ಸೋಮವಾರ, ಮಾರ್ಚ್ 27, 2023
28 °C
ನಟ ಚೇತನ್‌ ಅಹಿಂಸಾ ಅವರ ಭಾವನಾತ್ಮ ಸ್ಮರಣೆ

ಪುನೀತ್‌ ರಾಜ್‌ಕುಮಾರ್‌: ನೈಜ ಸೂಪರ್‌ಸ್ಟಾರ್‌

ಚೇತನ್‌ ಅಹಿಂಸಾ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ಉದ್ಯಮದಲ್ಲಿ ಸಂಬಂಧಗಳು ಸಾಮಾನ್ಯವಾಗಿ ವ್ಯಾವಹಾರಿಕವಾಗಿರುತ್ತವೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಆಗೀಗ ಭೇಟಿಯಾಗುತ್ತೇವೆ, ಅಲ್ಲಿ ಇಲ್ಲಿ ಸಿಕ್ಕಾಗ ನಗುತ್ತೇವೆ, ಕೆಲವು ಹಾಡುಗಳಿಗೆ ಒಟ್ಟಿಗೇ ದನಿಗೂಡಿಸುತ್ತೇವೆ, ಒಂದಿಷ್ಟು ಮಾತುಕತೆಯಾಡುತ್ತೇವೆ, ಇನ್ನೂ ಹೆಚ್ಚೆಂದರೆ ಒಟ್ಟಿಗೇ ಕೆಲಸ ಮಾಡುತ್ತೇವೆ... ಆಮೇಲೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ. 

ಬಹಳ ಅಪರೂಪಕ್ಕೆ ಭಾವನಾತ್ಮಕವಾದ ಕಳ್ಳುಬಳ್ಳಿಯ ತಂತುವೊಂದು ಬೆಸೆಯುತ್ತದೆ. ಹೀಗೆ ಅಪ್ಪು ಸರ್ ಜೊತೆಗೆ ಸುಮಾರು ಹದಿಮೂರು ವರ್ಷಗಳಿಂದ ಇಂಥದೊಂದು ಅರ್ಥಪೂರ್ಣ ಬಾಂಧವ್ಯವೊಂದು ಬೆಸುಗೆಯಾಗಿದ್ದು ನನ್ನ ಸುದೈವವೆಂದೇ ಹೇಳಬೇಕು. ಅವರು ನನಗೆ ಅತ್ಯುತ್ತಮ ಸ್ನೇಹಿತ ಮಾತ್ರವಲ್ಲ, ಹಿರಿಯಣ್ಣನೂ ಆಗಿದ್ದರು. ನನ್ನ ಬಗ್ಗೆ ತುಂಬು ಕಾಳಜಿ ವಹಿಸುತ್ತಿದ್ದರು. ಇದು ಒಳ್ಳೆಯದು ಎಂದು ಅವರು ಆಲೋಚಿಸಿದ ಮಾರ್ಗದಲ್ಲಿ ನಾನು ಸಾಗುವಾಗ ಅಗತ್ಯ ಮಾರ್ಗದರ್ಶನವನ್ನೂ ನೀಡುತ್ತಿದ್ದರು.

ನಿಜವೆಂದರೆ ಅಪ್ಪು ಸರ್ ಜೊತೆಗೆ ನನ್ನ ನಂಟು ನಾನು ಅಮೆರಿಕದಲ್ಲಿ ಕಳೆದ ಬಾಲ್ಯ ಕಾಲಕ್ಕೆ ಸಾಗುತ್ತದೆ. ಅಲ್ಲಿನ ವಿವಿಧ ಕಡೆಯ ಕನ್ನಡ ಸಂಘಗಳು ನಡೆಸುವ ಕಾರ್ಯಕ್ರಮಗಳಲ್ಲಿ ನಾನು ‘ಭಕ್ತ ಪ್ರಹ್ಲಾದ’ ಪೌರಾಣಿಕ ಸಿನಿಮಾದಲ್ಲಿ ಹಿರಣ್ಯಕಶಿಪು ಮತ್ತು ಆತನ ಏಳು ವರ್ಷದ ಮಗನ ನಡುವೆ ನಡೆಯುವ ಆ ಸುಪ್ರಸಿದ್ಧ ಸಂಭಾಷಣೆಯ ಪ್ರದರ್ಶನ ನೀಡುತ್ತಿದ್ದೆ. ನನಗೆ ಅದಾಗಲೇ ‘ಪ್ರಹ್ಲಾದ’ ಎಂಬ ಅಡ್ಡಹೆಸರೂ ಅಂಟಿಕೊಂಡಿತ್ತು. ಆದರೆ 1985ರಲ್ಲಿಯೇ ಬಾಲಕಲಾವಿದನಾಗಿ ‘ಪ್ರಹ್ಲಾದ’ನ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದು ಅಪ್ಪು ಸರ್ ಎಂಬ ಯಾವ ಕಲ್ಪನೆಯೂ ನನಗಾಗ ಇರಲಿಲ್ಲ. ನಾನು ಚಂದನವನನ್ನು ಪ್ರವೇಶಿಸಿದ ನಂತರ, ಈ ಪ್ರಹ್ಲಾದ ಎಂಬ ನನ್ನ ಅಡ್ಡಹೆಸರಿನ ಬಗ್ಗೆ ಅಮೆರಿಕದಲ್ಲಿದ್ದ ಅಪ್ಪು ಅವರ ಗೆಳೆಯರಾರೋ ಹೇಳಿದ್ದಾರೆ ಎಂಬುದೂ ನನಗೆ ಗೊತ್ತಿರಲಿಲ್ಲ. 2020ರಲ್ಲಿ ನನ್ನ ಮದುವೆಗೆ ಕರೆಯೋಲೆ ಕೊಡಲು ಹೋದಾಗ ಅಪ್ಪು ಸರ್ ಇದನ್ನು ನೆನಪಿಸಿಕೊಂಡು, ನನ್ನತ್ತ ಅಕ್ಕರೆಯ ನಗು ಬೀರಿದ್ದರು.

ಅವರೊಂದಿಗೆ ಹೆಜ್ಜೆಹಾಕಿದ ಪಯಣಕ್ಕೆ ನಾಂದಿಯಾಗಿದ್ದ ಆ ಒಂದು ನಿರ್ದಿಷ್ಟ ಕ್ಷಣವು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. 2009ರ ಫೆಬ್ರವರಿಯಲ್ಲಿ ನನ್ನ ಎರಡನೇ ಸಿನಿಮಾ ‘ಬಿರುಗಾಳಿ’ ಬಿಡುಗಡೆಯಾದ ಹಿನ್ನೆಲೆಯಲ್ಲಿ ‘ಅಮೃತ ಮಹೋತ್ಸವ’ಕ್ಕೆ ರಿಹರ್ಸಲ್ ನಡೆಸುತ್ತಿದ್ದೆವು. ನಾವು ಸುಮಾರು 50 ಜನರು ನೃತ್ಯದ ಅಭ್ಯಾಸ ನಡೆಸಲು ನಮ್ಮ ಸರದಿ ಬರುವುದನ್ನೇ ಕಾಯುತ್ತ ಕೂತಿದ್ದೆವು. ಅಪ್ಪು ಸರ್ ಸರದಿ ಬಂದಾಗ, ಅವರು ಮೊಬೈಲನ್ನು ಕೈಯಲ್ಲಿ ಹಿಡಿದು ಎದ್ದು ನಿಂತು, ಚಕ್ಕಳಮಕ್ಕಳ ಹಾಕಿ ಕೂತಿದ್ದ ನಮ್ಮೆಲ್ಲರನ್ನು ಅರೆಕ್ಷಣ ದಿಟ್ಟಿಸುತ್ತ ನಿಂತರು, ಅರೆ, ಯಾಕೆ ಹೀಗೆ ತಡ ಮಾಡ್ತ ನಿಂತಿದ್ದಾರೆ ಎಂದು ನಾನು ಅಚ್ಚರಿಪಡುವಷ್ಟರಲ್ಲಿ, ಅವರು ನನ್ನ ಬಳಿ ಬಂದರು... ಸಿನಿಮಾ ಜಗತ್ತಿಗೆ ಮಾತ್ರವಲ್ಲ, ಕರ್ನಾಟಕಕ್ಕೇ ಹೊಸಬನಾಗಿದ್ದೆ ನಾನಾಗ... ಅವರು ಮೊಬೈಲನ್ನು ಸರಕ್ಕನೆ ನನ್ನ ಮಡಿಲಿಗೆ ಹಾಕಿ, ಆರಾಮಾಗಿ ಡಾನ್ಸ್ ಫ್ಲೋರಿನತ್ತ ನಡೆದು, ನೃತ್ಯದ ಅಭ್ಯಾಸದಲ್ಲಿ ಮಗ್ನರಾದರು. ಆ ಕ್ಷಣದಲ್ಲಿ ಅಪ್ಪು ಸರ್ ನನ್ನಲ್ಲಿ ಅದೆಂಥ ವಿಶ್ವಾಸವಿರಿಸಿದ್ದಾರೆ ಎಂದು ಅರಿವಾಯಿತು; ಆ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು, ಮತ್ತೆ ಅದು ಮೊಬೈಲ್ ಕುರಿತಾಗಿ ಮಾತ್ರವಲ್ಲ, ಒಟ್ಟಾರೆ ಬದುಕಿನಲ್ಲಿ ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು.

ರಿಹರ್ಸಲ್ ನಡೆದ ಆ ವಾರವಿಡೀ ಅಪ್ಪು ಸರ್ ಜೊತೆಗೆ ನಾನು ಹಲವಾರು ವಿಷಯಗಳ ಕುರಿತು ಚರ್ಚಿಸಲು ಶುರುಮಾಡಿದೆ, ಹಾಗೇ ನಮ್ಮ ನಡುವೆ ಬಾಂಧವ್ಯವೊಂದು ಗಟ್ಟಿಯಾಗುತ್ತ ಹೋಯಿತು. ಅದೇ ವರ್ಷದ ಕೊನೆಯಲ್ಲಿ ‘ರಾಮ್’ ಸಿನಿಮಾದಲ್ಲಿ ಅವರೊಂದಿಗೆ ನಟಿಸುವ ಅವಕಾಶ ದೊರೆತಾಗ, ನಾನು ತಟ್ಟನೆ ಒಪ್ಪಿಕೊಂಡೆ. ರಾಕ್‌ಲೈನ್ ಸ್ಟುಡಿಯೊದ ಶೂಟಿಂಗ್ ಸೆಟ್ಟಿನಲ್ಲಿ ಅವರು ನನಗೆ ಸದಾಶಿವನಗರದಲ್ಲಿರುವ ತಮ್ಮ ಜಿಮ್‌ಗೆ ಸೇರಿಕೋ ಎಂದು ಹುರುಪಿನಿಂದ ಸಲಹೆ ಮಾಡಿದರು. ನನ್ನ ಮನೆಯೂ ಅಲ್ಲಿಗೆ ಸಮೀಪವಿದ್ದಿದ್ದರಿಂದ ನಾನು ಸುಮಾರು 2012ರಿಂದ ಅದೇ ಜಿಮ್ಮಿಗೆ ಹೋಗತೊಡಗಿದೆ.

ಅದೇ ವರ್ಷ, ರಾಜ್ಯದ ಕರಾವಳಿಯ ಹಲವೆಡೆಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರ್ಕಾರದ ಅನುಕೂಲತೆಗಳನ್ನು ದೊರಕಿಸಿಕೊಡಲು ನಡೆಸಿದ ಹೋರಾಟದ ನೇತೃತ್ವ ವಹಿಸಿದೆ, ಅದು ನನ್ನ ಮೊದಲ ಹೋರಾಟವೂ ಆಗಿತ್ತು. ಹಾಗೆ ನೋಡಿದರೆ ಸಾಮಾಜಿಕ ಚಳವಳಿಗಳ ಕುರಿತಾದ ನನ್ನ ಅರಿವು ಇತಿಹಾಸದ ಕೃತಿಗಳಿಂದ ಎರವಲು ಪಡೆದಿದ್ದಾಗಿತ್ತು, ಹೀಗಾಗಿ ನಾನು ಅಪ್ಪು ಸರ್ ಅವರ ಮಾರ್ಗದರ್ಶನ ಪಡೆಯಲು ಮೊದಲಸಲ ಅವರ ಮನೆಗೆ ಹೋದೆ. ಅವರು ತಮ್ಮ ಲ್ಯಾಪ್‌ಟಾಪಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ವಿಡಿಯೊಗಳನ್ನು ಗಮನವಿಟ್ಟು ನೋಡಿದವರೇ, ಇಂಥದೊಂದು ಜೀವಕಾಳಜಿಯ ಹೋರಾಟಕ್ಕೆ ಎಲ್ಲಿ ಕರೆದರೂ ಬರುವುದಾಗಿ ಒಪ್ಪಿದರು. ನನಗೆ ಆಸರೆಯೊಂದು ಸಿಕ್ಕಿದಂತೆ ಧೈರ್ಯವೆನ್ನಿಸಿತು. ಅದಾಗಿ ಆರು ತಿಂಗಳಿನಲ್ಲಿಯೇ ನಾವು ಆ ಹೋರಾಟದಲ್ಲಿ ಗೆದ್ದೆವು, ರಾಜ್ಯ ಸರ್ಕಾರವು ಸಂತ್ರಸ್ತರಿಗಾಗಿ 90 ಕೋಟಿ ರೂಪಾಯಿ ಬಿಡುಗಡೆ ಮಾಡಿತು. ದೀನದುರ್ಬಲರ ಕುರಿತಾಗಿ ಅಪ್ಪು ಸರ್‌ಗಿದ್ದ ಪ್ರಾಮಾಣಿಕ ಜವಾಬ್ದಾರಿಯ ಅರಿವಾದ ನಾನು ಆಗಿನಿಂದ ಅವರ ಸಾಮಾಜಿಕ ಕಾಳಜಿಯನ್ನು ಗಮನಿಸಲಾರಂಭಿಸಿದೆ. 

ತದನಂತರ ಕಳೆದ ಒಂಬತ್ತು ವರ್ಷಗಳಲ್ಲಿ, ಅಪ್ಪು ಸರ್ ಜೊತೆಗೆ ನಾನು ಅದೇ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿದ್ದೇನೆ, ಅಕ್ಕಪಕ್ಕ ಇರುವ ಟ್ರೆಡ್‌ಮಿಲ್ಲಿನಲ್ಲಿ ಓಡುತ್ತಲೇ ಸಂವಾದಿಸಿದ್ದೇವೆ, ಒಬ್ಬರ ನಂತರ ಇನ್ನೊಬ್ಬರು ಭಾರ ಎತ್ತಿದ್ದೇವೆ, ಜೊತೆಗೂಡಿ ಯೋಗಾಸನ ಹಾಕಿದ್ದೇವೆ. ಅವರ ದೈಹಿಕ ಸದೃಡತೆ, ಶಕ್ತಿ, ಬಾಗಿಬಳುಕುವಿಕೆ ಕಂಡು ಸದಾ ಅಚ್ಚರಿಗೊಂಡಿದ್ದೇನೆ. ಎಲ್ಲಾ ಸಮಯದಲ್ಲಿಯೂ ಅವರ ಮೊಗವಿಡೀ ನಗುವೊಂದು ಹರಡಿರುತ್ತಿತ್ತು, ಜೊತೆಗೊಂದು ಹುಮ್ಮಸ್ಸಿನ ಕೂಗು... ‘ಏನಪ್ಪಾ ಚೇತನ್... ಹೇಗಿದೀಯಾ? ಮತ್ತೆ ಈ ವಾರ ಯಾವುದಾದರೂ ಒಳ್ಳೆ ಸಿನಿಮಾ ನೋಡಿದ್ಯಾ?’

2020ರ ಆರಂಭದಲ್ಲಿ ನಾನು ಅಪ್ಪು ಸರ್ ಮನೆಗೆ ಹೋಗಿ, ಅವರು ಅಶ್ವಿನಿ ಮೇಡಂ ಜೊತೆಗೆ ಬಂದು ಹತ್ತಿರದ ಅನಾಥಾಶ್ರಮದಲ್ಲಿ ನಡೆಯಲಿದ್ದ ನನ್ನ ಮದುವೆ ಸಂಭ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸಿದೆ. ಆಗಲೂ ನಾವು ನಾರಾಯಣ ಗುರುಗಳ ಕೊಡುಗೆಗಳಿಂದ ಹಿಡಿದು ಇಂದಿನ ಸಂದರ್ಭದಲ್ಲಿ ಕಲಿಯುವ ಅಗತ್ಯಗಳು, ಸಮಾಜ ಸೇವೆಯಲ್ಲಿ ತೊಡಗುವುದು ಯಾಕೆ ಮುಖ್ಯ ಎಂಬವರೆಗೆ ಹಲವಾರು ವಿಷಯಗಳನ್ನು ಚರ್ಚಿಸಿದೆವು. 

ಕನ್ನಡದ ‘ಕೋಟ್ಯಾಧಿಪತಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟ ನಂತರ, ಶಿಕ್ಷಣದ ಮಹತ್ವದ ಕುರಿತು ಮನಗಂಡೆ ಎಂದು ಅಪ್ಪು ಸರ್ ಹೇಳಿದ್ದರು. ಇದರ ಪರಿಣಾಮವಾಗಿಯೇ ಅವರು ನಮ್ಮ ಗ್ರಾಮೀಣ ಯುವಜನರ ಏಳಿಗೆಗೆ ಸಹಾಯವಾಗಲೆಂದು ಶಿಕ್ಷಣದ ಹಕ್ಕು ಹಾಗೂ ಕೌಶಲಾಭಿವೃದ್ಧಿ ಮಂಡಳಿಯ ಬ್ರಾಂಡ್ ಅಂಬಾಸಡರ್ ಆಗಲು ಒಪ್ಪಿದ್ದರು, ಅಷ್ಟೇ ಮುಖ್ಯವಾಗಿ ಇವುಗಳಿಗಾಗಿ ಚಿಕ್ಕಾಸು ತೆಗೆದುಕೊಂಡಿರಲಿಲ್ಲ. ಸಮಾಜ ಸೇವೆಯ ಕುರಿತು ಅವರ ದೃಷ್ಟಿಕೋನದ ಬಗ್ಗೆ ಹೇಳಬೇಕೆಂದರೆ, ಸ್ವಂತದ ಹಾಗೂ ಕುಟುಂಬದ ಮೂಲಭೂತ ಅಗತ್ಯಗಳನ್ನು ಹೊಂದಿಸಿಕೊಂಡ ನಂತರ, ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದು ಅವರ ನಂಬಿಕೆಯಾಗಿತ್ತು.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಅವರು ರಾಜ್ಯ ಸರ್ಕಾರಕ್ಕೆ 50 ಲಕ್ಷ ರೂಪಾಯಿ ಕೊಡುಗೆ ನೀಡಿದ್ದರು, ಜೊತೆಗೆ ಜಿಮ್, ಯೋಗ ಮತ್ತು ಸಿನಿಮಾ ಇನ್ನಿತರ ಕಡೆಗೆ ನಮಗಿಬ್ಬರಿಗೂ ಗೊತ್ತಿದ್ದ ಹಲವಾರು ಕೆಲಸಗಾರರ ಕುಟುಂಬಗಳಿಗೂ ಯಾವುದೇ ಪ್ರಚಾರದ ಅಬ್ಬರವಿಲ್ಲದೆಯೇ ಸಹಾಯ ಮಾಡಿದ್ದರು. ಹಾಗೆಯೇ ಅವರು ತಾವು ಹಾಡಿದ ಯಾವುದೇ ಹಾಡಿಗೂ ದುಡ್ಡು ತೆಗೆದುಕೊಂಡಿರಲಿಲ್ಲ, ಸಂಗೀತ ಹಾಗೂ ಗೀತಸಾಹಿತ್ಯಕ್ಕಾಗಿ ಹಾಡುತ್ತಿದ್ದರು ಮತ್ತು ಆ ದುಡ್ಡನ್ನು ಅವರ ಕುಟುಂಬದ ಚಾರಿಟಿ ಸಂಸ್ಥೆಗಳಿಗೆ ದಾನ ಮಾಡುವಂತೆ ಕೇಳಿಕೊಳ್ಳುತ್ತಿದ್ದರು.

  ಕಳೆದ ವರ್ಷ ಫೆಬ್ರವರಿ 2ರಂದು ನಡೆದ ನನ್ನ ಮದುವೆಯಲ್ಲಿ ಅಪ್ಪು ಸರ್ ಅಶ್ವಿನಿ ಮೇಡಂ ಅವರೊಂದಿಗೆ ಸರಿಯಾಗಿ ಸಂಜೆ 7.15ಕ್ಕೆ ಆಗಮಿಸಿದ್ದರು. ನನ್ನ ತಂದೆತಾಯಿ ಮಾತನಾಡಿ, ನಾನು ಹಾಗೂ ಮೇಘ ನಾವೇ ಅಚ್ಚಕನ್ನಡದಲ್ಲಿಯೇ ಬರೆದ ಪ್ರತಿಜ್ಞೆಯನ್ನು ನೆರೆದ ಜನರೆದುರು  ಓದಿ ಮುಗಿಸುವವರೆಗೂ ನಸುನಗುತ್ತ ಕಾಯುತ್ತ ಕುಳಿತಿದ್ದರು. ಅಪ್ಪು ಸರ್ ಸೇರಿದಂತೆ, ಆಪ್ತೇಷ್ಟರ ಎದುರಿನಲ್ಲಿ ನಾವಿಬ್ಬರೂ ನಮ್ಮ ದೇಶದ ಸಂವಿಧಾನದ ಪ್ರತಿಯನ್ನು ಎತ್ತಿ ಹಿಡಿದು ನಿಂತಿದ್ದ ಆ ಗಳಿಗೆಯನ್ನು ನಾನೆಂದೂ ಮರೆಯಲಾರೆ. 

ಕಳೆದ ವರ್ಷ ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ, ಎರಡೂ ರೀತಿಯಲ್ಲಿ ನಮ್ಮ ಒಡನಾಟ ಇನ್ನಷ್ಟು ಹೆಚ್ಚಿತ್ತು. ಸಿನಿಮಾ ಉದ್ಯಮದ ಯಾವುದೇ ‘ಬಿಕ್ಕಟ್ಟಿನ’ ಸಮಯದಲ್ಲಿ ಸ್ಪಷ್ಟ ನಿಲುವು ತಳೆಯುವಂತೆ ಅವರು ನನಗೆ ಹೇಳಿದ ಮಾತಿಗೆ ನಾನು ತುಂಬ ಬೆಲೆ ಕೊಡುತ್ತೇನೆ. ಯಾಕೆಂದರೆ ಒಂದು ಆಪ್ತ ಕಾಳಜಿಯ ಎದೆಯಿಂದ ಹೊರಹೊಮ್ಮಿದ ಮಾತದು.

ಸಮಾಜ ಹಾಗೂ ಚಂದನವನದ ಸ್ಟಾರ್ ಸಂಸ್ಕೃತಿ, ಎರಡೂ ಕಡೆ ಹಲವಾರು ಜನರ ದುಡಿಮೆಯ ಬೆಲೆ ತೆತ್ತು ಕೇವಲ ಕೆಲವೇ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ನನಗಿದ್ದ ವಿರೋಧವು ಹೆಚ್ಚೆಚ್ಚು ತೀವ್ರವಾಗಿ ಪ್ರತಿಭಟನೆ, ಭಾಷಣ, ಬರಹ ಇತ್ಯಾದಿಗಳ ಮೂಲಕ ಹೊರಹೊಮ್ಮತೊಡಗಿತು. ಅಪ್ಪು ಸರ್ ಹುಟ್ಟಿನಿಂದಲೇ ‘ಸ್ಟಾರ್’ ಆಗಿದ್ದವರು, ನಾನೆಂದೂ ಸ್ಟಾರ್ ಆಗದದವನು, ಆದರೆ ಇದ್ಯಾವುದೂ ನಮ್ಮ ನಡುವಣ ಬಾಂಧವ್ಯಕ್ಕೆ ಧಕ್ಕೆ ಒಡ್ಡಲೇ ಇಲ್ಲ. ಶೇಕ್ಸ್‌ಪಿಯರ್‌ನ ‘ಟ್ವೆಲ್ತ್ ನೈಟ್’ನಲ್ಲಿ ಹೇಳುವಂತೆ, ಅಪ್ಪು ಸರ್ ಮೇಲೆ ‘ತಾರಾಗಿರಿ’ಯನ್ನು ‘ಹೊರೆಸಲಾಗಿತ್ತು’, ಆದರೆ ಅದರೊಂದಿಗೆ ಬರುವ  ಹಾರಾಟ, ಅಹಂಕಾರ, ಧಾರ್ಷ್ಟ್ಯ ಅಥವಾ ದೊಡ್ಡಸ್ತಿಕೆಗಳು ಅವರ ಬೆನ್ನಿಗೆ ಇರಲಿಲ್ಲ. ಪ್ರಜಾಪ್ರಭುತ್ವದ ಕಟ್ಟಾ ಪ್ರತಿಪಾದಕರು ಒಳ್ಳೆಯ ರಾಜರೂ ಇದ್ದರು ಎಂಬುದನ್ನು ಒಪ್ಪಿಕೊಳ್ಳುವಂತೆ, ಅಪ್ಪು ಸರ್ ನೋಡಿದಾಗ ‘ಒಳ್ಳೆಯ’ ಸ್ಟಾರ್ ಕೂಡ ಇರುತ್ತಾರೆ ಎಂಬುದನ್ನು ಸಿದ್ಧಾಂತದಲ್ಲಿ ಮಾತ್ರವಲ್ಲ, ವಾಸ್ತವದಲ್ಲಿಯೂ ಸಮಾನತೆಯ ಸಮರ್ಥಕರು ಒಪ್ಪಬಹುದಿತ್ತು.  

ಒಬ್ಬ ಒಳ್ಳೆಯ ನಟನಾಗಿ ಅಪ್ಪು ಸರ್ ಅವರ ಕೆಲಸ ಮತ್ತು ನಿರ್ಮಾಪಕರಾಗಿ ಅವರು ಮುಖ್ಯಪಾತ್ರಧಾರಿಗಳು ಹಾಗೂ ಚಿತ್ರಕಥೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತ ಇದ್ದುದ್ದು ಮೇಲಿನ ಮಾತಿಗೆ ಸಾಕ್ಷಿಯಾಗಿವೆ. ಜನರ ವೆಚ್ಚದಲ್ಲಿ ಲಾಭಗಳಿಸುವುದನ್ನು ಆದ್ಯತೆಯಾಗಿರಿಸಿಕೊಂಡ ಸಮಾಜ ಹಾಗೂ ಸಿನಿಮಾ ಉದ್ಯಮದಲ್ಲಿ, ತಾವು ನಟಿಸುತ್ತಿದ್ದ ಸಿನಿಮಾಗಳು ಇಡೀ ಕುಟುಂಬ ಕುಳಿತು ನೋಡಿ, ಆನಂದಪಡುವಂತೆ ಇರಬೇಕೆಂಬುದಕ್ಕೆ ಅವರು ಒತ್ತು ನೀಡಿದ್ದರು. ಹಿಂಸೆ, ಕ್ರೌರ್ಯ ಮತ್ತು ನಾಯಕ-ವೈಭವೀಕರಣದ ಸಿನಿಮಾಗಳು ಅವರ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಸುವ ಜೊತೆಗೆ ಜನಾಕರ್ಷಣೆಯನ್ನು ಮಗದಷ್ಟು ಹೆಚ್ಚಿಸುತ್ತಿತ್ತೇನೋ, ಆದರೆ ಅವರು ಮಾತ್ರ ಅಣ್ಣಾವ್ರು ಹಾಕಿಕೊಟ್ಟ ಸಮೃದ್ಧ ಪರಂಪರೆಯಲ್ಲಿ, ಕಲಾತ್ಮಕತೆ ಹಾಗೂ ಮನರಂಜನೆ ಎರಡೂ ಹದವಾಗಿ ಮೇಳೈಸಿದ ದೊಡ್ಮನೆ ಹುಡುಗನಾಗಿ ನಟಿಸುವುದನ್ನೇ ಮುಂದುವರೆಸಿದರು. ಒಬ್ಬ ನಿರ್ಮಾಪಕನಾಗಿ, ವಿಷಯಾಧಾರಿತ ಚಿತ್ರಕಥೆಗಳ ಮೂಲಕ ಹೊಸಬರನ್ನು ಉತ್ತೇಜಿಸುತ್ತ, ಕನ್ನಡ ಸಿನಿಮಾಗಳ ಸೃಜನಶೀಲ ಮನಸ್ಸುಗಳಿಗೆ ವೇದಿಕೆ ಕಲ್ಪಿಸುತ್ತಲೇ, ಹೆಚ್ಚಿನ ಸಿನಿಮಾಗಳು ಬಾಕ್ಸಾಫೀಸಿನಲ್ಲಿಯೂ ಯಶ ಗಳಿಸುವಂತೆ ನೋಡಿಕೊಂಡರು.

ಸಿನಿ ಜಗತ್ತಿನಲ್ಲಿ ಮತ್ತು ಹೊರಗೆ, ಎಲ್ಲರೊಂದಿಗೆ ಅಪ್ಪು ಸರ್ ಒಂದು ಬೆಚ್ಚನೆಯ ಸೌಹಾರ್ದಯುತ ಸಂಬಂಧವನ್ನು ಇರಿಸಿಕೊಂಡಿದ್ದರು, ಆದರೆ ನಟನಾ ಕೌಶಲವನ್ನು ಒರೆಗೆ ಹಚ್ಚಿ, ಇನ್ನಷ್ಟು ಮಿಂಚುವಂತೆ ಮಾಡುವ ಕಲಾವಿದರನ್ನು ಬಹಳ ಮೆಚ್ಚಿ, ಮಾತಾಡುತ್ತಿದ್ದರು. ಒಮ್ಮೆ ಜಿಮ್ಮಿನಲ್ಲಿ ಹೀಗೆಯೇ ಹರಟುತ್ತಿರುವಾಗ, ಹಿಂದಿ ಸಿನಿಮಾರಂಗದಲ್ಲಿ ಪ್ರತಿಭಾವಂತ ನಟರಾದ ಆಮೀರ್ ಖಾನ್ ಜೊತೆಗಿನ ತಮ್ಮ ಆಪ್ತ ಸಂಬಂಧದ ಕುರಿತು ಮಾತನಾಡಿದ್ದರು. ಯಾವುದೋ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅಲ್ಲಿ ಕಿಕ್ಕಿರಿದಿದ್ದ ಸೆಲೆಬ್ರಿಟಿಗಳು, ತಾರಾಮಣಿಗಳ ನಡುವೆ ಅಪಾರ ನಟನಾ ಕೌಶಲದ ಹಿಂದಿ ನಟ ಪಂಕಜ್ ತ್ರಿಪಾಠಿಯವರ ಜೊತೆಗೆ ಮಾತುಕತೆಯಲ್ಲಿ ಅಪ್ಪು ಸರ್ ಮಗ್ನರಾಗಿದ್ದರು ಎಂಬ ಬಗ್ಗೆಯೂ ನಾನು ಓದಿದ್ದೇನೆ. ಸೂಪರ್‌ ಸ್ಟಾರ್‌ಗಿರಿಯ ಕಿರೀಟ ಇಟ್ಟುಕೊಂಡವರನ್ನು ಹೊಗಳುತ್ತ ಕೂರವ ಬದಲಿಗೆ, ನಟನಾ ಚಾತುರ್ಯವಿರುವವರನ್ನು ಮೆಚ್ಚುವ ಅಪ್ಪು ಸರ್ ಅನಗತ್ಯ ಪ್ರಾಮುಖ್ಯತೆ ಪಡೆಯುವ ಹಣಕಾಸಿನ ಆದ್ಯತೆಗಳ ಬದಲಿಗೆ ಸಿನಿಮಾದ ನೈಜ ಕಲಾತ್ಮಕ  ಆಯಾಮಗಳ ಮೇಲೆ ಒತ್ತು ನೀಡುತ್ತಿದ್ದರು. ‘ಏನೇ ಆದರೂ ದುಡ್ಡೊಂದಿರಲಿ’ ಎಂಬ ಮನೋಭಾವದ ನಡುವೆ ಅವರು ಮರಳುಗಾಡಿನ ಓಯಸಿಸ್ಸಿನಂತೆ ಇದ್ದರು; ಚಂದನವನಕ್ಕೆ ಅವರ ಅಗಲಿಕೆಯ ನಷ್ಟದ ಅಂದಾಜು ಮುಂಬರುವ ವರ್ಷಗಳಲ್ಲಿ ಅರಿವಾಗುತ್ತದೆ.  

ಅಪ್ಪು ಸರ್ ವ್ಯಕ್ತಿತ್ವದ ಎರಡು ಅಂಶಗಳಿಗೆ ನಾನು ತುಂಬ ಬೆಲೆಕೊಡುತ್ತೇನೆ; ಒಂದು ಕಲಿಯುವ, ದಿನಗಳೆದಂತೆ ಇನ್ನಷ್ಟು ಉತ್ತಮ ಮನುಷ್ಯನಾಗಿ ಬೆಳೆಯುವ ಇಚ್ಛೆ ಮತ್ತು ಇನ್ನೊಂದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಮ್ಮಲ್ಲಿ ಬಹುತೇಕರಿಗೆ ಅವರು ತೋರಿದ ಪ್ರೀತಿ, ಅಕ್ಕರೆ, ಕಾಳಜಿ. ಈ ಬಗೆಯ ನಿಷ್ಕಾಮ ಪ್ರೀತಿ ಹಾಗೂ ಒಳ್ಳೆಯತನ ಕೆಲವರಲ್ಲಿ ಮಾತ್ರವಿರುತ್ತದೆ.

ತಮ್ಮ ತಂದೆ, ತಾಯಿಯ ಹಾಗೆಯೇ ಅಪ್ಪು ಸರ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದರು. ಅವರ ಕೊನೆಯಾಸೆಯನ್ನು ನೆರವೇರಿಸಿದ ಕುಟುಂಬಕ್ಕೆ ಗೌರವಾದರಗಳು. ಅಪ್ಪು ಮರಣದ ನಂತರವೂ ನಾಲ್ವರಿಗೆ ಬೆಳಕಿನ ಬದುಕು ನೀಡಿದ್ದಾರೆ. ನಾನು ಹಾಗೆ ಮಾಡುತ್ತೇನೆ ಎಂದು ವಾಗ್ದಾನ ಮಾಡುತ್ತ, ಬೇರೆಯವರೂ ಇದೇ ಹೆಜ್ಜೆಯಿಡಲು ಪ್ರೇರೇಪಿಸಲು ಆಂದೋಲನವನ್ನು ಆರಂಭಿಸುವ ಆಶಯದಲ್ಲಿದ್ದೇನೆ. 

ಕನ್ನಡಕ್ಕೆ: ಸುಮಂಗಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು