ಕಾಂತಾರ ಚಿತ್ರ ಹಿಂದಿಯಲ್ಲಿ ತೆರೆಗೆ ಬಂದು 23 ದಿನಗಳ ಬಳಿಕವೂ ಗಳಿಕೆ ಸ್ಥಿರವಾಗಿದೆ. ಹಿಂದಿ ಭಾಷೆಯೊಂದರಲ್ಲೇ ಸುಮಾರು ₹60 ಕೋಟಿ ಗಳಿಕೆ ಕಂಡಿದೆ. ಕನ್ನಡದಲ್ಲಿ 6ನೇ ವಾರ ಸಾಕಷ್ಟು ಚಿತ್ರಮಂದಿರಗಳಲ್ಲಿ ಕಾಂತಾರ ಉಳಿದುಕೊಂಡಿದೆ. ಕೆಲವೆಡೆ ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯ ಕಾಂತಾರದ ಪ್ರಚಾರ, ಚಿತ್ರಮಂದಿರ ಭೇಟಿಯಲ್ಲಿ ನಿರತರಾಗಿರುವ ರಿಷಬ್ ಶೆಟ್ಟಿ ಅವರ ಮುಂದಿನ ನಡೆ ಏನು ಎಂಬುದು ಎಲ್ಲರಲ್ಲಿ ಮನೆ ಮಾಡಿರುವ ಕುತೂಹಲ.
ಕೆಜಿಎಫ್, ಕೆಜಿಎಫ್–2 ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಕಾಂತಾರ ಚಿತ್ರವನ್ನು ನಿರ್ಮಿಸಿದೆ. ಕೆಜಿಎಫ್ ವ್ಯಾಪಕ ಯಶಸ್ಸಿನ ನಂತರ ಹೊಂಬಾಳೆ , ಕೆಜಿಎಫ್–2 ನಿರ್ಮಿಸಿ ಸಾವಿರ ಕೋಟಿಗಿಂತ ಹೆಚ್ಚು ಹಣ ಬಾಚಿತ್ತು. ₹500 ಕೋಟಿಯತ್ತ ಮುನ್ನುಗ್ಗುತ್ತಿರುವ ‘ಕಾಂತಾರ’ದ 2ನೇ ಭಾಗಕ್ಕೆ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಅವರಿಗೆ ಪ್ರಸ್ತಾಪ ಇಟ್ಟಿದೆ.
ಕಥೆ ಉಳಿದಿದೆಯಾ?
ಕಾಂತಾರ–2 ಮಾಡುವ ಯಾವ ಸುಳಿವನ್ನು ರಿಷಬ್ ಶೆಟ್ಟಿ ಚಿತ್ರದಲ್ಲಿ ಅಥವಾ ಕಥೆಯಲ್ಲಿ ನೀಡಿಲ್ಲ. ಭೂತಕೋಲಾದ ಕಥೆಯಾಗಿರುವುದರಿಂದ ಮತ್ತೆ ಅದೇ ಕೋಲಾವನ್ನು ಚಿತ್ರದಲ್ಲಿ ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೆ ಕಥೆಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆ ಸಹಜ.
ಕಾಂತಾರವನ್ನು ನೋಡಿದರೆ ಅಲ್ಲಿ ಭಾಗ–2ಕ್ಕೆ ಅವಕಾಶವಿದೆ. ಶಿವನ ತಂದೆ ಪಾತ್ರದಲ್ಲಿ ರಿಷಬ್ ಅವರೇ ಕಾಣಿಸಿಕೊಂಡಿದ್ದಾರೆ. ಅವರು ಕೂಡ ದೈವವಾಗಿ ಕಳೆದು ಹೋಗುತ್ತಾರೆ. ಅಚ್ಯುತ್ ರಾವ್ ಕಥೆ ಕೂಡ ವಂಶಪಾರಂಪರ್ಯದ್ದು. ಹೀಗಾಗಿ ಶಿವನ ಮುಂಚಿನ ತಲೆಮಾರಿನ ಕಥೆ ಮಾಡುವ ಸಾಕಷ್ಟು ಅವಕಾಶವಿದೆ.
ನಿರ್ದೇಶಕರಾಗಿ ತಮ್ಮ ಹಿಂದಿನ ಸಿನಿಮಾ ‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿಯೂ ರಿಷಬ್ ಯಶಸ್ವಿಯಾಗಿದ್ದರು.ನಟನಾಗಿ ಬೆಲ್‌ಬಾಟಂನಿಂದ ಖ್ಯಾತಿ ಗಳಿಸಿದ್ದ ರಿಷಬ್, ಬೆಲ್‌ಬಾಟಂ–2 ಚಿತ್ರ ಒಪ್ಪಿಕೊಂಡಿದ್ದಾರೆ. ಮೊದಲೇ ಒಪ್ಪಿಕೊಂಡ ಬೇರೆ ಸಿನಿಮಾಗಳು ಇವೆ. ಆದರೆ ಅದನ್ನೆಲ್ಲ ಸದ್ಯ ಪಕ್ಕಕ್ಕಿಟ್ಟು ‘ಕಾಂತಾರ–2’ ಗೆ ರಿಷಬ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುತ್ತಿದೆ ಅವರ ಆಪ್ತ ವಲಯ. ಆದರೆ ರಿಷಬ್ ಸದ್ಯಕ್ಕೆ ಈ ಆಲೋಚನೆಗಳಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.