ಬುಧವಾರ, ಜೂನ್ 3, 2020
27 °C

ಅಂಬಾರ್‌ಗೆ ಆಫ್‌ಬೀಟ್‌ ಸಿನಿಮಾ ಅಚ್ಚುಮೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ದಿಯಾ’ ಸಿನಿಮಾದಲ್ಲಿ ಬೆಸ್ಟ್‌ಫ್ರೆಂಡ್‌, ಪ್ರೇಮಿ, ಮಗನಾಗಿ ‘ಆದಿ’ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದವರು ಪೃಥ್ವಿ ಅಂಬರ್‌. ಹದಿನಾಲ್ಕು ತುಳು ಸಿನಿಮಾ, ಎರಡು ಮೂರು ಕನ್ನಡ ಸಿನಿಮಾ, ನಾಲ್ಕು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪೃಥ್ವಿ ಜನಪ್ರಿಯರಾಗಿದ್ದು ಮಾತ್ರ ‘ಆದಿ’ ಪಾತ್ರದ ಮೂಲಕವೇ!

ಫೃಥ್ವಿ ಅಂಬರ್‌ ಕೇರಳದ ಕಾಸರಗೋಡಿನ ಉಪ್ಪಳದವರು. ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಬಿಬಿಎಂ ಹಾಗೂ ಜರ್ನಲಿಸಂ ಪದವಿ ಓದಿದ ಬಳಿಕ ಮೂರೂವರೆ ವರ್ಷಗಳ ಕಾಲ ಆರ್‌ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿದರು. ನಟನೆ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು ಮಾತಿನ ಮಲ್ಲರಾಗಿ, ಆರ್‌ಜೆ ನಾಗರಾಜ್‌ ಎಂದೇ ಗುರುತಿಸಿಕೊಂಡಿದ್ದರು. ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ‘ಗ್ರೇಟ್‌ ಕರ್ನಾಟಕ ಡಾನ್ಸ್‌ ಲೀಗ್’‌ ಹಾಗೂ ‘ಸೈ’ ರಿಯಾಲಿಟಿ ಷೋಗಳಲ್ಲೂ ಪರಿಚಿತರಾಗಿದ್ದರು.

ಇವರ ನಟನೆಯ ಕನಸಿಗೆ ಬೆಂಬಲವಾಗಿದ್ದು ‘ದಿಯಾ’ ನಿರ್ದೇಶಕ ಕೆ.ಎಸ್‌. ಅಶೋಕ್‌. ಈ ಸಿನಿಮಾ ಫೆಬ್ರುವರಿಯಲ್ಲಿ ಬಿಡುಗಡೆಯಾದರೂ ಅದರ ಕೆಲಸ ಶುರುವಾಗಿದ್ದು ಆರೂವರೆ ವರ್ಷಗಳ ಹಿಂದೆ. ಅವರು ಸಹಿ ಮಾಡಿದ ಮೊದಲ ಚಿತ್ರವೂ ಅದೇ. ಈ ಚಿತ್ರದ ಪಾತ್ರಕ್ಕಾಗಿ ಪೃಥ್ವಿ 15 ಬಾರಿ ಆಡಿಶನ್‌ ನೀಡಿದ್ದರಂತೆ. ನಂತರ ನಟನೆ ಕಲಿಸಿಕೊಟ್ಟಿದ್ದೇ ಅಶೋಕ್‌. ನನಗೆ ಆಫ್‌ಬೀಟ್‌ ಸಿನಿಮಾಗಳೇ ಇಷ್ಟ ಎನ್ನುತ್ತಾರೆ ಪೃಥ್ವಿ.

ಪೃಥ್ವಿ ಹಲವು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ‘ಪಿಲಿಬೈಲ್ ಯಮುನಕ್ಕ’ ಎಂಬ ಸಿನಿಮಾ ಭಾರಿ ಹಿಟ್ ಆಗಿತ್ತು. ‘ಆ ಚಿತ್ರ ನನ್ನ ಸಿನಿ ಜೀವನಕ್ಕೆ ದೊಡ್ಡ ಟರ್ನಿಂಗ್‌ ಪಾಯಿಂಟ್‌’ ಎಂದು ಪೃಥ್ವಿ ಹೇಳುತ್ತಾರೆ.

ಕನ್ನಡದ ‘ಕರ್ವ’, ‘ಡಿಕೆ ಬಾಸ್’‌ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಜೀ ಕನ್ನಡ ವಾಹಿನಿಯ ‘ಜೊತೆ ಜೊತೆಯಲಿ..’ ಧಾರಾವಾಹಿಯ ನೀಲ್‌ ಪಾತ್ರ ನಿರ್ವಹಿಸಿದ್ದಾರೆ. ಇದರ ಜತೆಗೆ, ‘ಸಾಗರ ಸಂಗಮ’, ‘ಲವಲವಿಕೆ’, ‘ರಾಧಾ ಕಲ್ಯಾಣ’ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಈಗ ನವೀನ್‌ ದ್ವಾರಕಾನಾಥ್‌ ನಿರ್ದೇಶಿಸುತ್ತಿರುವ ಹಾಸ್ಯಮಯ ಚಿತ್ರ ‘ಫಾರ್‌ ರಿಜಿಸ್ಟ್ರೇಷನ್‌’ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.