ಸೋಮವಾರ, ಆಗಸ್ಟ್ 15, 2022
22 °C

Pv web exclusive: ಒಟಿಟಿಗೆ ಸೈ ಎಂದ ಮಾಲಿವುಡ್

ನವೀನ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

Prajavani

ಪ್ರಯೋಗಾತ್ಮಕ ಚಿತ್ರಗಳ ಮೂಲಕವೇ ಮಲಯಾಳ ಚಿತ್ರರಂಗ ಸದಾ ಗಮನ ಸೆಳೆಯುತ್ತದೆ. ಇದೇ ಕಾರಣಕ್ಕೆ ಮಾಲಿವುಡ್‌ ಚಿತ್ರಗಳು ಭಾಷೆಯ ಪರಿಧಿ ದಾಟಿ ಅನ್ಯ ಭಾಷಾ ಪ್ರೇಕ್ಷಕರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿದ ಬಳಿಕ ಎಲ್ಲಾ ಭಾಷೆಯ ಚಿತ್ರರಂಗಗಳು ಹಿಂದೆಂದೂ ಕಂಡರಿಯದ ಸಂಕಷ್ಟಕ್ಕೆ ಒಳಗಾಗಿವೆ. ಬಳಿಕ ಆಸರೆಯಾಗಿದ್ದು, ಡಿಜಿಟಲ್ ವೇದಿಕೆಗಳು. ಆದರೂ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳದೆ ನೇರವಾಗಿ ಒಟಿಟಿ ವೇದಿಕೆಗಳಲ್ಲಿ ಬೆರಳೆಣಿಕೆಗಳಷ್ಟೇ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಲಾಕ್‌ಡೌನ್ ಬಳಿಕ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಗೊಂಡಿರುವ ಮತ್ತು ಬಿಡುಗಡೆಗೆ ಸಿದ್ಧಗೊಂಡಿರುವ ಮಾಲಿವುಡ್ ಚಿತ್ರಗಳ ಪಟ್ಟಿ ನೋಡಿದರೆ, ಮಲಯಾಳ ಚಿತ್ರಗಳಿಗೆ ಡಿಜಿಟಲ್ ವೇದಿಕೆಗಳಲ್ಲೂ ಹೆಚ್ಚು ಬೇಡಿಕೆ ಇದೆ ಎಂಬುದು ತಿಳಿಯುತ್ತದೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡ ಮಲಯಾಳ ಭಾಷೆಯ ಮೊದಲ ಚಿತ್ರ ‘ಸೂಫಿಯುಂ ಸಜಾತಯುಂ’. ಈ ಚಿತ್ರವನ್ನು ನರಣ್ಣಿಪುಳ ಶಾನವಾಸ್ ನಿರ್ದೇಶಿಸಿದ್ದಾರೆ. ಇದರಲ್ಲಿ ಜನಪ್ರಿಯ ನಟ ಜಯಸೂರ್ಯ, ಅದಿತಿ ರಾವ್ ಹೈದರಿ, ದೇವ್ ಮೋಹನ್ ಮೊದಲಾದವರು ನಟಿಸಿದ್ದರು. ಇದು ಅಮೆಜಾನ್ ಪ್ರೈಮ್ ವೇದಿಕೆಯಲ್ಲಿ ಬಿಡುಗಡೆಗೊಂಡಿತ್ತು.

ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಮೊದಲಾದ ವೇದಿಕೆಗಳಲ್ಲೂ ಹಲವು ಮಲಯಾಳ ಸಿನಿಮಾಗಳು ಈಗಾಗಲೇ ನೇರವಾಗಿ ಬಿಡುಗಡೆಗೊಂಡಿವೆ. ಡಿಜಿಟಲ್ ವೇದಿಕೆಗಳಲ್ಲಿ ಚಿತ್ರಗಳು ಬಿಡುಗಡೆಗೊಳ್ಳಲು ಆರಂಭವಾದಾಗ ಇತರ ಚಿತ್ರರಂಗಗಳಂತೆ ಮಾಲಿವುಡ್‌ನಲ್ಲಿಯೂ ಚಿತ್ರಮಂದಿರ ಮಾಲೀಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ತೋರಿದರು. ಪ್ರೇಕ್ಷಕರಿಂದಲೂ ಇಂತಹ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ ಇನ್ನಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ.

‘ಜೆಲ್ಲಿಕಟ್ಟು’ ಸಿನಿಮಾ ಖ್ಯಾತಿಯ ಲಿಜೊ ಜೋಸ್ ಪೆಳ್ಳಿಶ್ಸೇರಿ ನಿರ್ದೇಶನದ ಬಹು ನಿರೀಕ್ಷಿತ ‘ಚುರುಳಿ’ ಚಿತ್ರ ಕೂಡ ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳಲು ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಲಿಜೋ ಜೋಸ್ ಅವರೇ ಸುಳಿವು ನೀಡಿದ್ದಾರೆ.

ಅದೇ ರೀತಿ ಶರತ್ ಮೆನನ್ ನಿರ್ದೇಶನದ ‘ವೆಯಿಲ್’, ಖಾಲಿದ್ ರಹಮಾನ್ ನಿರ್ದೇಶನದ ‘ಲವ್’, ಸನೂಪ್ ತೈಕೂಡಂ ಅವರ ‘ಸುಮೇಶ್ ಆ್ಯಂಡ್ ರಮೇಶ್’, ಅರುಣ್ ಚಂದು ಅವರ ‘ಸಾಜನ್ ಬೇಕರಿ ಸಿನ್ಸ್ 1962’, ಕಾವ್ಯಾ ಪ್ರಕಾಶ್ ನಿರ್ದೇಶನದ ‘ವಾಂಕು’, ಜಿಸ್ ಜಾಯ್ ಅವರ ‘ಮೋಹನ್ ಕುಮಾರ್ ಫ್ಯಾನ್ಸ್’, ಬಿಬಿನ್ ಪೌಲ್ ಸ್ಯಾಮುವೆಲ್ ಅವರ ‘ಅಹಾ’, ಪ್ರಿನ್ಸ್ ಜಾಯ್ ಅವರ ‘ಅನುಗ್ರಹೀತನ್ ಆಂಟನಿ’, ಪ್ರವೀಣ್ ರಾಜ್ ನಿರ್ದೇಶನದ ‘ವೆಳ್ಳಪ್ಪಂ’ ಚಿತ್ರಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳಲು ಈಗಾಗಲೇ ಸಿದ್ಧಗೊಂಡಿವೆ.

ಚಿತ್ರಮಂದಿರಗಳು ಯಾವಾಗ ಬಾಗಿಲು ತೆರೆಯಲಿವೆ ಎಂಬುದು ಇನ್ನೂ ಅನಿಶ್ಚಿತತೆಯಲ್ಲಿರುವುದೂ ಒಟಿಟಿ ವೇದಿಕೆಯಲ್ಲಿ ಚಿತ್ರಗಳು ಬಿಡುಗಡೆಗೊಳ್ಳಲು ಇನ್ನೊಂದು ಕಾರಣವಾಗಿದೆ. 

‘ಸೂಫಿಯುಂ ಸಜಾತಯುಂ’ ಸಿನಿಮಾದ ಬಳಿಕ ಡಿಜಿಟಲ್ ವೇದಿಕೆಯಲ್ಲಿ ಹೆಚ್ಚು ಸದ್ದು ಮಾಡಿರುವ ಇನ್ನೊಂದು ಮಲಯಾಳ ಸಿನಿಮಾ ‘ಮಣಿಯರಯಿಲೆ ಅಶೋಕನ್’. ದುಲ್ಖರ್ ಸಲ್ಮಾನ್ ನಿರ್ಮಾಪಕರಾಗಿರುವ ಈ ಸಿನಿಮಾವನ್ನು ಶಂಸು ಝೈಬಾ ನಿರ್ದೇಸಿದ್ದಾರೆ. ಗ್ರೆಗೊರಿ, ಅನುಪಮಾ ಪರಮೇಶ್ವರ್ ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

2013ರಲ್ಲಿ ಬಿಡುಗಡೆಗೊಂಡಿದ್ದ ‘ಎಬಿಸಿಡಿ’ ಚಿತ್ರದಲ್ಲಿ ದುಲ್ಖರ್ ಸಲ್ಮಾನ್ ಜೊತೆ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಗ್ರೆಗೊರಿ ನಟಿಸಿರುವುದರಿಂದ ಈ ಚಿತ್ರ ಹೆಚ್ಚು ಸದ್ದು ಮಾಡಿದೆ. ಈ ಚಿತ್ರವು ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಬಿಡುಗಡೆಗೊಂಡಿದೆ.

ಇನ್ನು ಜಿಯೊ ಬೇಬಿ ನಿರ್ದೇಶನದ ‘ಕಿಲೋ ಮೀಟರ್ಸ್ ಆ್ಯಂಡ್ ಕಿಲೋ ಮೀಟರ್ಸ್’ ಚಿತ್ರವು ಓಣಂ ಹಬ್ಬದ ವೇಳೆ ನೇರವಾಗಿ ಏಷ್ಯಾನೆಟ್ ವಾಹಿನಿಯಲ್ಲಿ ಬಿಡುಗಡೆಗೊಂಡಿತ್ತು. ಟೊವಿನೊ ಥಾಮಸ್ ನಾಯಕನಾಗಿ ನಟಿಸಿರುವ ಈ ಚಿತ್ರವು ಅನಂತರ ಒಟಿಟಿ ವೇದಿಕೆಯಲ್ಲೂ ಬಿಡುಗಡೆಗೊಂಡಿದೆ.

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡಿರುವ ಮಹೇಶ್ ನಾರಾಯಣನ್ ನಿರ್ದೇಶನದ ‘ಸಿ ಯು ಸೂನ್’ ಚಿತ್ರ ಕೂಡ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಫಹದ್ ಫಾಸಿಲ್, ರೋಶನ್ ಮ್ಯಾಥ್ಯು, ದರ್ಶನಾ ರಾಜೇಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಐ ಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ. ಇದೊಂದು ಸ್ಕ್ರೀನ್ ಆಧಾರಿತ ಚಿತ್ರವಾಗಿದೆ.

ಲಾಕ್‌ಡೌನ್‌ನ ಮಿತಿಯೊಳಗಿದ್ದು, ಈ ಚಿತ್ರವನ್ನು ನಿರ್ಮಿಸಲಾಗಿದೆ. ಫಹದ್ ಅಭಿನಯದ ಮಹೇಶ್ ನಾರಾಯಣನ್ ಚಿತ್ರ ‘ಮಾಲಿಕ್’ನ ಬಿಡುಗಡೆ ದಿನಾಂಕವನ್ನು ಚಿತ್ರಮಂದಿರಗಳು ಮುಚ್ಚಿರುವ ಕಾರಣ ಮುಂದೂಡಿದ್ದು, ಈ ಮಧ್ಯೆ ಮಹೇಶ್, ಫಹದ್ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಡಿಜಿಟಲ್ ವೇದಿಕೆಗಳು ಗುಣಮಟ್ಟ ಆಧರಿಸಿ ಸಿನಿಮಾಗಳನ್ನು ಖರೀದಿಸುತ್ತವೆ. ಆದರೆ ‘ಸಿ ಯು ಸೂನ್’ ಚಿತ್ರದ ದೃಶ್ಯ ಗುಣಮಟ್ಟ ಸಾಂಪ್ರಾದಾಯಿಕ ರೀತಿಯಲ್ಲಿ ಚಿತ್ರೀಕರಿಸಿದ ಸಿನಿಮಾಗಳಿಗೆ ಸರಿಸಮವಾಗಿ ನಿಲ್ಲದಿದ್ದರೂ ಇದೊಂದು ಪ್ರಯೋಗಾತ್ಮಕ ಚಿತ್ರವಾಗಿರುವ ಕಾರಣ ಅಮೆಜಾನ್ ಪ್ರೈಮ್ ವೇದಿಕೆ ಇದನ್ನು ಖರೀದಿಸಿದೆ.

ಒಟಿಟಿ ವೇದಿಕೆಗಳಲ್ಲಿ ಸಿನಿಮಾಗಳು ಬಿಡುಗಡೆಗೊಂಡರೆ ಅದನ್ನು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರು ವೀಕ್ಷಿಸುತ್ತಾರೆ. ಬೇರೆ ಬೇರೆ ಭಾಷೆಗಳ ಸಬ್‌ಟೈಟಲ್‌ಗಳಿಂದಾಗಿ ಭಾಷೆ ಗೊತ್ತಿಲ್ಲದವರೂ ಸಿನಿಮಾಗಳನ್ನು ನೋಡಿ ಅರ್ಥೈಸಬಹುದಾಗಿದೆ.

ಸಿನಿಮಾಗಳನ್ನು ಖರೀದಿಸುವಾಗ ಇಂತಹ ವೇದಿಕೆಗಳು ಪ್ರಮುಖ ನಟ, ನಿರ್ದೇಶಕರ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುತ್ತವೆ. ಮಲಯಾಳ ಚಿತ್ರಗಳು ವಸ್ತು, ವಿಷಯಗಳಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯುವುದರಿಂದ ಇವುಗಳು ಈ ಭಾಷೆಯ ಚಿತ್ರಗಳನ್ನು ಖರೀದಿಸಲು ಮುಂದಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು