ಸೋಮವಾರ, ಆಗಸ್ಟ್ 15, 2022
25 °C

ಕಾನ್‌ ಫಿಲ್ಮ್‌ ಮಾರ್ಕೆಟ್‌ಗೆ ಕನ್ನಡದ 'ಪೆದ್ರೋ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಾನ್‌ ಸಿನಿಮೋತ್ಸವದ ಭಾಗವಾಗಿರುವ ಜಗತ್ತಿನ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದಾದ ಮಾರ್ಚೆ ಡು ಫಿಲ್ಮ್‌ ಮಾರ್ಕೆಟ್‌ಗೆ ಯಲ್ಲಾಪುರದ ನಟೇಶ ಹೆಗಡೆ ನಿರ್ದೇಶನದ ‘ಪೆದ್ರೋ’ ಸಿನಿಮಾ ಆಯ್ಕೆಯಾಗಿದೆ.


ನಟೇಶ ಹೆಗಡೆ

ಮಾರ್ಚೆಡು ಫಿಲ್ಮ್‌ (ಫಿಲ್ಮ್‌ ಮಾರ್ಕೆಟ್‌) ಪ್ರತಿವರ್ಷ ಕಾನ್‌ ಸಿನಿಮೋತ್ಸವದ ಸಮಯದಲ್ಲಿಯೇ ನಡೆಯುತ್ತದೆ. ಇಲ್ಲಿ ಆಯ್ಕೆಯಾಗುವ ಸಿನಿಮಾಗಳಿಗೆ ಪ್ರದರ್ಶನ, ಹಕ್ಕು ಮಾರಾಟ ಹಾಗೂ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನಡೆಯುವ ಸಿನಿಮೋತ್ಸವಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಈ ಮಾರ್ಕೆಟ್‌ ಒದಗಿಸುತ್ತದೆ.

ಮಾರ್ಚೆ ಡು ಫಿಲ್ಮ್ ವಿವಿಧ ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡುತ್ತದೆ. ಕಾನ್‌ ಸಿನಿಮೋತ್ಸವದಲ್ಲಿ ಪ್ರತಿವರ್ಷವೂ 121ಕ್ಕೂ ಹೆಚ್ಚು ದೇಶಗಳಿಂದ 4 ಸಾವಿರಕ್ಕೂ ಹೆಚ್ಚು ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಬಾರಿ ಫಿಲ್ಮ್‌ ಮಾರ್ಕೆಟ್‌ನಲ್ಲಿ ಭಾರತದ ಎನ್‌ಎಫ್‌ಡಿಸಿಗೆ (ನ್ಯಾಷನಲ್‌ ಫಿಲ್ಮ್‌ ಡೆವಲಂಪ್‌ಮೆಂಟ್‌ ಕಾರ್ಪೋರೇಷನ್‌) ಪ್ರತ್ಯೇಕ ಸ್ಥಾನ ನೀಡಲಾಗಿದೆ. ಇದೇ ಮೊದಲ ಬಾರಿ ಎನ್‌ಎಫ್‌ಡಿಸಿ ಫಿಲ್ಮ್‌ ಬಜಾರ್‌ನ ಐದು ಭಾರತೀಯ ಸಿನಿಮಾಗಳು ‘ಗೋಸ್‌ ಟು ಕಾನ್‌’ ವಿಭಾಗದಲ್ಲಿ ಆಯ್ಕೆಯಾಗಿವೆ. ಇದರಲ್ಲಿ ಕನ್ನಡದ 'ಪೆದ್ರೋ' ಕೂಡ ಸೇರಿದೆ. ಕನ್ನಡದ ಸಿನಿಮಾವೊಂದು ಈ ಮಾರುಕಟ್ಟೆಗೆ ಆಯ್ಕೆಯಾಗಿರುವುದು ಇದೇ ಮೊದಲು. 

ಬಂಗಾಳಿ ಭಾಷೆಯ ‘ಟು ಫ್ರೆಂಡ್ಸ್‌’, ಫೈರ್‌ ಇನ್‌ ದ ಮೌಂಟೇನ್ಸ್‌ (ಹಿಂದಿ), ಶಂಕರ್ಸ್‌ ಫೈರೀಸ್‌ (ಹಿಂದಿ), ದಿ ನಾಟ್‌ (ಹಿಂದಿ) ಎನ್‌ಎಫ್‌ಡಿಸಿ ಫಿಲ್ಮ್‌ ಬಜಾರ್‌ನಿಂದ ‘ಗೋಸ್‌ ಟು ಕಾನ್’‌ಗೆ ಆಯ್ಕೆಯಾಗಿರುವ ಇತರ ನಾಲ್ಕು ಭಾರತೀಯ ಸಿನಿಮಾಗಳು.

ದಕ್ಷಿಣ ಏಷ್ಯಾದ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಭಾರತೀಯ ಚಿತ್ರಗಳನ್ನು ವಿಶ್ವದ ನಾನಾ ಭಾಗಗಳ ಸಿನಿಮೋತ್ಸವಕ್ಕೆ ಆಯ್ಕೆ ಮಾಡಲು ಎನ್‌ಎಫ್‌ಡಿಸಿ(ನ್ಯಾಷನಲ್‌ ಫಿಲ್ಮ್‌ ಡೆವಲಂಪ್‌ಮೆಂಟ್‌ ಕಾರ್ಪೋರೇಷನ್‌) ಫಿಲ್ಮ್ ಬಜಾರ್ ಶ್ರಮಿಸುತ್ತದೆ.

ಶಿರಸಿ ಸಿನಿಮಾ! 

‘ಪೇದ್ರೋ’ ನಟೇಶ ಹೆಗಡೆ ನಿರ್ದೇಶನದ ಮೊದಲ ಸಿನಿಮಾ. ಇದರಲ್ಲಿ ಮುಖ್ಯಪಾತ್ರದಲ್ಲಿ ನಟೇಶ ಹೆಗಡೆ ಅವರ ತಂದೆ ಗೋಪಾಲ್‌ ಹೆಗಡೆ ಬಣ್ಣ ಹಚ್ಚಿದ್ದಾರೆ. ರಾಜ್‌ ಬಿ. ಶೆಟ್ಟಿ ಹಾಗೂ ಮೇದಿನಿ ಕೆಳಮನೆ ಪಾತ್ರವರ್ಗದಲ್ಲಿದ್ದಾರೆ.

ತಾಯಿ ಹಾಗೂ ಸಹೋದರನ ಕುಟುಂಬದ ಜೊತೆಗೆ ವಾಸಿಸುತ್ತಿರುವ ಮಧ್ಯವಯಸ್ಸಿನ ಎಲೆಕ್ಟ್ರೀಷಿಯನ್ ಪೆದ್ರೋ‌, ಗ್ರಾಮಸ್ಥರ ಮನಸ್ಸಿಗೆ ಘಾಸಿ ಆಗುವಂತಹ ಕೃತ್ಯ ಎಸಗುತ್ತಾನೆ. ಅದಕ್ಕೆ ಗ್ರಾಮಸ್ಥರ ಅನಿರೀಕ್ಷಿತ ಪ್ರತಿಕ್ರಿಯೆಗಳು ಹೇಗಿರುತ್ತವೆ ಎಂಬುದೇ ಈ ಸಿನಿಮಾದ ಭಿತ್ತಿ.

ಧರ್ಮ, ವರ್ಗ ವ್ಯವಸ್ಥೆ, ಸಾಂಸ್ಕೃತಿಕ ರಾಜಕಾರಣದ ಪಲ್ಲಟಗಳನ್ನು ಒಂದು ಗ್ರಾಮ ಬದುಕಿನ ಕ್ಯಾನ್ವಾಸಿನಲ್ಲಿ ಇಟ್ಟುಕೊಂಡು ಸಿನಿಮಾ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಈ ಸಿನಿಮಾವನ್ನು ಶಿರಸಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎರಡ್ಮೂರು ಮುಖ್ಯಪಾತ್ರಗಳನ್ನು ಹೊರತುಪಡಿಸಿದರೆ ಈ ಸಿನಿಮಾದಲ್ಲಿ ನಟಿಸಿದವರು ಎಲ್ಲರೂ ಶಿರಸಿ ಭಾಗದ ಜನರು. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ನಿರ್ದೇಶಕ ರಿಷಭ್‌ ಶೆಟ್ಟಿ ಬ್ಯಾನರ್‌ ಅಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. 

‘ಕುರ್ಲಿ, ನಮಗೆ ನಾವೇ ಗೋಡೆಗೆ ಮಣ್ಣು’ ಎಂಬ ಕಿರುಚಿತ್ರಗಳನ್ನು ನಟೇಶ ಹೆಗಡೆ ನಿರ್ದೇಶಿಸಿದ್ದು, ಈ ಚಿತ್ರಗಳು ಭಿನ್ನ ಕಥನ, ಬಿಗಿಯಾದ ಕತೆ ಹಾಗೂ ಸರಳ ನಿರೂಪಣೆಯಿಂದ ಸಿನಿಪ್ರಿಯರನ್ನು ಆಕರ್ಷಿಸಿತ್ತು. ಅನೇಕ ಸಿನಿಮೋತ್ಸವಗಳಲ್ಲೂ ಪ್ರದರ್ಶನ ಕಂಡಿದೆ.

ಕನ್ನಡದ ಸಿನಿಮಾ 

ಫಿಲ್ಮ್ ಮಾರ್ಕೆಟ್‌ಗೆ ನಮ್ಮ ಸಿನಿಮಾ ಆಯ್ಕೆಯಾಗಿರುವುದರಿಂದ ಈ ಸಿನಿಮಾವನ್ನು ಕರ್ನಾಟಕ ಹಾಗೂ ಭಾರತದಲ್ಲಿ ಮಾತ್ರವಲ್ಲದೇ, ವಿಶ್ವದ ಯಾವ ಭಾಗದಲ್ಲಾದರೂ ವೀಕ್ಷಿಸಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಆಯ್ಕೆಯಾಗಿರುವುದರಿಂದ ಸಿನಿಪ್ರಿಯರಲ್ಲಿ ಸಹಜವಾಗಿ ಈ ಸಿನಿಮಾದ ಬಗ್ಗೆ ಕುತೂಹಲ ಮೂಡುತ್ತದೆ. ಹಾಗಾಗಿ ಇದು ನಮಗೆ ಮುಖ್ಯ

– ನಟೇಶ ಹೆಗಡೆ, ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು