ಶನಿವಾರ, ಜುಲೈ 24, 2021
27 °C

ನ. 12ಕ್ಕೆ ಜೇಮ್ಸ್‌ ಬಾಂಡ್‌ ಸರಣಿಯ ‘ನೋ ಟೈಮ್ ಟು ಡೈ’ ಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡೇನಿಯಲ್ ಕ್ರೇಗ್ ನಟನೆಯ ಜೇಮ್ಸ್‌ ಬಾಂಡ್‌ ಸರಣಿಯ ಚಿತ್ರ ‘ನೋ ಟೈಮ್ ಟು ಡೈ’ ಕುತೂಹಲ ಹೆಚ್ಚಿಸಿದೆ. ಇದು ಬಾಂಡ್‌ ಸರಣಿಯ 25ನೇ ಸಿನಿಮಾ. ಈ ಸಿನಿಮಾ ಏಪ್ರಿಲ್‌ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ, ಜಗತ್ತಿನ ಎಂಬತ್ತಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಭೀತಿ ಕಾಣಿಸಿಕೊಂಡ ಪರಿಣಾಮ ಇದರ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿತ್ತು.

ಇದು ಕನ್ನಡಕ್ಕೂ ಡಬ್ಬಿಂಗ್‌ ಆಗಿ ತೆರೆ ಕಾಣುತ್ತಿದೆ. ಅಂದಹಾಗೆ ನವೆಂಬರ್‌ 12ರಂದು ಇಂಗ್ಲೆಂಡ್‌ ಮತ್ತು ನವೆಂಬರ್‌ 20ರಂದು ಅಮೆರಿಕದಲ್ಲಿ ‘ನೋ ಟೈಮ್‌ ಟು ಡೈ’ ಸಿನಿಮಾ ತೆರೆ ಕಾಣಲಿದೆಯಂತೆ. ಈ ಬಗ್ಗೆ ಜೇಮ್ಸ್‌ ಬಾಂಡ್‌ ಟ್ವಿಟರ್‌ ಖಾತೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಡೇನಿಯಲ್‌ ಕ್ರೇಗ್‌ ಜೇಮ್ಸ್‌ ಬಾಂಡ್‌ ಸರಣಿಯ ಸಿನಿಮಾದಲ್ಲಿ ಮೊದಲಿಗೆ ನಟಿಸಿದ್ದು 2006ರಲ್ಲಿ. ‘ಕ್ಯಾಸಿನೊ ರಾಯಲ್’ ಚಿತ್ರದ ಮೂಲಕ ಅವರು ಪರದೆ ಮೇಲೆ ಬಾಂಡ್‌ ಪಾತ್ರದಲ್ಲಿ ಮಿಂಚಿದ್ದರು. ಆ ನಂತರ ‘ಕ್ವಾಂಟಂ ಆಫ್‌ ಸೊಲೇಸ್‌’ ಚಿತ್ರದಲ್ಲಿ ಅಭಿನಯಿಸಿದರು. ಇದು ತೆರೆಕಂಡಿದ್ದು 2008ರಲ್ಲಿ. ಇದಾದ ನಾಲ್ಕು ವರ್ಷದ ಬಳಿಕ ಅಂದರೆ 2012ರಲ್ಲಿ ‘ಸ್ಕೈಪಾಲ್‌’ ಚಿತ್ರದ ಮೂಲಕ ಮತ್ತೆ ಬಾಂಡ್‌ನ ಅವತಾರ ತಳೆದಿದ್ದರು. 2015ರಲ್ಲಿ ತೆರೆಕಂಡ ‘ಸ್ಪೆಕ್ಟರ್’ ಸಿನಿಮಾವೂ ಗಮನ ಸೆಳೆದಿತ್ತು. ‘ನೋ ಟೈಮ್ ಟು ಡೈ’ ಡೇನಿಯಲ್‌ ಕ್ರೇಗ್ ಅವರಿ‌ಗೆ ಬಾಂಡ್‌ ಸರಣಿ ಸಿನಿಮಾಗಳ ಪೈಕಿ ಐದನೇ ಚಿತ್ರ ಎಂಬುದು ವಿಶೇಷ. 

ಕಳೆದ ಮಾರ್ಚ್‌ನಲ್ಲಿ ಬಾಂಡ್ ಸರಣಿ ಸಿನಿಮಾಗಳಲ್ಲಿ ಬಳಸಿದ್ದ ದುಬಾರಿ ಬೆಲೆಯ ಐದು ಬಂದೂಕುಗಳನ್ನು ದುಷ್ಕರ್ಮಿಗಳು ದೋಚಿದ್ದು ಸುದ್ದಿಯಾಗಿತ್ತು. ಕೊನೆಗೂ, ಬಾಂಡ್‌ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿರುವುದು ಸಿನಿಪ್ರಿಯರಲ್ಲಿ ಸಂತಸ ತಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು