ಸೋಮವಾರ, ಜೂನ್ 14, 2021
28 °C

ಒಂಟಿ ‘ಸಲಗ’ ತುಂಬಾ ಡೇಂಜರ್: ಚರ್ಚೆಗೆ ಗ್ರಾಸವಾದ ಸಿದ್ದರಾಮಯ್ಯ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆನೆ ನಡೆದಿದ್ದೇ ದಾರಿ. ಆದರೆ, ಒಂಟಿ ಸಲಗ ತುಂಬಾ ಡೇಂಜರ್’ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಗರದ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಗುರುವಾರ ನಟ ದುನಿಯಾ ವಿಜಯ್ ನಾಯಕರಾಗಿರುವ ಹಾಗೂ ಅವರೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಸಲ‌ಗ’ ಚಿತ್ರದ ಮುಹೂರ್ತದ ವೇಳೆ ಅವರು ಮಾತನಾಡಿದರು.

ಆನೆಗಳು ಗುಂಪಿನಲ್ಲಿದ್ದರೆ ಏನನ್ನೂ ಮಾಡುವುದಿಲ್ಲ. ಜನರನ್ನು ನೋಡಿದರೂ ಹಾಗೆಯೇ ಹೊರಟು ಹೋಗುತ್ತವೆ. ಆದರೆ, ಒಂಟಿ ಸಲಗಕ್ಕೆ ಯಾವಾಗಲೂ ಭಯ, ಆತಂಕ ಇದ್ದೇ ಇರುತ್ತದೆ. ಅದು ತನ್ನ ರಕ್ಷಣೆಗಾಗಿ ಜನರ ಮೇಲೆ ಎರಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

‘ಅದು ಒಂಟಿ ಸಲಗವಾ ಅಥವಾ ಗುಂಪಿನಲ್ಲಿರುವ ಸಲಗವಾ ಎಂದು ನೋಡಬೇಕು. ಒಂಟಿ ಸಲಗ ಪರೋಪಕಾರಿಯಾಗಿ ಇರಲಿ’ ಎಂದು ಆಶಿಸಿದರು.

ಇದನ್ನೂ ಓದಿ... 10ರಿಂದ ‘ಸಲಗ’ ಶೂಟಿಂಗ್‌ ಆರಂಭ

‘ಹಿಂದೆ ಸಿನಿಮಾಗಳ ಕಥೆಯಲ್ಲಿ ಸತ್ವ ಇತ್ತು. ಮೌಲ್ಯಗಳು ಮೇಳೈಸಿದ್ದವು. ಇಂದಿನ ಸಿನಿಮಾಗಳಲ್ಲಿ ನೀತಿ ಸಂದೇಶ, ಮೌಲ್ಯಗಳೇ ಕಣ್ಮರೆಯಾಗಿವೆ. ಮಸಾಲೆ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಥಿಯೇಟರ್‌ನಲ್ಲಿ ಈ ಸಿನಿಮಾಗಳು ಬಹಳ ದಿನಗಳ ಕಾಲ ಪ್ರದರ್ಶನ ಕಾಣುವುದಿಲ್ಲ. ಉತ್ತಮ ಸಂದೇಶದ ಜೊತೆಗೆ ಕಲಾವಿದರ ನಟನೆಯೂ ಚೆನ್ನಾಗಿದ್ದರೆ ಮಾತ್ರ ಚಿತ್ರಗಳು ಯಶಸ್ವಿಯಾಗುತ್ತವೆ’ ಎಂದು ಹೇಳಿದರು.

ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡುವುದು ನಿರ್ದೇಶಕನ ಹೊಣೆ. ಕೇವಲ ಮನರಂಜನೆಯಷ್ಟೇ ಮುಖ್ಯವಲ್ಲ. ನಿರ್ದೇಶಕರು ಚಿತ್ರದಲ್ಲಿ ಮೌಲ್ಯ ಮತ್ತು ನೀತಪಾಠವನ್ನೂ ಹೇಳಬೇಕು ಎಂದು ಸಲಹೆ ನೀಡಿದರು.

‘ದುನಿಯಾ ವಿಜಯ್‌ ಉತ್ತಮ ನಟ. ನನಗೂ ಸಲಗದ ಕಥೆ ಹೇಳದೆ ಗುಟ್ಟಾಗಿ ಇಟ್ಟಿದ್ದಾರೆ. ಜನರಿಗೂ ಸಿನಿಮಾ ಬಗ್ಗೆ ಕುತೂಹಲ ಇದೆ ಎಂದ ಅವರು, ನಾನು ಶಾಲೆಗೆ ಹೋಗುವಾಗ ಪ್ರತಿ ದಿನವೂ ಸಿನಿಮಾ ನೋಡುತ್ತಿದ್ದೆ. ಈಗ ಎರಡು ವರ್ಷಕ್ಕೊಂದು ಸಿನಿಮಾ ನೋಡುತ್ತಿದ್ದೇನೆ’ ಎಂದು ನೆನಪಿನ ಸುರುಳಿಗೆ ಜಾರಿದರು.  

ನಟ ಶಿವರಾಜ್‌ಕುಮಾರ್‌ ಅವರ ‘ಮೈಲಾರಿ’ ಹಾಗೂ ‘ಟಗರು’ ಚಿತ್ರದ ಬಳಿಕ ವಿಜಯ್ ನಟನೆಯ ‘ಸಲಗ’ ಚಿತ್ರಕ್ಕೆ ಸಿದ್ದರಾಮಯ್ಯ ಕ್ಲಾಪ್ ಮಾಡಿರುವುದು ವಿಶೇಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು