ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಪುರುಷ್ ನಿಷೇಧಕ್ಕೆ ಆಗ್ರಹ ದೆಹಲಿ ಹೈಕೋರ್ಟ್‌ಗೆ ಅರ್ಜಿ

Published 17 ಜೂನ್ 2023, 14:34 IST
Last Updated 17 ಜೂನ್ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ‘ಆದಿಪುರುಷ್‌ ಚಲನಚಿತ್ರದಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದ್ದು, ಈ ಚಿತ್ರಕ್ಕೆ ನೀಡಿರುವ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಮತ್ತು ಪ್ರದರ್ಶನವನ್ನು ನಿಷೇಧಿಸಬೇಕು’ ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಹಿಂದೂ ಸೇನಾ ಅಧ್ಯಕ್ಷ ವಿಷ್ಣುಗುಪ್ತಾ ಈ ಅರ್ಜಿ ಸಲ್ಲಿಸಿದ್ದಾರೆ. ಸೃಜನಶೀಲತೆ ಸ್ವಾತಂತ್ರ್ಯದ ಹೆಸರಿನಲ್ಲಿ ಚಿತ್ರ ನಿರ್ಮಾಪಕರು, ನಿರ್ದೇಶಕರು, ನಟರು ವಾಣಿಜ್ಯ ಉದ್ದೇಶಗಳಿಗಾಗಿ ಧಾರ್ಮಿಕ ನಾಯಕರು, ಪಾತ್ರಗಳ ಕೇಶವಿನ್ಯಾಸ, ವ್ಯಕ್ತಿತ್ವ, ಹಾವಭಾವವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ಇರಬಾರದು’ ಎಂದು ಹೇಳಿದ್ದಾರೆ.

ಸೃಜನಶೀಲತೆ ಹೆಸರಿನಲ್ಲಿ ಹೀಗೆ ಬಳಸಿಕೊಳ್ಳುವುದು ಸಂವಿಧಾನದ ವಿಧಿ 25ರ ಪ್ರಕಾರ, ಧಾರ್ಮಿಕ ಹಕ್ಕುಗಳ ಉಲ್ಲಂಘನೆಯೂ ಆಗಲಿದೆ ಎಂದು ವಕೀಲರಾದ ಪ್ರತಿಭಾ ಸಿನ್ಹಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಇದೇ 16ರಂದು ಚಿತ್ರ ಬಿಡುಗಡೆಯಾಗಿದೆ.  

ರಾವಣ, ಶ್ರೀರಾಮ, ಸೀತಾಮಾತೆ, ಹನುಮಾನ್‌ ಅವರ ಚಿತ್ರಣ ‘ಆದಿಪುರುಷ್’ ಚಿತ್ರದಲ್ಲಿದೆ. ಮಹರ್ಷಿ ವಾಲ್ಮೀಕಿ ಅವರ ರಾಮಾಯಣ, ತುಳಸಿದಾಸರ ರಾಮಚರಿತಮಾನಸದಲ್ಲಿ ಬಿಂಬಿಸಲಾಗಿರುವ ಈ ಪಾತ್ರಗಳ ಚಿತ್ರಣಕ್ಕೆ ಸಂಪೂರ್ಣ ವಿರುದ್ಧವಾಗಿ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.

‘ಚಿತ್ರದಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಇದು, ಪ್ರತಿಕೂಲ ಪರಿಣಾಮಕ್ಕೂ ಕಾರಣವಾಗಬಹುದು. ಹೀಗಾಗಿ, ಚಿತ್ರಪ್ರದರ್ಶನ ನಿರ್ಬಂಧಿಸಬೇಕು‘ ಎಂದು ಆಗ್ರಹಿಸಿದ್ದಾರೆ. ‘ನಾವು ಕೇಂದ್ರ ಪ್ರಸಾರ ಸಚಿವಾಲಯಕ್ಕೂ ಅಕ್ಟೋಬರ್‌ 4, 2022ರಂದು ಮನವಿ ಸಲ್ಲಿಸಿದ್ದೆವು. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ತಿಳಿಸಿದ್ದಾರೆ.

ಓಂ ರಾವುತ್‌ ನಿರ್ದೇಶನ, ಭೂಷಣ್‌ ಕುಮಾರ್ ನಿರ್ಮಾಣದ ‘ಆದಿಪುರುಷ್‌’ ಚಿತ್ರ ರಾಮಾಯಣ ಪುರಾಣಗ್ರಂಥವನ್ನು ಆಧರಿಸಿದೆ. ಚಿತ್ರದಲ್ಲಿ ನಟ ಪ್ರಭಾಸ್ ಅವರು ಶ್ರೀರಾಮನ ಪಾತ್ರ ನಿಭಾಯಿಸಿದ್ದಾರೆ. ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ರಾವಣನಾಗಿ ಸೈಫ್ ಅಲಿ ಖಾನ್‌ ಕಾಣಿಸಿಕೊಂಡಿದ್ದಾರೆ.

‘ಶ್ರೀರಾಮ ಮತ್ತು ಸೀತಾಮಾತೆ ಅವರ ಪಾತ್ರವನ್ನು ಆಕ್ಷೇಪಾರ್ಹಕರವಾದ ರೀತಿಯಲ್ಲಿ ಚಿತ್ರದಲ್ಲಿ ಬಿಂಬಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT