ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

Published 8 ಜೂನ್ 2023, 10:13 IST
Last Updated 8 ಜೂನ್ 2023, 10:13 IST
ಅಕ್ಷರ ಗಾತ್ರ

ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ: ಕಾಂತಾರ

‘ಸಿಂಗಾರ ಸಿರಿಯೇ’ ಹಾಗೂ ‘ವರಾಹ ರೂಪಂ’ ಹಾಡಿನ ಮೂಲಕ ಸದ್ದು ಮಾಡಿದ ‘ಕಾಂತಾರ’ ಈ ವಿಭಾಗದಲ್ಲಿ ಪ್ರಶಸ್ತಿ ಬಾಚಿತು. ಪ್ರಶಸ್ತಿಯನ್ನು ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಮತ್ತು ಪ್ರಗತಿ ಶೆಟ್ಟಿ ಅವರಿಗೆ ಪ್ರದಾನ ಮಾಡಿದ ನಟ ಕಿಶೋರ್‌, ‘ಪ್ರಜಾವಾಣಿ’ ಪತ್ರಿಕೆಯನ್ನು ನಾನೂ ಮನೆ ಮನೆಗೆ ಹಾಕಿದ್ದೇನೆ. ನನಗೆ ಮೊದಲ ಸಂಬಳ ಕೊಟ್ಟ ಸಂಸ್ಥೆ ಇದು. 1996ರ ಅವಧಿಯಲ್ಲಿ ದಿನಕ್ಕೆ ₹100 ಸಿಗ್ತಾ ಇತ್ತು. ನಿಷ್ಪಕ್ಷಪಾತ ‘ಪ್ರಜಾವಾಣಿ’ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ದೊಡ್ಡ ಕೊಡುಗೆಯನ್ನು ನೀಡಿದೆ. ಈ ಕಾರಣಕ್ಕೆ ಮಾಧ್ಯಮ ಪ್ರಜಾಪ್ರಭುತ್ವದ ಆಧಾರ ಸ್ತಂಭ ಎನ್ನುತ್ತೇವೆ. ಆ ರೀತಿಯ ನಂಬಿಕೆಯನ್ನು ಪತ್ರಿಕೆ ಉಳಿಸಿಕೊಂಡಿದೆ. ನನ್ನ ಪ್ರಕಾರ ನಂಬಿಕೆಯೇ ದೇವರು. ಆ ನಂಬಿಕೆ ಸಿನಿಮಾಕ್ಕೂ ಹರಿದು
ಬಂದಿರುವುದು ಖುಷಿ ಸಂಗತಿ ಎಂದರು.

ಪ್ರಶಸ್ತಿ ಸ್ವೀಕರಿಸಿದ ಅಜನೀಶ್‌, ಧ್ವನಿಗ್ರಹಣಕ್ಕೆ ಎಂ.ಆರ್‌. ರಾಜಕೃಷ್ಣನ್‌  ತುಂಬ ಒಳ್ಳೆಯ ಕೆಲಸ ಮಾಡಿದರು. ಅವರು ಗಗ್ಗರ ಶಬ್ದ, ಭೂತಕೋಲದ ಮೇಕಪ್‌ ಮಾಡಿದ ಮೇಲೆ ಮಣಿ ಶಬ್ದವನ್ನು ಮತ್ತೆ ರೆಕಾರ್ಡ್‌ ಮಾಡಿದರು. ಈ ಸಂಬಂಧ ಚಿತ್ರೀಕರಣದ ಸ್ಥಳಕ್ಕೆ ಹೋಗಿ ಜನಪದ ಕಲಾವಿದರನ್ನು ಸಂದರ್ಶಿಸಿ ಶಬ್ದವನ್ನು ಸೆರೆಹಿಡಿದರು. ಅದನ್ನು ಮಿಕ್ಸಿಂಗ್‌ ಮಾಡಿ ಸಿನಿಮೀಯ ಮಾಡಿದೆವು. ಈ ಎಲ್ಲ ಕಾರಣದಿಂದ ‘ಕಾಂತಾರ’ಕ್ಕೆ ಒಳ್ಳೆಯ ಆಡಿಯೋಗ್ರಫಿ ಕೊಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಸಿನಿಮಾಗಳು

* ಕಾಂತಾರ

* ವೇದ

* ಸಕುಟುಂಬ ಸಮೇತ

* ತಲೆದಂಡ

* ತುರ್ತು ನಿರ್ಗಮನ

ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ: ತಲೆದಂಡ

ಸಾಮಾಜಿಕ ಮೌಲ್ಯವನ್ನು ಪ್ರತಿಬಿಂಬಿಸುವ ಸಿನಿಮಾಗಳು ಸಾರ್ವಕಾಲಿಕ ಪ್ರಸ್ತುತವಾಗುತ್ತವೆ. ರಾಜ್‌ಕುಮಾರ್‌ ಅಭಿನಯದ ‘ಬಂಗಾರದ ಮನುಷ್ಯ’ ಸಾರ್ವಕಾಲಿಕ ಮೌಲ್ಯವನ್ನು ಪ್ರತಿಪಾದಿಸುವ ಸಿನಿಮಾಗಳಲ್ಲಿ ಒಂದು. ಪ್ರೇಕ್ಷಕರನ್ನು ಒಂದು ಸಿನಿಮಾ ಪ್ರಭಾವಿಸಿ, ಸನ್ಮಾರ್ಗದ ದಿಕ್ಸೂಚಿ ಆಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿನಿಚರಿತ್ರೆಯಲ್ಲಿ ದಾಖಲಾಗಿವೆ. 

ಕೆನರಾ ಬ್ಯಾಂಕ್‌ ಸಹಭಾಗಿತ್ವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ನಿರ್ದೇಶಕ ಯೋಗರಾಜ್‌ ಭಟ್‌, ‘ಧಾರವಾಡ ಸೀಮೆಯಲ್ಲಿ ‘ಪ್ರಜಾವಾಣಿಯಲ್ಲಿ ಬರೆದಿನಾನ ನೋಡ್ರಿ’ ಅಂತಾರೆ. ಅಲ್ಲಿ ಬಂದ್ರೆ ಮಾತ್ರ ನಿಶ್ಚಿತ ಎನ್ನುವ ಭಾವನೆ ಇದೆ. ಇದು ಮನೆಯ ಪತ್ರಿಕೆ, ನನಗೆ ತುಂಬ ಆಪ್ತ. ಹಲವು ಕಲ್ಯಾಣ ದೃಷ್ಟಿಯಿಂದ ಇದು ಇಷ್ಟ. ಇಂದು ಮತ್ತು ನಾಳೆಯೂ ಇಷ್ಟವಾಗುತ್ತದೆ’ ಎಂದರು. ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ಪ್ರವೀಣ್‌ ಕೃಪಾಕರ್, ‘ತಲೆದಂಡ’ದ ತಂಡವೇ ಇಲ್ಲಿ ನೆರೆದಿದೆ ಎಂದರು. ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್‌, ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದ ರಮೇಶ್‌ ಪಂಡಿತ್‌, ಪ್ರಮುಖಪಾತ್ರ ನಿರ್ವಹಿಸಿದ ಎನ್‌. ಮಂಗಳ, ನಾಯಕಿ ಚೈತ್ರಾ ಆಚಾರ್‌ ಅವರನ್ನು ವೇದಿಕೆಗೆ ಆಹ್ವಾನಿಸಿ ಎಲ್ಲರ ಜೊತೆ ಮತ್ತೊಮ್ಮೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸ್ಮರಣೀಯ ಪ್ರಶಸ್ತಿಯನ್ನು ಸಿನಿಮಾದ ಪ್ರಮುಖ ನಟ ಸಂಚಾರಿ ವಿಜಯ್‌ ಅವರಿಗೆ ಅರ್ಪಿಸಿದರು. ‘ತಲೆದಂಡ’ ಈ ವರ್ಷ ‘ರಜತ ಕಮಲ’ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದೆ. ಅದನ್ನೂ ಚಿತ್ರತಂಡ ಸಂಚಾರಿ ವಿಜಯ್‌ ಅವರಿಗೆ ಅರ್ಪಿಸುತ್ತದೆ ಎಂದರು.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಸಿನಿಮಾಗಳು

* ತಲೆದಂಡ

* ಸಾರ ವಜ್ರ

* ಐಹೊಳೆ

* ದಾರಿಯಾವುದಯ್ಯ ವೈಕುಂಠಕೆ

* ಧರಣಿ ಮಂಡಲ ಮಧ್ಯದೊಳಗೆ

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಾಂತಾರ

ಈ ವಿಭಾಗದ ಪುರಸ್ಕಾರಕ್ಕೆ 777 ಚಾರ್ಲಿ, ಕೆ.ಜಿ.ಎಫ್‌. ಚಾಪ್ಟರ್‌– 2, ಕಾಂತಾರ, ಸಕುಟುಂಬ ಸಮೇತ ಹಾಗೂ ಮಾನ್ಸೂನ್‌ ರಾಗ ಸಿನಿಮಾಗಳು ಪೈಪೋಟಿ ನಡೆಸಿದ್ದವು. ಅದರಲ್ಲಿ ‘ಕಾಂತಾರ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು. 

ಪ್ರಶಸ್ತಿಯನ್ನು ನಟಿ ‘ಸ್ಪರ್ಶ’ ರೇಖಾ, ಸಿನಿಮಾ ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರಿಗೆ ಪ್ರದಾನ ಮಾಡಿದರು. ‘ಪುರಸ್ಕಾರವನ್ನು ಸ್ವೀಕರಿಸಿದ ಪ್ರಗತಿ ಈ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ. ಸಾಮಾನ್ಯವಾಗಿ ನಿರ್ದೇಶಕರು, ನಟ–ನಟಿಯರನ್ನು ಗುರುತಿಸಿ ಸಿನಿಮಾ ಪುರಸ್ಕಾರಗಳನ್ನು ಕೊಡುತ್ತಾರೆ. ಯಾವುದೇ ಒಂದು ಸಿನಿಮಾವನ್ನು ಸುಂದರಗೊಳಿಸಲು ದೊಡ್ಡ ತಂಡವೇ ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡುತ್ತದೆ. ಅಂತಹ ಶ್ರಮವನ್ನು ಗುರುತಿಸಿ ಹುರಿದುಂಬಿಸುತ್ತಿರುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಪ್ರಶಸ್ತಿ ತೆಗೆದುಕೊಳ್ಳಲು ತುಂಬ ಖುಷಿಯಾಗುತ್ತಿದೆ. ಹಿನ್ನೆಲೆಯ ತಂತ್ರಜ್ಞರನ್ನು ಗುರುತಿಸುವುದು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಸ್ಫೂರ್ತಿಯಾಗುತ್ತದೆ’ ಎಂದರು. ಈ ಸಿನಿಮಾಕ್ಕೆ ತಾವು ಕಾಸ್ಟ್ಯೂಮ್‌ ಡಿಸೈನ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಸಿನಿಮಾಗಳು

* 777 ಚಾರ್ಲಿ

* ಕೆಜಿಎಫ್‌ ಚಾಪ್ಟರ್‌– 2

* ಕಾಂತಾರ

* ಸಕುಟುಂಬ ಸಮೇತ

* ಮಾನ್ಸೂನ್‌ ರಾಗ

ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌: 777 ಚಾರ್ಲಿ

ಕಿರಣ್‌ರಾಜ್‌ ನಿರ್ದೇಶನದ ‘777 ಚಾರ್ಲಿ’ ಸಿನಿಮಾ ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 

ತಂಡದ ಅಭಿಷೇಕ್‌–ರಾಹುಲ್‌ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದ ನಟಿ–ಮುಖ್ಯ ತೀರ್ಪುಗಾರ್ತಿ ಶ್ರುತಿ ಹರಿಹರನ್‌, ‘ಅವಾರ್ಡ್‌ ತೆಗೆದುಕೊಳ್ಳುತ್ತಿದ್ದವಳಿಗೆ ನೀಡಲು ಕರೆದಿದ್ದಾರೆ. ಇದನ್ನು ಸಣ್ಣ ಪ್ರಮೋಷನ್‌ ಎಂದುಕೊಳ್ಳಬಹುದು. ಸದ್ಯ ಯಾವ ಸಿನಿಮಾ ಕೂಡ ಇಲ್ಲ’ ಎಂದು ನಸುನಗುತ್ತಲೇ ಪುರಸ್ಕೃತರಿಗೆ ಬೆನ್ನುತಟ್ಟಿದರು.

ಈ ವೇಳೆ ಸಿನಿಮಾ ಕಟ್ಟುವ ಸಂದರ್ಭವನ್ನು ಸ್ಮರಿಸಿದ ಅಭಿಷೇಕ್‌, ಪ್ರಶಸ್ತಿ ನೀಡಲು ವಿಎಫ್‌ಎಕ್ಸ್‌ ಈ ಕ್ಷೇತ್ರವನ್ನು ಆರಂಭಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಧನ್ಯವಾದ ಹೇಳಿದರು. ‘ಕೋವಿಡ್‌ ಕಾಲ ಅದಾಗಿದ್ದರಿಂದ ನಮಗೆ ಕೆಲಸ ಮಾಡಲು ಹೆಚ್ಚು ಸಮಯ ಸಿಕ್ಕಿತು. ಸಿನಿಮಾದಲ್ಲಿ ಒಟ್ಟು 2,400 ವಿಎಫ್‌ಎಕ್ಸ್‌ ಶಾಟ್ಸ್‌ ಇವೆ. ಆದರೆ ಎಲ್ಲೂ ಪ್ರೇಕ್ಷಕನಿಗೆ ಅದು ಗುರುತಾಗದಂತೆ ತಾಂತ್ರಿಕವಾಗಿ ಹೆಣೆಯಲಾಗಿದೆ. ಈ ಕೆಲಸದಲ್ಲಿ ನಿರ್ದೇಶಕ ಕಿರಣ್‌ರಾಜ್‌ ಸೇರಿದಂತೆ ಅನೇಕರ ಪರಿಶ್ರಮ ಇದೆ. ಇದನ್ನು ‘ಪಿನಾಕ’ ಸ್ಟುಡಿಯೊದಲ್ಲಿ ಮಾಡಿದ್ದೇವೆ. ಈ ಪ್ರಶಸ್ತಿ ನಮ್ಮ ತಂಡಕ್ಕೆ ಸ್ಫೂರ್ತಿ’ ಎಂದರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು

* ಜೇಮ್ಸ್‌

* ಕಾಂತಾರ

* 777 ಚಾರ್ಲಿ

* ತುರ್ತು ನಿರ್ಗಮನ

* ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT