ಶುಕ್ರವಾರ, ಮಾರ್ಚ್ 31, 2023
33 °C

ರಿಚರ್ಡ್‌ ಆಂಟನಿ ರಕ್ಷಿತ್‌ ಮುಂದಿನ ಸಿನಿಮಾ, ಸದ್ಯಕ್ಕಿಲ್ಲ ಕಿರಿಕ್‌ ಪಾರ್ಟಿ–2

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಚಾರ್ಲಿ 777’ ಭರ್ಜರಿ ಗೆಲುವಿನ ಖುಷಿಯಲ್ಲಿರುವ ನಟ ರಕ್ಷಿತ್‌ ಶೆಟ್ಟಿ ತಮ್ಮ ಮುಂದಿನ ಚಿತ್ರಗಳ ಕುರಿತು ಟ್ವೀಟ್‌ ಮಾಡಿದ್ದಾರೆ.  ಈ ಮೂಲಕ ಅಭಿಮಾನಿಗಳಿಗೆ ಮುಂದಿನ ಹೆಜ್ಜೆಯ ಸಣ್ಣ ಮಾಹಿತಿಯನ್ನು ನೀಡಿದ್ದಾರೆ.

ಸದ್ಯ ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಅಂತಿಮ ಕೆಲಸ ನಡೆಯುತ್ತಿದೆ.  ಚಾರ್ಲಿ ಬಳಿಕ ಮೊದಲು ತೆರೆಗೆ ಬರುವ ರಕ್ಷಿತ್‌ ಶೆಟ್ಟಿ ಚಿತ್ರವಿದು. ಇದಾದ ಬಳಿಕ ರಿಚರ್ಡ್‌ ಆಂಟನಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಚಿತ್ರದ ಟೈಟಲ್ ವಿಡಿಯೊ ಬಿಡುಗಡೆಗೊಂಡಿದೆ. ಸ್ವತಃ ರಕ್ಷಿತ್‌ ಶೆಟ್ಟಿ ಬರೆದು, ನಿರ್ದೇಶನ ಮಾಡುತ್ತಿರುವ ಈ ಚಿತ್ರ ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ರೂಪ. ಆದರೆ ಕಥೆ, ಟ್ರೀಟ್‌ಮೆಂಟ್‌ ಎಲ್ಲವೂ ಅದಕ್ಕಿಂತ ಭಿನ್ನವಾಗಿರಲಿದೆ ಎಂದು ಈ ಹಿಂದೆ ರಕ್ಷಿತ್‌ ಹೇಳಿದ್ದರು.

ಲಾಕ್‌ಡೌನ್‌ನಲ್ಲಿ ಬರೆದು ಮುಗಿಸಿದ್ದ ಕಥೆ ‘ಮಿಡ್‌ ವೇ ಟು ಮೋಕ್ಷ’. ಇದರಲ್ಲಿ ರಕ್ಷಿತ್‌ ನಟನೆ ಮಾತ್ರ ಮಾಡಲಿದ್ದಾರೆ, ಅವರ ತಂಡದ ಯಾರಾದರೂ ನಿರ್ದೇಶನ ಮಾಡುತ್ತಾರೆ ಎಂಬ ಮಾಹಿತಿ ಇದೆ.  ಆದಾಗ್ಯೂ ಈ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ. 

ಪುಣ್ಯಕೋಟಿ ರಕ್ಷಿತ್‌ ಶೆಟ್ಟಿಯವರ ಹಿಂದಿನ ಕನಸು. ದೊಡ್ಡ ಬಜೆಟ್‌ನ ಚಿತ್ರವನ್ನು 2 ಭಾಗಗಳಲ್ಲಿ ತೆರೆಗೆ ತರಲು ಅವರ ನಿರ್ಮಾಣ ಸಂಸ್ಥೆ ಆಲೋಚಿಸುತ್ತಿದೆ. ಆದರೆ ಈ ಚಿತ್ರ ತಕ್ಷಣಕ್ಕೆ ಕಾರ್ಯರೂಪಕ್ಕೆ ಬರುವುದು ಕಷ್ಟ. ಚಿತ್ರದ ಪ್ರಾಥಮಿಕ ಕೆಲಸಗಳು ನಡೆಯುತ್ತಿದ್ದು, ಪುಣ್ಯಕೋಟಿ ಚಿತ್ರೀಕರಣಕ್ಕೆ ಸಾಕಷ್ಟು ಸಮಯವಿದೆ ಎನ್ನುತ್ತಿವೆ ಮೂಲಗಳು. 

ನಟ ರಿಷಬ್‌ ಶೆಟ್ಟಿ ಕಾಂತಾರ ಯಶಸ್ಸಿನ ಬಳಿಕ ಹಿಂದಿನ ಎಲ್ಲ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಅವರದೇ ನಟನೆಯ ಬೆಲ್‌ಬಾಟಂ–2 ಸ್ಕ್ರಿಪ್ಟ್‌ ಕೆಲಸ ಮುಗಿದಿದೆ. ಆದರೆ ಅವರು ಕಾಂತಾರ–2 ತೆರೆಗೆ ಬರುವವರೆಗೂ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಆಪ್ತ ವಲಯ ಹೇಳುತ್ತಿದೆ. ಹೀಗಾಗಿ ಬೆಲ್‌ ಬಾಟಂ ತಂಡ ಚಿತ್ರದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಅದರ ಬೆನ್ನಲ್ಲೇ ಕಿರಿಕ್‌ ಪಾರ್ಟಿ–2 ಕೂಡ ಸದ್ಯಕ್ಕಿಲ್ಲ ಎಂದು  ಸ್ವತಃ ರಕ್ಷಿತ್‌ ಶೆಟ್ಟಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಪರಂವ ನಿರ್ಮಾಣದ ‘ಬ್ಯಾಚುಲರ್‌ ಪಾರ್ಟಿ’ಯಲ್ಲೂ ರಿಷಭ್‌ ನಟಿಸಬೇಕಿತ್ತು. ಆದರೆ ಆ ಜಾಗಕ್ಕೆ ಲೂಸ್‌ ಮಾದ ಯೋಗಿ ಬಂದಿರುವುದು ಬಹುತೇಕ ಖಚಿತವಾಗಿದೆ. ಇದೀಗ ಕಿರಿಕ್‌ ಪಾರ್ಟಿ–2 ತಂಡ ಕೂಡ ತನ್ನ ಯೋಚನೆ ಬದಲಿಸಿಕೊಂಡಿದೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲು ದಾರಿ’ಯಂತಹ ಭಿನ್ನ ಸಿನಿಮಾ ನೀಡಿರುವ ಹೇಮಂತ್‌ ರಾವ್‌ ಅವರ ‘ಸಪ್ತಸಾಗರದಾಚೆ ಎಲ್ಲೋ’ ಪೋಸ್ಟರ್‌ನಿಂದಲೇ ಸಾಕಷ್ಟು ಭರವಸೆ ಮೂಡಿಸಿರುವ ಸಿನಿಮಾ. ಹೀಗಾಗಿ ರಕ್ಷಿತ್‌ ಶೆಟ್ಟಿ ಅಭಿಮಾನಿಗಳು ಕೂಡ ಈ ಸಿನಿಮಾ ತೆರೆಗೆ ಬರುವುದನ್ನು ಕಾಯುತ್ತಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು