ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕಾರ’ಕ್ಕೆ ಸಂಗೀತ ನೀಡಿದ ನೆನಪಿನ ಬುತ್ತಿ

Last Updated 11 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
"ಪಂಡಿತ್ ರಾಜೀವ ತಾರಾನಾಥ"

‘ಓ, ಸಂಸ್ಕಾರ ಸಿನಿಮಾ ಬಿಡುಗಡೆ ಆಗಿ (ಮೇ 13, 1970) ಐವತ್ತು ವರ್ಷ ಆಗಿಹೋಯಿತಾ...’ ಎಂದು ಮಾತಿಗೆ ತೊಡಗಿದ ರಾಜೀವ ತಾರಾನಾಥರು ಕಾಲಯಾನದಲ್ಲಿ ಹಿಂದೆ ಸಾಗುತ್ತ ಕರೆದೊಯ್ದಿದ್ದು ಐವತ್ತು ವರ್ಷಗಳ ಹಿಂದೆ ‘ಸಂಸ್ಕಾರ’ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ ಆ ದಿನಗಳಿಗೆ...

ಸಂಸ್ಕಾರ ಸಿನಿಮಾಕ್ಕೆ ನಾನು ಸಂಗೀತ ನೀಡಬೇಕಂತ ಪಟ್ಟಾಭಿಯವರಿಗೆ ಹೇಳಿದ್ದು ಅನಂತಮೂರ್ತಿ ಮತ್ತು ವೈಎನ್ಕೆ. ಆ ಹೊತ್ತಿಗೆ ಚಿತ್ರೀಕರಣ ಎಲ್ಲ ಮುಗಿದಿತ್ತು. ಯಶವಂತಪುರದ ಥಿಯೇಟರಿನಲ್ಲಿ ಸಿನಿಮಾ ತೋರಿಸಿದ್ರು, ವೈಎನ್ಕೆ, ಬಿ.ಎಸ್. ಆಚಾರ್ ಎಲ್ಲ ಇದ್ದರು. ಅಲ್ಲಿ ಇಲ್ಲಿ ಗ್ಯಾಪ್‍ ಇವೆ, ಅವನ್ನು ನಿಮ್ಮ ಸಂಗೀತದಿಂದ ಕನೆಕ್ಟ್ ಮಾಡಬೇಕು ಅಂತ ವೈಎನ್ಕೆ ಹೇಳಿದರು.

ಇನ್ನು ಹಿನ್ನೆಲೆ ಸಂಗೀತಕ್ಕೆ ನನ್ನ ಸಿದ್ಧತೆ ಎಂದರೆ... ನನಗೆ ಸಂಗೀತ ಗೊತ್ತಿತ್ತು, ಸರೋದ್ ನುಡಿಸುತ್ತಿದ್ದೆ. ಕನ್ನಡ ಗೊತ್ತಿತ್ತು. ಅನಂತಮೂರ್ತಿಯ ಬರಹ ಗೊತ್ತಿತ್ತು. ಮುಖ್ಯವಾಗಿ, ಕಲ್ಕತ್ತೆಯಲ್ಲಿ ನಮ್ಮ ಖಾನ್‍ ಸಾಹೇಬರ ಜೊತೆಗೆ ಸಿನಿಮಾ ಸಂಗೀತದಲ್ಲಿ ಕೆಲಸ ಮಾಡಿದ ಅನುಭವವಿತ್ತು. ಗುರುಗಳು ಸಂಗೀತ ನೀಡಿದ ಕ್ಷುದಿತ ಪಾಷಣ್, ಆಜಂತ್ರಿಕ್, ಅಂತರಿಕ್ಷ್ ಸಿನಿಮಾಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ.

ಆವಾಗ ಬೆಂಗಳೂರಿನಲ್ಲಿ ಏನೂ ಇರಲಿಲ್ಲ. ಮದ್ರಾಸಿನಲ್ಲಿ (ಇಂದಿನ ಚೆನ್ನೈ) ಆರೇಳು ದಿನ ಇದ್ದೆವು. ಸ್ಟುಡಿಯೋ ಹೆಸರು ನೆನಪಿಲ್ಲ. ಪಟ್ಟಾಭಿಯವರು ನನ್ನನ್ನು ಮೌಂಟ್ ರಸ್ತೆಯಲ್ಲಿದ್ದ ಕಾಸ್ಮೋಪಾಲಿಟನ್ ಕ್ಲಬ್ ಎಂಬ ಬಹಳ ಒಳ್ಳೆಯ ಹಳೇ ಕ್ಲಬ್ಬಿನಲ್ಲಿ ಇಳಿಸಿದರು. ಒಂದು ರೂಮಿನಲ್ಲಿ ನಾನು, ಇನ್ನೊಂದು ರೂಮಿನಲ್ಲಿ ಪಟ್ಟಾಭಿ, ಅವರ ಹೆಂಡತಿ, ಅವರ ಇಬ್ಬರೂ ಮಕ್ಕಳು ಇರತಿದ್ದರು. ಗುರುಗಳು ಸಂಗೀತ ನಿರ್ದೇಶನದಲ್ಲಿ ಏನು ಮಾಡುತ್ತಿದ್ದರು ಎಂಬುದು ನನಗೆ ಗೊತ್ತಿತ್ತು. ಹೆಚ್ಚು ವಾದ್ಯಗಳನ್ನು ಉಪಯೋಗಿಸ್ತಿರಲಿಲ್ಲ. ನಾನು ಸರೋದ್, ಜನಾರ್ದನ್ ಅನ್ನೋರು ಸಿತಾರ್ ನುಡಿಸಿದ್ರು. ಇನ್ನೊಬ್ಬರು ಗುಣಸಿಂಗ್ ಅಂತ... ಮೈಸೂರಿನ ಕನ್ನಡಿಗ ಕ್ರಿಶ್ಚಿಯನ್ ಮದ್ರಾಸಿನಲ್ಲಿ ಸೆಟಲ್ ಆಗಿದ್ದರು, ಬಹಳ ಚೆನ್ನಾಗಿ ಕೊಳಲು ನುಡಿಸ್ತಿದ್ದರು.

ಪಂಡಿತ್ ರಾಜೀವ ತಾರಾನಾಥ

ನಾವು ಮೂರು ಜನ ಮುಖ್ಯವಾಗಿ, ಇನ್ನು ತಬಲಾ ನುಡಿಸಿದವರ ಹೆಸರು ಮರೆತುಹೋಗಿದೆ... ತಪ್ಪು, ನಾನು ಮರೆಯಬಾರದು. ಆದರೆ ನೆನಪಾಗ್ತಿಲ್ಲ.

ನಾನು ಅದ್ರಲ್ಲಿ ಒಂದು ಪ್ರಯತ್ನ ಮಾಡಿದೆ. ಸಂಸ್ಕಾರದಲ್ಲಿ ಅಬ್ರಾಹ್ಮಣ ಸಮಾಜ, ಬ್ರಾಹ್ಮಣ ಸಮಾಜ ಎರಡೂ ಇವೆ. ಅಬ್ರಾಹ್ಮಣ ಸಂಗೀತಕ್ಕೇನಪಾ ಮಾಡೋದು ಅಂತ... ಅದಕ್ಕೆ ಈ ತಮಟೆಯನ್ನು ಬಳಸಿಕೊಂಡೆ. ಬ್ರಾಹ್ಮಣ ಸಂಗೀತ ಅಂತ ನಂಗೆ ಏನೂ ಸಿಗಲಿಲ್ಲ. ಅದಕ್ಕೆ ಹೆಚ್ಚಾಗಿ ನಮ್ಮ ಕ್ಲಾಸಿಕಲ್ ವಾದ್ಯಸಂಗೀತ, ಸರೋದ್, ಸಿತಾರ್ ಬಳಸಿಕೊಂಡೆ, ಅದು ಎಷ್ಟರಮಟ್ಟಿಗೆ ಸರಿಯಾಯಿತೋ ನಂಗೊತ್ತಿಲ್ಲ. ಆದರೆ ನನ್ನೊಳಗೆ ಈ ತುಮಲ ನಡೆದಿತ್ತು. ಅಬ್ರಾಹ್ಮಣ ಸಂಗೀತ ಸ್ವಲ್ಪ ಮಟ್ಟಿಗೆ ತಮಟೆಯಲ್ಲಿ ಬಂತು ಅಂದುಕೋತೀನಿ. ಆದರೆ ಈ ಬ್ರಾಹ್ಮಣ ಸಂಗೀತವನ್ನು ಹ್ಯಾಗೆ ತೋರಿಸೋದು... ಆಗಲೂ ಕಷ್ಟವಾಗಿತ್ತು. ಈಗಲೂ ಯಾರಾದ್ರೂ ಕೇಳಿದ್ರೆ ಕಷ್ಟ.

ನನ್ನ, ಪಟ್ಟಾಭಿ ನಡುವೆ ಬಹಳ ಚರ್ಚೆ ನಡೀತು ಅಂತೇನಿಲ್ಲ. ಸಂಗೀತ ಕೊಡಬೇಕು ಅನ್ನೋದು ಮೊದಲು ಪ್ರಶ್ನೆ. ಅದಕ್ಕೆ ನನ್ನಲ್ಲಿರೋ ರಿಸೋರ್ಸಸ್ ಏನಿದೆ ಅವನ್ನೆಲ್ಲ ತಂದು ಅಲ್ಲಿಟ್ಟೆ. ಕೆಲವರು ಅಂದರು, ಈ ಸರೋದ್, ಸಿತಾರ್ ಎಲ್ಲ ದೂರ್ವಾಸಪುರಕ್ಕೆ ತಕ್ಕದಲ್ಲ ಅಂತ. ಅದು ತೀರಾ ಹಗುರವಾದ ಆಕ್ಷೇಪಣೆ. ಸಂಗೀತ ಇಂಥದ್ದು ಮಾಡುತ್ತೆ ಅನ್ನೋದು ಕಷ್ಟ. ವಿಶುವಲ್ ಏನಿರುತ್ತೆ ಅದಕ್ಕೆ ಸಂಗೀತವು ಒತ್ತಾಸೆ ಕೊಡುತ್ತೆ.

ಅದು ನಮ್ಮ ಗೆಳೆಯರ ಬಳಗ, ಒಬ್ಬರಿಗೊಬ್ಬರು ಗೊತ್ತಿದ್ದೆವು. ಗಿರೀಶ ಕಾರ್ನಾಡ, ಅನಂತಮೂರ್ತಿ, ಲಂಕೇಶ್, ವೈಎನ್ಕೆ, ಗೋಪಿ, ಕಲಾವಿದ ವಾಸುದೇವ್ ಹೀಗೆ... ಸ್ನೇಹಲತಾ, ಪಟ್ಟಾಭಿ ಇಬ್ಬರೂ ಬಹಳೇ ಪ್ರೀತಿಯ ಜನ... ಮತ್ತೆ ಅದರಲ್ಲೊಂದು ಗಾಂಭೀರ್ಯ... ಗೆಳೆಯರ ಬಳಗ ಸೇರಿತ್ತಲ್ಲ... ಹೀಗಾಗಿ ಅದೊಂದು ಅಪೂರ್ವ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT