ಸೋಮವಾರ, ಅಕ್ಟೋಬರ್ 3, 2022
24 °C

ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್‌ ನಟನೆಯ ಸಲಾರ್‌ ಮೂವಿ ರಿಲೀಸ್‌ ಡೇಟ್ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದಾದ್ಯಂತ ಸದ್ದು ಮಾಡಿದ್ದ, ಬಾಕ್ಸ್‌ ಆಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಬಾಚಿದ್ದ ‘ಕೆಜಿಎಫ್‌’ ಸರಣಿ ಸಿನಿಮಾದ ಸೂತ್ರಧಾರ ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಸಲಾರ್‌’ನ ಹೊಸ ಅಪ್‌ಡೇಟ್‌ ದೊರಕಿದೆ. ಪ್ರಭಾಸ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆ್ಯಕ್ಷನ್ ಸಿನಿಮಾಗಾಗಿ ಇನ್ನೂ ಒಂದು ವರ್ಷ ಕಾಯಬೇಕು.

ಸಿನಿಮಾ 2023ರ ಸೆ.28ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಘೋಷಿಸಿದೆ. ಕೆಜಿಎಫ್‌ ಚಾಪ್ಟರ್‌ 1 ಹಾಗೂ 2ನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ತಮ್ಮ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯಡಿ ಸಲಾರ್‌ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಅದ್ಧೂರಿತನದ ವಿಚಾರದಲ್ಲಿ ಕೆಜಿಎಫ್‌ ಚಾಪ್ಟರ್‌–2 ಮೀರಿಸುವಂತಿದೆ ಸಲಾರ್‌. ₹400 ಕೋಟಿಗೂ ಮೀರಿದ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ತನ್ನ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳಿಂದ ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರುವ ಸಲಾರ್‌, ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

‘ಸಲಾರ್’ ಪಕ್ಕಾ ಆ್ಯಕ್ಷನ್ ಚಿತ್ರವಾಗಿದ್ದು ಭಾರತವಲ್ಲದೆ, ಯೂರೋಪ್, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಚಿತ್ರತಂಡವು ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಈ ಚಿತ್ರದ ಗ್ರಾಫಿಕ್ಸ್ ಕೆಲಸದ ಜವಾಬ್ದಾರಿಯನ್ನು ವಿದೇಶದ ಪ್ರತಿಷ್ಠಿತ ಸ್ಟುಡಿಯೊಗೆ ನೀಡಲಾಗಿದೆ. ಭಾರತದಲ್ಲಿ ಇದುವರೆಗೂ ಯಾವ ಚಿತ್ರದಲ್ಲೂ ನೋಡದಂತಹ ಉತ್ಕೃಷ್ಟ ವಿಎಫ್ಎಕ್ಸ್ ಕೆಲಸವನ್ನು ಈ ಚಿತ್ರದಲ್ಲಿ ನೋಡಬಹುದು ಎಂದಿದೆ ಚಿತ್ರತಂಡ.

ಈ ಚಿತ್ರವು ಐದು ಭಾಷೆಗಳಲ್ಲಿ ಮೂಡಿ ಬರಲಿದ್ದು, ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದ ಖ್ಯಾತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಚಿತ್ರಕ್ಕೆ ‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರು ಸಂಗೀತವಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು