ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೃಷ್ಣಾರ್ಪಣೆಯ ಹೊತ್ತಿನಲ್ಲಿ ‘ಗುರು’ ಮನೆ!

ಬಾಗಲಕೋಟೆ: ಎಂಟು ದಶಕಗಳ ಹಿಂದೆಯೇ ನಿರ್ಮಾಣವಾಗಿತ್ತು ತಾಜ್‌ ಹೋಟೆಲ್‌ನ ಮಾದರಿ
Last Updated 28 ಜನವರಿ 2021, 6:45 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯಲ್ಲಿ ನೂರಾರು ಕಿ.ಮೀ ವ್ಯಾಪ್ತಿಯಲ್ಲಿ ಆವರಿಸಿರುವ ಆಲಮಟ್ಟಿ ಜಲಾಶಯದ ಹಿನ್ನೀರು ಬಾಗಲಕೋಟೆ ಹಳೆಯ ನಗರ ಮಾತ್ರವಲ್ಲ ಸುತ್ತಲಿನ ನೂರಾರು ಹಳ್ಳಿಗಳನ್ನು ತನ್ನೊಳಗೆ ಲೀನವಾಗಿಸಿಕೊಂಡಿದೆ. ಬರೀ ಹೊಲ, ಮನೆ, ರಸ್ತೆ, ಗಿಡ–ಮರ, ಗುಡಿ–ಗುಂಡಾರಗಳು ಮಾತ್ರ ಕೃಷ್ಣಾರ್ಪಣಗೊಂಡಿಲ್ಲ. ಬದಲಿಗೆಶತಮಾನಗಳ ಕಾಲ ಪೋಷಿಸಲ್ಪಟ್ಟಿದ್ದ ಕೃಷ್ಣಾ ತೀರದ ವಿಶಿಷ್ಟ ಸಾಂಸ್ಕೃತಿಕ ಬದುಕಿನ ಅಸ್ಮಿತೆಯೂ ನೀರ ಹಾದಿಯಲ್ಲಿ ನಾಮಾವಶೇಷಗೊಂಡಿದೆ.

ಬಾಳಿ–ಬದುಕಿ ಮೆರೆದಿದ್ದ ದೇಸಗತಿಗಳು, ಅವರ ಹತ್ತಾರು ಎಕರೆ ವಿಸ್ತೀರ್ಣದ ಅರಮನೆಯಂತಹ ವಾಡೆಗಳು, ಮನೆ, ಬಂಗಲೆಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿವೆ. ಅದೇ ಹಾದಿಯಲ್ಲಿ ಬಾಗಲಕೋಟೆಯ ಹಲಕಾಟಿ ಕುಟುಂಬದ ’ಪಿಂಕ್ ಪ್ಯಾಲೇಸ್‘ ಕೂಡ ತನ್ನ ಕೊನೆಯ ದಿನಗಳ ಎಣಿಸುತ್ತಿದೆ.

ಗುರು ಸಿನಿಮಾ ಮನೆ!..

ಇಲ್ಲಿನ ಗದ್ದನಕೇರಿ ಕ್ರಾಸ್‌ನಿಂದ ನೀವು ಹಳೆಯ ಬಾಗಲಕೋಟೆಯತ್ತ ಕೃಷ್ಣೆಯ ಹಿನ್ನೀರ ಹಾದಿಯಲ್ಲಿ ಸಾಗಿ ಬರುವಾಗ ಎಡಗಡೆಗೆ ಹಿನ್ನೀರಿಗೆ ಚಾಚಿಕೊಂಡಂತೆ ಕಾಣುವ ಗುಲಾಬಿ ಬಣ್ಣದ ಬಂಗಲೆ ಗಮನ ಸೆಳೆಯುತ್ತದೆ. ಸ್ಥಳೀಯರ ಪಾಲಿಗೆ ಅದು ’ಗುರು‘ ಸಿನಿಮಾ ಮನೆ.

ಧೀರೂಬಾಯಿ ಅಂಬಾನಿ ಅವರ ಜೀವನಗಾಥೆಯ ಕಥೆ ಎಂದು ಹೇಳಲಾಗಿ ದೇಶದ ಗಮನ ಸೆಳೆದಿದ್ದ ಹಿಂದಿಯ ’ಗುರು‘ ಸಿನಿಮಾದ ಸಂಪೂರ್ಣ ಚಿತ್ರೀಕರಣ ಇದೇ ಮನೆಯಲ್ಲಿ ಆಗಿದೆ. ಹೀಗಾಗಿ ಕಟ್ಟಿದ ಎಂಟು ದಶಕಗಳಿಂದಲೂ ’ಪಿಂಕ್‌ ಪ್ಯಾಲೇಸ್‘ ಎಂದು ಕರೆಯಲಾಗುತ್ತಿದ್ದ ಬಂಗಲೆ ಈಗ ’ಗುರು‘ ಸಿನಿಮಾ ಮನೆಯಾಗಿ ಅನ್ವರ್ಥಗೊಂಡಿದೆ.

ಬಾಗಲಕೋಟೆಯ ಪಿಂಕ್ ಪ್ಯಾಲೇನ್‌ ಹೊರ ಆವರಣದ ಕಮಾನಿನ ನೋಟ
ಬಾಗಲಕೋಟೆಯ ಪಿಂಕ್ ಪ್ಯಾಲೇನ್‌ ಹೊರ ಆವರಣದ ಕಮಾನಿನ ನೋಟ

ರೇಷ್ಮೆ ವ್ಯಾಪಾರಿಯ ಕನಸು:

ಈ ಪುಟ್ಟ ಬಂಗಲೆ ಬಾಗಲಕೋಟೆಯ ರೇಷ್ಮೆ ವ್ಯಾಪಾರಿ ಮಲ್ಲಪ್ಪ ಬಸಪ್ಪ ಹಲಕಾಟಿ ಅವರ ಕನಸಿನ ಕೂಸು. 1920ರ ದಶಕದ ಆರಂಭದಲ್ಲಿ ವ್ಯಾಪಾರದ ನಿಮಿತ್ತ ಆಗಾಗಮುಂಬೈಗೆ ಹೋಗುತ್ತಿದ್ದ ಹಲಕಾಟಿ ಅಲ್ಲಿನ ಸಮುದ್ರ ತೀರದಲ್ಲಿರುವ ತಾಜ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಅದರ ವಾಸ್ತುಶೈಲಿ ಹಾಗೂ ಅಚ್ಚುಕಟ್ಟುತನಕ್ಕೆ ಮನಸೋತು ತಮ್ಮೂರಿನಲ್ಲಿ ಅಂತಹದ್ದೇ ವಿನ್ಯಾಸದ ಮನೆ ಕಟ್ಟಲು ನಿರ್ಧರಿಸಿದ್ದರು. ಹಲವು ಪ್ರಯತ್ನದ ನಂತರ ತಾಜ್‌ ಹೋಟೆಲ್‌ ಕಟ್ಟಡದ ವಾಸ್ತು ಶಿಲ್ಪಿಯನ್ನು ಸಂಪರ್ಕಿಸಿ ಅವರ ಮನವೊಲಿಸಿ ಬಾಗಲಕೋಟೆಗೆ ಕರೆತಂದಿದ್ದರು. ಅವರು ಮೇಲುಸ್ತುವಾರಿಯಲ್ಲಿಯೇ ಊರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಮ್ಮ ತೋಟದಲ್ಲಿ ಮನೆ ಕಟ್ಟಿದ್ದರು.

1923ರಲ್ಲಿ ಮನೆ ನಿರ್ಮಾಣ ಆರಂಭವಾಗಿತ್ತು. ಸತತ 14 ವರ್ಷಗಳ ಕಾಲ ಕಾಮಗಾರಿ ನಡೆದು 1937ರಲ್ಲಿ ಮುಕ್ತಾಯಗೊಂಡಿತ್ತು. ಆ ಕಾಲದಲ್ಲಿಯೇ ಈ ಬಂಗಲೆ ನಿರ್ಮಾಣಕ್ಕೆ ₹1 ಲಕ್ಷ ವೆಚ್ಚ ಮಾಡಿದ್ದರು. ಒಂದು ಎಕರೆ ವಿಸ್ತೀರ್ಣದಲ್ಲಿ ಮನೆ ಕಟ್ಟಲಾಗಿದ್ದು, 25 ಕೊಠಡಿಗಳು ಇದರಲ್ಲಿವೆ. ನಿಗೂಢ ನೆಲ ಮಾಳಿಗೆಯೂ ಇದೆ. ಮನೆಯ ಹಿತ್ತಿಲಿನಲ್ಲಿ 14 ಎಕರೆ ಜಮೀನು ಇದ್ದು, ಅದರಲ್ಲಿ ದ್ರಾಕ್ಷಿ ಸೇರಿದಂತೆ ಬೇರೆ ಬೇರೆ ಹಣ್ಣುಗಳನ್ನು ಬೆಳೆಯುತ್ತಿದ್ದರು. ಅಂದಹಾಗೆ ಎಂ.ಬಿ.ಹಲಕಾಟಿ ಕೃಷ್ಣಾ ತೀರದ ಮೊದಲ ದ್ರಾಕ್ಷಿ ಬೆಳೆಗಾರ ಎಂಬ ಶ್ರೇಯ ಹೊಂದಿದ್ದರು. ಬ್ರಿಟಿಷರಿಂದಲೂ ಮನ್ನಣೆ ಪಡೆದಿದ್ದರು.

ಇಡೀ ಮನೆಯನ್ನು ಸಮೀಪದ ಕಗಲಗೊಂಬದ ವಿಶ್ವಪ್ರಸಿದ್ಧ ಕೆಂಪು ಕಲ್ಲಿನಲ್ಲಿ ಕಟ್ಟಲಾಗಿದೆ. ಹೀಗಾಗಿ ಊರಿನವರು ಈ ಮನೆಯನ್ನು ‘ಪಿಂಕ್ ಪ್ಯಾಲೇಸ್‘ ಎಂದು ಕರೆಯುತ್ತಿದ್ದರು.

ಬಾಗಲಕೋಟೆಯ ಪಿಂಕ್ ಪ್ಯಾಲೇಸ್‌ನ ಬಾಲ್ಕನಿಯ ನೋಟ
ಬಾಗಲಕೋಟೆಯ ಪಿಂಕ್ ಪ್ಯಾಲೇಸ್‌ನ ಬಾಲ್ಕನಿಯ ನೋಟ

ನೆಲಮಾಳಿಗೆ ವ್ಯವಸ್ಥೆ: ಮನೆಯ ಒಳಗೆ ನೆಲ ಮಾಳಿಗೆ ಇದೆ. ಅದರಲ್ಲಿ ಭಂಡಾರ ಇಟ್ಟಿದ್ದರು. ತುರ್ತು ಸಂದರ್ಭದಲ್ಲಿ ಅದರ ರಕ್ಷಣೆಗಾಗಿ ಸುರಂಗ ಮಾರ್ಗವೂ ಇತ್ತು ಎಂದು ಹೇಳಲಾಗಿದೆ. ಮನೆಯ ಒಳಗಿನಿಂದ 14 ಮೆಟ್ಟಿಲುಗಳನ್ನು ಇಳಿದರೆ ನೇರ ಭಂಡಾರ ಇರುವ ಕೊಠಡಿಗೆ ಸಂಪರ್ಕ ಸಿಗುತ್ತದೆ. ಮನೆಯ ಕಮಾನುಗಳಿಗೆ ಯಾವುದೇ ಆಸರೆ ಇಲ್ಲ. ಒಂದು ಕಲ್ಲು ತಗೆದರೂ ಇಡೀ ಶಿಖರವೇ ಬೀಳುವಂತೆ ತಾಂತ್ರಿಕತೆ ಬಳಸಲಾಗಿದೆ. ಮನೆಯ ಎದುರು ಮೊಘಲ್ ಶೈಲಿಯ ಉದ್ಯಾನವನವಿದ್ದು, ಅಲ್ಲಿ ಕಾರಂಜಿ ವ್ಯವಸ್ಥೆ ಇತ್ತು.

ಮನೆಯಲ್ಲಿ ಮಲ್ಲಪ್ಪ ಹಲಕಾಟಿ ದಂಪತಿ ಆರು ಮಂದಿ ಮಕ್ಕಳ ಸಮೇತ ವಾಸವಿದ್ದರು. ಮುಂದೆ ಬಂಗಲೆ ಪುತ್ರ ಬಿ.ಎಂ.ಹಲಕಾಟಿ ಅವರ ಸುಪರ್ದಿಗೆ ಬಂದಿತ್ತು. ಬೇರೆ ಬೇರೆ ಕಾರಣದಿಂದ ಹಲಕಾಟಿ ಕುಟುಂಬದವರು 1983ರಲ್ಲಿ ಅಲ್ಲಿಂದ ಬೇರೆ ಕಡೆಗೆ ವಾಸ್ತವ್ಯ ಬದಲಾಯಿಸಿದ್ದರು. ರಜೆ ಕಳೆಯಲು ಹಾಗೂ ವಿಶೇಷ ಸಂದರ್ಭದಲ್ಲಿ ಮಾತ್ರ ಬಂಗಲೆಯನ್ನು ಬಳಸುತ್ತಿದ್ದರು. ಮುಂದೆ ಅದನ್ನು ಬಾಡಿಗೆಗೆ ನೀಡಿದ್ದರು.

ಕೃಷ್ಣಾ ತೀರದ ಪಾರಂಪರಿಕತೆಯನ್ನು ಬಿಂಬಿಸುತ್ತಿದ್ದ ಈ ಮನೆಯಲ್ಲಿಮೊದಲಿಗೆ ನಿರ್ದೇಶಕ ಕೆ.ವಿ.ರಾಜು ಹುಲಿಯಾ ಸಿನಿಮಾದ ಚಿತ್ರೀಕರಣ ಮಾಡಿದ್ದರು. ಹೀಗಾಗಿ ಹಲಕಾಟಿ ಕುಟುಂಬದವರೊಂದಿಗೆ ಅವರ ಒಡನಾಟ ಬೆಳೆದಿತ್ತು. ಹಲವು ಧಾರಾವಾಹಿಗಳ ಚಿತ್ರೀಕರಣ ಕೂಡ ನಡೆದಿದೆ.

ಅದೊಮ್ಮೆ ಗುರು ಸಿನಿಮಾದ ಚಿತ್ರೀಕರಣಕ್ಕೆ ಪಾರಂಪರಿಕ ಮನೆಯೊಂದರ ಹುಡುಕಾಟದಲ್ಲಿ ತೊಡಗಿದ್ದ ನಿರ್ದೇಶಕ ಮಣಿರತ್ನಂ ಅವರ ಸಹಾಯಕರೊಬ್ಬರು ಹೊಸಪೇಟೆಗೆ ಬಂದಿದ್ದರು. ಅಲ್ಲಿ ಕೆ.ವಿ.ರಾಜು ಅವರನ್ನು ಭೇಟಿಯಾಗಿದ್ದರು. ಪಿಂಕ್ ಪ್ಯಾಲೇಸ್ ಬಗ್ಗೆ ಮಾಹಿತಿ ನೀಡಿದ ಕೆ.ವಿ.ರಾಜು, ಅವರನ್ನುಬಾಗಲಕೋಟೆಗೆ ಕರೆತಂದು ಬಂಗಲೆ ತೋರಿಸಿದ್ದರು. ಅವರಿಗೆ ಮನೆ ಇಷ್ಟವಾಗಿತ್ತು.

ಬಾಗಲಕೋಟೆ ಪಿಂಕ್ ಪ್ಯಾಲೇಸ್‌ ನಿರ್ಮಾಣದ ವರ್ಷದ ಹೆಗ್ಗುರುತು
ಬಾಗಲಕೋಟೆ ಪಿಂಕ್ ಪ್ಯಾಲೇಸ್‌ ನಿರ್ಮಾಣದ ವರ್ಷದ ಹೆಗ್ಗುರುತು

ನಯಾ ಪೈಸೆ ಪಡೆದಿರಲಿಲ್ಲ..

’ಚಿತ್ರೀಕರಣಕ್ಕೆ ಮುನ್ನ ಸ್ಥಳ (ಲೊಕೇಶನ್) ನೋಡಲು ನಿರ್ದೇಶಕ ಮಣಿರತ್ನಂ ಬಂದಿದ್ದರು. ಮನೆಗೆ ಬಂದ ಅವರು ನಮ್ಮ ತಂದೆ ಬಿ.ಎಂ.ಹಲಕಾಟಿ ಅವರ ಪಾದಸ್ಪರ್ಶಿಸಿ ಆಶೀರ್ವಾದ ಪಡೆದರು. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದರೂ ಒಂದಷ್ಟೂ ಬಿಗುಮಾನ ತೋರಲಿಲ್ಲ. ಅವರ ಸರಳತೆ ಗಮನಿಸಿ ಖುಷಿಯಾದ ಅಪ್ಪ ಉಚಿತವಾಗಿಯೇಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಪುತ್ರ, ನಗರದಲ್ಲಿ ದಂತ ವೈದ್ಯರೂ ಆದ ಡಾ.ಮುತ್ತು ಹಲಕಾಟಿ ನೆನಪಿಸಿಕೊಳ್ಳುತ್ತಾರೆ. ಇದೇ ಕುಟುಂಬದ ಡಾ.ಪ್ರಭು ಹಲಕಾಟಿ, ಬೆಳಗಾವಿಯಲ್ಲಿ ಖ್ಯಾತ ಹೃದ್ರೋಗ ತಜ್ಞರಾಗಿದ್ದಾರೆ.

’ಗುರು ಸಿನಿಮಾದ ಶೂಟಿಂಗ್‌ಗಾಗಿ ಮನೆಯ ಪಕ್ಕದಲ್ಲಿಯೇ ರೈಲು ನಿಲ್ದಾಣದ ಸೆಟ್‌ ಹಾಕಿದ್ದರು. ಎರಡು ತಿಂಗಳು ಕಾಲ ನಡೆದ ಶೂಟಿಂಗ್ ವೇಳೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬಾಗಲಕೋಟೆಯಲ್ಲಿಯೇ ವಾಸ್ತವ್ಯ ಇದ್ದರು. ಶೂಟಂಗ್ ಮುಗಿಸಿ ತೆರಳುವಾಗ ಮನೆಯಲ್ಲಿದ್ದ ಸಾಂಪ್ರದಾಯಿಕ ಪಿಲ್ಲೋ ಕವರ್ ಒಂದನ್ನು ಐಶ್ವರ್ಯಾ ಇಲ್ಲಿನ ನೆನಪಿಗಾಗಿ ಜೊತೆಗೆ ಕೊಂಡೊಯ್ದಿದ್ದರು‘ ಎಂದು ಡಾ.ಮುತ್ತು ನೆನಪಿಸಿಕೊಳ್ಳುತ್ತಾರೆ.

ಗುರು ಸಿನಿಮಾದ ನಂತರ ದುನಿಯಾ ವಿಜಯ್ ಅಭಿನಯದ ’ಭೀಮಾ ತೀರದಲ್ಲಿ‘ ಸಿನಿಮಾ ಚಿತ್ರೀಕರಣ ಇಲ್ಲಿ ನಡೆದಿದೆ. ’ಭೀಮಾ ತೀರದಲ್ಲಿ‘ ಸಿನಿಮಾ ಚಿತ್ರೀಕರಣಕ್ಕೆ ಬಾಗಲಕೋಟೆಗೆ ಬಂದಾಗ ಹೊರಗಿನಿಂದ ಬಂಗಲೆಯ ಸೊಬಗು, ಒಳಗಡೆಯ ವಾಸ್ತು ವಿನ್ಯಾಸ ಕಂಡು ನಾನು ದಿಘ್ಮೂಢನಾಗಿದ್ದೆನು. ಮನೆಯ ಹಿಂಭಾಗಕ್ಕೆ ಹೋಗಿ ನೋಡುತ್ತೇನೆ ಕಟ್ಟಡಕ್ಕೆ ಹೊಂದಿಕೊಂಡಂತೆ ಹರಡಿದ್ದ ಕೃಷ್ಣೆಯ ಜಲರಾಶಿ ಕಂಡು ನನಗೆ ಹೆದರಿಕೆ ಆಗಿತ್ತು ಎಂದು ಹಿರಿಯ ಚಿತ್ರನಟ ದೊಡ್ಡಣ್ಣ ಆ ದಿನಗಳಿಗೆ ಜಾರುತ್ತಾರೆ.

ಈಗ ಮುಳುಗಡೆಯ ಹೊತ್ತು..
ಪಿಂಕ್ ಪ್ಯಾಲೇಸ್‌ ಈಗ ಕೃಷ್ಣಾರ್ಪಣೆಗೊಳ್ಳುವ ಹೊತ್ತು. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಗೆ ದಿನ ಎಣಿಸುತ್ತಿದೆ. ಅಣೇಕಟ್ಟೆಯ ಎತ್ತರ ಈಗ 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಳಗೊಂಡರೆ ಬಂಗಲೆ ಸಂಪೂರ್ಣ ಮುಳುಗಡೆ ಹೊಂದಲಿದೆ. ’ಬಂಗಲೆ ಸೇರಿದಂತೆ ಇಡೀ ಪ್ರದೇಶವನ್ನು ಕೃಷ್ಣಾ ಭಾಗ್ಯ ಜಲನಿಗಮ (ಕೆಬಿಜೆಎನ್‌ಎಲ್) ಸ್ವಾಧೀನಪಡಿಸಿಕೊಂಡಿದೆ. ಬಂಗಲೆಗೆ ₹18 ಕೋಟಿ ಪರಿಹಾರ ನಿಗದಿ ಮಾಡಿದೆ‘ ಎಂದು ಡಾ.ಮುತ್ತು ಹಲಕಾಟಿ ಹೇಳುತ್ತಾರೆ.

’ಇಡೀ ಬಂಗಲೆಯನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್‌ಸಿಟಿಗೆಸ್ಥಳಾಂತರಿಸಲು ಈನಾಡು ಬಳಗದವರು ಕೇಳಿದ್ದರು. ಅದಕ್ಕೆ ನಾವು ಒಪ್ಪಿಲ್ಲ. ಕೃಷ್ಣೆಯ ಹಿನ್ನೀರು ಆವರಿಸುವ ಮುನ್ನ ನಾವೇ ಬೇರೆ ಕಡೆಗೆ ಸ್ಥಳಾಂತರಿಸಲು ಉದ್ದೇಶಿಸಿದ್ದೇವೆ. ಅದಕ್ಕಾಗಿ ₹10 ಕೋಟಿ ವೆಚ್ಚದ ಯೋಜನೆಯೂ ಸಿದ್ಧವಾಗಿದೆ‘ ಎಂದು ಡಾ.ಮುತ್ತು ಹೇಳುತ್ತಾರೆ.

ಪಿಂಕ್ ಪ್ಯಾಲೇಸ್ ಕಟ್ಟಡದ ನೋಟ
ಪಿಂಕ್ ಪ್ಯಾಲೇಸ್ ಕಟ್ಟಡದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT