ಬುಧವಾರ, ನವೆಂಬರ್ 13, 2019
28 °C

ಪಾಣಿಪತ್‌: ‌ಚಿತ್ತಸೆಳೆವ ‘ದುರ್‍ರಾನಿ’ ದತ್‌

Published:
Updated:

‘ಕೆಜಿಎಫ್‌ ಚಾಪ್ಟರ್‌ 2’ರಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ ದತ್‌, ಹಿಂದಿಯ ‘ಪಾಣಿಪತ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದ ಖಳನಾಯಕ ಅಹಮದ್‌ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಪಾತ್ರದಲ್ಲಿನ ದತ್‌ ಲುಕ್‌ಗೆ ಚಿತ್ರರಸಿಕರು ಪಿಧಾ ಆಗಿದ್ದಾರೆ.

ಆಶುತೋಷ್‌ ಗೊವಾರಿಕರ್‌ ನಿರ್ದೇಶನದ ಬಹುತಾರಾಗಣದ ಈ ಚಿತ್ರವು ಐತಿಹಾಸಿಕ ಕಥೆ ಆಧರಿಸಿದೆ. ಈ ಚಿತ್ರವು ಮೂರನೇ ಪಾಣಿಪತ್ ಕದನದ ಸನ್ನಿವೇಶಗಳ ಕಥಾಹಂದರ ಹೊಂದಿದೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಇದೇ ಡಿಸೆಂಬರ್ 6ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. 

2016ರಲ್ಲಿ ‘ಮೊಹೆಂಜೊ ದಾರೊ’ ಚಿತ್ರವನ್ನು ನಿರ್ದೇಶಿಸಿದ್ದ ಆಶುತೋಷ್, ಮತ್ತೊಮ್ಮೆ ಐತಿಹಾಸಿಕ ಚಿತ್ರ ನಿರ್ದೇಶನ ಮಾಡಿದ್ದಾರೆ. ಮರಾಠರ ಶೌರ್ಯವನ್ನು ಅವರು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಈ ಚಿತ್ರದಲ್ಲಿ ನಾಯಕಿಯಾಗಿ ಪಾರ್ವತಿ ಬಾಯಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ಅಭಿನೇತ್ರಿ ಕೃತಿ ಸೇನನ್ ಅವರ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಗಮನ ಸೆಳೆಯುವಂತಿದೆ. ಪಾರ್ವತಿ ಬಾಯಿ, ಮರಾಠ ನಾಯಕ ಸದಾಶಿವ ರಾವ್ ಭಾವು ಅವರ ಎರಡನೇ ಪತ್ನಿಯಾಗಿದ್ದವರು. 

ಈ ಚಿತ್ರದ ನಾಯಕ ಅರ್ಜುನ್‌ ಕಪೂರ್‌, ಸದಾಶಿವ ರಾವ್‌ ಭಾವು ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಕ್ಕೆ ಸಾಕಷ್ಟು ವರ್ಕೌಟ್‌ ಮಾಡಿದ್ದು ಅವರು ಮರಾಠಿಯನ್ನೂ ಕಲಿತು ಅಭಿನಯಿಸಿದ್ದಾರಂತೆ. ಅರ್ಜುನ್‌ಗೆ ನಿರ್ದೇಶಕ ಆಶುತೋಷ್‌ ಅವರೇ ಮರಾಠಿಯನ್ನು ಕಲಿಸಿಕೊಟ್ಟಿದ್ದಾರಂತೆ. ಅರ್ಜುನ್‌ ಪಾತ್ರದ ಮೊದಲ ಲಕ್‌ನ ಪೊಸ್ಟರ್‌ ಅನ್ನು ಚಿತ್ರತಂಡ ಇನ್ನೂ ಬಿಡುಗಡೆ ಮಾಡದೆ, ಕುತೂಹಲವನ್ನು ಕಾಯ್ದುಕೊಂಡಿದೆ. ವರ್ಷದ ಹಿಂದೆ ಚಿತ್ರ ತಂಡ, ಕೈಯಲ್ಲಿ ಖಡ್ಗ ಹಿಡಿದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿ, ಚಿತ್ರರಸಿಕರಲ್ಲಿ ಕುತೂಹಲ ಮೂಡಿಸಿತ್ತು.

1761ರ ಜನವರಿ 14ರಂದು ಇಂದಿನ ಹರಿಯಾಣದಲ್ಲಿರುವ ಪಾಣಿಪತ್‌ನಲ್ಲಿ ಮರಾಠ ಸಾಮ್ರಾಜ್ಯದ ನಾಯಕರಿಗೂ ಮತ್ತು ಅಹ್ಮದ್ ಶಾಹ ದುರ್ರಾನಿ ನೇತೃತ್ವದ ಪಾಶ್ತುನ್ ಜನರ ಸೇನೆಯ ಮಧ್ಯೆ ಮೂರನೆಯ ಪಾಣಿಪತ್‌ ಯುದ್ಧ ನಡೆದಿತ್ತು. 

ಪ್ರತಿಕ್ರಿಯಿಸಿ (+)