ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ಮಂಗೇಶ್ಕರ್‌ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

Last Updated 6 ಫೆಬ್ರುವರಿ 2022, 5:36 IST
ಅಕ್ಷರ ಗಾತ್ರ

ನವದೆಹಲಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ (92) ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೋವಿಡ್‌–19 ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಲತಾ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಾಗಿದ್ದರು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದ್ದಾರೆ.

‘ಲತಾ ಜೀ ಅವರ ನಿಧನವು ನನ್ನ ಹೃದಯವನ್ನು ಕಲುಕಿತು. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಇದೇ ಅನುಭವ ಆಗಿದೆ. ಲತಾ ಅವರು ತಮ್ಮ ಹಾಡುಗಳ ಮೂಲಕ ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಿದ್ದಾರೆ. ಭಾರತ ರತ್ನ ಪುರಸ್ಕೃತೆ ಲತಾ ಅವರ ಸಾಧನೆಗಳು ಅನುಪಮವಾಗಿ ಉಳಿಯುತ್ತವೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್‌ ಮಾಡಿದ್ದಾರೆ.

‘ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ. ಅದು ನನಗೆ ಸಿಕ್ಕ ಗೌರವವೆಂದು ಭಾವಿಸುತ್ತೇನೆ. ಅವರೊಂದಿಗಿನ ನನ್ನ ಸಂಭಾಷಣೆಗಳು ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ನನ್ನ ಸಹ ಭಾರತೀಯರೊಂದಿಗೆ ನಾನು ದುಃಖಿತನಾಗಿದ್ದೇನೆ. ಅವರ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ತಿಳಿಸುತ್ತೇನೆ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

‘ಸಂಗೀತ ಕ್ಷೇತ್ರಕ್ಕೆ ಲತಾ ದೀದಿಯವರ ಕೊಡುಗೆ ಅಪಾರ. ಅವರು ತಮ್ಮ ಸುಮಧುರ ಕಂಠದ ಮೂಲಕ ಮೋಡಿ ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಭಾರತೀಯ ಸಂಗೀತದ ಮಾಧುರ್ಯವನ್ನು ಪಸರಿಸಿದ್ದಾರೆ. ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರ ಸಾವು ನನಗೆ ವೈಯಕ್ತಿಕ ನಷ್ಟವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

‘ಕಾಲಕಾಲಕ್ಕೆ ಲತಾ ದೀದಿಯವರ ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅಪ್ರತಿಮ ದೇಶಭಕ್ತಿ, ಮಧುರವಾದ ಮಾತು, ಸಜ್ಜನಿಕೆ, ಲತಾ ಅವರ ನೆನಪು ಸದಾ ನಮ್ಮೊಂದಿಗಿರುತ್ತದೆ. ದೇವರು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ' ಎಂದು ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

‘ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಲತಾ ಅವರ ಧ್ವನಿಯು ಅಮರವಾಗಿರುತ್ತದೆ. ಅಭಿಮಾನಿಗಳ ಹೃದಯದಲ್ಲಿ ಸದಾ ಕಾಲ ಪ್ರತಿಧ್ವನಿಸುತ್ತಲೇ ಇರುತ್ತದೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT