ಬುಧವಾರ, ಮಾರ್ಚ್ 29, 2023
28 °C

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ತಮಿಳು ನಟ ಶಿವಕಾರ್ತಿಕೇಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಪುನೀತ್ ಒಬ್ಬ ಅದ್ಭುತ ನಟ. ಅವರು ಇಂದು ನಮ್ಮ ಜೊತೆಗಿಲ್ಲ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಅವರು ನನಗೆ ಉತ್ತಮ ಸ್ನೇಹಿತನಾಗಿದ್ದರು. ಅವರ ಸಾವಿನ ಶಾಕ್‌ನಿಂದ ನನಗೆ ಇನ್ನೂ ಹೊರ ಬರಲು ಆಗುತ್ತಿಲ್ಲ’ ಎಂದು ದುಃಖದಿಂದ ನುಡಿದಿದ್ದಾರೆ ತಮಿಳು ನಟ ಶಿವಕಾರ್ತಿಕೇಯನ್.

ನಿನ್ನೆ ಬೆಂಗಳೂರಿಗೆ ಆಗಮಿಸಿದ ಈ ನಟ‌ ನಾಗವಾರದಲ್ಲಿರುವ ಶಿವರಾಜಕುಮಾರ್‌ ಹಾಗೂ ಸದಾಶಿವನಗರದಲ್ಲಿರುವ ಪುನೀತ್‌ ರಾಜಕುಮಾರ್‌ ಮನೆಗೆ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿ‌ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲಿಂದ ಕಂಠೀರವ ಸ್ಟುಡಿಯೊಗೆ ತೆರಳಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕಾರ್ತಿಕೇಯನ್ ‘ಪುನೀತ್ ಇಲ್ಲ ಎಂಬುದನ್ನು ಈಗಲೂ ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನು ಒಂದು ತಿಂಗಳ ಹಿಂದಷ್ಟೇ ಪುನೀತ್ ಜೊತೆ ಮಾತನಾಡಿದ್ದೆ. ನನ್ನ ಚಿತ್ರಗಳಿಗೆ ಅವರು ವಿಶ್ ಮಾಡಿದ್ರು, ಅವರನ್ನು ಕಳೆದುಕೊಂಡಿದ್ದು ಇಡೀ ಭಾರತೀಯ ಸಿನಿಮಾ ರಂಗಕ್ಕೆ ಒಂದು ದೊಡ್ಡ ಲಾಸ್. ಆದ್ರೆ ಅವರು ಎಲ್ಲರ ಮನಸ್ಸಿನಲ್ಲೂ ಸದಾ ಚಿರಾಯು. ಅವರು ಎಲ್ಲಾ ನಟರಿಗೂ ಬಹು ದೊಡ್ಡ ಸ್ಫೂರ್ತಿ. ಅವರದು ತುಂಬಾ ಒಳ್ಳೆಯ ಮನಸ್ಸು. ಎಲ್ಲರನ್ನೂ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ರು. ಅವರೊಬ್ಬ ಅತ್ಯದ್ಭುತ ನಟ. ಅವರ ನಿಧನ ಬಹಳ ನೋವು ತಂದಿದೆ. ನನ್ನ ‘ಡಾಕ್ಟರ್’ ಸಿನಿಮಾ ನೋಡಿ‌ ಪುನೀತ್ ಮತ್ತು ಶಿವಣ್ಣ ಇಬ್ಬರೂ ವಿಶ್ ಮಾಡಿದ್ದರು. ಅವಾರ್ಡ್ ಕಾರ್ಯಕ್ರಮದಲ್ಲಿ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಬಹಳಷ್ಟು ಸಾರಿ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಬಹಳ ಸರಳ ವ್ಯಕ್ತಿತ್ವ ಅವರದು. ಬೆಂಗಳೂರಿಗೆ ಬಂದ್ರೆ ತಪ್ಪದೇ ಮನೆಗೆ ಬರುವಂತೆ ಆಹ್ವಾನಿಸಿದ್ರು. ಆದರೆ ಅವರನ್ನು ಬಂದು ಭೇಟಿ ಮಾಡಲು ಸಾಧ್ಯವೇ ಆಗಿರಲಿಲ್ಲ. ಇಂದು ನಾನು ಅವರನ್ನ ಭೇಟಿಯಾಗಲು ಬಂದ್ರೆ ಅವರೇ ಇಲ್ಲ. ನಮ್ಮ ಮನದಲ್ಲಿ ಯಾವತ್ತೂ ಅವರು ಇರ್ತಾರೆ. ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ಅಭಿಮಾನಿಗಳು, ಕುಟುಂಬದವರು ಹೇಗೆ ನಂಬುತ್ತಾರೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಭಾವುಕವಾಗಿ ಮಾತನಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು