ಶುಕ್ರವಾರ, ಜನವರಿ 17, 2020
24 °C

‘ಅಕ್ಕಿ’ಗೆ ನಿರ್ಮಾ ಟ್ರಬಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆನಡಾ ಪೌರತ್ವ ಸೇರಿದಂತೆ ನಾನಾ ಕಾರಣಗಳಿಗಾಗಿ 2019ರಲ್ಲಿ ನೆಟ್ಟಿಗರಿಂದ ಅತಿ ಹೆಚ್ಚು ಟ್ರೋಲ್‌ಗೆ ಒಳಗಾದ ನಟ ಅಕ್ಷಯ್‌ ಕುಮಾರ್‌!

ಹೊಸ ವರ್ಷ ಆರಂಭದಲ್ಲಿಯೇ ಅಕ್ಷಯ್‌ ಸುತ್ತ ಹೊಸ ವಿವಾದ ಸುತ್ತಿಕೊಂಡಿದೆ. ಬಾಲಿವುಡ್‌ ಖಿಲಾಡಿ ಅಕ್ಷಯ್‌ ನಟಿಸಿರುವ ‘ವಾಷಿಂಗ್‌ ಪೌಡರ್‌ ನಿರ್ಮಾ’ ಹೊಸ ಜಾಹೀರಾತು ವಿವಾದದ ಕಿಡಿ ಹೊತ್ತಿಸಿದೆ. ಅಕ್ಷಯ್‌ ಮರಾಠ ಯೋಧರ ಮಾವಲಾ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಿರ್ಮಾ ಜಾಹೀರಾತು ಮರಾಠರನ್ನು ಅಣಕಿಸುವಂತಿದೆ ಎಂಬ ಅಪಸ್ವರ ಕೆಳಿಬಂದಿದೆ.  

ಯುದ್ಧದಲ್ಲಿ ಕೊಳೆಯಾದ ತನ್ನ ಬಟ್ಟೆಯನ್ನು ಅಕ್ಷಯ್‌ ತಾನೇ ನಿರ್ಮಾ ವಾಷಿಂಗ್‌ ಪೌಡರ್‌ನಿಂದ ತೊಳೆದುಕೊಳ್ಳುತ್ತಾರೆ. ಹಿನ್ನೆಲೆಯಲ್ಲಿ ಅವರೊಂದಿಗೆ ಇನ್ನೂ ಅನೇಕ ಮರಾಠ ಯೋಧರು ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಮರಾಠರಿಗೆ ಅವಮಾನಿಸಲಾಗಿದೆ. ಹೀಗಾಗಿ ನಿರ್ಮಾ ಬಳಸುವುದನ್ನು ಕೈಬಿಡಬೇಕು ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅಕ್ಷಯ್‌ ಕುಮಾರ್ ಆಗಲಿ, ನಿರ್ಮಾ ಡಿಟೆರ್ಜಂಟ್ ಕಂಪನಿಯಾಗಲಿ ಇದುವರೆಗೂ ಬಾಯ್ಬಿಟ್ಟಿಲ್ಲ. ಮರಾಠರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ಅಕ್ಷಯ್‌ ಸದ್ಯದಲ್ಲಿಯೇ ಸಾರ್ವಜನಿಕವಾಗಿ ಕ್ಷಮೆ ಕೇಳಲಿದ್ದಾರೆ ಎಂದು ಅಕ್ಕಿಯ ಸ್ನೇಹಿತರು ಹೇಳುತ್ತಿದ್ದಾರೆ. ತಪ್ಪು ಮಾಡುವುದು, ಕ್ಷಮಾಪಣೆ ಕೇಳುವುದು ಬಾಲಿವುಡ್‌ನಲ್ಲಿ ಸಾಮಾನ್ಯವಾಗಿ ಹೋಗಿದೆ. ನಂತರ ಮತ್ತೇ ಅದೇ ತಪ್ಪುಗಳು ಪುನಾವರ್ತನೆಯಾಗುತ್ತಲೇ ಇರುತ್ತವೆ ಎಂದು ಚಿತ್ರ ನಿರ್ಮಾಪಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.  

ಈ ಜಾಹೀರಾತು ವಿವಾದ ಹುಟ್ಟು ಹಾಕಲಿದೆ ಎಂಬ ಕಲ್ಪನೆ ಅಕ್ಷಯ್‌ ಕುಮಾರ್‌ಗೆ ಇರಲಿಲ್ಲ. ಕಳೆದ ಒಂದು ವರ್ಷದಿಂದ ಅಕ್ಷಯ್‌ ಕುಮಾರ್‌ ವಿರುದ್ಧ ಒಂದಿಲ್ಲ ಒಂದು ಕ್ಷುಲ್ಲಕ ಕಾರಣಗಳಿಗಾಗಿ ಅನಗತ್ಯವಾಗಿ ವಾಗ್ದಾಳಿ, ಟೀಕೆ ಮಾಡಲಾಗುತ್ತಿದೆ ಎನ್ನುವುದು ಅಕ್ಕಿಯ ಸ್ನೇಹಿತರ ಆರೋಪ. 

#ಬಾಯ್‌ಕಾಟ್‌ನಿರ್ಮಾ ಹ್ಯಾಶ್‌ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಆರು ದಿನಗಳಲ್ಲಿ 22 ಸಾವಿರ ಟ್ವೀಟ್‌ ಮಾಡಲಾಗಿದೆ. 

‘ರಾಜನ ಸೇನೆಗೆ ವೈರಿಗಳನ್ನಷ್ಟೇ ಅಲ್ಲ, ಬಟ್ಟೆಗಳ ಕೊಳೆಯನ್ನು ತೊಳೆಯುವುದು ಗೊತ್ತು’ ಎಂದು ಅಕ್ಷಯ್‌ ಕುಣಿಯುತ್ತಾ ಹಾಡು ಹೇಳುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜ ಮತ್ತು ಮರಾಠರನ್ನು ಅವಮಾನಿಸಿದ್ದಾರೆ ಎಂದು ಮುಂಬೈ ಪೊಲೀಸ್‌ ಠಾಣೆಯಲ್ಲಿ ಅಕ್ಷಯ್‌ ಕುಮಾರ್‌ ವಿರುದ್ಧ ದೂರು ಕೂಡ ದಾಖಲಾಗಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಮರಾಠರ ಭಾವನೆಗಳ ಜತೆ ಚೆಲ್ಲಾಟವಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. 

ಈ ನಡುವೆ, ವಿವಾದದ ಕಿಡಿ ಹೊತ್ತಿಸಿದ ಈ ಜಾಹೀರಾತು ಪ್ರದರ್ಶನವನ್ನು ನಿರ್ಮಾ ಸಂಸ್ಥೆ ಹಿಂತೆಗೆದುಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಇನ್ನೂ ದೃಢಪಟ್ಟಿಲ್ಲ.

ಜಾಹೀರಾತಿನಲ್ಲಿ ನಟಿಸಿದ ನಂತರ ಅಕ್ಕಿ,‘ದೂದ್‌ ಸೀ ಸಫೇದಿ ನಿರ್ಮಾ ಸೇ ಆಯೀ’ ಇನ್ನೂ ನಮ್ಮ ಕಿವಿಯಲ್ಲಿ ಗುಂಯ್ ಗುಟ್ಟತ್ತಿದೆ. ಈಗ ಅದೇ ನಿರ್ಮಾ ವಾಷಿಂಗ್‌ ಪೌಡರ್‌ ಕುಟುಂಬದ ಸದಸ್ಯನಾಗಿದ್ದೇನೆ. ಜಾಹೀರಾತು ವೀಕ್ಷಿಸಲು ನಿಮ್ಮಂತೆ ನಾನು ಕೂಡ ತುದಿಗಾಲ ಮೇಲೆ ನಿಂತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು