ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ಬಿಡುಗಡೆ: ಮಲ್ಟಿಫ್ಲೆಕ್ಸ್‌ ಗರಂ

Last Updated 17 ಮೇ 2020, 20:15 IST
ಅಕ್ಷರ ಗಾತ್ರ

ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಬಿಡುಗಡೆಗೆ ರಂಗ ಸಜ್ಜಾದ ಬೆನ್ನಲ್ಲೇ ಮಲ್ಟಿಪ್ಲೆಕ್ಸ್‌ ಕಂಪನಿಗಳು ಗರಂ ಆಗಿವೆ. ಒಟಿಟಿಯಲ್ಲಿ ತೆರೆಕಾಣುವ ಚಿತ್ರಗಳನ್ನು ಮಲ್ಪಿಫ್ಲೆಕ್ಸ್‌ನಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಮುಂಬೈನಿಂದ ಕಂಪನಿಗಳು ಈಗಾಗಲೇ ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುಂದೇನು? ಎನ್ನುವ ಕುತೂಹಲ ಕನ್ನಡ ಚಿತ್ರರಂಗದಲ್ಲೂ ಉಂಟಾಗಿದೆ.

ಮಲ್ಪಿಪ್ಲೆಕ್ಸ್‌ಗಳ ಬಹಿಷ್ಕಾರದ ನಿರ್ಧಾರ ಏನೇ ಇರಲಿ. ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರು ಒಟಿಟಿ ಮೂಲಕ ಸಿನಿಮಾಗಳ ಬಿಡುಗಡೆಯನ್ನು ಉತ್ಸಾಹದಿಂದ ಕಾಯುತ್ತಿದ್ದಾರೆ. ಬಿಡುಗಡೆಗೂ ಸಿದ್ಧರಾಗಿದ್ದಾರೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಪಿಆರ್‌ಕೆ ಪ್ರೊಡಕ್ಷನ್‌ನ ‘ಲಾ’ ಮತ್ತು ‘ಫ್ರೆಂಚ್‌ ಬಿರಿಯಾನಿ’ ಸಿನಿಮಾಗಳು ಅಮೆಜಾನ್ ಪ್ರೈಮ್‌ ಮೂಲಕ ವೀಕ್ಷಕರ ಎದುರು ಬರಲು ಸಜ್ಜಾಗಿವೆ. ಈ ಸಿನಿಮಾಗಳು ಮಾತ್ರವಲ್ಲದೆ ಹಿಂದಿ, ತಮಿಳಿನ ಒಟ್ಟು ಏಳು ಸಿನಿಮಾಗಳನ್ನು ತೆರೆಗೆ ತರಲು ಅಮೆಜಾನ್ ಪ್ರೈಮ್ ಸಜ್ಜಾಗಿದೆ.

ಮಲ್ಟಿಪ್ಲೆಕ್ಸ್‌ ಕಂಪನಿಗಳ ನಿಲುವಿನ ಬಗ್ಗೆ ನಟ ಪುನೀತ್‌ ರಾಜ್‌ಕುಮಾರ್‌ ಪ್ರತಿಕ್ರಿಯಿಸಿದ್ದು ಹೀಗೆ; ‘ಕೊರೊನಾ ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳ ಲಭ್ಯತೆಯಿಲ್ಲ. ಎಲ್ಲವೂ ಸರಿಹೋದ ನಂತರ ಚಿತ್ರಮಂದಿರಗಳ ಮೂಲಕ ಸಿನಿಮಾಗಳನ್ನು ತೆರೆಗೆ ತರುವ ಕೆಲಸ ಶುರುವಾಗುತ್ತದೆ’ ಎನ್ನುತ್ತಾರೆ.

ಹಕ್ಕುಗಳಿಗೆ ಚ್ಯುತಿ ಸಲ್ಲ

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಚಿತ್ರಮಂದಿರ ಸಂಸ್ಕೃತಿಗೆ ನಾನು ಖಂಡಿತವಾಗಿಯೂ ವಿರೋಧಿಯಲ್ಲ. ಆದರೆ, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರುವ ಸೌಲಭ್ಯಗಳಿರುವಂತೆ ತಮ್ಮ ಸಿನಿಮಾಗಳನ್ನು ಒಟಿಟಿ ಅಥವಾ ಯಾವುದೇ ಮಾಧ್ಯಮದ ಮೂಲಕ ಬಿಡುಗಡೆ ಮಾಡುವ ಹಕ್ಕು ನಿರ್ಮಾಪಕ, ನಿರ್ದೇಶಕರಿಗೆ ಇರುತ್ತದೆ’ ಎನ್ನುತ್ತಾರೆ.

ಹೊಸ ಕಲಾವಿದರನ್ನು ಬಳಸಿ ಸಿನಿಮಾಮಾಡಿ,ಅದರ ನೂರು ದಿನಗಳ ಪ್ರದರ್ಶನ ಕಂಡವನು ನಾನು. ಇಂದು ಹೊಸಬರು ಸಿನಿಮಾ ಮಾಡಿದರೆ ಅದನ್ನು ನೋಡಲು ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಕೊರೊನಾ ಲಾಕ್‌ಡೌನ್‌ಗೂ ಮೊದಲೇ ಈ ಪ್ರವೃತ್ತಿ ಶುರುವಾಗಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಬಿ ಮತ್ತು ಸಿ ಕೇಂದ್ರಗಳಲ್ಲಿ ದೊಡ್ಡ ಸ್ಟಾರ್‌ಗಳು ಇಲ್ಲದ ಸಿನಿಮಾಗಳಿಗೆ ಜನರನ್ನು ಸೆಳೆಯುವುದು ಬಹಳ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಟಿಟಿ ಮೂಲಕ ಸಿನಿಮಾ ಬಿಡುಗಡೆಯನ್ನು ನಕಾರಾತ್ಮಕವಾಗಿ ಕಾಣಬಾರದು. ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಎಲ್ಲಿ ಬೇಕಿದ್ದರೂ ಬಿಡುಗಡೆ ಮಾಡಬಹುದು’ ಎಂಬುದು ಅವರ ಅಭಿಮತ.

ಈಗಲೇ ಪ್ರತಿಕ್ರಿಯೆ ನೀಡಲ್ಲ

‘ಒಟಿಟಿ ಮೂಲಕ ಸಿನಿಮಾ ಬಿಡುಗಡೆ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲಾಗದು’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಹೇಳಿದರು. ‘ನಾನು ಮಂಡಳಿಯ ಎಲ್ಲಾ ಸದಸ್ಯರಿಂದ ಪ್ರತಿಕ್ರಿಯೆ ಪಡೆದ ನಂತರವಷ್ಟೇ ಈ ಬಗ್ಗೆಪ್ರತಿಕ್ರಿಯಿಸುತ್ತೇನೆ’ ಎಂದರು.

ಇದು ಹೊಸದಲ್ಲ...

‘ನಾವು ನಿರ್ಮಾಣ ಮಾಡಿದ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಆದರೆ, ಥಿಯೇಟರ್‌ಗಳು ಲಭ್ಯವಿಲ್ಲ. ಒಟಿಟಿ ಮೂಲಕ ಸಿನಿಮಾ ಬಿಡುಗಡೆ ಪ್ರವೃತ್ತಿ ಆರಂಭವಾಗಿ ಮೂರು ವರ್ಷಗಳೇ ಕಳೆದಿವೆ’ ಎಂದು ನಟ, ನಿರ್ಮಾಪಕ ಪುನೀತ್ ರಾಜ್‌ಕುಮಾರ್ ‘ಪ್ರಜಾ ಪ್ಲಸ್‌’ಗೆ ತಿಳಿಸಿದರು.

‘ಹಿಂದೆ ಒಟಿಟಿ ಮೂಲಕ ಸಿನಿಮಾ ಬಿಡುಗಡೆಯಾದಾಗ ಯಾರೂ ಅಷ್ಟಾಗಿ ಅದರ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಏಕೆಂದರೆ, ಆಗ ಚಿತ್ರಮಂದಿರಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯುತ್ತಿತ್ತು. ಕೆಲವು ಸಿನಿಮಾಗಳನ್ನು ಡಿಜಿಟಲ್‌ ವೇದಿಕೆಗಳ ಮೂಲಕ ಬಿಡುಗಡೆ ಮಾಡುವುದು ಉತ್ತಮ. ಆ ಮೂಲಕ ಚಿತ್ರಮಂದಿರಗಳ ಮೂಲಕ ಬಿಡುಗಡೆ ಮಾಡುವ ಪ್ರವೃತ್ತಿಗೆ ತಿಲಾಂಜಲಿ ಹಾಡಲಾಗುತ್ತದೆ ಎಂಬುದು ಇದರರ್ಥವಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT