ಗುರುವಾರ , ಅಕ್ಟೋಬರ್ 29, 2020
27 °C

ಎಸ್‌ಪಿಬಿಗೆ ‘ಭಾರತ ರತ್ನ’ ನೀಡುವಂತೆ ಒತ್ತಾಯಿಸಿ ಆನ್‌ಲೈನ್‌ ಅಭಿಯಾನ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ನೀಡಬೇಕು ಎಂದು ಈಗಾಗಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮತ್ತು ಬಹುಭಾಷಾ ನಟ ಕಮಲ ಹಾಸನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಎಲ್ಲರಿಗೂ ಗೊತ್ತಿದೆ.

ಸೆಪ್ಟೆಂಬರ್ 25ರಂದು ಎಸ್‌ಪಿಬಿ ನಿಧನರಾದ ದಿನದಿಂದಲೇ ಆನ್‌ಲೈನ್‌ನಲ್ಲಿ ಅವರಿಗೆ ‘ಭಾರತ ರತ್ನ’ ನೀಡುವಂತೆ ಅಭಿಮಾನ ಕೂಡ ಆರಂಭಗೊಂಡಿದೆ. ಬೆಂಗಳೂರು ಮೂಲದ ಗಿರೀಶ್‌ ಕುಮಾರ್‌ ಎಂಬುವರು ಆರಂಭಿಸಿರುವ ಈ ಅಭಿಯಾನಕ್ಕೆ ಇಲ್ಲಿಯವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ.

‘ಎಸ್‌ಪಿಬಿ ಸರ್‌ ನನಗೆ ಆದರ್ಶ. ಅವರ ಹಾಡುಗಳು ನನ್ನ ಬೆಳವಣಿಗೆಗೆ ಪೂರಕವಾಗಿವೆ. ಅವು ನನ್ನ ಬದುಕಿನ ಭಾಗವೂ ಆಗಿವೆ. ಜೀವನದಲ್ಲಿ ನಾನು ಕುಸಿದು ಹೋದಾಗಲೆಲ್ಲಾ ಅವರು ಹಾಡಿರುವ ಹಾಡುಗಳೇ ನನಗೆ ಊರುಗೋಲಾಗುತ್ತವೆ. ನನ್ನ ಸಂತೋಷಕ್ಕೆ ಕಾರಣೀಭೂತವಾಗಿವೆ’ ಎಂದು ತನ್ನ ಫೇಸ್‌ಬುಕ್‌ ವಾಲ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

‘ಎಸ್‌ಪಿಬಿ ಅವರ ಹುಟ್ಟೂರು ಆಂಧ್ರದ ನಲ್ಲೂರು ಎಂಬ ಕಾರಣಕ್ಕೆ ಅವರಿಗೆ ‘ಭಾರತ ರತ್ನ’ ನೀಡಿ ಎಂದು ಕೋರುತ್ತಿಲ್ಲ. ಅವರಿಗೆ ಭಾರತ ಸೇರಿದಂತೆ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಗಾಯನ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಪರಿಗಣಿಸಿ ‘ಭಾರತ ರತ್ನ’ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

‘ಈಗಾಗಲೇ, ಸಂಗೀತದ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿರುವ ಲತಾ ಮಂಗೇಷ್ಕರ್‌, ಭೂಪೇನ್‌ ಹಜಾರಿಕಾ, ಎಂ.ಎಸ್. ಸುಬ್ಬಲಕ್ಷ್ಮಿ, ಬಿಸ್ಮಿಲ್ಲಾ ಖಾನ್‌, ಭೀಮಸೇನ್‌ ಜೋಷಿ ಅವರು ‘ಭಾರತ ರತ್ನ’ ಪುರಸ್ಕೃತರಾಗಿದ್ದಾರೆ. ದಂತಕಥೆಯಾಗಿರುವ ಎಸ್‌ಪಿಬಿ ಕೂಡ ಇದಕ್ಕೆ ಅರ್ಹರಾಗಿದ್ದಾರೆ. ಅವರ ಸೇವೆ ಗುರುತಿಸಿ ದೇಶದ ಅತ್ಯುತ್ತಮ ಪುರಸ್ಕಾರ ನೀಡಿ ಗೌರವಿಸಬೇಕು’ ಎಂದು ಜಗನ್‌ ಮನವಿ ಮಾಡಿದ್ದಾರೆ. 

ಎಸ್‌ಪಿಬಿಗೆ ‘ಭಾರತ ರತ್ನ’ ನೀಡುವಂತೆ ಜಗನ್‌ ಅವರು ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಕಮಲ ಹಾಸನ್, ಜಗನ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು