ಬುಧವಾರ, ಮಾರ್ಚ್ 29, 2023
27 °C

#Kantara2: ಕಾಂತಾರ–2ಕ್ಕೆ ಸಿದ್ಧರಾಗುತ್ತಿದ್ದಾರಾ ರಿಷಬ್‌? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರ ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ದೇಶದಾದ್ಯಂತ 2022ರ ಸೆ.30ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ತೆರೆಕಂಡಿದ್ದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಕೆಜಿಎಫ್‌ –1, ಕೆಜಿಎಫ್‌–2 ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಕಾಂತಾರ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್‌ ವ್ಯಾಪಕ ಯಶಸ್ಸಿನ ನಂತರ ಹೊಂಬಾಳೆ , ಕೆಜಿಎಫ್‌–2 ನಿರ್ಮಿಸಿ ಸಾವಿರ ಕೋಟಿಗಿಂತ ಹೆಚ್ಚು ಹಣ ಬಾಚಿತ್ತು. ಇದೀಗ ₹450 ಕೋಟಿಗೂ ಹೆಚ್ಚು ಗಳಿಕೆ ಕಂಡಿರುವ ‘ಕಾಂತಾರ’ದ 2ನೇ ಭಾಗಕ್ಕೆ ನಿರ್ಮಾಣ ಸಂಸ್ಥೆ ರಿಷಬ್‌ ಶೆಟ್ಟಿ ಅವರಿಗೆ ಪ್ರಸ್ತಾಪ ಇಟ್ಟಿತ್ತು. 

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದೆ. ಈ ಚಿತ್ರದಲ್ಲಿ ರಿಷಬ್‌ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಚಿತ್ರ ತಂಡದ ಪ್ರತಿ ನಡೆಯನ್ನು ಜನ ಕುತೂಹಲದಿಂದ ನೋಡುತ್ತಿದ್ದಾರೆ. ಇತ್ತೀಚೆಗೆ ದೈವಕ್ಕೆ ಹರಕೆ ತೀರಿಸಿದ ಸಿನಿಮಾ ತಂಡದ ವಿಡಿಯೊ ಕೂಡ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಕಾಂತಾರ-2 ಚಿತ್ರದ ವಿಷಯವೂ ಮುನ್ನೆಲೆಗೆ ಬಂದಿದ್ದು, ಟ್ವಿಟರ್‌ನಲ್ಲಿ #Kantara2 ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. 

ಕಥೆ ಉಳಿದಿದೆಯಾ?
ಕಾಂತಾರ–2 ಮಾಡುವ ಯಾವ ಸುಳಿವನ್ನು ರಿಷಬ್‌ ಶೆಟ್ಟಿ ಚಿತ್ರದಲ್ಲಿ ಅಥವಾ ಕಥೆಯಲ್ಲಿ ನೀಡಿಲ್ಲ. ಭೂತಕೋಲದ ಕಥೆಯಾಗಿರುವುದರಿಂದ ಮತ್ತೆ ಅದೇ ಕೋಲವನ್ನು ಚಿತ್ರದಲ್ಲಿ ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೆ ಕಥೆಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆ ಸಹಜ.

ಕಾಂತಾರವನ್ನು ನೋಡಿದರೆ ಅಲ್ಲಿ ಭಾಗ–2ಕ್ಕೆ ಅವಕಾಶವಿದೆ. ಶಿವನ ತಂದೆ ಪಾತ್ರದಲ್ಲಿ ರಿಷಬ್‌ ಅವರೇ ಕಾಣಿಸಿಕೊಂಡಿದ್ದಾರೆ. ಅವರು ಕೂಡ ದೈವವಾಗಿ ಕಳೆದು ಹೋಗುತ್ತಾರೆ. ಅಚ್ಯುತ್‌ ರಾವ್‌ ಕಥೆ ಕೂಡ ವಂಶಪಾರಂಪರ್ಯದ್ದು. ಹೀಗಾಗಿ ಶಿವನ ಮುಂಚಿನ ತಲೆಮಾರಿನ ಕಥೆ ಮಾಡುವ ಸಾಕಷ್ಟು ಸಾಧ್ಯತೆ ಇದೆ.

ನಿರ್ದೇಶಕರಾಗಿ ತಮ್ಮ ಹಿಂದಿನ ಸಿನಿಮಾ ‘ಕಿರಿಕ್‌ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿಯೂ ರಿಷಬ್‌ ಯಶಸ್ವಿಯಾಗಿದ್ದರು. ನಟನಾಗಿ ಬೆಲ್‌ಬಾಟಂನಿಂದ ಖ್ಯಾತಿ ಗಳಿಸಿದ್ದ ರಿಷಬ್‌, ಬೆಲ್‌ಬಾಟಂ–2 ಚಿತ್ರ ಒಪ್ಪಿಕೊಂಡಿದ್ದಾರೆ. ಮೊದಲೇ ಒಪ್ಪಿಕೊಂಡ ಬೇರೆ ಸಿನಿಮಾಗಳು ಇವೆ. ಆದರೆ ಅದನ್ನೆಲ್ಲ ಸದ್ಯ ಪಕ್ಕಕ್ಕಿಟ್ಟು ‘ಕಾಂತಾರ–2’ ಗೆ ರಿಷಬ್‌ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುತ್ತಿದೆ ಅವರ ಆಪ್ತ ವಲಯ. ಆದರೆ, ಈ ವಿಚಾರವನ್ನು ರಿಷಬ್‌ ಬಹಿರಂಗಪಡಿಸಿಲ್ಲ. 

ಚಿತ್ರೀಕರಣ ಯಾವಾಗ?: ‘ಕಾಂತಾರ’ದ 2ನೇ ಭಾಗದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

2024ಕ್ಕೆ ಚಿತ್ರ ತೆರೆಗೆ?: ಕಾಂತಾರ-2 ಸಿನಿಮಾ ಇನ್ನೂ ಆರಂಭಿಕ ಹಂತದಲ್ಲಿದೆ. ಚಿತ್ರ ತಂಡ ಸ್ಕ್ರಿಪ್ಟ್​​ಗಾಗಿ ಶೋಧನಾ ಕೆಲಸ ಮುಂದುವರೆಸಿದೆ. ಶೋಧನಾ ಕೆಲಸ ಮುಗಿದ ಮೇಲೆ ಶೂಟಿಂಗ್ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ‘ಕಾಂತಾರ’ದ 2ನೇ ಭಾಗ 2024ರ ಜೂನ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು