ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಣ್ಣನ ಮಗ: ಅದೇ ಮಚ್ಚು, ರೌಡಿಸಂ ಹುಚ್ಚು

Last Updated 15 ಮಾರ್ಚ್ 2019, 10:50 IST
ಅಕ್ಷರ ಗಾತ್ರ

ಚಿತ್ರ: ರಾಜಣ್ಣನ ಮಗ

ನಿರ್ಮಾಣ: ಹರೀಶ್‌ ಜಲಗೆರೆ

ನಿರ್ದೇಶನ: ಕೋಲಾರ ಸೀನು

ತಾರಾಗಣ: ಹರೀಶ್‌ ಜಲಗೆರೆ, ಚರಣ್‌ ರಾಜ್‌, ಅಕ್ಷತಾ, ರಾಜೇಶ್‌ ನಟರಂಗ, ಕರಿಸುಬ್ಬು, ರಾಜ್‌ ರೆಡ್ಡಿ, ರಮೇಶ್‌ ಪಂಡಿತ್, ಮೈಕೊ ನಾಗರಾಜ್, ಕುರಿ ರಂಗ‌

ನಾಯಕ ರೌದ್ರಾವತಾರ ತಾಳಿ ಖಡಕ್‌ ಡೈಲಾಗ್‌ ಹೇಳಬೇಕು. ಬಳಿಕ ಮಾರುದ್ದದ ಮಚ್ಚುಗಳನ್ನು ಬೀಸಬೇಕು. ಕೈಯಲ್ಲಿನ ಫಳ ಫಳ ಹೊಳೆವ ಗನ್‌ ಬುಲೆಟ್‌ ಉಗುಳಬೇಕು. ತಕ್ಷಣವೇ ಪುಡಿ ರೌಡಿಗಳ ಹೆಣ ಉರುಳಬೇಕು. ಆಗಲೇ ಭೂಗತಲೋಕದ ಕಥಾನಕ ಗರಿಗೆದರುವುದು. ಲಾಗಾಯ್ತಿನಿಂದಲೂ ಕನ್ನಡದ ಪ್ರೇಕ್ಷಕರು ಇಂತಹ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ‘ರಾಜಣ್ಣನ ಮಗ’ ಸಿನಿಮಾದ್ದೂ ಇದೇ ಕಥೆ.

ಅಪ್ಪ ಮತ್ತು ಮಗನ ಬಾಂಧವ್ಯದ ಕಥೆ ಹೇಳಲು ಚಿತ್ರದುದ್ದಕ್ಕೂ ಸಾಕಷ್ಟು ನೆತ್ತರು ಹರಿಸಿದ್ದಾರೆ ನಿರ್ದೇಶಕ ಕೋಲಾರ ಸೀನು. ಎಲ್ಲ ಹಳೆಯ ಸೂತ್ರಗಳನ್ನು ಬಳಸಿಕೊಂಡೇ ರೌಡಿಸಂ ಕಥೆ ಹೇಳಿದ್ದಾರೆ.

ಸಿನಿಮಾದ ಕೊನೆಯಲ್ಲಿ ನಾಯಕಿಯ ಮಡಿಲಲ್ಲಿ ನಾಯಕ ಅಸುನೀಗುವುದು ಎಲ್ಲ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಈ ಚಿತ್ರದಲ್ಲಿ ತಂದೆಯ ಮಡಿಲಲ್ಲಿ ಪುತ್ರನನ್ನು ಮಲಗಿಸಿದ್ದಾರೆ ಅಷ್ಟೇ. ಸಿನಿಮಾದ ಉದ್ದಕ್ಕೂ ಹರಿಸಿದ ರಕ್ತವನ್ನು ಮರೆಮಾಚಲು ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ ನೀಡಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಭೂಗತ ಜಗತ್ತಿನ ವೃತ್ತದಿಂದ ಆಚೆ ಜಿಗಿಯುವ, ನೋಡುಗರಿಗೆ ಹೊಸ ಸಂದೇಶ ರವಾನಿಸುವ ಉದ್ದೇಶವೇ ಈ ಚಿತ್ರಕ್ಕೆ ಇಲ್ಲ.

ಅಪ್ಪ, ಅಮ್ಮನ ಪ್ರೀತಿಯ ಚಿಲುಮೆಯಲ್ಲಿ ಬೆಳೆದ ಮಗ ಗೌರಿಶಂಕರ್. ರೌಡಿಯೊಬ್ಬನ ಕೊಲೆ ಆಪಾದನೆ ಮೇಲೆ ಜೈಲು ಸೇರುತ್ತಾನೆ. ಕಡುಬಡತನದಲ್ಲೂ ಶಿಸ್ತಿನಿಂದ ಬೆಳೆಸಿದ ಮಗ ಕೊಲೆಗಾರನಾದ ಎನ್ನುವುದು ಅಪ್ಪನ ಕೋಪ.

ಕಾಣದ ಕೈಗಳ ಕುತಂತ್ರಕ್ಕೆ ಸಿಲುಕಿ ಗೌರಿಶಂಕರ್‌ ಭೂಗತಲೋಕದ ದೊರೆಯಾಗುತ್ತಾನೆ. ಕೊನೆಗೆ, ತನ್ನಪ್ಪನ ಖಾಲಿ ನಿವೇಶನಕ್ಕೂ ಬೇಲಿ ಹಾಕುತ್ತಾನೆ. ಈ ನಡುವೆಯೇ ಎದುರಾಳಿಗಳೊಟ್ಟಿಗೆ ಸೆಣಸಾಡುವಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಶತ್ರುಗಳ ವಿರುದ್ಧ ಫೈಟಿಂಗ್‌ ಮಾಡುವಷ್ಟೇ ವೇಗವಾಗಿ ಆಕೆಯೊಟ್ಟಿಗೆ ಪ್ರೇಮವೂ ಆಗುತ್ತದೆ. ಕೊನೆಗೆ, ಮಗ ನಿರಪರಾಧಿ ಎನ್ನುವ ಸತ್ಯ ಅಪ್ಪ ರಾಜಣ್ಣನಿಗೆ ಗೊತ್ತಾಗುತ್ತದೆ. ಮಗ ಯಾರ ರಕ್ಷಣೆಗಾಗಿ ಜೈಲು ಸೇರಿದ ಎನ್ನುವುದೇ ಚಿತ್ರದ ತಿರುಳು. ಇದನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕಿದೆ.

ಚಿತ್ರದ ಮೊದಲಾರ್ಧ ಹೊಡಿಬಡಿ ದೃಶ್ಯಗಳಲ್ಲಿಯೇ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲೂ ಇದು ಮುಂದುವರಿಯುತ್ತದೆ. ಇದರಲ್ಲಿ ಛಾಯಾಗ್ರಾಹಕ ಆರ್‌. ಪ್ರಮೋದ್‌ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರ ಕೊಡುಗೆಯೂ ದೊಡ್ಡದಿದೆ. ಹರೀಶ್‌ ಜಲಗೆರೆ ಸಾಹಸ ದೃಶ್ಯಗಳಲ್ಲಿ ಮಿಂಚು ಹರಿಸಿದ್ದಾರೆ. ಅಪ್ಪನಾಗಿ ಚರಣ್‌ರಾಜ್‌ ಇಷ್ಟವಾಗುತ್ತಾರೆ. ಒಂದು ಹಾಡು ಗುನುಗುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT