ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತಾರ: ಬಾಲಿವುಡ್‌ ಸಿನಿಮಾಗಳಿಗೆ ಸವಾಲೊಡ್ಡಲಿದೆಯಾ?

Last Updated 13 ಅಕ್ಟೋಬರ್ 2022, 9:01 IST
ಅಕ್ಷರ ಗಾತ್ರ

ಕನ್ನಡದಲ್ಲಿ ಅತ್ಯಂತ ಯಶಸ್ಸು ಕಂಡ ಕಾಂತಾರ ಸಿನಿಮಾ ಅ.14ರಂದು ಹಿಂದಿ ಭಾಷೆಯಲ್ಲಿ ಡಬ್‌ ಆಗಿ ಬಿಡುಗಡೆಗೊಳ್ಳುತ್ತಿದೆ. 2500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿರುವುದಾಗಿ ಹೊಂಬಾಳೆ ಫಿಲಂಸ್‌ ಹೇಳಿದೆ.

ಶುಕ್ರವಾರ ಬಿಡುಗಡೆಗೊಳ್ಳುತ್ತಿರುವ ‘ಡಾಕ್ಟರ್‌ ಜಿ’ ಮತ್ತು ‘ಕೋಡ್‌ ನೇಮ್‌ ತಿರಂಗ’ಗಳಿಗೆ ಕಾಂತಾರ ಸವಾಲಾಗಲಿದೆಯಾ ಎಂಬ ಲೆಕ್ಕಾಚಾರ ಆರಂಭವಾಗಿದೆ. ಸುಮಾರು 800 ಸ್ಕ್ರೀನ್‌ಗಳಲ್ಲಿ ಕಾಂತಾರ ಪ್ರದರ್ಶನಗೊಳ್ಳುವ ನಿರೀಕ್ಷೆಯಿದ್ದು, ಟಿಕೆಟ್‌ ದರ ₹150 ಇರುವುದು , ಚಿತ್ರದ ಕುರಿತು ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಈ ವಾರದ ಬಾಲಿವುಡ್‌ ಸಿನಿಮಾಗಳಿಗೆ ಸವಾಲಾಗಬಹುದು ಎನ್ನಲಾಗುತ್ತಿದೆ.

ಆಯುಷ್‌ಮಾನ್‌ ಖುರಾನ ಅವರ ‘ಡಾಕ್ಟರ್‌ ಜಿ’ ಸಿನಿಮಾ ತಂಡ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇಬ್ಬರು ಸ್ಟಾರ್‌ ನಟರು ಇರುವುದರಿಂದ ಜೊತೆಗೆ ಹಾಸ್ಯಭರಿತ ಚಿತ್ರವಾಗಿರುವುದರಿಂದ ಕಾಂತಾರ ಇದಕ್ಕೆ ಹೆಚ್ಚಿನ ಪರಿಣಾಮ ಬೀರಲಾರದು ಎನ್ನಲಾಗುತ್ತಿದೆ.

ಬಾಲಿವುಡ್‌ ಸಿನಿಮಾದ ವಹಿವಾಟು ವಿಶ್ಲೇಷಕ ತರಣ್‌ ಆದರ್ಶ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಹಿಂದಿ ಬಿಡುಗಡೆ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದಷ್ಟು ಜನ ಸಿನಿಮಾಕ್ಕೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದಷ್ಟು ಜನ ಡಬ್ಬಿಂಗ್ ಸಿನಿಮಾ ಎಂಬ ತಾತ್ಸಾರ ತೋರಿದ್ದಾರೆ.

ಬಾಲಿವುಡ್‌ನ ಜನಪ್ರಿಯ ಸಿನಿಮಾ ವಹಿವಾಟು ವಿಶ್ಲೇಷಕ ತರಣ್‌, ಕನ್ನಡ ಚಿತ್ರರಂಗಕ್ಕೆ ಇದೊಂದು ಅದ್ಭುತ ವರ್ಷ ಎಂದು ಬಣ್ಣಿಸಿದ್ದಾರೆ. ಕೆಜಿಎಫ್‌–2, ಜೇಮ್ಸ್‌, ವಿಕ್ರಾಂತ್‌ ರೋಣ, ಚಾರ್ಲಿ, ಕಾಂತಾರ ಅತ್ಯುತ್ತಮ ವಹಿವಾಟು ದಾಖಲಿಸಿವೆ ಎಂಬುದಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಆದರೆ ಕನ್ನಡ ಭಾಷೆಯಲ್ಲೇ ಮುಂಬೈನಲ್ಲಿ ಬಿಡುಗಡೆಯಾದ ಕಾಂತಾರಕ್ಕೆ ಅದ್ಬುತ ಪ್ರತಿಕ್ರಿಯೆ ಲಭಿಸಿತ್ತು. 11 ಸ್ಕ್ರೀನ್‌ನಿಂದ 45ಕ್ಕೂ ಅಧಿಕ ಸ್ಕ್ರೀನ್‌ಗೆ ಶೋ ಹೆಚ್ಚಾಗಿದೆ. ಚೆನ್ನೈ, ಹೈದರಾಬಾದ್‌ ಸೇರಿದಂತೆ ಇತರ ಪ್ರಮುಖ ನಗರದಲ್ಲಿ ಕಾಂತಾರ ಕನ್ನಡ ಅವತರಣಿಕೆಯೇ ಉತ್ತಮ ಗಳಿಕೆ ಕಾಣುತ್ತಿದೆ.

ಕರ್ನಾಟಕದಲ್ಲಿ ಕಾಂತಾರ 3ನೇ ವಾರವೂ ಅದ್ದೂರಿ ಪ್ರದರ್ಶನ ಕಾಣುತ್ತಿದೆ. 40 ಲಕ್ಷಕ್ಕೂ ಹೆಚ್ಚು ಟಿಕೆಟ್‌ ಮಾರಾಟವಾಗಿವೆ ಎನ್ನಲಾಗಿದೆ. ಅಂದಾಜಿನ ಪ್ರಕಾರ 2 ವಾರದ ಗಳಿಕೆ ₹35 ಕೋಟಿ ಗೆರೆ ದಾಟಿದೆ.

ಹಿಂದಿ ವಲಯದಲ್ಲಿ ಬಿಡುಗಡೆಯಾದ ದಿನದಿಂದ ₹1.3 ಕೋಟಿ ಗಳಿಸಿದೆ. ಕೆಜಿಎಫ್‌–2 ಬಳಿಕದ ಅತ್ಯುತ್ತಮ ಗಳಿಕೆ ಇದಾಗಿದೆ. ‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT