ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರಣೆ’ಗೆ ಸೆನ್ಸಾರ್ ತೊಂದರೆ: ರಾಷ್ಟ್ರ, ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಲು ಅನರ್ಹ

Last Updated 11 ಜನವರಿ 2019, 5:34 IST
ಅಕ್ಷರ ಗಾತ್ರ

ಬೆಂಗಳೂರು:ಹಲವು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿಮೆಚ್ಚುಗೆ ಪಡೆದ ಕೊಡವ ಭಾಷೆಯ ‘ಪಾರಣೆ’ಸಿನಿಮಾ ತಾಂತ್ರಿಕವಾಗಿ ಸರಿಯಾಗಿಲ್ಲ ಎಂಬ ಕಾರಣ ನೀಡಿಚಲನಚಿತ್ರ ಪ್ರಮಾಣೀಕರಣ ಮಂಡಳಿತಿರಸ್ಕರಿಸಿದೆ. ಇದರಿಂದನಿರ್ದೇಶಕ ಶ್ರೀಲೇಶ್ ಎಸ್‌. ನಾಯರ್ ನಿರ್ದೇಶಿಸಿದ ಈ ಸಿನಿಮಾರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗಳಿಗೂ ಸ್ಪರ್ಧಿಸಲಾಗದ ಸ್ಥಿತಿ ಉಂಟಾಗಿದೆ.

ಫೆಬ್ರುವರಿಯಲ್ಲಿ ನಡೆಯಲಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶದಿಂದಲೂ ವಂಚಿತವಾಗಿದೆ.

ಸಿನಿಮಾಪ್ರಾದೇಶಿಕ ಅಧಿಕಾರಿಡಿ.ಎನ್. ಶ್ರೀನಿವಾಸಪ್ಪ
ಸಿನಿಮಾಪ್ರಾದೇಶಿಕ ಅಧಿಕಾರಿ
ಡಿ.ಎನ್. ಶ್ರೀನಿವಾಸಪ್ಪ

‘ನವೆಂಬರ್ 14ರಂದು ಈಸಿನಿಮಾ ಪ್ರಮಾಣೀಕರಣಕ್ಕಾಗಿ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದೆವು. ಡಿ. 22ಕ್ಕೆ ಸಿನಿಮಾಪ್ರಾದೇಶಿಕ ಅಧಿಕಾರಿ ಡಿ.ಎನ್. ಶ್ರೀನಿವಾಸಪ್ಪ ಅವರೂ ಸೇರಿದಂತೆ ಒಂಬತ್ತು ಜನರು ಸಿನಿಮಾ ವೀಕ್ಷಿಸಿದರು. ನಂತರ ನಮ್ಮನ್ನು ಕರೆದು ತಾಂತ್ರಿಕವಾಗಿ ಸಿನಿಮಾ ಸರಿಯಾಗಿಲ್ಲ. ಶಾಟ್‌ಗಳು ಅತೀ ದೀರ್ಘವಾಗಿವೆ. ಕಲರ್ ಗ್ರೇಡಿಂಗ್ ಸರಿ ಇಲ್ಲ. ಇದು ಸಿನಿಮಾವೇ ಅಲ್ಲ. ಸಿನಿಮಾಕ್ಕೆ ಕೆಲವು ನಿಯಮಗಳಿರುತ್ತವೆ. ಆ ಯಾವ ನಿಯಮಗಳನ್ನೂ ಇಲ್ಲಿ ಪಾಲನೆ ಮಾಡಲಾಗಿಲ್ಲ. ಹಾಗಾಗಿ ಇದು ಸಿನಿಮಾವೇ ಅಲ್ಲ ಎಂದು ತಿರಸ್ಕರಿಸಿದರು‘ ಎಂದು ವಿವರಿಸುತ್ತಾರೆ ನಿರ್ದೇಶಕ ಶ್ರೀಲೇಶ್‌ ನಾಯರ್‌.

‘ಪಾರಣೆ ಸಿನಿಮಾದ ಮೊದಲ ಶಾಟ್‌ 22 ನಿಮಿಷಗಳಷ್ಟು ದೀರ್ಘವಾಗಿದೆ. ಎರಡನೇ ಶಾಟ್ 9 ನಿಮಿಷಗಳಷ್ಟು ದೀರ್ಘವಾಗಿದೆ. 94 ನಿಮಿಷಗಳ ಈ ಸಿನಿಮಾದಲ್ಲಿ ಕೇವಲ ಒಂಬತ್ತು ಶಾಟ್‌ಗಳು ಇವೆ. ಈ ಕುರಿತಾಗಿಯೇ ಶ್ರೀನಿವಾಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಕ್ಲೋಸ್‌ಅಪ್, ಮಿಡ್‌ಶಾಟ್‌ಗಳು ಯಾಕಿಲ್ಲ ಎಂದು ಪ್ರಶ್ನಿಸಿದರು. ಸಿನಿಮಾದ ಕಲರ್ ಟೋನ್‌ ಯಾಕೆ ಈ ರೀತಿ ಇದೆ ಎಂದೂ ಆಕ್ಷೇಪಿಸಿದರು. ಸಹಜವಾಗಿನಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತದೆಯೋ ಹಾಗೆಯೇ ತೆರೆಯ ಮೇಲೂ ಕಾಣಿಸುವ ರೀತಿಯಲ್ಲಿಕಲರ್ ಗ್ರೇಡಿಂಗ್ ಮಾಡಿದ್ದೇವೆ. ಇದನ್ನೇ ಮುಂದಿಟ್ಟುಕೊಂಡು ನಮ್ಮ ಬಳಿ ಒರಟಾಗಿ ಮಾತನಾಡಿದ್ದಲ್ಲದೇ, ಪ್ರಮಾಣಪತ್ರ ಕೊಡಲಾಗುವುದಿಲ್ಲ. ಬೇಕಾದರೆ ರಿವೈಸ್ ಕಮಿಟಿಗೆ ಕೊಡಿ ಎಂದು ಹೇಳಿದ್ದಾರೆ’ಎಂದು ಶ್ರೀಲೇಶ್ ಬೇಸರ ವ್ಯಕ್ತಪಡಿಸಿದರು.

‘ಮಾರ್ಗದರ್ಶಿ ನಿಯಮಗಳ ಪ್ರಕಾರ, ದೇಶದ ಭದ್ರತೆಗೆ ಧಕ್ಕೆ ತರುವ ಸಂದರ್ಭಗಳಲ್ಲಿ ಸಿನಿಮಾದ ಹೂರಣವನ್ನು ಗಮನಿಸಿ ತಿರಸ್ಕರಿಸುವ ಅಧಿಕಾರಿ ಮಂಡಳಿಗಿದೆ. ಆದರೆ ಈ ಚಿತ್ರ ವೀಕ್ಷಿಸಿದ ಶ್ರೀನಿವಾಸಪ್ಪ ಹೂರಣದ ಕುರಿತು ಏನೂ ಮಾತನಾಡಿಲ್ಲ. ಒಂದು ದೃಶ್ಯದಲ್ಲಿ ಸಿಗರೇಟ್ ಸೇದುವ ದೃಶ್ಯ ಹೊರತುಪಡಿಸಿ ಬೇರೆ ಯಾವ ಆಕ್ಷೇಪಾರ್ಹ ದೃಶ್ಯಗಳೂ ಸಿನಿಮಾದಲ್ಲಿ ಇಲ್ಲ. ಬರೀ ತಾಂತ್ರಿಕ ಸಂಗತಿಗಳಿಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾಂತ್ರಿಕವಾಗಿ ಸಿನಿಮಾ ಸರಿ ಇಲ್ಲ ಎಂಬ ಕಾರಣವೊಡ್ಡಿ ಸಿನಿಮಾ ತಿರಸ್ಕರಿಸಲು ಅವಕಾಶವೇ ಇಲ್ಲ‘ ಎನ್ನುವುದು ಅವರ ಅಂಬೋಣ.

ನಿರ್ದೇಶಕ ಶ್ರೀಲೇಶ್ ಎಸ್‌. ನಾಯರ್
ನಿರ್ದೇಶಕ ಶ್ರೀಲೇಶ್ ಎಸ್‌. ನಾಯರ್

ಕೊಡವ ಭಾಷೆ ಬರುವವರು ಒಬ್ಬರೂ ಇಲ್ಲ:

ಪಾರಣೆ ಸಿನಿಮಾವನ್ನು ಶ್ರೀನಿವಾಸಪ್ಪ ಅವರ ಜತೆಗೆ ಇನ್ನೂ ಎಂಟು ಜನ ಸದಸ್ಯರು ವೀಕ್ಷಿಸಿದ್ದಾರೆ. ಆದರೆ ಅವರಲ್ಲಿ ಕೊಡವ ಭಾಷೆ ಬರುವ ಒಬ್ಬರೂ ಇರಲಿಲ್ಲ. ’ಶ್ರೀನಿವಾಸಪ್ಪ ನನ್ನನ್ನು ಕರೆದು ವಿಚಾರಿಸುವಾಗ ಉಳಿದ ಯಾವ ಸದಸ್ಯರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ. ಇದು ಬೇರೆ ಬಗೆಯ ಸಿನಿಮಾ. ಕಡಿಮೆ ಬಜೆಟ್‌ನಲ್ಲಿ ಮಾಡಿದ್ದೇನೆ. ಒಂದು ಶಾಟ್‌ ಇಷ್ಟೇ ಅವಧಿಯದ್ದಾಗಿರಬೇಕು ಎಂಬ ಯಾವ ನಿಯಮವೂ ಇಲ್ಲ. ಈ ಬಗೆಯ ಸಿನಿಮಾ ಮಾಡುವುದು ಸುಲಭ ಅಲ್ಲ. ಆ ಸುದೀರ್ಘ ಶಾಟ್‌ಗಾಗಿ ನಾನು ಸುಮಾರು ಒಂದೂವರೆ ಕಿಲೋಮೀಟರ್‌ಗಳಷ್ಟು ದೂರ ಹೆಗಲ ಮೇಲೆ ಕ್ಯಾಮೆರಾ ಹೊತ್ತು ತಿರುಗಿದ್ದೇನೆ. ಇಂಥ ಪ್ರಯತ್ನಗಳನ್ನು ಮಾಡುವುದು ನಿರ್ದೇಶಕನ ಸೃಜನಶೀಲ ಸ್ವಾತಂತ್ರ ಎಂದು ವಿವರಿಸಲು ಪ್ರಯತ್ನಿಸಿದೆ. ಆದರೆ ಶ್ರೀನಿವಾಸಪ್ಪ ನನ್ನ ವಿವರಣೆಯನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಕೊನೆಗೆ ನಿಮ್ಮ ಪ್ರಕಾರ ಸಿನಿಮಾ ಆಗಲು ಇರುವ ನಿಯಮಗಳು ಏನು ಎಂದಾದರೂ ಹೇಳಿ. ಮುಂದಿನ ಸಲ ಜನರಿಗಾಗಿ ಅಲ್ಲ; ಪ್ರಮಾಣೀಕರಣ ಮಂಡಳಿಗಾಗಿಯೇ ಸಿನಿಮಾ ಮಾಡುತ್ತೇನೆ ಎಂದೂ ಕೇಳಿದೆ. ಆದರೆ ನನ್ನ ಯಾವ ಮಾತಿಗೂ ಕಿವಿಗೊಡದ ಅವರು ‘ನಮ್ಮ ನಿರ್ಧಾರ ಇಷ್ಟೆ. ಸಿನಿಮಾಕ್ಕೆ ಪ್ರಮಾಣಪತ್ರ ಕೊಡುವುದಿಲ್ಲ‘ ಎಂದು ಒರಟಾಗಿ ಹೇಳಿ ಕಳುಹಿಸಿಬಿಟ್ಟರು‘ ಎಂದು ತಮಗಾದ ಕಹಿ ಅನುಭವನ್ನು ಹಂಚಿಕೊಳ್ಳುತ್ತಾರೆ ಶ್ರೀಲೇಶ್‌.

ಮತ್ತೊಂದು ನೋಟೀಸ್‌

ಸಾಮಾನ್ಯವಾಗಿ ಚಲನಚಿತ್ರ ಪ್ರಮಾಣೀಕರಣ ಮಂಡಳಿ ನೀಡಿದ ಪ್ರಮಾಣಪತ್ರದ ಬಗ್ಗೆ ಆಕ್ಷೇಪ ಇದ್ದರೆ ಸಿನಿಮಾ ತಂಡವೇ ರಿವೈಸ್ ಕಮಿಟಿಯ ಮೊರೆ ಹೋಗುತ್ತದೆ. ಆದರೆ ಇಲ್ಲಿ ಪ್ರಮಾಣೀಕರಿಸಲು ನಿರಾಕರಿಸಿದ ಕೆಲವೇ ದಿನಗಳಲ್ಲಿ ಶ್ರೀನಿವಾಸಪ್ಪ ಅವರೇ ‘ಚಿತ್ರವನ್ನು ರಿವೈಸ್‌ ಕಮಿಡಿ ಮುಂದೆ ತೆಗೆದುಕೊಂಡು ಹೋಗಿ‘ ಎಂದು ನೋಟೀಸ್ ನೀಡಿದ್ದಾರೆ. ಆದರೆ ಈ ನೋಟೀಸ್‌ನಲ್ಲಿಯೂ ಯಾವ ಕಾರಣಕ್ಕೆ ಸಿನಿಮಾವನ್ನು ತಿರಸ್ಕರಿಸಲಾಗಿದೆ ಎಂಬ ಕಾರಣವನ್ನು ಉಲ್ಲೇಖಿಸಿಲ್ಲ.

‘ಈಗ ನಾವು ರಿವೈಸ್ ಕಮಿಟಿ ಮುಂದೆ ಹೋಗಬಹುದು. ಕೋರ್ಟ್‌ಗೆ ಹೋಗಿ ಸ್ಟೇ ತಂದು ಸಿನಿಮಾಗಳನ್ನು ಸ್ಪರ್ಧೆಗಳಿಗೆ ಕಳಿಸಬಹುದಿತ್ತು. ಆದರೆ ನಮ್ಮದು ಅತಿ ಕನಿಷ್ಠ ಬಜೆಟ್ ಸಿನಿಮಾ. ಇದಕ್ಕಾಗಿ ಇನ್ನಷ್ಟುಹಣ ವ್ಯಯಿಸುವುದು ಕಷ್ಟ. ಹಾಗಾಗಿ ಏನು ಮಾಡಬೇಕು ಎಂದು ಇನ್ನೂ ಯೋಚಿಸುತ್ತಿದ್ದೇವೆ’ ಎಂದು ತಮ್ಮ ಅಸಹಾಯಕತೆಯ ಕುರಿತು ಶ್ರೀಲೇಶ್ ಹೇಳುತ್ತಾರೆ.

ಬೆಂಗಳೂರು ಸಿನಿಮೋತ್ಸವದಲ್ಲಿ ಪಾರಣೆ:ಬೆಂಗಳೂರು ಚಿತ್ರೋತ್ಸವದಲ್ಲಿ ಭಾರತೀಯ ಸ್ಪರ್ಧಾ ವಿಭಾಗಗಳಿಗೆ ಸ್ಪರ್ಧಿಸಲು ಸಾಧ್ಯವಾಗದೆ ಇರುವುದರಿಂದ ’ಪಾರಣೆ‘ ಸಿನಿಮಾವನ್ನು ಏಷ್ಯನ್ ಸಿನಿಮಾ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ. ಆದರೆ ಭಾರತೀಯ ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು ಎಂಬ ನಿರ್ದೇಶಕರ ಕನಸಿಗೆ ಪ್ರಮಾಣೀಕರಣ ಮಂಡಳಿಯ ನಿರ್ಧಾರದಿಂದ ತಣ್ಣೀರು ಎರೆಚಿದಂತಾಗಿದೆ.

ಇದೇ ಮೊದಲಲ್ಲ:ಪ್ರಮಾಣೀಕರಣ ಮಂಡಳಿಯಿಂದ ಹೀಗೆ ತೊಂದರೆ ಅನುಭವಿಸಿದವರಲ್ಲಿ ಶ್ರೀಲೇಶ್ ಮೊದಲಿಗರೇನಲ್ಲ. ಬಾಬು ಈಶ್ವರ್ ನಿರ್ದೇಶನ ‘ಗಾಳಿಬೀಜ‘ ಸಿನಿಮಾಕ್ಕೂ ಪ್ರಮಾಣೀಕರಣ ಮಂಡಳಿ ಪ್ರಮಾಣಪತ್ರ ನೀಡದೆ ಇರುವುದು ವಿವಾದಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಮಂಡಳಿಯ ಸದಸ್ಯೆ ಡಾ. ಗಿರಿಜಾ ಕೂಡ ‘ಪ್ರಾದೇಶಿಕ ಅಧಿಕಾರಿ ಶ್ರೀನಿವಾಸಪ್ಪ, ಸದಸ್ಯರ ಅಭಿಪ್ರಾಯಕ್ಕೆ ಬೆಲೆ ಕೊಡುವುದಿಲ್ಲ‘ ಎಂದು ಆರೋಪಿಸಿದ್ದರು.

ಈಗ ’ಪಾರಣೆ’ ಸಿನಿಮಾಗೆ ರಾಷ್ಟ್ರ/ ರಾಜ್ಯ ಪ್ರಶಸ್ತಿಗಳನ್ನು ತಪ್ಪಿಸಲಿಕ್ಕಾಗಿಯೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

2.7 ಲಕ್ಷ ಬಜೆಟ್‌:

ಪಾರಣೆ ಚಿತ್ರದ ಬಜೆಟ್‌ ಕೇವಲ ₹ 2.7 ಲಕ್ಷ. ಅತಿಸಣ್ಣ ಬಜೆಟ್‌ನಲ್ಲಿಯೂ ಸೃಜನಶೀಲ ಸಿನಿಮಾ ಮಾಡಬಹುದು ಎಂಬುದನ್ನು ತೋರಿಸುವ ಉದ್ದೇಶದಿಂದ ಶ್ರೀಲೇಶ್‌ ಈ ಸಿನಿಮಾವನ್ನು ರೂಪಿಸಿದ್ದರು. ‘ಬಜೆಟ್ ಕಾರಣದಿಂದ ಯಾವುದೇ ನಿರ್ದೇಶಕ ಸಿನಿಮಾ ಮಾಡುವುದರಿಂದ ವಂಚಿತರಾಗಬಾರದು ಎಂಬುದು ನನ್ನ ಉದ್ದೇಶ. ಇದು ನಮ್ಮ ಮಟ್ಟಿಗೆ ಹೊಸ ರೀತಿಯ ಸಿನಿಮಾ. ನನ್ನ ಈ ಪ್ರಯತ್ನದಿಂದ ಇನ್ನಷ್ಟು ಜನರು ಇಂಥ ಸಿನಿಮಾಗಳನ್ನು ಮಾಡಲು ಮುಂದೆ ಬರುತ್ತಾರೆ ಎಂಬ ವಿಶ್ವಾಸವೂ ನನಗಿತ್ತು. ಆದರೆ ಈ ಪ್ರಯತ್ನಕ್ಕೆ ಮಂಡಳಿಯಿಂದ ದೊರೆತಿರುವ ಪ್ರತಿಕ್ರಿಯೆಯಿಂದ ತುಂಬ ನೋವಾಗಿದೆ‘ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ ಶ್ರೀಲೇಶ್‌.

‘ಪಾರಣೆ’ಯಲ್ಲಿ ಏನಿದೆ?

ಪಾರಣೆ ಕೊಡವ ಭಾಷೆಯ ಸಿನಿಮಾ. ಇತ್ತೀಚೆಗೆ ಹೊರಗಿನಿಂದ ಬಂದವರು ಕೊಡಗಿನಲ್ಲಿರುವ ತೋಟಗಳನ್ನು ಖರೀದಿಸಿ, ತೋಟಗಳನ್ನು ನಾಶಮಾಡಿ ಹೋಂ ಸ್ಟೇ ಗಳನ್ನು ಕಟ್ಟುತ್ತಿದ್ದಾರೆ. ಇದರಿಂದ ಅಲ್ಲಿನ ಪ್ಲಾಂಟೇಶನ್‌ಗಳು ಹಾಳಾಗುತ್ತಿವೆ. ಅಲ್ಲಿನ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಅಲ್ಲಿನವರೇ ನಾಲ್ಕೈದು ಜನ ಹೋರಾಟ ಮಾಡಬೇಕು ಎಂದು ನಿರ್ಧರಿಸುತ್ತಾರೆ. ದುರದೃಷ್ಟವಶಾತ್‌ ಅವರ ಮಧ್ಯವೇ ಭಿನ್ನಾಭಿಪ್ರಾಯ ಮೂಡಿ ಹೋರಾಟ ಹಳಿತಪ್ಪುತ್ತದೆ. ಇದು ಪಾರಣೆ ಚಿತ್ರದ ವಸ್ತು. ಒಗ್ಗಟ್ಟಿಲ್ಲದೆ ಯಾವ ಸಮಸ್ಯೆಗಳನ್ನೂ ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಮಾತ್ಮಕವಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ ನಿರ್ದೇಶಕರು.

ಈ ಕುರಿತು ಪ್ರಜಾವಾಣಿ, ಮಂಡಳಿಯ ಪ್ರಾದೇಶಿಕ ಅಧಿಕಾರಿ ಶ್ರೀನಿವಾಸಪ್ಪ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿತು. ಆದರೆ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಅಡ್ವೋಕೇಟ್ ಏನಂತಾರೆ?

‘ಸಿನಿಮಾಟೋಗ್ರಾಫ್ ಆ್ಯಕ್ಟ್‌ನಲ್ಲಿ ಸಿನಿಮಾವನ್ನು ಹೀಗೆ ತಾಂತ್ರಿಕ ಕಾರಣವೊಡ್ಡಿ ತಿರಸ್ಕರಿಸಲು ಸಾಧ್ಯ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ನಿರ್ದೇಶಕರು ವಾಣಿಜ್ಯ ಮಂಡಳಿಗೆ ದೂರು ನೀಡಬಹುದು. ವಾಣಿಜ್ಯ ಮಂಡಳಿ ಈ ಪ್ರಕರಣವನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದು’ ಎನ್ನುತ್ತಾರೆ ವಕೀಲರಾದ ಧನರಾಜ್‌ ಎಚ್‌.ಎಸ್‌.

ಶ್ರೀಲೇಶ್ ಎಸ್. ನಾಯರ್‌ ಕುರಿತು ಒಂದಿಷ್ಟು

ಶ್ರೀಲೇಶ್‌ ಎಸ್‌. ನಾಯರ್‌ ಹುಟ್ಟಿದ್ದು ಕೇರಳದಲ್ಲಿ. ಓದಿದ್ದು ಮೈಸೂರಿನಲ್ಲಿ. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಕನ್ನಡ ಮತ್ತು ಮಲಯಾಳಂ ಭಾಷೆಗಳ ಹಲವು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವೂ ಇವರಿಗಿದೆ. ಸದಾ ನೋಡುವ ಸಿನಿಮಾಗಳಿಗಿಂತ ತುಸು ಭಿನ್ನ ಜಾಡಿನಲ್ಲಿ ಸಿನಿಮಾ ರೂಪಿಸಬೇಕು ಎನ್ನುವುದು ಇವರ ತುಡಿತ. ಇದೇ ಉದ್ದೇಶದಲ್ಲಿಯೇ ಅವರು ಪಾರಣೆ ಸಿನಿಮಾ ಮಾಡಿದ್ದಾರೆ.

’ನಮ್ಮಲ್ಲಿ ಪ್ರಯೋಗಾತ್ಮಕ ಸಿನಿಮಾಗಳ ಕೊರತೆ ಇದೆ. ಸಣ್ಣ ಸಣ್ಣ ಬಜೆಟ್‌ಗಳ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣ ಮಾಡುವುದೇ ನನ್ನ ಮುಂದಿನ ಗುರಿ‘ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT