ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರ್’ ಸಿನಿಮಾ ಸಂಘರ್ಷ ಅಂತ್ಯ

ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲು ಮುಂದಾದ ನಿರ್ಮಾಪಕರು
Last Updated 9 ನವೆಂಬರ್ 2018, 19:57 IST
ಅಕ್ಷರ ಗಾತ್ರ

ಚೆನ್ನೈ: ‘ಸರ್ಕಾರ್’ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಮತ್ತು ಕೆಲವು ಸಂಭಾಷಣೆಗಳನ್ನು ನಿಶ್ಶಬ್ದಗೊಳಿಸಲು ಚಿತ್ರದ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ, ವಿಜಯ್‌ ನಟನೆಯ ಈ ಚಿತ್ರದ ವಿರುದ್ಧ ಇನ್ನು ಮುಂದೆ ಯಾವುದೇ ಪ್ರತಿಭಟನೆ ನಡೆಸದಿರಲು ಎಐಎಡಿಎಂಕೆ ನಿರ್ಧರಿಸಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಹಾಗೂ ಅವರು ಜಾರಿಗೆ ತಂದಿದ್ದ ಕೆಲವು ಯೋಜನೆಗಳ ಬಗ್ಗೆ ಚಿತ್ರದಲ್ಲಿ ‘ಕೆಟ್ಟದಾಗಿ ಬಿಂಬಿಸಲಾಗಿದೆ’ ಎಂಬ ಕಾರಣಕ್ಕೆ ಎಐಎಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

‘ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿದ ಚಿತ್ರವನ್ನು ಪ್ರದರ್ಶನ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜಿಗೆ ಬರಲಾಗಿದೆ’ ಎಂದು ಚಲನಚಿತ್ರ ಮಾಲೀಕರ ಸಂಘ ಹೇಳಿತ್ತು.

‘ವಿವಾದ ಅಂತ್ಯಗೊಂಡಿದೆ. ಪ್ರತಿಭಟನೆ ನಡೆಸುವುದಿಲ್ಲ’ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಕಡಂಬೂರು ಸಿ.ರಾಜು ಹೇಳಿದ್ದಾರೆ. ರಾಜು ಅವರೇ ಮೊದಲ ಬಾರಿಗೆ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರದ ನಿರ್ಧಾರದಿಂದಾಗಿ ಚಿತ್ರ ತಯಾರಕರು ಮತ್ತು ವಿಜಯ್‌ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಚುನಾವಣೆ ವೇಳೆ ಪುಕ್ಕಟೆಯಾಗಿ ನೀಡುವ ಮಿಕ್ಸಿ ಮತ್ತು ಗ್ರೈಂಡರ್‌ಗಳನ್ನು ಸುಟ್ಟು ಹಾಕುವ ದೃಶ್ಯಗಳಿಗೆ ಈಗ ಕತ್ತರಿ ಹಾಕಲಾಗಿದೆ. ಇದಲ್ಲದೆ, ಜಯಲಲಿತಾ ಅವರನ್ನು ಉದ್ದೇಶಿಸಿ ಹೇಳುವ ರೀತಿಯಲ್ಲಿ ‘ಕೋಮಲವಲ್ಲಿ’ ಎಂಬ ಹೆಸರನ್ನು ಪ್ರಸ್ತಾಪಿಸುವ ಮಾತನ್ನು ನಿಶ್ಶಬ್ದಗೊಳಿಸಲಾಗಿದೆ.

‘ಚಿತ್ರದ ಆಕ್ಷೇಪಾರ್ಹ ದೃಶ್ಯಗಳು ಜನರಿಗೆ ನೋವುಂಟು ಮಾಡುತ್ತವೆ ಎಂಬುದನ್ನು ನಿರ್ಮಾಪಕರು ಅರಿತಿದ್ದಾರೆ. ಇದೀಗ ಇವುಗಳನ್ನು ತೆಗೆದುಹಾಕಲು ಒಪ್ಪಿರುವುದರಿಂದ ಜನರ ಭಾವನೆಗೆ ಬೆಲೆ ಕೊಟ್ಟಂತಾಗಿದೆ’ ಎಂದು ರಾಜು ಹೇಳಿದ್ದಾರೆ.

‘ಮುಖ್ಯಮಂತ್ರಿ ಪಳನಿಸ್ವಾಮಿಯವರಿಂದ ಹಿಡಿದು ಸಾಮಾನ್ಯರವರೆಗೆ ಎಐಎಡಿಎಂಕೆಯ ಎಲ್ಲ ಕಾರ್ಯಕರ್ತರೂ ಜಯಲಲಿತಾ ಅವರನ್ನು ದೇವರು ಎಂದೇ ಪರಿಗಣಿಸುತ್ತಾರೆ. ಹೀಗಾಗಿ, ಚಿತ್ರದ ಬಗ್ಗೆ ನಮ್ಮೆಲ್ಲರ ವಿರೋಧ ಹೃತ್ಪೂರ್ವಕವಾದುದು’ ಎಂದು ಹೇಳಿದ್ದಾರೆ. ಈ ಮೂಲಕ, ದೀಪಾವಳಿಯಂದು ಬಿಡುಗಡೆಯಾದ ‘ಸರ್ಕಾರ್‌’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳ ಎದುರು ಪಕ್ಷದ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸನ್‌ ಪಿಕ್ಚರ್ಸ್‌ ಸಂಸ್ಥೆಯು ಚಿತ್ರವನ್ನು ನಿರ್ಮಿಸಿದೆ.

ರಜನಿಕಾಂತ್‌ ಆಕ್ರೋಶ
‘ಸರ್ಕಾರ್‌’ ಚಿತ್ರದಲ್ಲಿನ ಕೆಲವು ದೃಶ್ಯಗಳ ವಿರುದ್ಧ ಆಡಳಿತಾರೂಢ ಎಐಎಡಿಎಂಕೆ ನಡೆಸಿದ ಪ್ರತಿಭಟನೆಗೆ ಹಿರಿಯ ನಟ ರಜನಿಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವುದರ ಹಿಂದಿನ ತರ್ಕವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರದಲ್ಲಿನ ದೃಶ್ಯಗಳನ್ನು ತೆಗೆದುಹಾಕಬೇಕು ಎಂಬುದು ಮತ್ತು ಚಿತ್ರದ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡುವುದು ಕಾನೂನಿಗೆ ವಿರುದ್ಧವಾದುದು ಎಂದು ರಜನಿ ಟ್ವೀಟ್‌ನಲ್ಲಿ ಖಂಡಿಸಿದ್ದಾರೆ.

27ರವರೆಗೆ ನಿರ್ದೇಶಕ ಮುರುಗದಾಸ್‌ ಬಂಧಿಸದಂತೆ ಕೋರ್ಟ್‌ ಸೂಚನೆ
ಚೆನ್ನೈ (ಪಿಟಿಐ):
‘ಸರ್ಕಾರ್’ ಚಿತ್ರದ ನಿರ್ದೇಶಕ‌ ಎ.ಆರ್. ಮುರುಗದಾಸ್‌ ಅವರನ್ನು ಇದೇ 27ರವರೆಗೆ ಬಂಧಿಸದಂತೆ ಮದ್ರಾಸ್ ಹೈಕೋರ್ಟ್‌ ಪೊಲೀಸರಿಗೆ ಶುಕ್ರವಾರ ತಿಳಿಸಿದೆ.

ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾದ ನಂತರ ಬಂಧನದ ಭೀತಿ ಎದುರಿಸುತ್ತಿದ್ದ ಮುರುಗದಾಸ್‌, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಈ ಮಧ್ಯಂತರ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT