ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಕೆಯ ಹೊಸ ‘ಫ್ಯಾಮಿಲಿ ಪ್ಯಾಕ್‌’

Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನಿರ್ದೇಶಕ ಎಸ್. ಅರ್ಜುನ್‌ಕುಮಾರ್‌ ಮತ್ತು ನಟ ಲಿಖಿತ್ ಶೆಟ್ಟಿ ಕಾಂಬಿನೇಷನ್‌ನಡಿ ಎರಡು ವರ್ಷದ ಹಿಂದೆ ತೆರೆಕಂಡ ‘ಸಂಕಷ್ಟಕರ ಗಣಪತಿ’ ಸಿನಿಮಾ ಜನರ ಮೆಚ್ಚುಗೆಗಳಿಸಿತ್ತು. ‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ರೋಗ ಕುರಿತ ಸಿನಿಮಾ ಇದು. ನಾಯಕನ ಎಡಗೈ ಆತನ ಅಂಕುಶಕ್ಕೆ ಸಿಗುವುದಿಲ್ಲ. ಅದು ಸೃಷ್ಟಿಸುವ ಅವಾಂತರಕ್ಕೆ ಕೊನೆಯಿಲ್ಲ. ಈ ಜೋಡಿ ಈಗ ‘ಫ್ಯಾಮಿಲಿ ಪ್ಯಾಕ್‌’ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ.

ನಟ ಪುನೀತ್‌ ರಾಜ್‌ಕುಮಾರ್‌ ಅವರ ‘ಪಿಆರ್‌ಕೆ’ ಪ್ರೊಡಕ್ಷನ್‌ ‘ಕವಲುದಾರಿ’, ‘ಮಾಯಾಬಜಾರ್ 2016’ ನಂತಹ ಉತ್ತಮ ಸಿನಿಮಾಗಳನ್ನು ನಿರ್ಮಿಸಿದೆ. ಈ ಪ್ರೊಡಕ್ಷನ್‌ನಡಿಯೇ ನಿರ್ಮಾಣವಾಗಿರುವ ‘ಲಾ’ ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದೇ ಇದರ ಮೂಲ ಉದ್ದೇಶ. ‘ಫ್ಯಾಮಿಲಿ ಪ್ಯಾಕ್‌’ ಸಿನಿಮಾವೂ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿಯೇ ನಿರ್ಮಾಣವಾಗಲಿದೆ. ಇದಕ್ಕೆ ನಿರ್ಮಾಪಕ ದೇಶ್‌ರಾಜ್‌ ರೈ, ಲಿಖಿತ್‌ ಶೆಟ್ಟಿ ಕೂಡ ಕೈಜೋಡಿಸಿದ್ದಾರೆ.

ಲಿಖಿತ್‌ ಶೆಟ್ಟಿ ಅವರೇ ಚಿತ್ರದ ನಾಯಕ. ಅವರಿಗೆ ಅಮೃತಾ ಅಯ್ಯಂಗಾರ್‌ ಜೋಡಿ. ಪಕ್ಕಾ ಕಾಮಿಡಿ ಚಿತ್ರ ಇದು. ರಂಗಾಯಣ ರಘು, ದತ್ತಣ್ಣ, ಅಚ್ಯುತ್‌ಕುಮಾರ್‌, ನಾಗಭೂಷಣ್‌, ತಿಲಕ್‌, ಅಶ್ವಿನಿ ಗೌಡ ತಾರಾಗಣದಲ್ಲಿದ್ದಾರೆ. ಕಳೆದ ತಿಂಗಳೇ ಇದರ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ, ಕೊರೊನಾ ಸೋಂಕಿನಿಂದ ಮುಂದಕ್ಕೆ ಹೋಗಿದೆ. ಈ ಭೀತಿ ಕಡಿಮೆಯಾದ ಬಳಿಕವಷ್ಟೇ ಸಿನಿಮಾದ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ.

ಸಿನಿಮಾ ಬಗ್ಗೆ ನಿರ್ದೇಶಕ ಅರ್ಜುನ್‌ ಕುಮಾರ್‌ ವಿವರಿಸುವುದು ಹೀಗೆ: ‘ಯಾವುದೇ ದ್ವಂದ್ವಾರ್ಥದ ಸಂಭಾಷಣೆ ಇಲ್ಲದೆ ಪ್ರೇಕ್ಷಕರಿಗೆ ಕಾಮಿಡಿ ಉಣಬಡಿಸುವುದೇ ಸಿನಿಮಾದ ಮೂಲ ಉದ್ದೇಶ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳದ್ದೂ ಒಂದೊಂದು ಬಗೆಯ ಕಥೆ. ಅದನ್ನು ತೆರೆಯ ಮೇಲೆ ಹಾಸ್ಯಮಯವಾಗಿ ಹೇಳಲು ಹೊರಟಿದ್ದೇವೆ’ ಎನ್ನುತ್ತಾರೆ.

ಈಗಾಗಲೇ, ನಾಯಕ ಮತ್ತು ನಾಯಕಿಯ ಫೋಟೊಶೂಟ್‌ ಕೂಡ ಮಾಡಲಾಗಿದೆ. ‘ಸಂಕಷ್ಟಕರ ಗಣಪತಿ’ ಚಿತ್ರಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ಯಶಸ್ಸಿನ ಹಾದಿಯಲ್ಲಿಯೇ ನಾನು ಮತ್ತು ಲಿಖಿತ್‌ ಶೆಟ್ಟಿ ಮತ್ತೆ ‘ಫ್ಯಾಮಿಲಿ ಪ್ಯಾಕ್’ನಲ್ಲಿ ಒಂದಾಗುತ್ತಿವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ಅರ್ಜುನ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT