಿಕ ಹಕ್ಕುಗಳ ಚಳವಳಿಯ ಮುಂಚೂಣಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಸಿನಿಮಾ ತೆರೆಕಂಡಿದ್ದು, 1992ರಲ್ಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು