ಕೆಜಿಎಫ್ ಚಾಪ್ಟರ್ 2: ನಟ ಪ್ರಕಾಶ್ ರಾಜ್ ಪಾತ್ರದ ಹೆಸರೇನು?

ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದಕ್ಕೆ ಬಂಡವಾಳ ಹೂಡಿರುವುದು ಹೊಂಬಾಳೆ ಫಿಲ್ಮ್ಸ್. ಅಕ್ಟೋಬರ್ 23ರಂದು ಇದರ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ.
ಆಗಸ್ಟ್ 26ರಿಂದ ಶುರುವಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರು ಅನಂತನಾಗ್ ನಟಿಸಿದ್ದ ಆನಂದ್ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಚಿತ್ರತಂಡ ಮಾತ್ರ ಈ ಸುದ್ದಿಯನ್ನು ಅಲ್ಲಗೆಳೆದಿತ್ತು. ಅವರದ್ದು ಸಿನಿಮಾಕ್ಕೆ ಹೊಸ ಎಂಟ್ರಿ ಎಂದು ಹೇಳಿತ್ತು. ಆದರೆ, ಪ್ರಕಾಶ್ ರಾಜ್ ಅವರು ಅನಂತನಾಗ್ ನಿಭಾಯಿಸಿದ್ದ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ ಎನ್ನುತ್ತವೆ ವಿಶ್ವಸನೀಯ ಮೂಲಗಳು.
ಚಿತ್ರತಂಡದ ಜೊತೆಗೆ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಅನಂತನಾಗ್ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳುಗಳ ಹಿಂದೆಯೇ ಹರಡಿತ್ತು. ಆದರೆ, ಹೊಂಬಾಳೆ ಫಿಲ್ಮ್ಸ್ ಮಾತ್ರ ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಅನಂತನಾಗ್ ಕೂಡ ಪ್ರತಿಕ್ರಿಯಿಸಿರಲಿಲ್ಲ.
‘ಅನಂತನಾಗ್ ಚಿತ್ರತಂಡದಿಂದ ಹೊರಹೋಗಿರುವುದು ದಿಟ. ಆ ಬಳಿಕ ಮಾಳವಿಕಾ ಅವಿನಾಶ್ ಅವರ ಮುಂದೆ ರಾಕಿಭಾಯ್ ಕಥೆಯನ್ನು ನಿರೂಪಿಸುವುದು ಯಾರೆಂಬ ಚಿಂತೆ ಚಿತ್ರತಂಡಕ್ಕೆ ಕಾಡುತ್ತಿತ್ತು. ಆಗ ತಕ್ಷಣಕ್ಕೆ ಹೊಳೆದ ಹೆಸರು ಪ್ರಕಾಶ್ ರಾಜ್ ಅವರದ್ದು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಮನವಿ ಮೇರೆಗೆ ಪ್ರಕಾಶ್ ರಾಜ್ ಈ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಅವರ ಪಾತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ’ ಎನ್ನುತ್ತವೆ ಮೂಲಗಳು.
ಬಾಲಿವುಡ್ ನಟ ಸಂಜಯ್ ದತ್ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಮೂರು ದಿನಗಳ ಶೂಟಿಂಗ್ ಬಾಕಿ ಉಳಿದಿದೆ. ರಾಕಿಭಾಯ್ ಮತ್ತು ಅಧೀರನ ನಡುವಿನ ಶೂಟಿಂಗ್ ಯಾವಾಗ ನಡೆಯುತ್ತಿದೆ ಎಂಬುದು ಯಶ್ ಅಭಿಮಾನಿಗಳಲ್ಲೂ ಕುತೂಹಲ ಮೂಡಿಸಿದೆ. ಈ ತಿಂಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಶ್ರೀನಿಧಿ ಶೆಟ್ಟಿ ಈ ಚಿತ್ರದ ನಾಯಕಿ. ಬಾಲಿವುಡ್ ನಟಿ ರವೀನಾ ಟಂಡನ್ ರಮಿಕಾ ಸೇನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟಾಲಿವುಡ್ ನಟ ರಾವ್ ರಮೇಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭುವನ್ ಗೌಡ ಅವರ ಛಾಯಾಗ್ರಹಣವಿದೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.