ಶನಿವಾರ, ಜನವರಿ 25, 2020
28 °C

ರಶ್ಮಿಕಾ ಮಂದಣ್ಣಗೆ ಡಾನ್ಸ್‌ ಬರಲ್ಲ? ಕಾಲೆಳೆದ ಟಾಲಿವುಡ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಆ್ಯಕ್ಷನ್‌ ದೃಶ್ಯಗಳಲ್ಲಿ ನಟಿಸುವುದೆಂದರೆ ‘ಟಾಲಿವುಡ್‌ ಪ್ರಿನ್ಸ್‌’ ಮಹೇಶ್‌ಬಾಬುವಿಗೆ ನೀರು ಕುಡಿದಷ್ಟೇ ಸಲೀಸು. ಭಾವುಕ ದೃಶ್ಯಗಳಲ್ಲೂ ಅವರದ್ದು ಲೀಲಾಜಾಲವಾದ ನಟನೆ. ಅವರು ಕಾಮಿಡಿಗೂ ಸೈ. ಆದರೆ, ಡಾನ್ಸ್‌ ಎಂದರೆ ಪ್ರಿನ್ಸ್‌ಗೆ ಇರುಸುಮುರುಸು. ಒಂದರ್ಥದಲ್ಲಿ ಅಲರ್ಜಿ ಎಂದು ಕರೆದರೂ ತಪ್ಪಲ್ಲ. ಅವರೊಬ್ಬ ಅತ್ಯುತ್ತಮ ಡಾನ್ಸರ್‌ ಅಲ್ಲ ಎನ್ನುವುದು ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಸಾಬೀತಾಗಿದೆ. 

ತೆಲುಗು ಚಿತ್ರರಂಗದಲ್ಲಿ ‘ಡಾನ್ಸ್‌’ ಎಂದಾಕ್ಷಣ ಥಟ್ಟನೆ ನೆನಪಾಗುವ ಎರಡು ಹೆಸರುಗಳೆಂದರೆ ಜೂನಿಯರ್‌ ಎನ್‌ಟಿಆರ್‌ ಮತ್ತು ಅಲ್ಲು ಅರ್ಜುನ್‌. ನೃತ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಹೆಗ್ಗಳಿಕೆ ಈ ಇಬ್ಬರದ್ದು. ಪರದೆ ಮೇಲೆ ಅವರು ನೃತ್ಯ ಮಾಡುತ್ತಿದ್ದರೆ ಪ್ರೇಕ್ಷಕರ ಕಣ್ಣು ಉಳಿದವರ ಕಡೆ ಹೊರಳುವುದು ಕಡಿಮೆಯೇ. 

ಮಹೇಶ್‌ಬಾಬು ನಟನೆಯ ‘ಸರಿಲೇರು ನೀಕೆವ್ವೆರು’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ಅವರದು ಮೇಜರ್‌ ಅಜಯ್‌ ಕೃಷ್ಣನ ಪಾತ್ರ. ಅಂದಹಾಗೆ ಈ ಚಿತ್ರಕ್ಕೆ ಕರ್ನಾಟಕದ ಕ್ರಷ್‌ ರಶ್ಮಿಕಾ ಮಂದಣ್ಣ ನಾಯಕಿ. ಅನಿಲ್ ರವಿಪುರಿ ನಿರ್ದೇಶನದ ಈ ಸಿನಿಮಾ ಜನವರಿ 11ರಂದು ಬಿಡುಗಡೆಯಾಗುತ್ತಿದೆ.

ಈಗಾಗಲೇ, ದೇವಿಶ್ರೀಪ್ರಸಾದ್‌ ಸಂಗೀತ ಸಂಯೋಜನೆಯ ಐಟಂ ಸಾಂಗ್‌ಗೆ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯ ಸೊಂಟ ಬಳುಕಿಸಿದ್ದೂ ಆಗಿದೆ. ಆದರೆ, ಹೊಸ ಸುದ್ದಿ ಅದಲ್ಲ. ಮಹೇಶ್‌ಬಾಬು ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ರಶ್ಮಿಕಾ ಇತ್ತೀಚೆಗೆ ನೀಡಿರುವ ಹೇಳಿಕೆ ಸಾಕಷ್ಟು ಟ್ರೋಲ್‌ ಆಗಿದೆ. ಅವರೊಬ್ಬರೇ ಟೀಕೆಗೆ ಗುರಿಯಾಗಿಲ್ಲ. ಮಹೇಶ್‌ಬಾಬು ಅವರನ್ನೂ ಟ್ರೋಲಿಗರು ಕಾಲೆಳೆದಿದ್ದಾರೆ.

ಪತ್ರಕರ್ತರ ಮುಂದೆ ಮಾತನಾಡಿದ ರಶ್ಮಿಕಾ, ‘ಹಾಡಿನ ಶೂಟಿಂಗ್‌ಗೆ ಬರುವುದಕ್ಕೂ ಮೊದಲು ಮಹೇಶ್‌ಬಾಬು ಸಾಕಷ್ಟು ತಾಲೀಮು ಮಾಡಿಕೊಂಡೇ ಬರುತ್ತಿದ್ದರು. ನನ್ನ ಡಾನ್ಸ್‌ ಸುಧಾರಣೆಯಾಗಲು ಅವರೇ ಪ್ರೇರಣೆ. ಸೆಟ್‌ನಲ್ಲಿ ಯಾವುದನ್ನು ಮಾಡಬಾರದು; ಯಾವುದನ್ನು ಮಾಡಬೇಕು ಎಂಬುದನ್ನು ಅವರಿಂದ ಕಲಿತುಕೊಂಡೆ. ಅವರೇ ನನಗೆ ಸ್ಫೂರ್ತಿ’ ಎಂದು ಕೊಂಡಾಡಿದ್ದಾರೆ.

ಇಷ್ಟಷ್ಟು ಹೇಳಿ ರಶ್ಮಿಕಾ ಸುಮ್ಮನಾಗಿಲ್ಲ. ‘ಅವರೊಟ್ಟಿಗೆ ಡಾನ್ಸ್‌ ಮಾಡಲು ನನಗೆ ಭಯವಾಗುತ್ತಿತ್ತು. ಅವರೊಬ್ಬ ಒಳ್ಳೆಯ ಡಾನ್ಸರ್‌’ ಎಂದು ಬಣ್ಣಿಸಿದ್ದಾರೆ. ಅವರ ಈ ಬಣ್ಣನೆಯೇ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹೇಶ್‌ಬಾಬು ಅವರ ಡಾನ್ಸ್‌ ಮತ್ತೊಮ್ಮೆ ಟ್ರೋಲ್‌ಗೆ ಗುರಿಯಾಗಿದೆ.

‘ಮಹೇಶ್‌ಬಾಬು ಜೊತೆಗೆ ಹೆಜ್ಜೆ ಹಾಕಲು ರಶ್ಮಿಕಾ ಭಯಪಟ್ಟಿದ್ದಾರೆ. ಸುಕುಮಾರ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ‘ಸ್ಟೈಲಿಸ್‌ ಸ್ಟಾರ್‌’ ಅಲ್ಲು ಅರ್ಜುನ್‌ ಜೊತೆಗೆ ಅವರು ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್‌ ಅತ್ಯುತ್ತಮ ಡಾನ್ಸರ್‌. ಅವರ ಮುಂದೆ ರಶ್ಮಿಕಾ ಸೊಂಟ ಬಳುಕಿಸಲು ಕಷ್ಟಪಡಬೇಕಿದೆ. ನೃತ್ಯ ಮಾಡುವ ಬದಲು ಪ್ರತಿಮೆಯ ನೋಟ ಬೀರುತ್ತಾರೆಯೇ?’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು