ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಮಲಬಾರ್‌ ಗೋಲ್ಡ್‌ನ ಬ್ರ್ಯಾಂಡ್ ಅಂಬಾಸಿಡರ್‌ ಆಗಿದ್ದ ಅಪ್ಪು

ಕಣ್ಣಂಚಲ್ಲಿ ನೀರು ತರಿಸಿದ ಪುನೀತ್‌ ನೆನಪು
Published 8 ಜೂನ್ 2023, 10:17 IST
Last Updated 8 ಜೂನ್ 2023, 10:17 IST
ಅಕ್ಷರ ಗಾತ್ರ

ನಟನಾಗಿ ಮಾತ್ರವಲ್ಲ ಹೃದಯ ವೈಶಾಲ್ಯದಿಂದ ಕನ್ನಡಿಗರ ಮನ, ಮನೆಗಳಲ್ಲಿ ಚಿರನೆನಪಾಗಿ ಉಳಿದಿರುವ ಪುನೀತ್ ರಾಜಕುಮಾರ್ ಅವರು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಕರ್ನಾಟಕದ ಮೊದಲ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಅವರನ್ನು ವಿಭಿನ್ನವಾಗಿ ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಂಡಾಗ ಮಲಬಾರ್‌ ಸಮೂಹ ಸಂಸ್ಥೆಯು ಆ ಕಾರಣಕ್ಕಾಗಿಯೇ ಸಹಯೋಗವನ್ನು ನೀಡಿತು.

ಕರ್ನಾಟಕದ ಉದ್ದಗಲದಲ್ಲಿ ಸಂಸ್ಥೆ ತನ್ನ ಛಾಪು ಮೂಡಿಸಲು ಪುನೀತ್ ರಾಜಕುಮಾರ್ ಮತ್ತು ಮಲಬಾರ್ ಗೋಲ್ಡ್ ನಡುವೆ ಇರುವ ನಂಟು ಪ್ರಮುಖ ಕಾರಣವಾಗಿತ್ತು. ಪುನೀತ್‌ ಅವರು ರಾಯಭಾರಿಯಾಗಿ ನೀಡಿದ ಜಾಹೀರಾತು ಕನ್ನಡಿಗರನ್ನು ಮಲಬಾರ್‌ ಕಡೆಗೆ ಸೆಳೆದಿತ್ತು. ಈ ಎಲ್ಲ ಕಾರಣಗಳಿಂದಾಗಿ ಪುನೀತ್ ನೆನಪಿನ ಕಾರ್ಯಕ್ರಮ ಅಂದ ಕೂಡಲೇ ಮಲಬಾರ್ ಕೈ ಜೋಡಿಸಿತು. ಪುನೀತ್‌ ಅವರನ್ನು ಸ್ಮರಿಸಿತು.

ಮಲಬಾರ್ ಗೋಲ್ಡ್ ಪ್ರಾದೇಶಿಕ ಮುಖ್ಯಸ್ಥ ಸರ್ಫುದ್ದೀನ್ ಮಾತನಾಡಿ, ‘ಕನ್ನಡದ ಪ್ರಸಿದ್ಧ ನಟ ಪುನೀತ್ ರಾಜಕುಮಾರ್ 2009ರಲ್ಲಿಯೇ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಅವರ ಕುಟುಂಬದವರು ಮಲಬಾರ್ ಜೊತೆಗಿನ ಸಂಬಂಧವನ್ನು ಮುಂದುವರಿಸಿದ್ದಾರೆ. ಪ್ರಜಾವಾಣಿ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ನಮಗೆ ಅವಕಾಶ ಸಿಕ್ಕಿರುವುದಕ್ಕೆ ಆಭಾರಿ’ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಯಾರು ನಿಧನರಾದ ಮೇಲೂ ಬದುಕುತ್ತಾರೋ ಅವರು ಚಿರಂಜೀವಿಗಳು. ಅಪ್ಪು ಅಂಥ ಚಿರಂಜೀವಿ. ಅವರನ್ನು ಅಮೃತ ಸಂಜಾತ ಎಂದು ಕರೆಯುತ್ತೇನೆ. ‘ಭಕ್ತ ಪ್ರಹ್ಲಾದ’ನಿಂದ ಹಿಡಿದು ಪವರ್ ಸ್ಟಾರ್ ಆಗುವವರೆಗೆ ಅಪ್ಪು ಅವರ ಎಲ್ಲ ಬೆಳವಣಿಗೆಯನ್ನು ಪ್ರಜಾವಾಣಿ ದಾಖಲಿಸಿದೆ' ಎಂದು ನೆನಪು ಮಾಡಿಕೊಂಡರು.

ಪುನೀತ್ ನೀಡಿದ ನೆರವು, ಮಾಡಿದ ಸೇವೆ ಅವರು ಜೀವಂತ ಇರುವವರೆಗೆ ಯಾರಿಗೂ ಗೊತ್ತಾಗಲಿಲ್ಲ. ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಸಹಾಯ ಮಾಡುತ್ತಾ ಅವರು ಬಂದಿರುವುದು ಅದಕ್ಕೆ ಕಾರಣವಾಗಿತ್ತು ಎಂದು ಸ್ಮರಿಸಿದರು.

ಪುನೀತ್ ಅವರನ್ನು ನಾವು ಬೇಗ ಕಳೆದುಕೊಂಡೆವು. ಅವರ ನೆನಪು ಯಾವಾಗಲೂ ಇರುತ್ತದೆ ಎಂದು ಟಿಪಿಎಂಎಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೀತಾರಾಮನ್ ಶಂಕರ್ ತಿಳಿಸಿದರು.

ಕಣ್ಣಾಲಿಯಲ್ಲಿ ನೀರು: ಪುನೀತ್ ಅವರ ಬಾಲ್ಯದಿಂದ ಕೊನೆವರೆಗಿನ ಬದುಕನ್ನು ಚಿತ್ರಗಳು ಕಟ್ಟಿಕೊಟ್ಟವು. ಚಲನಚಿತ್ರ ನಟ–ನಟಿಯರು ಸೇರಿದಂತೆ ಎಲ್ಲ ಪ್ರೇಕ್ಷಕರು ಈ ಫೋಟೊಗಳನ್ನು ಕಣ್ಣುತುಂಬಿಕೊಂಡರು. 

ಆಟೊ ಓಡಿಸಿ ಬದುಕುವ ಒಬ್ಬ ಅಭಿಮಾನಿ ಅಪ್ಪು ಹೆಸರಲ್ಲಿ ವೃದ್ಧಾಶ್ರಮ ತೆರೆದು 17 ಜನರಿಗೆ ಆಶ್ರಯ ನೀಡಿದ್ದಾರೆ. ಕೂಲಿ ಮಾಡಿ ಬದುಕುವ ಇನ್ನೊಬ್ಬ ಅಭಿಮಾನಿ ನಿತ್ಯ ಅಪ್ಪು ಅವರ ಪುತ್ಥಳಿಯನ್ನು ತೊಳೆದು ಪೂಜೆ ಮಾಡುತ್ತಾರೆ. ಕಿಡ್ನಿ ವೈಫಲ್ಯ ಅದ ಬಾಲಕಿಗೆ ಕಿಡ್ನಿ ಅಳವಡಿಸುವ ವೆಚ್ಚವನ್ನು ಪುನೀತ್ ಭರಿಸಿದ್ದರು. ಇವೆಲ್ಲವೂ ವೇದಿಕೆಯ ಪರದೆಯ ಮೇಲೆ ಬಂದಾಗ ನೋಡುಗರಿಗೆ ಅರಿವಿಲ್ಲದಂತೆ ಕಣ್ಣಾಲಿಗಳು ಒದ್ದೆಯಾದವು.

‘ಪ್ರಜಾವಾಣಿ’ಯು ಮಲಬಾರ್‌ ಗೋಲ್ಡ್‌ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಅರ್ಥಪೂರ್ಣ ಎಂದು ಜನ ಮನಬಿಚ್ಚಿ ಮಾತನಾಡಿ ಕೊಂಡರು.

ಮನರಂಜನಾ ಮಾಧ್ಯಮದ ಆಚೆಗೂ ಸಿನಿಮಾ ನಮ್ಮ ಜೀವನಶೈಲಿಯನ್ನು ಆವರಿಸಿಕೊಂಡಿದೆ. ಸಿನಿಮಾದ ಚರ್ಚೆ ಇಲ್ಲದ ದಿನವೇ ಇಲ್ಲ. ಬಗೆಬಗೆಯ ಹಿನ್ನೆಲೆಯ ಜನರನ್ನೂ ಒಳ್ಳೆಯ ಸಿನಿಮಾ ಒಗ್ಗೂಡಿಸಬಲ್ಲದು. ಅದೇ ಸಿನಿಮಾದ ಮೋಡಿ. ಹಿರಿಯರನ್ನು ಗೌರವಿಸುವ, ಹೊಸಬರನ್ನು ಗುರುತಿಸುವ, ಚಿತ್ರಕಥಾ ಕುಶಲಮತಿಗಳ ಬೆನ್ನುತಟ್ಟುವ, ಹೊಸ ರೀತಿಯಲ್ಲಿ ಕಥೆ ಹೇಳುವವರಿಗೆ ಶಹಬ್ಬಾಸ್‌ ಹೇಳುವ ಇಂತಹ ಸಿನಿ ಸಮ್ಮಾನಕ್ಕೆ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಸಾಥ್‌ ನೀಡಿರುವುದು ಸಂಭ್ರಮಾಚರಣೆಯೇ ಹೌದು.
ಎಂ.ಪಿ. ಅಹಮ್ಮದ್‌, ಅಧ್ಯಕ್ಷ, ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT