ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಸ್ಟಾರ್ ನಟಿ. ಆಕೆಯ ಬಣ್ಣದ ಬುಟ್ಟಿಯಲ್ಲಿ ಹಲವು ಸಿನಿಮಾಗಳಿರುವುದು ಎಲ್ಲರಿಗೂ ಗೊತ್ತಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಮತ್ತು ‘ಮೆಗಾಸ್ಟಾರ್’ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದಲ್ಲೂ ಆಕೆ ನಟಿಸುತ್ತಿದ್ದಾರೆ.
ರಶ್ಮಿಕಾ ತೆಲುಗಿಗೆ ಹಾರಿ ಎರಡು ವರ್ಷಗಳೇ ಕಳೆದಿವೆ. ‘ಸರಿಲೇರು ನೀಕೆವ್ವರು’, ‘ಭೀಷ್ಮ’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಆಕೆಗೆ ಅವಕಾಶದ ಬಾಗಿಲು ತೆರೆದಿದೆ. ತೆಲುಗು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗುತ್ತಿರುವ ಪರಿಣಾಮ ಹೈದರಾಬಾದ್‌ನಲ್ಲಿಯೇ ನೆಲೆಯೂರಲು ಆಕೆ ನಿರ್ಧರಿಸಿದ್ದಾರೆ. ಅದಕ್ಕಾಗಿಯೇ 3ಬಿಎಚ್‌ಕೆ ಫ್ಲ್ಯಾಟ್ ಖರೀದಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಹೊರಬಿದ್ದಿದೆ.
ಆಕೆ ಐಶಾರಾಮಿ ಫ್ಲ್ಯಾಟ್ ಖರೀದಿಸಿರುವುದು ಹೈದರಾಬಾದ್‌ನ ಗಚ್ಚಿಬೌಲಿ ಪ್ರದೇಶದಲ್ಲಿ. ರಾಮೋಜಿ ಫಿಲ್ಮ್ ಸಿಟಿ ಮತ್ತು ರಾಮಾನಾಯ್ಡು ಸ್ಟುಡಿಯೊಗಳಿಗೆ ಈ ಪ್ರದೇಶ ತೀರ ಹತ್ತಿರದಲ್ಲಿದೆಯಂತೆ. ಶೂಟಿಂಗ್‌ಗೆ ತೆರಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅವರು ಈ ಪ್ರದೇಶದಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ಎಂಬ ಸುದ್ದಿಯಿದೆ.
ದಶಕದ ಹಿಂದೆ ತೆಲುಗು ಸಿನಿಮಾಗಳಲ್ಲಿ ನಟಿಸಲು ವಿವಿಧೆಡೆಯಿಂದ ಹೈದರಾಬಾದ್‌ಗೆ ಬರುತ್ತಿದ್ದ ನಟೀಮಣಿಯರು ಐಶಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು. ಶೂಟಿಂಗ್ ಮುಕ್ತಾಯ ಬಳಿಕ ತಮ್ಮ ಮೂಲ ನಗರಗಳಿಗೆ ತೆರಳುತ್ತಿದ್ದುದು ಉಂಟು. ಅವರ ಹೋಟೆಲ್ ವೆಚ್ಚವನ್ನು ನಿರ್ಮಾಪಕರೇ ಭರಿಸಬೇಕಿತ್ತು. ಕೆಲವೊಮ್ಮೆ ಇದು ನಟಿಯರಿಗೆ ನೀಡುವ ಸಂಭಾವನೆಯ ಮೊತ್ತದಷ್ಟೇ ಇರುತ್ತಿತ್ತು. ಆ ನಂತರ ನಿರ್ಮಾಪಕರೇ ಅಪಾರ್ಟ್‌ಮೆಂಟ್ ಖರೀದಿಸಿ ನಾಯಕಿಯರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಸಂಪ್ರದಾಯ ಚಾಲ್ತಿಗೆ ಬಂತು. ಐಶಾರಾಮಿ ಹೋಟೆಲ್‌ಗಳ ದುಬಾರಿ ಬಾಡಿಗೆಯಿಂದ ತಪ್ಪಿಸಿಕೊಳ್ಳುವುದೇ ಇದರ ಹಿಂದಿನ ಉದ್ದೇಶವಾಗಿತ್ತು.
ಈಗ ಸ್ಟಾರ್ ನಟಿಯರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ಶೂಟಿಂಗ್, ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹೈದರಾಬಾದ್‌ನಲ್ಲಿಯೇ ಕೇಂದ್ರೀಕೃತವಾಗಿವೆ. ಹಾಗಾಗಿಯೇ, ಸ್ಟಾರ್ ನಟಿಯರು ಕೂಡ ಮುತ್ತಿನನಗರಿಯಲ್ಲಿಯೇ ಫ್ಲ್ಯಾಟ್ ಖರೀದಿಸಿ ವಾಸ್ತವ್ಯ ಹೂಡುತ್ತಿದ್ದಾರೆ.
ನಟಿಯರಾದ ಸಮಂತಾ ಅಕ್ಕಿನೇನಿ, ರಾಶಿ ಖನ್ನಾ, ರಕುಲ್ ಪ್ರೀತ್ ಸಿಂಗ್ ಹೈದರಾಬಾದ್‌ನಲ್ಲಿಯೇ ಫ್ಲ್ಯಾಟ್ ಖರೀದಿಸಿ ನೆಲೆಸಿರುವುದೇ ಇದಕ್ಕೆ ತಾಜಾ ನಿದರ್ಶನ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.