ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವಿತ್ರಾ ಗೌಡ

Published 26 ಜನವರಿ 2024, 14:42 IST
Last Updated 26 ಜನವರಿ 2024, 14:42 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ರೂಪದರ್ಶಿ, ನಟಿ ಪವಿತ್ರಾ ಗೌಡ ಅವರ ನಡುವಿನ ವಾಕ್ಸಮರ ಇಂದು ಕೂಡ ಮುಂದುವರಿದಿದೆ.

ವಿಜಯಲಕ್ಷ್ಮಿ ಅವರು ದರ್ಶನ್ ಹಾಗೂ ತಮ್ಮ ಮಗನೊಟ್ಟಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಪವಿತ್ರಾ ಗೌಡ ಅವರು ದರ್ಶನ್​ ಜೊತೆಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ‘ಹತ್ತು ವರ್ಷದ ಸಂಬಂಧ’ ಎಂದು ಬರೆದುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ವಿಜಯಲಕ್ಷ್ಮಿ, ಪವಿತ್ರಾ, ತಮ್ಮ ಪತಿ (ಸಂಜಯ್) ಜತೆಗಿರುವ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡು, ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬರ್ಥದ ಸಂದೇಶ ಹಂಚಿಕೊಂಡಿದ್ದರು. ಜತೆಗೆ, ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಇದೀಗ ಪವಿತ್ರಾ ಗೌಡ, ವಿಜಯಲಕ್ಷ್ಮಿ ಅವರ ಪೋಸ್ಟ್​ಗೆ ತಿರುಗೇಟು ನೀಡಿದ್ದಾರೆ.

‘ನಾನು ಪವಿತ್ರ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು, ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದ್ದೇನೆ. ಇಲ್ಲಿಯವರೆಗೂ ಖುಷಿ ಗೌಡ, ದರ್ಶನ್ ಶ್ರೀನಿವಾಸ್​ ಅವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ನಾನು ಯಾವುದೇ ಖಾಸಗಿ ಅವಶ್ಯಕತೆ ಅಥವಾ ಖಾಸಗಿ ಉದ್ದೇಶಗಳಿಗಾಗಿ ಇಲ್ಲಿಲ್ಲ. ನನ್ನದು ಏನಿದ್ದರೂ ಪರಿಪೂರ್ಣ ಪ್ರೀತಿ ಮತ್ತು ಕಾಳಜಿ, ಅದೂ ಕಳೆದ 10 ವರ್ಷದಿಂದ, ಅದು ಸುಲಭದ್ದಾಗಿರಲಿಲ್ಲ. ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮಿರವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮಿರವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ದಾಖಲೆಗಳು ಹಾಗೂ ನನ್ನ ವಿಚ್ಛೇದನ ದಾಖಲೆ ನನ್ನ ಬಳಿ ಇವೆ. ಸಮಯ ಬಂದಾಗ ಹಂಚಿಕೊಳ್ಳುತ್ತೇನೆ) ಇದೀಗ ವಿಜಯಲಕ್ಷ್ಮಿರವರು ನನ್ನ ವಿರುದ್ಧವಾಗಿ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಹದಿಹರೆಯದ ಮಗಳ (ಖುಷಿ ಗೌಡ) ಬಗ್ಗೆ ವಿಜಯಲಕ್ಷ್ಮಿ ಎಂಬ ಇನ್​ಸ್ಟಾಗ್ರಾಮ್‌ ಖಾತೆಯಲ್ಲಿ ಬಹಳಷ್ಟು ಜನ ಕೆಟ್ಟ ಪದಗಳನ್ನು ಬಳಕೆ ಮಾಡಿ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ಖಾಸಗಿ ಫೋಟೊಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕು ಇದೆ. ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ. ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ಅವರ ಜೀವನಕ್ಕೆ ಬರುವ ಮುಂಚೆ, ಅವರಿಬ್ಬರ ನಡುವೆ ಎಂಥಹ ಸಮಸ್ಯೆ ಇತ್ತು, ಅದರಿಂದಾಗಿ ಆತ ಎಷ್ಟು ಕಷ್ಟಗಳನ್ನು ಅನುಭವಿಸಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಭಾವಿಸಿದ್ದೇನೆ. ಅದನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳಿ’ ಎಂದು ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT