ಶನಿವಾರ, ಮಾರ್ಚ್ 25, 2023
25 °C

‘ಆದಿಪುರುಷ್’ನಲ್ಲಿ ಲಂಕೇಶನಾಗಿ ನಟಿಸಲಿದ್ದಾರೆ ಸೈಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆದಿಪುರುಷ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್‌

ಟಾಲಿವುಡ್ ನಟ ಪ್ರಭಾಸ್‌ ನಟನೆಯ ಓಂ ರಾವತ್ ನಿರ್ದೇಶನದ ಬಹುನಿರೀಕ್ಷಿತ ‘ಆದಿಪುರುಷ್’ ಸಿನಿಮಾದಲ್ಲಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸಲಿದ್ದಾರೆ. ಪ್ರಭಾಸ್‌ ಪಾತ್ರಕ್ಕೆ ಎದುರಾಳಿಯಾಗಿರುವ ಈ ಪಾತ್ರದ ಹೆಸರು ಲಂಕೇಶ್‌. ಈ ಹಿಂದೆ ಓಂ ರಾವತ್ ನಿರ್ದೇಶನದ‌ ‘ತಾನಾಜೀ’ ಸಿನಿಮಾದಲ್ಲಿ ಸೈಫ್ ಖಳನಟನಾಗಿ ನಟಿಸಿದ್ದರು. 

ಕಳೆದ ಕೆಲದಿನಗಳ ಹಿಂದಿನಿಂದಲೂ ಆದಿಪುರುಷ್ ಸಿನಿಮಾದಲ್ಲಿ ಸೈಫ್ ಖಳನಾಯಕ ಎಂಬ ಸುದ್ದಿ ಹರಿದಾಡುತ್ತಿತ್ತು. ಚಿತ್ರತಂಡ ಈ ಕುರಿತು ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ಓಂ ರಾವತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸೈಫ್ ಖಳನಾಯಕ ಎಂಬ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. '7000 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ಥಿತ್ವದಲ್ಲಿದ್ದ! #ಆದಿಪುರುಷ್‌' ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸೈಪ್ ಅಲಿ ಖಾನ್ ‘ಮತ್ತೊಮ್ಮೆ ಓಂ ರಾವತ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ಅವರಿಗೆ ಸಿನಿಮಾ ಕುರಿತು ಭಿನ್ನ ದೃಷ್ಟಿಕೋನವಿದೆ. ತಂತ್ರಜ್ಞಾನ ವಿಷಯದಲ್ಲೂ ಅವರು ಪಾಂಡಿತ್ಯವನ್ನು ಹೊಂದಿದ್ದಾರೆ. ತಾನಾಜೀ ಚಿತ್ರೀಕರಣದ ವೇಳೆ ಸಿನಿಮಾದ ಅತ್ಯಾಧುನಿಕತೆಯನ್ನು ಮೀರಿ ನನ್ನ ಸಾಮರ್ಥ್ಯವನ್ನು ತೋರಿದ್ದಾರೆ. ಈ ಬಾರಿ ಅವೆಲ್ಲವನ್ನೂ ಮೀರಿ ನಮ್ಮನ್ನು ಮುಂದೆ ಕರೆದ್ಯೊಯಲಿದ್ದಾರೆ. ಇದೊಂದು ಅದ್ಭುತ ಪ್ರಾಜೆಕ್ಟ್‌. ನಾನು ಈ ಸಿನಿಮಾದ ಭಾಗವಾಗುತ್ತಿರುವ ಕುರಿತು ಪುಳಕಿತನಾಗಿದ್ದೇನೆ. ಪ್ರಭಾಸ್ ಜೊತೆ ಕತ್ತಿ ಪಳಗಿಸಲು ಕಾಯುತ್ತಿದ್ದೇನೆ’ ಎಂದು ಸಂಭ್ರಮದಿಂದ ಹೇಳಿದ್ದಾರೆ. 

ಈ ಕುರಿತು ಮಾತನಾಡಿರುವ ರಾವತ್‌ ‘ಆದಿಪುರುಷ್‌ನಂತಹ ಮಹಾಕಾವ್ಯದ ಪ್ರಬಲ ಖಳನಾಯಕನ ಪಾತ್ರದಲ್ಲಿ ನಟಿಸಲು ನಮಗೆ ಅದ್ಭುತ ನಟನ ಅಗತ್ಯವಿದೆ. ಈ ಪಾತ್ರಕ್ಕೆ ಸೈಫ್‌ಗಿಂತ ಯಾರು ಸರಿಹೊಂದುತ್ತಾರೆ. ನನ್ನ ಜೀವನದಲ್ಲಿ ನೋಡಿದ ಒಬ್ಬ ಅತ್ಯಂತ ಪ್ರತಿಭಾನ್ವಿತ ನಟ ಅವರು. ಅವರೇ ಈ ಪಾತ್ರಕ್ಕೆ ಹೇಳಿ ಮಾಡಿಸಿದವರು. ವೈಯಕ್ತಿಕವಾಗಿ ಪ್ರತಿದಿನ ನನಗೆ ಅವರ ಜೊತೆ ಕೆಲಸ ಮಾಡುವುದು ಖುಷಿ ಇದೆ. ಮತ್ತೆ ಅವರೊಂದಿಗೆ ರೋಚಕ ಪಯಣವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ‘ ಎಂದಿದ್ದಾರೆ.

ಆದಿಪುರುಷ್ ಸಿನಿಮಾವು ಹಿಂದಿ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ತಮಿಳು, ಮಲಯಾಳಂ ಹಾಗೂ ಕನ್ನಡಕ್ಕೆ ಈ ಸಿನಿಮಾ ಡಬ್ ಆಗಲಿದೆ. ಈ ಸಿನಿಮಾದ ಶೂಟಿಂಗ್ ಮುಂದಿನ ವರ್ಷದಿಂದ ಆರಂಭವಾಗುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು