ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರದ ಜೊತೆಗೆ ಪ್ರಖ್ಯಾತ್‌ ಪಯಣ

Last Updated 31 ಜುಲೈ 2019, 16:27 IST
ಅಕ್ಷರ ಗಾತ್ರ

‘ಶಾಕುಂತಲೆ ಸಿಕ್ಕಳು ಸುಮ್‌ ಸುಮ್ನೆ ನಕ್ಕಳು; ಶಾಕ್‌ ಆಯ್ತು ನರನಾಡಿ ಒಳಗೆ’ ಈ ಹಾಡು ಯಾರಿಗೆ ಗೊತ್ತಿಲ್ಲ. ಯುವ ಗಾಯಕಸಂಜಿತ್‌ ಹೆಗ್ಡೆ ಮಧುರ ಕಂಠದಲ್ಲಿ ಮೂಡಿ, ಹರೆಯದ ಹೃದಯಗಳನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುವಿಲ್ಲದೆ ಗುನುಗಿಸಿಕೊಂಡಿದ್ದ ಗೀತೆ ಅದು. 2018ರಲ್ಲಿ ತೆರೆಕಂಡ ‘ನಡುವೆ ಅಂತರವಿರಲಿ’ ಸಿನಿಮಾದ ಈ ಹಾಡು ನಾಯಕ ಪ್ರಖ್ಯಾತ್‌ ಪರಮೇಶ್‌ ಅವರಿಗೂ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಮೊದಲ ಸಿನಿಮಾದಲ್ಲೇ ಅಚ್ಚುಕಟ್ಟಾಗಿ ಅಭಿನಯಿಸಿ ಚಂದನವನಕ್ಕೆ ಅಡಿಯಿಟ್ಟಿದ್ದ ಈ ಯುವನಟ ಇದೀಗ ‘ಸಲಾಂ ಬೆಂಗಳೂರು’ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಕನಕಪುರ ಸಮೀಪದ ಮಳಗಾಳ್‌ನವರಾದ ಪ್ರಖ್ಯಾತ್ ಸದ್ಯ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ಪರೀಕ್ಷೆ ಬರೆದಿದ್ದಾರೆ. ಬಣ್ಣದ ಬೆಳಕಿನಲ್ಲಿ ಕಳೆದುಹೋಗುವ ಕನಸು ಕಾಣುತ್ತಿರುವ ಅವರು, ಲಗುಬಗೆಯಿಂದ ಶೂಟಿಂಗ್‌ಗೆ ತೆರಳುತ್ತಿದ್ದಾಗ ಮಾತಿಗೆ ಸಿಕ್ಕರು.

ಅಂದಹಾಗೆ ಪ್ರಖ್ಯಾತ್‌ಗೆ ಸಿನಿಮಾರಂಗಕ್ಕೆ ಬರುವ ಆಲೋಚನೆ ಇರಲಿಲ್ಲ. ಸ್ನೇಹಿತರೆಲ್ಲರೂ ಇದ್ದಾರೆ ಎಂಬ ಕಾರಣಕ್ಕೆ ‘ದೃಶ್ಯ’ ರಂಗ ತಂಡ ಸೇರಿ ಅಭಿನಯ ಕಲಿತವರು. ಬಣ್ಣ ಹಚ್ಚಿ ವೇದಿಕೆಯ ಮೇಲೆ ಕಣ್ಣರಳಿಸಿದ ನಂತರವಷ್ಟೇ ಅವರಲ್ಲಿ ಸಿನಿಮಾ ಆಸೆ ಮೊಳೆತದ್ದು. ಆ ಆಸೆ ಮತ್ತಷ್ಟು ಬಲಿತದ್ದು ನಾಟಕದ ಸೆಟ್‌ಗಳನ್ನು ಊರಿಂದ ಊರಿಗೆ ಹೊತ್ತು ತಿರುಗಿದ ಬಳಿಕವೇ.

ಪ್ರದರ್ಶನವೊಂದರ ಸಂದರ್ಭ ಪ್ರಖ್ಯಾತ್‌ ನಟನೆ ನೋಡಿದ್ದ ‘ಮಾಸ್ಟರ್‌ ಪೀಸ್‌’ ಸಿನಿಮಾ ನಿರ್ದೇಶಕ ಮಂಜು ಮಾಂಡವ್ಯ, ಸಿನಿ ದುನಿಯಾಕ್ಕೆ ಆಹ್ವಾನಿಸಿದ್ದರು. ಮಾತ್ರವಲ್ಲದೆ, ತಮ್ಮ ಸಿನಿಮಾಗೆ ಹೊಸಮುಖದ ಹುಡುಕಾಟದಲ್ಲಿದ್ದ ನಿರ್ದೇಶಕ ರವೀನ್‌ ಕುಮಾರ್‌ ಅವರನ್ನು ಭೇಟಿ ಮಾಡುವಂತೆಯೂ ತಿಳಿಸಿದ್ದರು. ಪ್ರತಿಭೆ, ರಂಗಭೂಮಿ ಅನುಭವದ ನೆರವಿನಿಂದ ಆಡಿಷನ್‌ನಲ್ಲಿ ಗಮನ ಸೆಳೆದ ಪ್ರಖ್ಯಾತ್‌ಗೆ ‘ನಡುವೆ ಅಂತರವಿರಲಿ’ ಸಿನಿಮಾದ ನಾಯಕನಾಗುವ ಅದೃಷ್ಟ ಒಲಿಯಿತು.

ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಮನೆಯವರಿಗೂ ತಿಳಿಸದೆ, 2 ವರ್ಷಗಳ ಕಾಲ ಓದು ಹಾಗೂ ಶೂಟಿಂಗ್‌ ಡೇಟ್ಸ್‌ ಅನ್ನು ಗುಟ್ಟಾಗಿ ಹೊಂದಿಸಿಕೊಂಡು ನಿಭಾಯಿಸಿದ್ದ ಪ್ರಖ್ಯಾತ್‌, ಚೊಚ್ಚಲ ಸಿನಿಮಾ ತೆರೆಕಂಡಾಗ ಮನೆಯವರನ್ನೆಲ್ಲ ಒಟ್ಟಿಗೆ ಥಿಯೇಟರ್‌ಗೆ ಕರೆದೊಯ್ದು ಅಚ್ಚರಿಮೂಡಿಸಿದ್ದರು.

ವಾಸ್ತುಪ್ರಕಾರ ಖ್ಯಾತಿಯ ಐಶಾನಿ ಶೆಟ್ಟಿ ನಾಯಕಿಯಾಗಿರುವ ಸಿನಿಮಾದಲ್ಲಿ ಪ್ರಖ್ಯಾತ್‌ ಅವರದು ಲವರ್‌ಬಾಯ್‌ ಪಾತ್ರ. ಪ್ರೀತಿ–ಪ್ರೇಮದ ನಡುವೆ ಅಂತರ ಕಾಯ್ದುಕೊಳ್ಳದೆ ತಪ್ಪು ಮಾಡಿ ಪೇಚಿಗೆ ಸಿಲುಕಿ, ಬಳಿಕ ಪ್ರೀತಿಸಿದವಳಿಗೆ ಕೈಕೊಡುವ ಸಾಧಾರಣ ಯುವಕನ ಪಾತ್ರಕ್ಕೆ ಜೀವತುಂಬಿದ್ದರು. ನೆಗೆಟಿವ್‌ ಪಾತ್ರವಾದರೂ ಸಹಜ ಅಭಿನಯದ ಮೂಲಕ ಮೆಚ್ಚುಗೆ ಗಳಿಸಿದ್ದರು.

‘ಮೊದಲ ದಿನವೇ ಐಶಾನಿ ಜೊತೆಗಿನ ರೊಮ್ಯಾನ್ಸ್‌ ದೃಶ್ಯದ ಚಿತ್ರೀಕರಣ ಇತ್ತು. ಗಾಬರಿಯಾಗಿದ್ದೆ. ವಿಶ್ವಾಸದಿಂದ ನಟಿಸಲು ಆಗಲಿಲ್ಲ. ಆಗ ನಿರ್ದೇಶಕರು ನನ್ನನ್ನು ಚಿತ್ರತಂಡದಿಂದ ಕೈಬಿಡಲು ನಿರ್ಧರಿಸಿದ್ದರು. ಆದರೆ, ಚಿತ್ರೀಕರಣ ಮುಗಿದ ನಂತರ ನಿರ್ದೇಶಕರು ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಾತ್ರಧಾರಿ ಬದಲಿಸಿದ್ದರೆ ದೊಡ್ಡ ತಪ್ಪಾಗುತ್ತಿತ್ತು’ ಎಂದಿದ್ದರು ಎನ್ನುತ್ತಾ ಅನುಭವ ಹಂಚಿಕೊಂಡರು. ಮುಂದುವರಿದು, ‘ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾದ ಪ್ರತಿಕ್ರಿಯೆ ಜನರಿಂದ ಬಂದಿರುವುದು ಸಮಾಧಾನ ತಂದಿದೆ. ಒಳ್ಳೆ ಸಿನಿಮಾ ಮಾಡಿದ ಸಾರ್ಥಕ ಭಾವವೂ ಇದೆ’ ಎನ್ನುತ್ತಾರೆ.

ನಟನೆಯೆಂದರೆ ‘ಪಾತ್ರದ ಜೊತೆಗಿನ ಪಯಣವಷ್ಟೇ’ ಎನ್ನುವ ಅವರಿಗೆ ರಂಗಭೂಮಿಯ ಕಲಿಕೆಯಿಂದ ಸಾಕಷ್ಟು ನೆರವಾಗಿದೆಯಂತೆ. ‘ಸಿನಿಮಾದಲ್ಲಿ ನಟಿಸುವಾಗ ಎರಡು ಸಾಲಿನ ಸಂಭಾಷಣೆ ಹೇಳಲು ನೂರು ಬಾರಿ ತಪ್ಪುಮಾಡಿದರೂ, ಜನರ ಮುಂದಿಡುವುದು ಉತ್ತಮವಾದ ಒಂದು ದೃಶ್ಯವನ್ನು ಮಾತ್ರ. ಆದರೆ ನಾಟಕಗಳಲ್ಲಿ ಹಾಗಲ್ಲ. ಕೆಲವೊಂದು ದೃಶ್ಯಗಳ ಸಂಭಾಷಣೆಗಳು ಪುಟಗಟ್ಟಲೆ ಉದ್ದವಿರುತ್ತವೆ. ಅವನ್ನೆಲ್ಲ ನಿರರ್ಗಳವಾಗಿ ಹೇಳಬೇಕೆಂದರೆ ಪಾತ್ರದಲ್ಲಿ ಕಳೆದುಹೋಗಬೇಕಾಗುತ್ತದೆ. ನಾವೇ ಪಾತ್ರವಾಗುವ ಕಲೆಯನ್ನು ರಂಗಭೂಮಿ ಕಲಿಸುತ್ತದೆ’ ಎನ್ನುತ್ತಾರೆ.

‘ಜನರು ನನ್ನನ್ನು ‘ನಡುವೆ ಅಂತರವಿರಲಿ’ ಸಿನಿಮಾ ಹೀರೋ ಎನ್ನುವದಕ್ಕಿಂತ ಹೆಚ್ಚಾಗಿ, ‘ಶಾಕುಂತಲೆ ಸಿಕ್ಕಳು’ ಸಿಕ್ಕಳು ಹಾಡಿನಿಂದ ಗುರುತಿಸುತ್ತಾರೆ. ಆ ಗೀತೆ ಎಷ್ಟೋ ಯುವಕರನ್ನು ಪ್ರಭಾವಿಸಿದೆ. ಹಾಗಾಗಿ ನನಗೇ ಗೊತ್ತಿಲ್ಲದೆ ನಾನೊಬ್ಬ ಸೆಲೆಬ್ರಿಟಿ ಎನ್ನುವ ಭಾವ ಮೂಡಿದೆ’ ಎನ್ನುವ ಅವರು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥೆ ಇರುವ ಪಾತ್ರಗಳನ್ನಷ್ಟೇ ನಿರ್ವಹಿಸಲು ನಿರ್ಧರಿಸಿದ್ದಾರೆ. ‘ಸಿನಿಮಾ ಎಂಬುದು ಮನರಂಜನೆ ಮಾತ್ರವಲ್ಲ. ಸಮಾಜದ ಬಿಂಬವೂ ಹೌದು. ಪಾತ್ರಗಳನ್ನು ಅನುಕರಿಸುವ ಸಾಕಷ್ಟು ಜನರಿದ್ದಾರೆ. ಜನರು ನಮ್ಮನ್ನು ಯಾವುದೋ ಒಂದು ಕಾರಣಕ್ಕೆ ಇಷ್ಟಪಡುತ್ತಾರೆ ಎಂದರೆ, ಆ ಕಾರಣ ನಮ್ಮ ಹೊಣೆಯನ್ನೂ ಹೆಚ್ಚಿಸುತ್ತಿದೆ ಎಂದರ್ಥ. ಹಾಗಾಗಿ ನಾವು ನಿರ್ವಹಿಸುವ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಏನಾದರೊಂದು ಸಂದೇಶವನ್ನೂ ದಾಟಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಈ ಕಾರಣಕ್ಕಾಗಿ ಉತ್ತಮ ಕಥೆ, ಸಂದೇಶಗಳಿರುವ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತೇನೆ’ ಎಂಬುದು ಅವರ ಸಮರ್ಥನೆ.

ಈಗಷ್ಟೇ ಎರಡನೇ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಖ್ಯಾತ್‌ ಪಾತ್ರಗಳ ಆಯ್ಕೆಯಲ್ಲಿಯೂ ಬುದ್ದಿವಂತಿಕೆ ತೋರುತ್ತಿದ್ದಾರೆ. ‘ನಾನಿನ್ನೂ ಚಿಕ್ಕವ. ಸಾಲದ್ದಕ್ಕೆ ಹೆಚ್ಚು ಜನರಿಗೆ ಪರಿಚಯವಿಲ್ಲದವ. ಲಾಂಗು–ಮಚ್ಚು ಹಿಡಿದು ಅಬ್ಬರಿಸುವ ಪಾತ್ರಗಳು ನನ್ನ ಇಮೇಜ್‌ಗೆ ಹೊಗ್ಗುವುದಿಲ್ಲ. ಅದನ್ನು ಜನರೂ ಒಪ್ಪುಲಾರರು. ಹಾಗಾಗಿ ನನ್ನ ವಯಸ್ಸಿಗೆ ನಿಲುಕುವ ಚಾಕೋಲೇಟ್‌ ಬಾಯ್‌ ತರಹದ ಪಾತ್ರಗಳನ್ನಷ್ಟೇ ನಿರ್ವಹಿಸಲು ಬಯಸುತ್ತೇನೆ’ ಎನ್ನುತ್ತಾರೆ.

‘ಬೆಂಗಳೂರು ಸಲಾಂ’ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರಹೊಂದಿರುವ ಸಿನಿಮಾ. ಇಲ್ಲಿ ಹಳ್ಳಿಯುವಕನ ಪಾತ್ರ ನಿರ್ವಹಿಸುತ್ತಿರುವ ಪ್ರಖ್ಯಾತ್ ಕಣ್ಣುಗಳಲ್ಲಿ ಚಂದನವನದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುವ ಕನಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT