ಗುರುವಾರ , ನವೆಂಬರ್ 26, 2020
22 °C

ಕೈಗೂಡಿದ ಕನಸುಗಾರನ ‘ಕನ್ನಡಿ’ಗ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರೇಜಿಸ್ಟಾರ್‌ ರವಿಚಂದ್ರನ್ ಕನ್ನಡ ಚಿತ್ರರಂಗದ ಅಪ್ರತಿಮ ಕನಸುಗಾರ. ದಶಕಗಳು ಉರುಳಿದರೂ ಅವರ ಕಲ್ಪನೆ ಮಾಸುವುದಿಲ್ಲ. ಇದಕ್ಕೆ ನಿದರ್ಶನ ‘ಕನ್ನಡಿಗ’ ಚಿತ್ರ. ಬರೋಬ್ಬರಿ ಮೂವತ್ತು ವರ್ಷಗಳ ಹಿಂದೆ ಅವರು ‘ಕನ್ನಡಿಗ’ ಹೆಸರಿನ ಶೀರ್ಷಿಕೆ ನೋಂದಾಯಿಸಿದ್ದರು. ಅದಾಗಿ ಇಪ್ಪತ್ತು ವರ್ಷಗಳು ಕಳೆದ ನಂತರ ನಿರ್ಮಾಪಕ ಎನ್.ಎಸ್. ರಾಜ್ ಕುಮಾರ್ ರವಿಚಂದ್ರನ್ ಬಳಿ ಹೋಗಿ ‘ಕನ್ನಡಿಗ’ ಶೀರ್ಷಿಕೆ ಬಿಟ್ಟುಕೊಡುವಂತೆ ಕೋರಿಕೆ ಇಟ್ಟಿದ್ದರಂತೆ. ಆದರೆ, ರವಿಚಂದ್ರನ್ ‘ಕನ್ನಡಿಗ ಟೈಟಲ್‌ ಬಹಳ ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿದ್ದೀನಿ. ಆ ಟೈಟಲ್ಲಿನ ಸಿನಿಮಾದಲ್ಲಿ ನಾನೇ ನಟಿಸಬೇಕು. ಕೊಡಲು ಸಾಧ್ಯವಿಲ್ಲ’ ಎಂದಿದ್ದರಂತೆ. ಅದಕ್ಕೆ ಬೇಸರಿಸಿಕೊಳ್ಳದ ರಾಜ್ ಕುಮಾರ್ ‘ವೀರಕನ್ನಡಿಗ’ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದರು. ಈಗ ಇದೇ ಎನ್.ಎಸ್. ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ, ರವಿಚಂದ್ರನ್ ಅವರೇ ನಟಿಸುತ್ತಿರುವ ಐತಿಹಾಸಿಕ ಕಥಾಹಂದರದ ‘ಕನ್ನಡಿಗ’ ಚಿತ್ರ ಸೆಟ್ಟೇರಿದೆ.

ಈ ಚಿತ್ರಕ್ಕೆ ಬಿ.ಎಂ. ಗಿರಿರಾಜ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಶಿವರಾಜ್ ಕುಮಾರ್ ಆರಂಭ ಫಲಕ ತೋರಿಸಿ, ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡಿ ‘ಕನ್ನಡಿಗ’ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ನಾಡಿನ ಇತಿಹಾಸ ದಾಖಲಿಸುವಲ್ಲಿ ಲಿಪಿಕಾರರ ವಂಶ ನೀಡಿರುವ ಕೊಡುಗೆಯನ್ನು ಕಥಾವಸ್ತುವಾಗಿಸಿಕೊಂಡು 1858ರ ನಂತರದ ಕಾಲಘಟ್ಟವನ್ನು ‘ಕನ್ನಡಿಗ’ನೊಂದಿಗೆ ಮರುಸೃಷ್ಟಿಸಲಾಗುತ್ತಿದೆ. ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ.

ಸಂಕಮ್ಮಬ್ಬೆಯಾಗಿ ಸ್ವಾತಿ ಚಂದ್ರಶೇಖರ್, ಕಿಟೆಲ್ ಪಾತ್ರಕ್ಕೆ ಜೆಮಿ ವಾಲ್ಟರ್, ಕಮರೀಲ ಭಟ್ಟನಾಗಿ ಚಿ. ಗುರುದತ್, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ ಮತ್ತು ಹರಿಗೋಪಾಲನ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಲಿದ್ದಾರೆ. ರಾಣಿ ಚಿನ್ನಬೈರಾದೇವಿ ಎಂಬ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

ನೂರೈವತ್ತು ವರ್ಷಕ್ಕೂ ಹಿಂದಿನ ಕಥೆ ‘ಕನ್ನಡಿಗ’ನದ್ದಾಗಿದ್ದು, ಪಾತ್ರಗಳ ಜೊತೆಗೆ ಅಂದಿನ ಪರಿಸರ, ಕಟ್ಟಡಗಳ ಮರುಸೃಷ್ಟಿ ನಿಜಕ್ಕೂ ಸವಾಲಿನ ಸಂಗತಿ. ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಮತ್ತು ಚಿತ್ರತಂಡ ಸಾಕಷ್ಟು ಜನ ಇತಿಹಾಸಕಾರರನ್ನು ಸಂಪರ್ಕಿಸಿ, ಹಲವಾರು ಕೃತಿಗಳನ್ನು ಪರಾಮರ್ಶಿಸಿ  ಸೆಟ್‌ಗಳನ್ನು ರೂಪಿಸುತ್ತಿದ್ದಾರೆ. ಸಾಗರ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಜಿ.ಎಸ್.ವಿ. ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು