ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಾಧ್ಯತೆ ತೆರೆದಿಡುವುದೇ ಸಲ್ಮಾನ್‌ ಖಾನ್ ‘ರಾಧೆ’

ಕಮಲ್‌ಹಾಸನ್‌ರ ಸಿನಿಮಾ ಡಿಟಿಎಚ್ ಬಿಡುಗಡೆ ಕನಸು ಈಗ ಸಾಕಾರ
Last Updated 8 ಮೇ 2021, 19:31 IST
ಅಕ್ಷರ ಗಾತ್ರ

ಸಲ್ಮಾನ್‌ಖಾನ್ ನಟನೆಯ ‘ರಾಧೆ; ಯುವರ್ ಮೋಸ್ಟ್‌ ವಾಂಟೆಡ್ ಭಾಯ್‘ ಚಿತ್ರ ಇದೇ 13ರಂದು ಬಹು ವೇದಿಕೆಯಲ್ಲಿ (ಮಲ್ಟಿಪಲ್ ಪ್ಲಾಟ್‌ಫಾರ್ಮ್‌) ಬಿಡುಗಡೆಯಾಗುತ್ತಿದೆ. ಬಾಲಿವುಡ್‌ನ ಸೂಪರ್‌ಸ್ಟಾರ್ ಅಭಿನಯದ ಚಿತ್ರವೊಂದು ಚಿತ್ರಮಂದಿರ (ಹೊರ ದೇಶ), ಒಟಿಟಿ ವೇದಿಕೆ, ಡಿಟಿಎಚ್‌ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಸಿನಿಲೆಕ್ಕ ಪಂಡಿತರ ಕುತೂಹಲಕ್ಕೆ ಕಾರಣವಾಗಿದೆ. ಗಳಿಕೆಯ ಹೊಸ ಸಾಧ್ಯತೆಗಳನ್ನು ಚಿತ್ರ ತೆರೆದಿಡಲಿದೆಯೇ? ಕಾದು ನೋಡಬೇಕಿದೆ. ಪ್ರತಿ ಈದ್‌ಗೆ ಸಲ್ಮಾನ್‌ಖಾನ್ ಚಿತ್ರ ಬಿಡುಗಡೆಯಾಗುವ ಸಂಪ್ರದಾಯ ‘ರಾಧೆ’ ಮೂಲಕ ಮುಂದುವರಿದಿದೆ.

ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ನಿರ್ದೇಶನದ ಪಕ್ಕಾ ಕರ್ಮಷಿಯಲ್ ಎಂಟರ್‌ಟೈನರ್ ‘ರಾಧೆ’ ಬಗ್ಗೆ ಸಲ್ಮಾನ್‌ಖಾನ್‌ ಅಭಿಮಾನಿಗಳು, ಸಿನಿಮಾ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಮುಂಬೈನ ಮಾದಕವಸ್ತು ಮಾಫಿಯಾದ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿ ಪಾತ್ರವನ್ನು ಸಲ್ಮಾನ್ ಮಾಡಿದ್ದಾರೆ. ಸಾಹಸ, ನೃತ್ಯ, ಸಂಗೀತ, ಡೈಲಾಗ್‌ಗಳ ಹೂರಣ ಚಿತ್ರದಲ್ಲಿರುವುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದ ಕಾರಣ ಚಿತ್ರಮಂದಿರಗಳು ಬಂದ್ ಆದವು. ಆ ನಂತರ ಶೇ50ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಯಿತು. ಈಗ ಮತ್ತೆ ಚಿತ್ರಮಂದಿರಗಳು ಬಂದ್ ಆಗಿವೆ. ಬಾಲಿವುಡ್, ಸ್ಯಾಂಡಲ್‌ವುಡ್‌, ಕೋಲಿವುಡ್‌, ಮಾಲಿವುಡ್‌ನಲ್ಲಿಯೂ ಬಿಡುಗಡೆಗೆ ಹತ್ತಾರು ಸಿನಿಮಾ ಸಿದ್ಧವಾಗಿವೆ. ಕೊರೊನಾ ಎರಡನೇ ಅಲೆಯ ನಂತರ 3–4ನೇ ಅಲೆಯ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಚಿತ್ರಮಂದಿರಕ್ಕೆ ಪರ್ಯಾಯ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹತ್ತಾರು ಕೋಟಿ ಬಂಡವಾಳ ಹೂಡಿರುವ ನಿರ್ಮಾಪಕರು ಬಹಳಷ್ಟು ದಿನ ಚಿತ್ರದ ಬಿಡುಗಡೆಯನ್ನು ಮುಂದೂಡಲು ಸಾಧ್ಯವಾಗದು.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ ಕೆಲ ಸಮಯದ ನಂತರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವುದು, ಚಿತ್ರಮಂದಿರ ಬಿಟ್ಟು ನೇರವಾಗಿ ಒಟಿಟಿ ವೇದಿಕೆಯಲ್ಲೇ ತೆರೆ ಕಾಣುವುದು ಈ ವರೆಗೆ ನಡೆದುಕೊಂಡು ಬಂದಿರುವ ಪ್ರತೀತಿ. ಸೂಪರ್ ಸ್ಟಾರ್‌ಗಳ ಹಾಗೂ ಹೈ ಬಜೆಟ್‌ ಸಿನಿಮಾವನ್ನು ಮೊದಲು ಚಿತ್ರಮಂದಿರದಲ್ಲಿ ತೆರೆಕಾಣಿಸಿ, ನಂತರ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೊಡ್ಡ ನಟರ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ನೇರವಾಗಿ ಬಿಡುಗಡೆ ಸಹ ಆಗಿವೆ. ಸಿನಿಮಾಕ್ಕೆ ಹೂಡಿದ ದೊಡ್ಡ ಮೊತ್ತದ ಬಂಡವಾಳ ಕೇವಲ ಒಟಿಟಿ ವೇದಿಕೆಯಿಂದ ಹಿಂದಕ್ಕೆ ಪಡೆಯುವುದು ಕಷ್ಟಸಾಧ್ಯ ಎಂಬ ವಾದವಿದೆ.

ಜನಪ್ರಿಯ ನಟರ ಚಿತ್ರವನ್ನು ಅವರ ಅಭಿಮಾನಿಗಳು ಚಿತ್ರಮಂದಿರದಲ್ಲೇ ನೋಡಲು ಬಯಸುವುದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಇರುವ ಮತ್ತೊಂದು ಮುಖ್ಯ ಕಾರಣ. ಈ ಎರಡೂ ಕೋನದಲ್ಲಿ ನೋಡಿದರೂ ‘ರಾಧೆ’ ಫಲಿತಾಂಶ ಏನಿರಲಿದೆ ಎಂಬುದನ್ನು ಊಹಿಸುವುದು ಕಷ್ಟ. ಚಿತ್ರ ದೊಡ್ಡ ಮಟ್ಟದಲ್ಲಿ ಕಮರ್ಷಿಯಲ್ ಆಗಿ ಹಿಟ್‌ ಆದರೂ, ಚಿತ್ರಮಂದಿರದಲ್ಲಿ ಸಿಗುವ ಅನುಭೂತಿ ಪ್ರೇಕ್ಷರಿಗೆ ಸಿಗಲಿದೆಯೇ? ವಿಶೇಷವಾಗಿ ಸಲ್ಮಾನ್‌ಖಾನ್ ಅಭಿಮಾನಿಗಳು ಸಂತೃಪ್ತರಾಗುವರೇ ಎಂಬುದೇ ಈಗಿರುವ ಪ್ರಶ್ನೆ.

ಗಳಿಕೆಯ ವಿಷಯದಲ್ಲಿ ‘ರಾಧೆ’ಯ ಫಲಿತಾಂಶ ಚಿತ್ರಗಳ ಬಹುವೇದಿಕೆಯ ಬಿಡುಗಡೆಗೆ ಇಂಬು ನೀಡಬಹುದು. ವ್ಯಾಪಾರದ ಲೆಕ್ಕಾಚಾರದಲ್ಲಿ ಚಿತ್ರ ಕಮಾಲ್ ಮಾಡದಿದ್ದರೆ ಮುಂದೇನು ಎಂಬ ಪ್ರಶ್ನೆಯೂ ಮೂಡಬಹುದು.

ಕಮಲ್‌ಹಾಸನ್ ಕನಸು:

ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಮಾತ್ರ ಏಕೆ ಬಿಡುಗಡೆ ಮಾಡಬೇಕು? ತಂತ್ರಜ್ಞಾನ ಬಳಸಿಕೊಂಡು ನೇರವಾಗಿ ಸಿನಿಪ್ರಿಯರ ಮನೆಗೆ ಏಕೆ ತಲುಪಿಸಬಾರದು ಎಂಬ ಪ್ರಶ್ನೆಯನ್ನು ಖ್ಯಾತ ಬಹುಭಾಷಾ ನಟ ಕಮಲ್ ಹಾಸನ್ 2003ರಲ್ಲಿಯೇ ಕೇಳಿದ್ದರು.

ತಮ್ಮ ವಿಶ್ವರೂಪಂ ಚಿತ್ರವನ್ನು ಚಿತ್ರಮಂದಿರಗಳ ಜತೆಗೆ ಡಿಟಿಎಚ್‌ನಲ್ಲಿಯೂ ಬಿಡುಗಡೆ ಮಾಡಿ, ಮನೆ ಮನೆಗೂ ತಲುಪುತ್ತೇನೆ ಎಂದಿದ್ದರು ಆ ಪ್ರತಿಭಾವಂತ ನಟ. ಆದರೆ, ಸಿನಿಮಾ ಪ್ರದರ್ಶಕರಿಂದ ಆ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಡಿಟಿಎಚ್‌ನಲ್ಲಿ ವಿಶ್ವರೂಪಂ ತೆರೆಕಂಡರೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕೊನೆಗೆ ವಿಶ್ವರೂಪಂ ಚಿತ್ರಮಂದಿರಗಳಷ್ಟೇ ಬಿಡುಗಡೆಯಾಗಿತ್ತು. ಆದರೆ ಅಂದು ಕಮಲ್‌ಹಾಸನ್ ಅವರಿಗೆ ಹೊಳೆದ ಹೊಸ ಚಿಂತನೆಯೊಂದು ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಚಿತ್ರರಂಗಕ್ಕೆ ಅನಿವಾರ್ಯ ಎನ್ನುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT