ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿಕ್ಕಳು ರುಕ್ಮಿಣಿ!

Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ‘ಚಾರ್ಲಿ 777’ ಚಿತ್ರೀಕರಣ ಮುಗಿಸಿಕೊಂಡು ‘ಸಪ್ತ ಸಾಗರದಾಚೆ ಎಲ್ಲೋ’ ಹೊರಡಲು ಸಜ್ಜಾಗಿರುವ ನಟ ರಕ್ಷಿತ್‌ ಶೆಟ್ಟಿ ಅವರಿಗೆ ನಾಯಕಿ ಸಿಕ್ಕಿದ್ದಾರೆ. ಅವರ ಪಯಣ ಫೆಬ್ರುವರಿ ಮಾಸಾಂತ್ಯದಿಂದ ಆರಂಭವಾಗಲಿದೆ. ‘ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದ್ದ ರುಕ್ಮಿಣಿ ವಸಂತ್‌ ಅವರನ್ನು ಚಿತ್ರತಂಡವು ಇದೀಗ ಅಧಿಕೃತವಾಗಿ ನಾಯಕಿಯಾಗಿ ಪ್ರೇಕ್ಷಕರಿಗೆ ಪರಿಚಯಿಸಿದೆ. ತಮ್ಮ ಆಯ್ಕೆಯ ಕುರಿತು ರುಕ್ಮಿಣಿ ಅವರು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡಿದ್ದಾರೆ.

‘ಕಳೆದ ವರ್ಷ ಮಾರ್ಚ್‌ನಲ್ಲಿ ಸಪ್ತ ಸಾಗರದಾಚೆ ಎಲ್ಲೋ ಯೋಜನೆಯ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಸಮುದ್ರದ ಚಿತ್ರವಿದ್ದ ಆ ಪೋಸ್ಟರ್‌ ನೋಡಿಯೇ ನನ್ ಗಮನ ಈ ಯೋಜನೆ ಮೇಲಿತ್ತು. ಕಳೆದ ಅಕ್ಟೋಬರ್‌ನಲ್ಲಿ ನಾಯಕಿಯ ಹುಡುಕಾಟ ನಡೆಯುತ್ತಿದೆ ಎಂದು ನಿರ್ದೇಶಕ ಹೇಮಂತ್‌ ಅವರು ಹೇಳಿದ್ದರು. ಇದು ನನಗೆ ದೊರೆತ ಅವಕಾಶ ಎಂದುಕೊಂಡೇ, ನನ್ನ ಮಾಹಿತಿಯನ್ನು ಅವರಿಗೆ ನೀಡಿದ್ದೆ.ಹತ್ತು ದಿನದ ಬಳಿಕ ಅಡಿಷನ್‌ ನಡೆಸಿ, ಆಯ್ಕೆ ಮಾಡಿದರು’ ಎಂದು ರುಕ್ಮಿಣಿ ವಿವರಿಸುತ್ತಾರೆ.

ತಂಡ ತುಂಬಾ ಇಷ್ಟವಾಯಿತು

ಹೇಮಂತ್‌ ಅವರ ನಿರ್ದೇಶನದ ಎಲ್ಲ ಚಿತ್ರಗಳನ್ನೂ ನಾನು ನೋಡಿದ್ದೇನೆ. ರಕ್ಷಿತ್‌ ಅವರ ಚಿತ್ರಗಳನ್ನೂ ವೀಕ್ಷಿಸಿದ್ದೇನೆ. ಇಂತಹ ಅನುಭವಿಗಳ ಜೊತೆ ಚಿತ್ರ ಮಾಡುವ ಆಸೆಯಿತ್ತು. ನನಗೆ ಅವಕಾಶ ನೀಡಿ ಎಂದು ಕೇಳುವ ಸಂದರ್ಭದಲ್ಲೂ, ನಾನು ಆಯ್ಕೆಯಾಗುವ ಭರವಸೆ ಹೊಂದಿದ್ದೆ. ಅಡಿಷನ್‌ ನಂತರ ನನಗೆ ಚಿತ್ರದ ಕಥೆಯನ್ನು ಹೇಮಂತ್‌ ಅವರು ವಿವರಿಸಿದರು. ಕಥೆಯಲ್ಲಿ ಮಹಿಳೆಯ ಪಾತ್ರಕ್ಕೆ ಅವರು ನೀಡಿದ ಮಹತ್ವ, ಅದನ್ನು ಬರೆದ ರೀತಿ ನನಗೆ ಬಹಳ ಇಷ್ಟವಾಯಿತು ಎನ್ನುತ್ತಾರೆ ರುಕ್ಮಿಣಿ.

‘ಚಿತ್ರಕಥೆಯಲ್ಲಿ ನಾಯಕಿಯ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ. ನಾಯಕಿ ಇಲ್ಲಿ ವಿದ್ಯಾರ್ಥಿನಿ. ಆಕೆಗೆ ಹಾಡುಗಾರಿಕೆಯಲ್ಲಿ ಆಸಕ್ತಿ. ಆಕೆಯ ಕುಟುಂಬ, ಆಕೆಯ ಜೀವನದ ಸುತ್ತ ಈ ಚಿತ್ರಕಥೆಯಿದೆ. ನಟಿಯಾಗಿ, ಪ್ರತಿ ಕ್ಷಣದಲ್ಲೂ ಪಾತ್ರಕ್ಕೆ ಮತ್ತಷ್ಟು ಜೀವ ತುಂಬುವ ಸವಾಲು ಹಾಗೂ ಅವಕಾಶವನ್ನು ಈ ಕಥೆಯಲ್ಲಿ ನೀಡಲಾಗಿದೆ’ ಎಂದು ಹೇಳುತ್ತಾರೆ.

‘ಫೆಬ್ರುವರಿ ಅಂತ್ಯದಲ್ಲಿ ಸಿನಿಮಾದ ವರ್ಕ್‌ಶಾಪ್‌ ಆರಂಭವಾಗಲಿದ್ದು, ಹೆಚ್ಚಿನ ಸಮಯಾವಕಾಶವನ್ನು ಹೇಮಂತ್‌ ಅವರು ನೀಡಿದ್ದಾರೆ. ಸಿನಿಮಾದಲ್ಲಿನ ಕಥೆಯ ಸಮಯಕ್ಕೆ ಹೊಂದಿಕೊಳ್ಳಲು, ಅದನ್ನು ತಿಳಿದುಕೊಳ್ಳಲು, ವ್ಯತ್ಯಾಸ ಗಮನಿಸಲು ಇದು ಸಹಕಾರಿಯಾಗಿದೆ. ಈ ಮೂಲಕ ನಮ್ಮ ಪಾತ್ರಕ್ಕೆ ತಕ್ಕ ನ್ಯಾಯವನ್ನು ಒದಗಿಸಲು ಅನುಕೂಲವಾಗಿದೆ’ ಎನ್ನುತ್ತಾರೆ.

ತಿಂಗಳಾಂತ್ಯಕ್ಕೆ ಚಿತ್ರೀಕರಣ ಆರಂಭ

ಈ ಹಿಂದೆ ರಕ್ಷಿತ್‌ ಶೆಟ್ಟಿ ಹಾಗೂ ನಿರ್ದೇಶಕ ಹೇಮಂತ್‌ ರಾವ್‌ ಕಾಂಬಿನೇಷನ್‌ ನೀಡಿದ್ದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಜನರನ್ನು ಸೆಳೆದಿತ್ತು. ಇದೇ ಜೋಡಿ ಇದೀಗ ಈ ಚಿತ್ರದ ಮುಖಾಂತರ ಮತ್ತೆ ಒಂದಾಗಿದೆ.

‘ಇದೊಂದು ಪ್ರೇಮಕಥೆ. ಫೆಬ್ರುವರಿ ಅಂತ್ಯದಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಮೈಸೂರಿನಲ್ಲೂ ಸಿನಿಮಾನದ ಸ್ವಲ್ಪ ಭಾಗವು ಚಿತ್ರೀಕರಣಗೊಳ್ಳುವ ಸಾಧ್ಯತೆ ಇದೆ. 2010ರಲ್ಲಿ ನಡೆಯುವ ಕಥೆ ಇದು. ದಶಕದ ಹಿಂದೆ ಪ್ರಪಂಚವೇ ಬೇರೆ ರೀತಿಯಾಗಿತ್ತು. ತಂತ್ರಜ್ಞಾನ, ಇಂಟರ್‌ನೆಟ್‌ ಎಲ್ಲವೂ ಹೊಸದಾಗಿತ್ತು. ಆಗಿನ ಸನ್ನಿವೇಶಗಳ ಜತೆ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಎರಡು ಲುಕ್‌ ಇದ್ದು, 10 ವರ್ಷದ ಹಿಂದೆ ಹಾಗೂ ಪ್ರಸ್ತುತ ಇರುವ ಪಾತ್ರ. ಬದಲಾವಣೆ ಹೇಗಾಗುತ್ತದೆ, ಅವರ ದೃಷ್ಟಿಕೋನ ಹೇಗಿರುತ್ತದೆ ಎನ್ನುವುದು ಚಿತ್ರದಲ್ಲಿ ತಿಳಿಯುತ್ತದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಹೇಮಂತ್‌ ರಾವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT