ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಸಿಗದವರು ಪುನಃ ಪ್ರಯತ್ನಿಸಿ: ನಿರ್ಮಾಪಕ ಸಾ.ರಾ. ಗೋವಿಂದು

Last Updated 21 ಜನವರಿ 2020, 9:16 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಗದವರು ನ್ಯಾಯಾಲಯದ ಮೆಟ್ಟಿಲೇರುತ್ತಿರುವುದು ಸರ್ಕಾರಕ್ಕೆ ಬೇಸರ ತರಿಸುತ್ತದೆ. ಅದರ ಬದಲು ಸರ್ಕಾರ ಸಿನಿಮಾ ರಂಗಕ್ಕೆ ಕೊಡುತ್ತಿರುವ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು’ ಎಂದು ನಿರ್ಮಾಪಕ ಸಾ.ರಾ. ಗೋವಿಂದು ಮನವಿ ಮಾಡಿದರು.

2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಆಯ್ಕೆಯಾದವರನ್ನು ಅಭಿನಂದಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದಾಜು 150 ಸಿನಿಮಾಗಳು ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದವು. ಪ್ರಶಸ್ತಿಗೆ ಆಯ್ಕೆಯಾದವರು ಸಂತಸರಾಗಿದ್ದಾರೆ. ಈ ಬಾರಿ ಪ್ರಶಸ್ತಿ ಸಿಗದವರು ಮುಂದೆ ಪುನಃ ಪ್ರಯತ್ನ ಮಾಡಲಿ’ ಎಂದು ಗೋವಿಂದು ಹೇಳಿದರು.

‘ನಾವು ಇತರ ಕೆಲವು ಭಾಷೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಆದರೆ, ಬಿಡುಗಡೆ ಆಗುವ ಕನ್ನಡ ಸಿನಿಮಾಗಳ ಪೈಕಿ ಶೇಕಡ 90ರಷ್ಟು ಸಿನಿಮಾಗಳು ಮಾರುಕಟ್ಟೆಯಲ್ಲಿ ಸೋಲುತ್ತಿವೆ. ಈ ಬಗ್ಗೆ ನಾವು ಹೆಚ್ಚಿನ ಗಮನ ನೀಡಬೇಕು’ ಎಂದು ಅವರು ಹೇಳಿದರು.

‘ಪ್ರಶಸ್ತಿಗೆ ಆಯ್ಕೆಯಾದವರನ್ನು ಸನ್ಮಾನಿಸಲು ಬೇರೆ ವಾಣಿಜ್ಯ ಮಂಡಳಿಯವರು ಕರೆದರೆ ಯಾರೂ ಹೋಗಬಾರದು’ ಎಂದು ಗೋವಿಂದು ಮನವಿ ಮಾಡಿದರು.

‘ಪ್ರಶಸ್ತಿ ಘೋಷಣೆ ಆದಾಗ ದೊರೆತ ಖುಷಿಗಿಂತ ಇಂದು ಹೆಚ್ಚು ಖುಷಿ ಆಗಿದೆ. ಮಂಡಳಿ ಎಂಬುದು ನನಗೆ ಕುಟುಂಬ. ನಾನು ಮತ್ತೆ ಬಣ್ಣ ಹಚ್ಚುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಆದರೆ ಅಮ್ಮನ ಮನೆ ಚಿತ್ರದ ನಿರ್ದೇಶಕರು ತಮ್ಮ ಚಿತ್ರದ ಪಾತ್ರಕ್ಕೆ ನಾನೇ ಸೂಕ್ತವೆಂದು ಭಾವಿಸಿ ನಾನು ಮತ್ತೆ ಬಣ್ಣ ಹಚ್ಚುವಂತೆ ಮಾಡಿದರು’ ಎಂದು ನಟ ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು. ಅವರು ‘ಅಮ್ಮನ ಮನೆ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ರಿಷಬ್ ಶೆಟ್ಟಿ, ಮೇಘನಾ ರಾಜ್, ಶ್ರೀನಿವಾಸಮೂರ್ತಿ ಮತ್ತಿತರರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT