ಸೋಮವಾರ, ಸೆಪ್ಟೆಂಬರ್ 20, 2021
23 °C

ನಿತ್ಯಾ ಮೆನನ್‌ ಲಿಪ್‌ಲಾಕ್‌ ದೃಶ್ಯ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ನಟಿ ನಿತ್ಯಾ ಮೆನನ್ ಅಭಿನಯಿಸಿದ ಮೊದಲ ಚಿತ್ರ ‘ಸೆವೆನ್ ಒ ಕ್ಲಾಕ್’. ಇದಾದ ಬಳಿಕ ಆಕೆ ‘ಮೈನಾ’, ‘ಕೋಟಿಗೊಬ್ಬ 2’ದಂತಹ ಸೂಪರ್‌ಹಿಟ್‌ ಚಿತ್ರಗಳಲ್ಲಿ ನಟಿಸಿದರು. ತೆಲುಗು, ತಮಿಳು, ಮಲಯಾಳ, ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಕೆಯ ಅಭಿಮಾನಿಗಳ ಬಳಗ ದೊಡ್ಡದು. ಯಾವುದೇ ಪಾತ್ರ ನೀಡಿದರೂ ತೆರೆಯ ಮೇಲೆ ಅದಕ್ಕೆ ಜೀವ ತುಂಬ ಕಲೆ ಅವರಿಗೆ ಕರಗತವಾಗಿದೆ. ಮತ್ತೊಂದೆಡೆ ಪ್ರಯೋಗಾತ್ಮಕ ಚಿತ್ರಗಳಲ್ಲೂ ನಟಿಸಿ ಆಕೆ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.

ಪ್ರಸ್ತುತ ನಿತ್ಯಾ ‘ಬ್ರೀತ್: ಇನ್ ಟು ದಿ ಶಾಡೋ’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರದು ಲೆಸ್ಬಿಯನ್‌ ಪಾತ್ರ. ಈ ಸರಣಿಯಲ್ಲಿ ನಿತ್ಯಾ ಮತ್ತು ಶ್ರುತಿ ಬಾಪ್ನ ಕಿಸ್‌ ಮಾಡುತ್ತಿರುವ ದೃಶ್ಯ ವೈರಲ್‌ ಆಗಿದೆ. ಅಂದಹಾಗೆ ನಿತ್ಯಾ ಇಂತಹ ಪಾತ್ರ ನಿಭಾಯಿಸಿರುವುದು ಹೊಸತೇನಲ್ಲ. ಟಾಲಿವುಡ್‌ನ ‘ವಿಸ್ಮಯ’ ಚಿತ್ರದಲ್ಲಿ ಅವರು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗುವ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಎರಡು ವರ್ಷದ ಹಿಂದೆ ತೆರೆಕಂಡ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಪ್ರಶಾಂತ್‌ ವರ್ಮಾ. ಇದರಲ್ಲಿ ಇಶಾ ರೆಬ್ಬಾ ಮತ್ತು ನಿತ್ಯಾ ಲಿಪ್‌ಲಾಕ್‌ ದೃಶ್ಯ ಆಗ ಚರ್ಚೆಗೆ ಗ್ರಾಸವಾಗಿತ್ತು.

ಈಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ನಿತ್ಯಾ ನಟನೆಯ ‘ಬ್ರೀತ್: ಇನ್ ಟು ದಿ ಶಾಡೋ’ ವೆಬ್‌ ಸರಣಿ ಬಿಡುಗಡೆಯಾಗಿದೆ. ಲಿಪ್‌ಲಾಕ್‌ ದೃಶ್ಯಕಂಡು ಆಕೆಯ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಆಕೆಯ ವೃತ್ತಿಬದುಕಿನಲ್ಲಿಯೇ ವಿಶಿಷ್ಟವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಇದು ನನ್ನ ವೃತ್ತಿಬದುಕಿನಲ್ಲಿಯೇ ಸವಾಲಿನ ಪಾತ್ರ. ಸಾಕಷ್ಟು ಸಂಕೀರ್ಣ ಮತ್ತು ಹಲವು ಎಳೆಗಳನ್ನು ಹೊಂದಿರುವ ಈ ಪಾತ್ರ ನಿರ್ವಹಿಸುವಾಗ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದು ಉಂಟು. ಇಂತಹ ಪಾತ್ರಗಳು ಕಲಾವಿದರನ್ನು ಹುಡುಕಿಕೊಂಡು ಬರುವುದು ತೀರಾ ವಿರಳ. ಸಿನಿಮಾಗಳಲ್ಲಿ ಪಾತ್ರ ನಿರ್ವಹಣೆಗೆ ಒಂದು ಸೀಮಿತ ಅವಧಿ ಇರುತ್ತದೆ. ಆದರೆ, ಭಾವನಾತ್ಮಕತೆಯಿಂದ ಕೂಡಿರುವ ಇಂತಹ ಪಾತ್ರ ನಿಭಾಯಿಸುವುದು ಸವಾಲಿನ ಕೆಲಸ. ಹಾಗಾಗಿಯೇ, ಈ ಪಾತ್ರದ ಭಾಗವಾಗಲು ನಾನು ಒಪ್ಪಿಕೊಂಡೆ’ ಎಂದು ನಿತ್ಯಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು