ಮಂಗಳವಾರ, ಏಪ್ರಿಲ್ 7, 2020
19 °C

ದಿನಗೂಲಿ ನೌಕರರಿಗೆ ಪವನ್ ನೆರವಿನ ಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಕಾರಣದಿಂದಾಗಿ ದೇಶ 21 ದಿನಗಳ ಲಾಕ್‌ಡೌನ್‌ ಪರಿಸ್ಥಿತಿ ಎದುರಿಸುತ್ತಿದೆ. ಆಯಾ ದಿನದ ಅನ್ನವನ್ನು ಆ ದಿನವೇ ದುಡಿದು ಸಂಪಾದಿಸಿಕೊಳ್ಳುವ ಅನಿವಾರ್ಯ ಇರುವ ಕಾರ್ಮಿಕರು ಇದರಿಂದಾಗಿ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಈ ಪರಿಸ್ಥಿತಿಯಿಂದ ಸಿನಿಮಾ ರಂಗ ಕೂಡ ಹೊರತಾಗಿಲ್ಲ. ಆದರೆ, ನಟ ಹಾಗೂ ನಿರ್ಮಾಪಕ ಪವನ್ ಕುಮಾರ್ ಅವರು ಈ ಸಂದರ್ಭದಲ್ಲಿ ಇಂಥವರ ಸಹಾಯಕ್ಕೆ ಮುಂದಾಗಿದ್ದಾರೆ.

‘ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕಾಯುವ ಬದಲು, ನಾವೂ ಒಂದಿಷ್ಟು ಕೆಲಸ ಮಾಡಬಹುದು ಎನ್ನುವ ಚಿಂತನೆಯೊಂದಿಗೆ ಈ ಕೆಲಸ ಶುರು ಮಾಡಿದೆ’ ಎನ್ನುತ್ತಾರೆ ಪವನ್ ಕುಮಾರ್.

ಕನ್ನಡ ಸಿನಿಮಾ ರಂಗದಲ್ಲಿ ಅಂದಿನ ಅನ್ನವನ್ನು ಅಂದೇ ದುಡಿದು ಸಂಪಾದಿಸಿಕೊಳ್ಳಬೇಕಾದ ಅನಿವಾರ್ಯ ಇರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಪವನ್ ಅವರು ಆರಂಭಿಸಿದ ನೆರವಿನ ನಿಧಿಯಲ್ಲಿ ಈವರೆಗೆ ಕನಿಷ್ಠ ₹ 4.5 ಲಕ್ಷ ಸಂಗ್ರಹ ಆಗಿದೆ. ಪವನ್ ಅವರ ಕೆಲಸ ಕಂಡು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತಾವೂ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಕಾರ್ಮಿಕರಿಗೆ ನೆರವು ನೀಡಲು ಪವನ್ ಆರಂಭಿಸಿದ ನಿಧಿಯು 48 ತಾಸುಗಳ ಅವಧಿಯಲ್ಲಿ ಒಟ್ಟು ₹ 3.5 ಲಕ್ಷ ಸಂಗ್ರಹಿಸಿತ್ತು ಎಂಬುದು ಉಲ್ಲೇಖಾರ್ಹ.

‘ಈ ಮೊತ್ತದಲ್ಲಿ ನಾನು ಕೊಟ್ಟ ಹಣವೂ ಇದೆ. ಸಿನಿಮಾ ಉದ್ಯಮದ ಹಲವು ನಟರು, ನಿರ್ಮಾಪಕರು ನೀಡಿದ ಹಣವೂ ಸೇರಿಕೊಂಡಿದೆ’ ಎಂದು ಪವನ್ ಅವರು ಇನ್‌ಸ್ಟಾಗ್ರಾಂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಸಿನಿಮಾ ಉದ್ಯಮದವರು ನೆರವು ನೀಡುವ ಕೆಲಸ ಏಕೆ ಮಾಡುತ್ತಿಲ್ಲ ಎಂದು ಕೆಲವರು ಕೇಳುತ್ತಿದ್ದರು. ಮುಂದಿನ ದಿನಗಳಲ್ಲಿ ಛೇಂಬರ್‌ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ) ಕಡೆಯಿಂದಲೂ ಇಂಥ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತವೆ ಎಂದು ನಾನು ನಂಬಿದ್ದೇನೆ’ ಎಂದು ಪವನ್ ಅವರು ಹೇಳಿದ್ದಾರೆ.

‘ನಾನು ನೆರವಿನ ಕೆಲಸ ಶುರು ಮಾಡಿದೆ. ಚೇತನ್, ದಿಗಂತ್, ಧನಂಜಯ್, ಶರ್ಮಿಳಾ, ಐಂದ್ರಿತಾ, ಶ್ರದ್ಧಾ, ಪ್ರಕಾಶ್ ರೈ ಅವರೆಲ್ಲ ಇದರಲ್ಲಿ ಕೈಜೋಡಿಸಿದ್ದಾರೆ. ನಮ್ಮಿಂದ ತಕ್ಷಣಕ್ಕೆ ಏನು ಸಾಧ್ಯವೋ ಅದನ್ನು ಮಾಡಿದ್ದೇವೆ. ಹಣ ಇನ್ನೂ ನನ್ನ ಬಳಿ ಇದೆ. ಅದನ್ನು ಯಾರಿಗೆ ರವಾನಿಸಬೇಕು ಎಂಬುದರ ವಿಚಾರದಲ್ಲಿ ಚೇತನ್ ಅವರು ನನಗೆ ಸಹಾಯ ಮಾಡುತ್ತಿದ್ದಾರೆ.

ಈ ಹೊತ್ತಿನಲ್ಲಿ ಎಲ್ಲರೂ ಹಣ ಉಳಿತಾಯ ಮಾಡೋಣ ಎನ್ನುವ ಸ್ಥಿತಿಯಲ್ಲಿ ಇರುತ್ತಾರೆ. ಅದು ಸಹಜ ಕೂಡ. ಆದರೆ ಇಂತಹ ಸಂದರ್ಭದಲ್ಲೂ ಜನ ಮುಂದೆ ಬಂದು ಹಣ ನೀಡಿದ್ದಾರೆ’ ಎಂದು ಪವನ್ ಕೃತಜ್ಞತೆಯ ಮಾತು ಆಡಿದ್ದಾರೆ.

ಕಾರ್ಮಿಕರಿಗಾಗಿ ಸಹಾಯ ಮಾಡಿದವರಲ್ಲಿ ₹ 50 ಕೊಟ್ಟವರೂ ಇದ್ದಾರೆ, ₹ 20 ಸಾವಿರ ಕೊಟ್ಟವರೂ ಇದ್ದಾರೆ. ಯಾರು ಎಷ್ಟು ಮೊತ್ತ ನೀಡಿದ್ದಾರೆ ಎಂಬುದರ ವಿವರವನ್ನು ಪವನ್ ಅವರು ಸಾರ್ವಜನಿಕರ ಅವಗಾಹನೆಗೆ ಲಭ್ಯವಾಗಿಸಿದ್ದಾರೆ. ಆದರೆ, ಅವರ ಹೆಸರುಗಳನ್ನು ಉಲ್ಲೇಖಿಸಿಲ್ಲ. ಬದಲಿಗೆ, ಬ್ಯಾಂಕ್‌ ಖಾತೆಗೆ ಹಣ ಬಂದಿದ್ದರ ವಿವರಗಳನ್ನು ಮಾತ್ರ ಬಹಿರಂಗಪಡಿಸಿದ್ದಾರೆ.

‘ಅತ್ಯಂತ ಅವಶ್ಯತೆ ಇರುವವರಿಗೆ ತಲಾ ₹ 2 ಸಾವಿರ ಕೊಡುವ ಉದ್ದೇಶ ಇದೆ. ಕಾರ್ಮಿಕರ ಒಟ್ಟು 17 ಒಕ್ಕೂಟಗಳ ಮೂಲಕ ಹಣ ನೀಡಲಾಗುವುದು. ಪ್ರತಿ ಒಕ್ಕೂಟದ ತಲಾ 10 ಜನರಿಗೆ ಹಣಕಾಸಿನ ನೆರವು ಸಿಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು