ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನಕ್ಕೆ ಪರಿಗಣಿತವಾದ ಗಟ್ಟಿಕಾಳುಗಳು

Published 28 ಮೇ 2023, 22:17 IST
Last Updated 28 ಮೇ 2023, 22:17 IST
ಅಕ್ಷರ ಗಾತ್ರ
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. 2022ನೇ ಸಾಲಿನಲ್ಲಿ ತೆರೆಕಂಡ ಚಿತ್ರಗಳನ್ನಷ್ಟೇ ಈ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಈಗಾಗಲೇ ಎಲ್ಲ ವಿಭಾಗಗಳ ನಾಮನಿರ್ದೇಶಿತರ ಹೆಸರು ಪ್ರಕಟಗೊಂಡಿದೆ. ಇದೀಗ ನಾಮನಿರ್ದೇಶಿತರನ್ನು ಪರಿಚಯಿಸುವ ಸಮಯ. ‘ವರ್ಷದ ಅತ್ಯುತ್ತಮ ಚಿತ್ರ’ ಮತ್ತು ‘ಅತ್ಯುತ್ತಮ ನಿರ್ದೇಶನ’ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಚಿತ್ರಗಳು ಮತ್ತು ನಿರ್ದೇಶಕರ ಕುರಿತಾದ ಕಿರುಪರಿಚಯ ಇಲ್ಲಿದೆ. ‘ಸಿನಿ ಸಮ್ಮಾನ’ದ ಕುರಿತ ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. prajavani.net/cinesamman

ವರ್ಷದ ಅತ್ಯುತ್ತಮ ಚಿತ್ರ 

ತಲೆದಂಡ: ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಕನ್ನಡದ ಅತ್ಯುತ್ತಮ ನಟ ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ. ಈ ಚಿತ್ರದಲ್ಲಿ ವಿಜಯ್‌ ಕುನ್ನನ ಪಾತ್ರ ಮಾಡಿದ್ದಾರೆ. ಮರ-ಗಿಡಗಳನ್ನು ಪ್ರೀತಿಸುವ ಹುಡುಗ ಕುನ್ನೇಗೌಡನ ಕಥೆ ಹೊಂದಿರುವ ಚಿತ್ರಕ್ಕೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ‘ಅತ್ತ್ಯುತ್ತಮ ಪರಿಸರ ಕಾಳಜಿಯ ಸಿನಿಮಾ’ ವಿಭಾಗದಡಿ ಚಿತ್ರ ಪ್ರಶಸ್ತಿ ಪಡೆದಿತ್ತು. ‘ಮರಗಳನ್ನು ರಕ್ಷಿಸಿ ಕಾಡು ಬೆಳೆಸಿ’ ಎಂಬ ಸಂದೇಶ ಸಾರುವ ತಲೆದಂಡ ಸಿನಿಮಾದಲ್ಲಿ ಓರ್ವ ಮುಗ್ಧ ಬುದ್ಧಿಮಾಂದ್ಯನ ಪಾತ್ರದಲ್ಲಿ ವಿಜಯ್ ಅದ್ಭುತವಾಗಿ ನಟಿಸಿದ್ದಾರೆ. ಚೈತ್ರಾ ಆಚಾರ್, ಮಂಗಳಾ, ರಮೇಶ್ ಪಂಡಿತ್, ಮಂಡ್ಯ ರಮೇಶ್, ಬಿ. ಸುರೇಶ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೃಪಾನಿಧಿ ಕ್ರಿಯೇಷನ್ಸ್‌ ಚಿತ್ರ ನಿರ್ಮಿಸಿದ್ದು, ಹರಿಕಾವ್ಯ ಸಂಗೀತ ನಿರ್ದೇಶನವಿದೆ. ಸಂಕಲನ ಬಿ.ಎಸ್. ಕೆಂಪರಾಜ್ ಅವರದ್ದು. ಛಾಯಾಗ್ರಹಣವನ್ನು ಅಶೋಕ್ ಕಶ್ಯಪ್ ನಿಭಾಯಿಸಿದ್ದಾರೆ. 

777 ಚಾರ್ಲಿ: ತಮ್ಮದೇ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ನಟ ರಕ್ಷಿತ್‌ ಶೆಟ್ಟಿ ನಿರ್ಮಿಸಿ, ಅಭಿನಯಿಸಿರುವ ‘777 ಚಾರ್ಲಿ’ 2022ರ ಸೂಪರ್‌ ಹಿಟ್‌ ಚಿತ್ರಗಳಲ್ಲೊಂದು. ₹100 ಕೋಟಿ ವಹಿವಾಟು ನಡೆಸಿದ ಚಿತ್ರವೂ ಹೌದು. ಲ್ಯಾಬ್ರಡಾರ್ ನಾಯಿ ಚಾರ್ಲಿ ಮತ್ತು ನಾಯಕ ಧರ್ಮನ ಬಾಂಧವ್ಯದ ಕಥೆ ಹೇಳುವ ಚಿತ್ರದಲ್ಲಿ ಸಂಗೀತಾ ಶೃಂಗೇರಿ,ಚಾರ್ಲಿ,ರಾಜ್ ಬಿ. ಶೆಟ್ಟಿ,ದಾನೀಶ್‌ ಸೇಠ್,ಬಾಬಿ ಸಿಂಹ,ಭಾರ್ಗವಿ ನಾರಾಯಣ್‌,ಬೇಬಿ ಶಾರ್ವರಿ ಮೊದಲಾದವರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ಅವರ ಜೊತೆಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಿರಣ್‌ರಾಜ್‌ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ನಿರ್ದೇಶಕ ಕಿರಣ್‌ರಾಜ್ ತಮ್ಮ ಮೊದಲ ಯತ್ನದಲ್ಲೇ ಭಾವುಕತೆಯ ಕಥೆಯೊಂದನ್ನು ಆಯ್ದುಕೊಂಡು ಪ್ರೇಕ್ಷಕರ ಮನ ಗೆದ್ದರು. ಅರವಿಂದ್‌ ಕಶ್ಯಪ್‌ರ ಛಾಯಾಗ್ರಹಣ ಹಾಗೂ ನೋಬಿನ್‌ ಪೌಲ್‌ರ ಅತ್ಯದ್ಭುತ ಹಿನ್ನೆಲೆ ಸಂಗೀತ ಚಿತ್ರದ ಎಡಗೈ ಮತ್ತು ಬಲಗೈ.

ಗುರು ಶಿಷ್ಯರು: ದೇಸಿ ಸೊಗಡಿನ ಕ್ರೀಡೆ ಖೊಖೊವನ್ನು ಮುಖ್ಯವಾಗಿಟ್ಟುಕೊಂಡು ಬಂದ ಸಿನಿಮಾ ಗುರು ಶಿಷ್ಯರು. 'ಜಂಟಲ್‌ಮನ್‌' ಸಿನಿಮಾದಿಂದ ಗಮನಸೆಳೆದಿದ್ದ ನಿರ್ದೇಶಕ ಜಡೇಶ್ ಕೆ. ಹಂಪಿ ಈ ಚಿತ್ರದ ನಿರ್ದೇಶಕರು. ಶರಣ್,ನಿಶ್ವಿಕಾ ನಾಯ್ಡು,ಸುರೇಶ್ ಹೆಬ್ಳಿಕರ್,ಅಪೂರ್ವ ಕಾಸರವಳ್ಳಿ,ಮಹಾಂತೇಶ್ ಹಿರೇಮಠ್‌,ಹೃದಯ್,ಏಕಾಂತ್,ಆನಂದ್ ನೀನಾಸಂ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಪಿಟಿ ಮಾಸ್ಟರ್‌ ಆಗಿ ನಟ ಶರಣ್‌ ಪ್ರೇಕ್ಷಕರ ಮನ ಗೆದ್ದಿದ್ದಾರೆ. 1990ರಲ್ಲಿ ಹಳ್ಳಿಗಾಡಿನಲ್ಲಿ ನಡೆಯುವ ಕಥೆ ‘ಲಗಾನ್‌’ ಚಿತ್ರದಂತಹ ಅನುಭವ ನೀಡಿತ್ತು. ಮಂಜು ಮಾಸ್ತಿ  ಸಂಭಾಷಣೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣವು 1990ರ ದಶಕದ ಮೂಡ್ ಕ್ರಿಯೇಟ್ ಮಾಡುವಲ್ಲಿ ಸಫಲವಾಗಿತ್ತು.

ಕಾಂತಾರ: ‘ಕೆಜಿಎಫ್‌’ ನಂತರ ದೇಶ ವಿದೇಶಗಳು ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’. ‘ಕೆಜಿಎಫ್‌’ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್‌ ಈ ಚಿತ್ರವನ್ನು ನಿರ್ಮಿಸಿದ್ದು, ಕನ್ನಡ ಹೊರತಾಗಿ ಬೇರೆ ಭಾಷೆಗಳಲ್ಲಿಯೂ ಸೂಪರ್‌ ಹಿಟ್‌ ಎನಿಸಿಕೊಂಡ ಚಿತ್ರ. ಕರಾವಳಿಯ ಭೂತಕೋಲ, ದೈವ, ನಂಬಿಕೆಯ ಸುತ್ತಲಿನ ಕಥೆ ಹೊಂದಿದ್ದ ಚಿತ್ರ ಎಷ್ಟೋ ವರ್ಷದಿಂದ ಚಿತ್ರ ಮಂದಿರದ ಕಡೆಗೆ ಬಾರದ ಪ್ರೇಕ್ಷಕರನ್ನೆಲ್ಲ ಮತ್ತೆ ಚಿತ್ರಮಂದಿರಕ್ಕೆ ಕರೆ ತಂದಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿನ ಶೆಟ್ಟರ ಅಬ್ಬರ ದೇಶವೇ ಅವರನ್ನೊಬ್ಬ ನಟನಾಗಿ ತಿರುಗಿ ನೋಡುವಂತೆ ಮಾಡಿತು. ಕಿಶೋರ್,ಅಚ್ಯುತ್ ಕುಮಾರ್,ಸಪ್ತಮಿ ಗೌಡ,ಪ್ರಕಾಶ್ ತುಮ್ಮಿನಾಡು,ಮಾನಸಿ ಸುಧೀರ್,ಪ್ರಮೋದ್ ಶೆಟ್ಟಿ ಮೊದಲಾದವರು ಚಿತ್ರದಲ್ಲಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಈ ಚಿತ್ರದ ಛಾಯಾಗ್ರಹಣದಲ್ಲಿ ಹೊಸ ದಾಖಲೆಯನ್ನೇ ಬರೆದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ‘ವರಾಹರೂಪಂ’, ‘ಸಿಂಗಾರ ಸಿರಿಯೆ’ ಹಾಡುಗಳ ಮೂಲಕ ಜನಮಾನಸದಲ್ಲಿ ಜಾಗ ಪಡೆದರು. ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ದಾಖಲೆ ಸಾಧಿಸಿದ ಚಿತ್ರ 100 ದಿನಗಳ ಕಾಲ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು.

ಧರಣಿ ಮಂಡಲ ಮಧ್ಯದೊಳಗೆ: ಕನ್ನಡದ ಭರವಸೆಯ ಯುವ ನಟ ನವೀನ್ ಶಂಕರ್‌ ಮತ್ತು ಐಶಾನಿ ಶೆಟ್ಟಿ ಅಭಿನಯದ ಚಿತ್ರ ‘ಧರಣಿ ಮಂಡಲ ಮಧ್ಯದೊಳಗೆ’.  ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಸಿದ್ದು ಮೂಲಿಮನಿ,ಯಶ್ ಶೆಟ್ಟಿ,ಪ್ರಕಾಶ್ ತುಮ್ಮಿನಾಡು,ಬಾಲ ರಾಜ್‌ವಾಡಿ,ಕರಿ ಸುಬ್ಬು,ಮೋಹನ್ ಮೊದಲಾದವರು ಅಭಿನಯಿಸಿದ್ದಾರೆ. ನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ಯಾರೋ, ಮತ್ತಾವುದೋ ಗಳಿಗೆಯಲ್ಲಿ ನಮ್ಮ ನೆರವಿಗೆ ಬರುತ್ತಾರೆ ಎಂಬುದು ಚಿತ್ರದ ಒಟ್ಟು ಸಾರ. ಹೈಪರ್‌ಲಿಂಕ್‌ ಮಾದರಿಯ ಸಿನಿಮಾ. ಛಾಯಾಗ್ರಾಹಕ ಕೀರ್ತನ್‌ ಪೂಜಾರಿ ಹಾಗೂ ಸಂಕಲನಕಾರ ಉಜ್ವಲ್‌ ಚಂದ್ರ ನಿರ್ದೇಶಕರಿಗೆ ಉತ್ತಮ ಸಾಥ್ ನೀಡಿದ್ದಾರೆ. ರೋನಾಡ್ ಬಕ್ಕೇಶ್ ಹಾಗೂ ಕಾರ್ತಿಕ್ ಚನ್ನೋಜಿ ರಾವ್ ಜೋಡಿಯ ಸಂಗೀತ ಚಿತ್ರಕ್ಕಿದೆ. 

ಅತ್ಯುತ್ತಮ ನಿರ್ದೇಶನ 

ಪ್ರವೀಣ್‌ ಕೃಪಾಕರ್‌: ಇವರು ಸಂಚಾರಿ ವಿಜಯ್‌ ಅಭಿನಯದ ‘ತಲೆದಂಡ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವೂ ಹೌದು. 27 ವರ್ಷದಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಾಧ್ಯಾಪಕರಾಗಿರುವ ಪ್ರವೀಣ್‌ ಅವರಿಗೆ 40 ವರ್ಷದಿಂದ ಚಿತ್ರರಂಗದ ನಂಟಿದೆ. ಕೆ.ವಿ.ಜಯರಾಂ ಅವರೊಂದಿಗೆ ಕೆಲಸ ಪ್ರಾರಂಭಿಸಿದ ಇವರು, ನಂತರ ಹಲವು ನಿರ್ದೇಶಕರ ಜೊತೆ ಕೆಲಸ ಮಾಡುತ್ತಾರೆ. ಸುಮಾರು 16 ಸಿನಿಮಾಗಳಲ್ಲಿ ಸಹ, ಸಹಾಯಕ ನಿರ್ದೆಶಕರಾಗಿ ಕೆಲಸ ಮಾಡಿದ್ದಾರೆ. 2019ರಲ್ಲಿ ‘ತಲೆದಂಡ’ ಚಿತ್ರ ಪ್ರಾರಂಭವಾಗುತ್ತದೆ.  ಚಿತ್ರಕ್ಕೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸುತ್ತದೆ.

ಎ.ಹರ್ಷ: ಇವರು ಶಿವರಾಜ್‌ಕುಮಾರ್‌ ಅಭಿನಯದ ‘ವೇದ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ನೃತ್ಯ ಸಂಯೋಜಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಪ್ರಾರಂಭದಲ್ಲಿ ಕಿಚ್ಚ ಸುದೀಪ್‌ ಸಿನಿಮಾಗಳಿಗೆ ನೃತ್ಯ ಸಂಯೋಜಿಸುತ್ತಿದ್ದ ಅವರು, ಈವರೆಗೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. 2007 ರಲ್ಲಿ ಪ್ರಜ್ವಲ್ ದೇವರಾಜ್ ಮತ್ತು ತರುಣ್ ಅಭಿನಯದ ‘ಗೆಳೆಯ’ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಾರೆ. ನಂತರ ‘ಬಿರುಗಾಳಿ’, ‘ಚಿಂಗಾರಿ’ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಾರೆ. ನಿರ್ದೇಶಕರಾಗಿ ಹರ್ಷ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದ್ದು ಶಿವಣ್ಣ ಅಭಿನಯದ ‘ಭಜರಂಗಿ’. ನಂತರ ‘ವಜ್ರಕಾಯ’, ‘ಜೈಮಾರುತಿ 800’, ‘ಅಂಜನಿಪುತ್ರ’, ‘ಸೀತಾರಾಮ ಕಲ್ಯಾಣ’, ‘ಭಜರಂಗಿ 2’ ಚಿತ್ರಗಳನ್ನು ನಿರ್ದೇಶಿಸುತ್ತಾರೆ.

ಕಿರಣ್‌ರಾಜ್‌ ಕೆ.: ನಟ ರಕ್ಷಿತ್‌ ಶೆಟ್ಟಿ ಅವರ ನಿರ್ದೇಶಕ ತಂಡದ ಸದಸ್ಯರಲ್ಲೊಬ್ಬರಾಗಿ ಕಿರಣ್‌ರಾಜ್‌ ಅವರ ಸಿನಿ ಪಯಣ ಪ್ರಾರಂಭ. ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಕಿರಣ್‌ ಅವರ ಚೊಚ್ಚಲ ಚಿತ್ರ  ‘777 ಚಾರ್ಲಿ’. ಇದರ ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಇವರು ಪರಂವಃ ಸಂಸ್ಥೆಯ ಪ್ರಮುಖ ಬರಹಗಾರರಲ್ಲಿ ಒಬ್ಬರು ಕೂಡ. ‘ಹತ್ತನೇ ತರಗತಿ ಮುಗಿಸಿ, ಫಿಲ್ಮ್‌ ಮೇಕರ್‌ ಆಗುವ ಕನಸು ಕಂಡಾತ ಕಿರಣ್‌ರಾಜ್‌. ಈ ಕನಸಿಗಾಗಿ ಮನೆ ಬಿಟ್ಟು ಬಂದು ಮಂಗಳೂರಿನ ಬಾರ್‌ ಒಂದರಲ್ಲಿ ವೇಟರ್‌ ಆಗಿ, ಆಸ್ಪತ್ರೆಯಲ್ಲಿ ವಾಚ್‌ಮನ್ ಆಗಿ, ಸೇಲ್ಸ್‌ಮನ್‌ ಆಗಿ ಕೊನೆಗೆ ಬೆಂಗಳೂರಿಗೆ ಬಂದು ಸಹಾಯಕ ನಿರ್ದೇಶಕನಾಗಿ ಬೆಳೆದವನು. ಇಂಥ ಜೀವನ ಅನುಭವಿಸಿದವನಿಗಷ್ಟೇ ಈ ಭಾವನೆಗಳನ್ನು ಕಟ್ಟಲು ಸಾಧ್ಯ’ ಎಂದು ಕಿರಣ್‌ರಾಜ್‌ ಕುರಿತು ರಕ್ಷಿತ್‌ ಶೆಟ್ಟಿ ಹೇಳಿದ್ದರು.

ರಾಹುಲ್‌ ಪಿ.ಕೆ.: ಇವರು ‘ಸಕುಟುಂಬ ಸಮೇತ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ‘ಉಳಿದವರು ಕಂಡಂತೆ’ ಚಿತ್ರದ ಸಹ ನಿರ್ದೆಶಕರಾಗಿ ಇವರ ಸಿನಿ ಪಯಣ ಪ್ರಾರಂಭ. ಮೊದಲಿನಿಂದಲೂ ರಕ್ಷಿತ್‌ ಶೆಟ್ಟಿ ಅವರ ತಂಡದಲ್ಲಿರುವ ರಾಹುಲ್‌, ನಂತರ ‘ರಿಕ್ಕಿ’ ಸೇರಿದಂತೆ ಬೇರೆ, ಬೇರೆ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಪರಂವಾ ಸಂಸ್ಥೆಯ ಪ್ರಮುಖ ಬರಹಗಾರರಲ್ಲಿ ಒಬ್ಬರು ಕೂಡ. ಬಳಿಕ ರಿಷಬ್‌ ಶೆಟ್ಟಿ ಅವರ 7 ಕಥೆಗಳ ‘ಕಥಾಸಂಗಮ’ದ ಒಂದು ಕಥೆಯನ್ನು ನಿರ್ದೇಶಿಸುವ ಮೂಲಕ ರಾಹುಲ್‌ ಸ್ವತಂತ್ರ ನಿರ್ದೇಶಕರಾಗುತ್ತಾರೆ. ಪರಂವಾ ನಿರ್ಮಾಣದ ‘ಸಕುಟುಂಬ ಸಮೇತ’ ನಿರ್ದೇಶಕರಾಗಿ ಇವರ ಎರಡನೇ ಚಿತ್ರ.

ರಿಷಬ್‌ ಶೆಟ್ಟಿ: ಇವರು ‘ಕಾಂತಾರ’ ಚಿತ್ರದ ನಿರ್ದೇಶನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ನಟರಾಗಬೇಕೆಂಬ ಕನಸಿನೊಂದಿಗೆ ಚಿತ್ರರಂಗ ಪ‍್ರವೇಶಿಸಿದ ರಿಷಬ್‌ ಶೆಟ್ಟಿ ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿದ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅವರು 2016ರಲ್ಲಿ ನಿರ್ದೇಶಕರಾಗುತ್ತಾರೆ. ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್‌ ಚೊಚ್ಚಲ ನಿರ್ದೇಶನದ ಚಿತ್ರ ‘ರಿಕಿ’ ತೆರೆ ಕಾಣುತ್ತದೆ. ನಂತರ ಅವರು ರಕ್ಷಿತ್‌ಗಾಗಿ ‘ಕಿರಿಕ್ ಪಾರ್ಟಿ’ ನಿರ್ದೇಶಿಸುತ್ತಾರೆ. ಅದು ಸೂಪರ್‌ ಹಿಟ್‌ ಎನಿಸಿಕೊಳ್ಳುತ್ತದೆ. ಅದಾದ ಬಳಿಕ ರಿಷಬ್‌ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ನಿರ್ದೇಶಕನಾಗಿ ಅವರಿಗೆ ದೊಡ್ಡ ಯಶಸ್ಸು ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಡುತ್ತದೆ. ನಟರಾಗಿ ಬೆಲ್‌ಬಾಟಂ ಚಿತ್ರದಲ್ಲಿ ಯಶಸ್ಸು ಕಂಡ ರಿಷಬ್‌ ಬಳಿಕ ‘ಹೀರೋ’, ‘ಹರಿಕಥೆಯಲ್ಲ ಗಿರಿಕಥೆ’ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ‘ಕಾಂತಾರ’ ಚಿತ್ರವನ್ನು ನಿರ್ದೇಶಿಸಿ, ತಾವೇ ನಟಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT