ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಜೀವನದಲ್ಲಿ ಎಲ್ಲವೂ ಆಕಸ್ಮಿಕವೇ: ಆರುಂಧತಿ ನಾಗ್

ಪ್ರಜಾವಾಣಿಯ ಸೆಲೆಬ್ರಿಟಿ ಲೈವ್‌ನಲ್ಲಿ ಮುಕ್ತ ಮಾತುಕತೆ
Last Updated 5 ಅಕ್ಟೋಬರ್ 2021, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಜೀವನದಲ್ಲಿ ಎಲ್ಲವೂ ಆ್ಯಕ್ಸಿಡೆಂಟ್‌ಗಳೇ. ದೆಹಲಿಯಲ್ಲಿ ಕುಲೀನ ಕುಟುಂಬದಲ್ಲಿ ಹುಟ್ಟಿದ್ದು, ಮುಂಬೈ ರಂಗಭೂಮಿಯಲ್ಲಿ ಶಂಕರನ ಭೇಟಿಯಾದದ್ದು, ಮದುವೆಯಾಗಿ ಬೆಂಗಳೂರನ್ನೇ ಮನೆ ಮಾಡಿಕೊಂಡದ್ದು, ಅಕಾಲದಲ್ಲಿ ಅವನನ್ನು ಅಪಘಾತದಲ್ಲಿ ಕಳೆದುಕೊಂಡದ್ದು, ರಂಗಶಂಕರವನ್ನು ಕಟ್ಟಿ ಬೆಳೆಸಿದ್ದು- ಎಲ್ಲವೂ ಆಕ್ಸಿಡೆಂಟ್‌ಗಳೇ. ಜೀವನದಲ್ಲಿ ಕೆಲವು ಒಳ್ಳೆಯ ಆ್ಯಕ್ಸಿಡೆಂಟ್‌ಗಳಾದರೆ, ಇನ್ನು ಕೆಲವು ಕೆಟ್ಟ ಆ್ಯಕ್ಸಿಡೆಂಟ್‌ಗಳು..!"
-ಚಿತ್ರನಟಿ, ರಂಗಕರ್ಮಿ ಆರುಂಧತಿ ನಾಗ್ ಹಳೆಯ ನೆನಪುಗಳನ್ನು ಮೊಗೆಮೊಗೆದು ಹೇಳುತ್ತಾ ಹೋದಂತೆ ಅವರ ಕಣ್ಣಾಲಿಗಳೂ ಒದ್ದೆಯಾದವು, ವೀಕ್ಷಕರೂ ಕಣ್ಣೀರಾದರು.

ಮಂಗಳವಾರ ಪ್ರಜಾವಾಣಿಯ ‘ಸೆಲೆಬ್ರಿಟಿ ಲೈವ್’ ಸಂದರ್ಶನದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಉದ್ದಕ್ಕೂ ಪತಿ ಶಂಕರನಾಗ್ ಅವರ ನೆನಪುಗಳ ಮೆರವಣಿಗೆಯೇ ನಡೆಯಿತು. ಶಂಕರನಾಗ್ ನಿರ್ದೇಶನದ ‘ಆ್ಯಕ್ಸಿಡೆಂಟ್’ ಚಿತ್ರದ ಮಾದರಿಯಲ್ಲೇ ಎರಡು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಎಂಟು ಜನ ಜೀವ ಕಳೆದುಕೊಂಡ ಪ್ರಸ್ತಾಪವೂ ಬಂತು.

‘ನಾನು ಹುಟ್ಟಿದ್ದು ದೆಹಲಿಯಲ್ಲಿ. 10ನೇ ವಯಸ್ಸಿಗೇ ಕುಟುಂಬ ಮುಂಬೈಗೆ ಬಂತು. ಕಾಲೇಜು ಕಲಿಯುತ್ತಿದ್ದಾಗ ರಂಗಭೂಮಿಯ ಹುಚ್ಚು. ನನ್ನ ಕಾಲೇಜು ಬೇರೆ, ಶಂಕರ್ ಕಲಿಯುತ್ತಿದ್ದ ಕಾಲೇಜು ಬೇರೆ. ಆದರೆ ನಾಟಕ ಸ್ಪರ್ಧೆ ಸಮಯದಲ್ಲಿ ಭೇಟಿಯಾಗುತ್ತಿದ್ದೆವು. ಅಲ್ಲೇ ಪರಿಚಯ ಬೆಳೆಯಿತು. ನಾನು ಆತನಿಗೆ ಮೊದಲ ನೋಟಕ್ಕೇ ಮಾರುಹೋಗಿದ್ದೆ. ಆದರೆ ನಮ್ಮ ಪರಿಚಯವಾದ ಆರು ವರ್ಷಗಳ ನಂತರ ಶಂಕರ ಬೆಂಗಳೂರಿಗೆ ವಾಪಸಾಗಿದ್ದಾಗ ಮದುವೆಯ ಪ್ರಸ್ತಾಪ ಮುಂದಿಟ್ಟ‘ ಎಂದು ಆರುಂಧತಿ ನೆನಪುಗಳನ್ನು ಕೆದಕುತ್ತಾ ಹೋದರು.

ಮುಂಬೈಯಲ್ಲಿದ್ದಾಗ ಮರಾಠಿ, ಗುಜರಾತಿ, ಹಿಂದಿ, ತಮಿಳು ಮತ್ತು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದ್ದೆ. ಬೆಂಗಳೂರಿಗೆ ಬಂದ ಬಳಿಕ ಕನ್ನಡ, ಮಲಯಾಳಂ ನಾಟಕಗಳ ಜೊತೆಗೆ ಬೆಳೆದೆ. ‘ರಂಗಶಂಕರ’ದ ಮೂಲಕ ಇವತ್ತು ಶಂಕರನ ನೆನಪುಗಳು ಭದ್ರವಾಗಿವೆ. ಅವನು ಇದ್ದಿದ್ದರೂ ಇದನ್ನೇ ಮಾಡುತ್ತಿದ್ದ. ಇದು ಮಾತ್ರವಲ್ಲ ಅವನು ಇದ್ದಿದ್ದರೆ ಒಂದು ಕನ್ನಡ ಪತ್ರಿಕೆಯನ್ನೂ, ಒಂದು ಕನ್ನಡ ಸುದ್ದಿ ವಾಹಿನಿಯನ್ನೂ ಮಾಡುತ್ತಿದ್ದನೇನೋ! ಅವನ ಕನಸುಗಳು ಹಾಗಿದ್ದವು ಎಂದು ಆರುಂಧತಿ ಹೇಳಿದರು.

ಏಳು ಭಾಷೆಗಳಲ್ಲಿ ನಾಟಕಗಳಲ್ಲಿ ನಟಿಸಿದ ತನ್ನ ರಂಗಸಾಮರ್ಥ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ- "ತರಗತಿಯಲ್ಲಿ ಗಣಿತದಲ್ಲಿ ನಾನು ಬಹಳ ಹಿಂದೆ ಇದ್ದೆ. ಏಳನೇ ತರಗತಿಯಲ್ಲಿ ಗ್ರೇಸ್ ಮಾರ್ಕ್ಸ್ ಸಿಗುವ ಸಂಭವವೇ ಇರಲಿಲ್ಲ. ಆದರೆ ವಿವಿಧ ಭಾಷೆಗಳನ್ನು ಕಲಿತುಕೊಂಡು ಆ ಭಾಷೆಗಳಲ್ಲಿ ನಾಟಕ ಆಡಿದ್ದು ನನ್ನೊಳಗೆ ಭಾಷೆಯೇ ಗಣಿತವಾದದ್ದನ್ನು ಅನುಭವಕ್ಕೆ ತಂದಿತು. ಮುಂಬೈಗೆ ಕುಟುಂಬ ವಲಸೆ ಬಂದಾಗ ನನಗೆ ಮರಾಠಿ ಗೊತ್ತಿರಲಿಲ್ಲ. ಸುತ್ತಲಿದ್ದವರು ಅದನ್ನೇ ತಮಾಷೆ ಮಾಡುತ್ತಿದ್ದರು. ಗುಜರಾತಿ, ಮರಾಠಿ, ತಮಿಳು ಎಲ್ಲವನ್ನೂ ಕಲಿತೆ. ಬೆಂಗಳೂರಿಗೆ ಬಂದು ಕನ್ನಡ ಕಲಿತೆ. ಅಷ್ಟೆಲ್ಲ ಭಾಷೆಯ ರಂಗದ ಮೇಲಿನ ಪಾತ್ರಗಳನ್ನು ಹೇಗೆ ನಿರ್ವಹಿಸಿದ್ದೆ ಎಂದು ಈಗ ಯೋಚಿಸಿದರೆ ಅಚ್ಚರಿಯಾಗುತ್ತದೆ. ನಟರಿಗೆ ಎಷ್ಟು ಹೆಚ್ಚು ಭಾಷೆಗಳು ಬಂದರೂ ಒಳ್ಳೆಯದೇ."

"ದೆಹಲಿ, ಮುಂಬೈಯ ಹಿನ್ನೆಲೆ ಇದ್ದರೂ ನಾನು ಪೂರ್ತಿಯಾಗಿ ಅರಳಿದ್ದು ಬೆಂಗಳೂರಿನಲ್ಲಿ. ಕನ್ನಡ ರಂಗಭೂಮಿಯೇ ನನ್ನ ಉಸಿರು. ಆದರೆ ಈಗಲೂ ಅನಸ್ತೇಷಿಯಾ ಪಡೆದು ಮರಳಿ ಎದ್ದರೆ ನನ್ನ ಬಾಯಿಗೆ ಬರುವುದು ಹಿಂದಿ. ಅದು ಬಾಲ್ಯದಲ್ಲೇ ಅಪ್ಪ- ಅಮ್ಮ ಅಭ್ಯಾಸ ಮಾಡಿಸಿದ ಭಾಷೆ. ರಂಗಭೂಮಿಗೆ ಅದರದ್ದೇ ಆದ ಆತ್ಮವೊಂದಿದೆ. ಅದನ್ನು ವ್ಯಾಪಾರಿ ಉದ್ದೇಶಗಳಿಗಾಗಿ ಹಾಳುಗೆಡವಬಾರದು. ಕನ್ನಡ ಸಹಿತ ಹಲವು ಭಾಷೆಗಳ ನಾಟಕಗಳು ರಂಗಶಂಕರದಲ್ಲಿ ನಡೆಯುತ್ತವೆ. ಅಲ್ಲೇಕೆ ಫ್ಯಾಷನ್ ಷೋ ಮಾಡಬಾರದು ಎಂದವರಿದ್ದಾರೆ. ಅದು ಸಾಧ್ಯವಿಲ್ಲ. ರಂಗಶಂಕರ ಪೂರ್ತಿಯಾಗಿ ರಂಗಭೂಮಿಗೇ ಮೀಸಲಾದ ಕೇಂದ್ರ" ಎಂದು ಆರುಂಧತಿ ದೃಢವಾಗಿ ಹೇಳಿದರು.

ಡಾ. ರಾಜ್‌ಕುಮಾರ್ ಅವರ ಜೊತೆಗೆ ಶಂಕರನಾಗ್ ಅವರಿಗಿದ್ದ ನಂಟು, ‘ಒಂದು ಮುತ್ತಿನ ಕಥೆ’ಯ ಸಂದರ್ಭದ ನೆನಪುಗಳನ್ನೂ ಆರುಂಧತಿ ಬಿಚ್ಚಿಟ್ಟರು. ಗಿರೀಶ್ ಕಾರ್ನಾಡ್ ಬರೆದ ನಾಟಕಗಳು ಮತ್ತು ಅವರ ನಿರ್ದೇಶನದಲ್ಲಿ ನಟಿಸಿದ್ದು, ಶೌಕತ್ ಕೈಫಿ ಮತ್ತು ಎಂ.ಎಸ್.ಸತ್ಯು ಅವರ ಮಾರ್ಗದರ್ಶನ, ಅಮಿತಾಭ್ ಜೊತೆಗೆ "ಪಾ" ಚಿತ್ರದಲ್ಲಿ ನಟಿಸಿದಾಗಿನ ಅನುಭವ, ಕನ್ನಡ ‘ಜೋಗಿ’ ಚಿತ್ರದ ಪಾತ್ರದ ತಮಾಷೆ, ಶಂಕರ್ ಅವರಿಗಿದ್ದ ಪತ್ರ ಬರೆಯುವ ಮತ್ತು ವ್ಯವಸ್ಥಿತವಾಗಿ ಪುಸ್ತಕಗಳನ್ನು ಓದುವ ಅಭ್ಯಾಸ- ಹೀಗೆ ನೂರೆಂಟು ನೆನಪುಗಳು ಅವರ ಮಾತುಗಳಲ್ಲಿ ಹಾದುಹೋದವು. ಪ್ರಜಾವಾಣಿಯ ಸಹ ಸಂಪಾದಕ ಬಿ.ಎಂ.ಹನೀಫ್ ಸಂದರ್ಶನ ನಡೆಸಿದರು.

(ಪೂರ್ಣ ಸಂದರ್ಶನ ವೀಕ್ಷಿಸಲು https://youtu.be/kOVzswr_324 ನೋಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT