ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್‌ ಹಾಪ್‌ನಲ್ಲೂ ‘ಕೇಜ್‌’ ಕ್ರೇಜ್‌!

Last Updated 11 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಸಂಗೀತ, ಯಾವುದೇ ಮಾತುಗಳಿಲ್ಲದೇ ವಿಷಯವನ್ನು ಜನರಿಗೆ ತಲುಪಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ. ಇದನ್ನೇ ಸಾಧನವಾಗಿರಿಸಿಕೊಂಡು, ಪರಿಸರದ ಮೇಲೆ ಜನರ ದೌರ್ಜನ್ಯ, ಜಾಗತಿಕ ತಾಪಮಾನ, ಮಾಲಿನ್ಯ, ಪರಿಸರ ಸಂರಕ್ಷಣೆ, ಶಿಕ್ಷಣ ಮುಂತಾದ ವಿಷಯಗಳನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೇಜ್ ಹಲವು ಆಲ್ಬಂಗಳ ಮೂಲಕ ಜನರ ಮನಮುಟ್ಟಿಸುತ್ತಿದ್ದಾರೆ. ಆದರೆ, ಈ ಬಾರಿ ಮೊಟ್ಟ ಮೊದಲು ಅವರು ಹಿಪ್‌–ಹಾಪ್‌ ಸ್ಟೈಲ್‌ನಲ್ಲಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

ಅವರು ರಚಿಸಿರುವ ‘ಇನ್‌ ಯುವರ್‌ ಐಯ್ಸ್‌’ ಹಾಗೂ ‘ದೇಖಾ ಹೈ’ ಯೂಟ್ಯೂಬ್‌ನಲ್ಲಿ ಲಕ್ಷಾಂತರ ಜನರನ್ನು ಸೆಳೆದಿದೆ. ‘ಇನ್‌ ಯುವರ್‌ ಐಯ್ಸ್‌’ ಕೇಜ್‌ ಅವರ ಮೊದಲ ಹಿಪ್‌–ಹಾಪ್‌ ರಚನೆಯಾಗಿದ್ದು, ಅಮೆರಿಕದ ವಾಷಿಂಗ್ಟನ್‌ ಡಿಸಿಯ ಖ್ಯಾತ ರ್‍ಯಾಪರ್‌ ಕೋನ್‌ಶೆನ್ಸ್‌ ದಿ ಎಂಸಿ, ನ್ಯೂಯಾರ್ಕ್‌ನ ಲೋನಿ ಪಾರ್ಕ್‌ ಹಾಗೂ ರಾಜ್ಯದ ಖ್ಯಾತ ಸಂಗೀತ ಕಲಾವಿದ ಅರುಣ್‌ ಕುಮಾರ್‌ ಇದರಲ್ಲಿ ಹಾಡಿದ್ದಾರೆ. ಭರವಸೆ, ಧೈರ್ಯ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸುವ ಹಾಡು ಇದಾಗಿದ್ದು, ವಾಷಿಂಗ್ಟನ್‌ ಡಿಸಿಯಲ್ಲಿ ಇರುವ ಸಂಸತ್‌ ಭವನದ ಮೇಲೆ ನಡೆದ ದಾಳಿಯ ದಿನವೇ ಇದನ್ನು ಚಿತ್ರೀಕರಿಸಲಾಗಿದೆ.

‘ಹಿಪ್‌–ಹಾಪ್‌ ಮಾದರಿ ಆರಂಭವಾಗಿದ್ದು, ಸಾಮಾಜಿಕ ಸಂದೇಶ ನೀಡುವ ಸಲುವಾಗಿಯೇ. ಆಫ್ರಿಕನ್‌ ಅಮೆರಿಕನ್ನರು ತಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿರುವ ವಿಷಯಗಳ ಕುರಿತು ಹಿಪ್‌ ಹಾಪ್‌ ಮೂಲಕ ಹೇಳಿದರು. ನಂತರ ಹಿಪ್‌–ಹಾಪ್‌ ಮೂಲಕ ಪ್ರೀತಿ, ಹಣದ ವಿಷಯಾಧಾರಿತ ಹಾಡುಗಳು ಬಂದವು. ಹೀಗಾಗಿ ಹಿಪ್‌–ಹಾಪ್‌ ಕೇವಲ ಸ್ಟೈಲ್‌ ಅಷ್ಟೆ’ ಎಂದು ಕೇಜ್‌ ತಮ್ಮ ಹಾಡಿನ ಕುರಿತು ಹೇಳುತ್ತಾರೆ.

‘ಲಿಂಗ ಅಸಮಾನತೆ, ಪರಿಸರ ಮಾಲಿನ್ಯ, ರಾಜಕೀಯ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಈ ಭೂಮಿಯಲ್ಲಿವೆ. ಸರ್ಕಾರ, ರಾಜಕಾರಣಿಗಳು, ಎನ್‌ಜಿಒಗಳು ಅಥವಾ ಇತರರು ಬದಲಾವಣೆ ತರುತ್ತಾರೆ ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ಆದರೆ, ನಾವು ಮೊದಲು ಬದಲಾಗಬೇಕು. ಇದು ಈ ಹಾಡಿನ ಉದ್ದೇಶ. ಹಾಡಿನಲ್ಲಿ ಯಾರನ್ನೂ ದೂರುವ ಉದ್ದೇಶವಿಲ್ಲ. ನಾವಾಗಿಯೇ ಬದಲಾವಣೆ ತರಬೇಕು ಎನ್ನುವುದು ನಮ್ಮ ಗುರಿ. ನಮ್ಮಲ್ಲಿ ಬದಲಾವಣೆ ಆದರೆ ವಿಶ್ವವೇ ಬದಲಾಗುತ್ತದೆ’ ಎನ್ನುತ್ತಾರೆ ಕೇಜ್‌.

‘ಸಮಸ್ಯೆ ಇದೆ ಹಾಗೂ ಆ ಸಮಸ್ಯೆಯನ್ನು ಅರ್ಥ ಮಾಡಿಕೊಂಡರಷ್ಟೇ ಅದನ್ನು ಪರಿಹರಿಸಲು ಸಾಧ್ಯ. ಪ್ಲಾಸ್ಟಿಕ್‌ ಬಳಕೆ, ನವೀಕರಿಸಲಾಗದ ಇಂಧನದ ದುರ್ಬಳಕೆ ಮುಂತಾದುವುಗಳು ಮುಂದೆ ನಮ್ಮ ಮೇಲೆಯೇ ಪರಿಣಾಮ ಬೀರಲಿವೆ. ನಾವು ಮತ್ತಷ್ಟು ಜವಾಬ್ದಾರಿಯುತವಾಗಿದ್ದರಷ್ಟೇ ಈ ಸಮಸ್ಯೆಗಳಿಂದ ಪಾರಾಗಲು ಸಾಧ್ಯ ಎನ್ನುವುದು ಖ್ಯಾತ ಗಾಯಕ ಹರಿಹರನ್‌ ಅವರು ಹಾಡಿರುವ ‘ದೇಕಾ ಹೇ’ ಹಾಡಿನ ಹಿಂದಿನ ಉದ್ದೇಶ’ ಎಂದು ಕೇಜ್‌ ವಿವರಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT