ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಸೋಪಾನಗಳ ದಾಟಿ ಯಶಸ್ಸಿನ ಉತ್ತುಂಗ ಮುಟ್ಟಿದ ರಿಷಬ್

Published 8 ಜೂನ್ 2023, 11:36 IST
Last Updated 8 ಜೂನ್ 2023, 11:36 IST
ಅಕ್ಷರ ಗಾತ್ರ

ಕೊಡಚಾದ್ರಿಯ ತಪ್ಪಲಿನ ಕೆರಾಡಿ ಎಂಬಲ್ಲಿ 1983ರ ಜುಲೈ 7ರಂದು ಬೆಳಿಗ್ಗೆ 7 ಗಂಟೆಗೆ ರತ್ನಾವತಿ ಬಿ.ಶೆಟ್ಟಿ ಹಾಗೂ ಭಾಸ್ಕರ್‌ ಶೆಟ್ಟಿ ಮಗನಾಗಿ ಹುಟ್ಟಿದ ಪ್ರಶಾಂತ್‌ ಶೆಟ್ಟಿ, ರಿಷಬ್‌ ಶೆಟ್ಟಿಯಾಗಿ ಬೆಳೆದ ಬಗೆ ಆಸಕ್ತಿಕರ.

ಸಿನಿಮಾ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಕಾಲಿಟ್ಟು ಮಿನರಲ್‌ ವಾಟರ್‌ ಸರಬರಾಜು ಮಾಡುತ್ತಾ, ಕ್ಲ್ಯಾಪ್‌ ಬಾಯ್‌–ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಹೋಟೆಲ್ ಪ್ರಾರಂಭಿಸಿ ಸೋತು, ಕಿರುತೆರೆ ಕ್ಷೇತ್ರದಲ್ಲೂ ದುಡಿದು ಸಿನಿ ಜಗತ್ತಿನಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ.

‘7’ ಎಂಬ ಸಂಖ್ಯೆಯನ್ನು ನಂಬಿ, ‘R’ನಿಂದ ಆರಂಭವಾಗುವ ‘ರಿಷಬ್‌’ ಎಂಬ ಮರುನಾಮಕರಣ ಮಾಡಿಕೊಂಡು ಸಿನಿ ಜಗತ್ತಿನಲ್ಲಿ ಗುರುತಿಸಿಕೊಂಡವರು ಇವರು. ರಕ್ಷಿತ್‌ ಶೆಟ್ಟಿ ನಟನೆಯ, ಅರವಿಂದ್‌ ಕೌಶಿಕ್‌ ನಿರ್ದೇಶನದ ‘ತುಗ್ಲಕ್‌’ ಸಿನಿಮಾದಿಂದ ತಮ್ಮ ಸಿನಿಪಯಣ ಆರಂಭಿಸಿ, ‘ರಿಕ್ಕಿ’ ಕಥೆ ಹೇಳಿದವರು ರಿಷಬ್‌. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ತೋರಿದ ರಿಷಬ್‌, ಈ ಚಿತ್ರಕ್ಕಾಗಿ ‘ಸ್ವರ್ಣ ಕಮಲ’ ರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾದವರು. ‘ಕಿರಿಕ್‌ ಪಾರ್ಟಿ’ ಮೂಲಕ ನಿರ್ದೇಶಕನಾಗಿ ದೊಡ್ಡ ಯಶಸ್ಸನ್ನು ಕಂಡರು. ಹಲವು ಪ್ರಶಸ್ತಿಗಳನ್ನು ಈ ಸಿನಿಮಾ ಬಾಚಿಕೊಂಡಿತು.

ಕೆರಾಡಿಯ ರಿಷಬ್‌ ವಿಶ್ವಸಂಸ್ಥೆಯ ಅಂಗಳಕ್ಕೂ ಹೆಜ್ಜೆ ಇಡುವಂತೆ ಮಾಡಿದ್ದು ‘ಕಾಂತಾರ’ ಸಿನಿಮಾ. ‘ಈ ಕಥೆ ನನ್ನ ಸಿನಿಮಾ ಪಟ್ಟಿಯಲ್ಲೇ ಇರಲಿಲ್ಲ. ಆದರೆ ಆ ಒಂದು ಸುಪ್ತಶಕ್ತಿಯೇ ಇದನ್ನು ಆರಿಸುವಂತೆ ಮಾಡಿತು’ ಎಂದಿದ್ದರು ರಿಷಬ್‌. ಅತಿ ಹೆಚ್ಚು ದೈಹಿಕ ಶ್ರಮದ ಅಗತ್ಯವಿದ್ದ ಪಾತ್ರದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತು, ಇಡೀ ಸಿನಿಮಾವನ್ನು ವ್ರತದ ರೀತಿ ನಿಭಾಯಿಸಿದವರು ರಿಷಬ್‌. ಚಿತ್ರವು ದೇಶದ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿಕೊಂಡಿತು. ಸದ್ಯ ‘ಕಾಂತಾರ’ದ ಪ್ರೀಕ್ವೆಲ್‌(ಹಿಂದಿನ ಕಥೆ) ಹೆಣೆಯುತ್ತಿರುವ ರಿಷಬ್‌ ಮಂಗಳೂರು, ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.      

‘ರಿಷಬ್‌ ಪರವಾಗಿ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿದ್ದೇನೆ. ಇದು ಹೆಮ್ಮೆಯ ಕ್ಷಣ. ರಿಷಬ್‌ಗೆ ಸಿನಿಮಾವೇ ಜೀವನ. ಸಿನಿಮಾ ಬಗ್ಗೆಯೇ ಸದಾ ಯೋಚನೆ ಮಾಡುವ ವ್ಯಕ್ತಿ ಅವರು. ‘ಕಾಂತಾರ’ದ ಗೆಲುವು ಒಂದೆರಡು ದಿನಗಳ ಶ್ರಮವಲ್ಲ. 20 ವರ್ಷದ ಪರಿಶ್ರಮಕ್ಕೆ ಸಿಕ್ಕ ಗೆಲುವು ಅದು. ‘ಕಾಂತಾರ’ಕ್ಕೆ ಸಿಕ್ಕ ಪ್ರಶಸ್ತಿಗಳೆಲ್ಲವನ್ನೂ ರಿಷಬ್‌ ಮೂವರಿಗೆ ಅರ್ಪಿಸಿದ್ದಾರೆ. ಇವತ್ತು ಅದನ್ನು ರಿಷಬ್‌ ಪರವಾಗಿ ನಾನು ಮಾಡುತ್ತಿದ್ದೇನೆ. ಮೊದಲಿಗೆ ಈ ಪ್ರಶಸ್ತಿಯನ್ನು ಅಪ್ಪು(ಪುನೀತ್‌ ರಾಜ್‌ಕುಮಾರ್‌) ಅವರಿಗೆ, ದೈವ, ದೈವ ನರ್ತಕರು ಹಾಗೂ ಅವರ ಕುಟುಂಬದವರಿಗೆ ಹಾಗೂ ಜನರ ಪ್ರೀತಿಗೆ ಅರ್ಪಿಸುತ್ತೇನೆ. ನಾವು ಯಾವತ್ತೂ ಈ ಪ್ರೀತಿಗೆ ಚಿರಋಣಿಯಾಗಿರುತ್ತೇವೆ’ ಎನ್ನುತ್ತಾರೆ ಪ್ರಗತಿ ರಿಷಬ್‌ ಶೆಟ್ಟಿ.

ಅತ್ಯುತ್ತಮ ನಿರ್ದೇಶನ: ರಿಷಬ್‌ ಶೆಟ್ಟಿ (ಕಾಂತಾರ)

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು
* ಪ್ರವೀಣ್‌ ಕೃಪಾಕರ್‌ (ಚಿತ್ರ:ತಲೆದಂಡ)
* ಎ. ಹರ್ಷ (ಚಿತ್ರ:ವೇದ)
* ಕಿರಣ್‌ರಾಜ್‌ ಕೆ. (ಚಿತ್ರ:777 ಚಾರ್ಲಿ)
* ರಾಹುಲ್‌ ಪಿ.ಕೆ (ಚಿತ್ರ:ಸಕುಟುಂಬ ಸಮೇತ)
* ರಿಷಬ್‌ ಶೆಟ್ಟಿ (ಚಿತ್ರ:ಕಾಂತಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT