ಶುಕ್ರವಾರ, ಆಗಸ್ಟ್ 12, 2022
20 °C

‘ಪ್ರಜಾಪ್ಲಸ್‌’ ಸಂದರ್ಶನ: ಡಾನ್‌ ಪಾತ್ರದಲ್ಲಿ ‘ಡಾಲಿ’

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ವಿಭಿನ್ನ ಪಾತ್ರಗಳ ಪ್ರಯೋಗಗಳಿಗೆ ಒಡ್ಡಿಕೊಂಡಿರುವ ನಟ ಧನಂಜಯ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ದಶಕ ತುಂಬಿದೆ. ‘ಟಗರು’ ಚಿತ್ರದ ‘ಡಾಲಿ’ ಪಾತ್ರ ಇವರಿಗೆ ಐಡೆಂಟಿಟಿ ಕೊಟ್ಟಿದ್ದಷ್ಟೇ ಅಲ್ಲ, ‘ಡಾಲಿ ಎಂದರೆ ಧನಂಜಯ, ಧನಂಜಯ ಎಂದರೆ ಡಾಲಿ’ ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ನಟರ ಸಾಲಿನಲ್ಲಿ ಧನಂಜಯ ಕೂಡ ಇದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಇವರು, ಈಗ ‘ಬಡವ ರಾಸ್ಕಲ್’‌ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಪಕರಾಗಿಯೂ ಹೊರಹೊಮ್ಮಿದ್ದಾರೆ. ತಮ್ಮ ಸಿನಿ ಪಯಣದ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅವರು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

* ‘ಡಾಲಿ’ ಎಂದರೆ ಖುಷಿನಾ ಅಥವಾ ಧನಂಜಯ ಎಂದು ಕರೆದರೆ ಖುಷಿನಾ?
ಎರಡೂ ಖುಷೀನೆ. ಎಲ್ಲರೂ ಪ್ರೀತಿಯಿಂದ ಡಾಲಿ ಎಂದು ಕರೆಯುತ್ತಾರೆ. ಆದರೆ, ಅದೊಂದೇ ಪಾತ್ರಕ್ಕೆ, ಹೆಸರಿಗೆ ಅಂಟಿಕೊಂಡಿರಲು ಇಷ್ಟವಿಲ್ಲ. ಡಾಲಿಗಿಂತ ಧನಂಜಯ ಹೆಸರೇ ನನಗೆ ಇಷ್ಟ. ಆದರೆ, ಅಭಿಮಾನಿಗಳು ಡಾಲಿ ಎಂದು ಕರೆದಾಗ ಅದನ್ನೂ ಇಷ್ಟಪಡುತ್ತೇನೆ. ಏಕೆಂದರೆ ನನಗೆ ಬ್ರೇಕ್‌ ನೀಡಿದ್ದೇ ‘ಡಾಲಿ’ ಪಾತ್ರ.

* ದಶಕದ ಹಾದಿ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿತಾ?
ಖಂಡಿತಾ. ಎಲ್ಲ ರೀತಿಯಲ್ಲೂ ಜವಾಬ್ದಾರಿ ಜಾಸ್ತಿಯಾಗಿದೆ. ಸಿನಿಮಾ ವಿಚಾರ ಬಂದಾಗ, ಒಳ್ಳೆಯ ಸಿನಿಮಾ, ಒಳ್ಳೆಯ ಪಾತ್ರ ಹಾಗೂ ಒಳ್ಳೆಯ ಚಿತ್ರತಂಡ ಇವೆಲ್ಲವನ್ನೂ ನೋಡಿ ಹೆಜ್ಜೆ ಇಡಬೇಕಾಗುತ್ತದೆ. 

* ಕೈಯಲ್ಲಿರುವ ಸಿನಿಮಾಗಳ ಬಗ್ಗೆ ಒಂದಿಷ್ಟು ಹೇಳಿ...
‘ಸಲಗ’, ‘ಯುವರತ್ನ’, ‘ಪೊಗರು’ ಚಿತ್ರಗಳ ಶೂಟಿಂಗ್‌ ಮುಗಿದಿದೆ. ‘ಬಡವ ರಾಸ್ಕಲ್’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾತ್ರ ಬಾಕಿ ಇದೆ. ‘ಸಲಗ’ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ರಚಿತಾ ರಾಮ್‌ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತಿದ್ದು, ಅದರ ಟೈಟಲ್‌ ಅಂತಿಮಗೊಂಡಿಲ್ಲ. ರೋಹಿತ್‌ ಪದಕಿ ನಿರ್ದೇಶನದ ‘ರತ್ನನ್‌ ಪ್ರಪಂಚ’, ಭೂಗತ ಲೋಕದ ಡಾನ್‌ ಆಗಿದ್ದ ಜಯರಾಜ್ ಬದುಕಿನ ಕುರಿತ ‘ಹೆಡ್‌ ಬುಷ್‌’ ಸಿನಿಮಾ ಒಪ್ಪಿಕೊಂಡಿದ್ದೇನೆ.

* ಜಯರಾಜ್‌ ಪಾತ್ರಕ್ಕೆ ಏನು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ?
ಡಾನ್‌ ಜಯರಾಜ್‌ಗೆ ಒಂದು ಲಾರ್ಜರ್ ಲೈಫ್‌‌ ಇಮೇಜ್‌ ಇದೆ. ಅವರ ಬಗೆಗೆ ತುಂಬಾ ಕಥೆಗಳಿವೆ. ಐತಿಹಾಸಿಕ ಪಾತ್ರಗಳ ಸುತ್ತ ಒಂದು ಮಿಥ್‌ ಇರುವಂತೆ, ಆ ರೀತಿಯ ಮಿಥ್‌ಗಳು ಜಯರಾಜ್‌ ಸುತ್ತವೂ ಇವೆ. ಈ ಪಾತ್ರಕ್ಕಾಗಿ ಬಾಡಿ ಬಿಲ್ಡ್ ಮಾಡುತ್ತಿರುವೆ. ‘ದಾದಾಗಿರಿಯ ದಿನಗಳು’ ಪುಸ್ತಕ ಓದಿಕೊಂಡಿರುವೆ. ಅಗ್ನಿ ಶ್ರೀಧರ್‌ ಅವರ ಅನುಭವಗಳನ್ನು ಕೇಳಿಕೊಳ್ಳುತ್ತಿದ್ದೇನೆ.

* ‘ಸಲಗ’ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
‘ಟಗರು’ ಚಿತ್ರದಲ್ಲಿ ‘ಡಾಲಿ’ ಇದ್ದರೆ, ‘ಸಲಗ’ದಲ್ಲಿ ಅದಕ್ಕೆ ತದ್ವಿರುದ್ಧವಾದ ‘ಸಮರ್ಥ್’ ಪಾತ್ರವಿದೆ. ಡಾಲಿ ಕ್ರೈಂ ದೃಷ್ಟಿಕೋನದಲ್ಲಿದ್ದರೆ, ‘ಸಲಗ’ದ ‘ಸಮರ್ಥ್’ ಪಾತ್ರ ಕ್ರೈಂ ಲೋಕದ ವಿರುದ್ಧ ಹೋರಾಡುವಂತದ್ದು. ತುಂಬಾ ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್‌ ಅಧಿಕಾರಿಯ ಪಾತ್ರವಿದು. ವಿಜಯ್‌ ಅವರ ಪಾತ್ರಕ್ಕೆ ಇರುವಷ್ಟೇ ಪ್ರಾಧಾನ್ಯತೆಯನ್ನು ಉಳಿದ ಪಾತ್ರಗಳಿಗೂ ನೀಡಿದ್ದಾರೆ. ಒಂದು ಇಡೀ ಕಥೆಯಾಗಿ ಸಿನಿಮಾ ಕಟ್ಟಲು ಒಬ್ಬ ನಿರ್ದೇಶಕನಾಗಿ ತುಂಬಾ ಚೆನ್ನಾಗಿ ಪ್ರಯತ್ನಿಸಿದ್ದಾರೆ.

* ವಿಲನ್‌ ಪಾತ್ರ ಇಷ್ಟವೆ ಅಥವಾ ಹೀರೊ ಪಾತ್ರವೇ?
ಹೀರೊ ಅಥವಾ ವಿಲನ್‌ ಅಂಥ ವ್ಯತ್ಯಾಸವೇನೂ ಇಲ್ಲ. ಅದರಲ್ಲಿ ನೆಗೆಟಿವ್‌ ಶೇಡ್ಸ್‌, ಪಾಸಿಟಿವ್‌ ಶೇಡ್ಸ್‌ ಇರುತ್ತದೆ. ಒಬ್ಬ ನಟನಾಗಿ ನನಗೆ ಪಾತ್ರ ತುಂಬಾ ಸವಾಲೊಡ್ಡುವಂತಿರಬೇಕು. ಅಭಿನಯಕ್ಕೆ ಸಾಕಷ್ಟು ಅವಕಾಶ ಇರಬೇಕು. ಜತೆಗೆ ನಮ್ಮನ್ನು ತುಂಬಾ ಚೆನ್ನಾಗಿ ಪ್ರತಿಬಿಂಬಿಸುವ ನಿರ್ದೇಶಕನಿರಬೇಕು. 

* ಎಂತಹ ಪಾತ್ರಕ್ಕಾಗಿ ನಿಮ್ಮೊಳಗಿನ ನಟ ತುಡಿಯುತ್ತಿದ್ದಾನೆ?
ಐತಿಹಾಸಿಕ ಪಾತ್ರ ನನಗೆ ತುಂಬಾ ಇಷ್ಟ. ಅಲ್ಲಮಪ್ರಭು ಪಾತ್ರ ಮಾಡಿದೆ. ಅದರಿಂದ ತುಂಬಾ ಜನರನ್ನು ತಲುಪಲು ಆಗಿಲ್ಲ. ನಾನು ಚಿಕ್ಕಂದಿನಿಂದಲೂ ಐತಿಹಾಸಿಕ ಪಾತ್ರಗಳನ್ನು ನೋಡಿಕೊಂಡೇ ಬೆಳೆದವನು. ಅಣ್ಣಾವ್ರ ಅಭಿನಯದ ಭಕ್ತ‍ ಪ್ರಹ್ಲಾದ, ಮಯೂರ ಚಿತ್ರಗಳ ಪಾತ್ರಗಳನ್ನು ಏಕಪಾತ್ರಾಭಿನಯ ಮಾಡುತ್ತಿದ್ದೆ. ಐತಿಹಾಸಿಕ ಚಿತ್ರದಲ್ಲಿ ನಟಿಸುವ ಹಂಬಲವಿದೆ. ಯಾರಾದರೂ ನಿರ್ಮಾಪಕರು ಮುಂದೆ ಬಂದರೆ ಅದು ಸಾಧ್ಯವಾಗಲಿದೆ.

* ನಿರ್ದೇಶಕನ ಟೊಪ್ಪಿ ಧರಿಸುವ ಆಲೋಚನೆ ಇದೆಯೇ?
ಅದು ತುಂಬಾ ದೊಡ್ಡ ಜವಾಬ್ದಾರಿ. ನಾನು ಸದ್ಯಕ್ಕೆ ಕಲಿಯುತ್ತಿದ್ದೇನೆ. ಮುಂದೆ ನೋಡೋಣ. ಕಥೆ  ಮಾಡಿಟ್ಟು
ಕೊಂಡಿದ್ದೇನೆ. ಆ ಸಮಯ ಬಂದಾಗ ನಿರ್ದೇಶನ ಮಾಡುವೆ. ‘ಜಯನಗರ ಫೋರ್ತ್‌ ಬ್ಲಾಕ್‌’ ಕಿರುಚಿತ್ರದ ನಂತರ ಸ್ಕ್ರಿಪ್ಟ್‌ ಬರೆದಿರಲಿಲ್ಲ. ಈಗ ಮತ್ತೆ ಬರವಣಿಗೆ ಆರಂಭಿಸಿದ್ದೇನೆ.

* ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಬಗ್ಗೆ ಏನು ಹೇಳುವಿರಿ?
ಯಾವಯಾವುದೇ ಕಿಕ್ಕಿಗೋಸ್ಕರ ಬದುಕುವುದಕ್ಕಿಂತ ಕೆಲಸದ ಕಿಕ್ಕಿಗೆ ಮನುಷ್ಯ ಬದುಕಬೇಕು. ಕೆಲಸವೇ ಕಿಕ್‌ ಕೊಡಬೇಕು. ಆ ಪ್ಯಾಷನ್‌ ಇದ್ದಾಗ ಬೇರೆ ಕಿಕ್‌ ಮನುಷ್ಯನಿಗೆ ಬೇಕಾಗುವುದಿಲ್ಲ. ಈ ಸಮಸ್ಯೆಯನ್ನು ಚಿತ್ರರಂಗಕ್ಕಷ್ಟೇ ತಳುಕು ಹಾಕಿ ಸಾಮಾನ್ಯೀಕರಿಸಬಾರದು. ನಾವು ಪ್ರಶ್ನಿಸಬೇಕಿರುವುದು ವ್ಯವಸ್ಥೆಯನ್ನು. ಡ್ರಗ್ಸ್‌ ತೆಗೆದುಕೊಳ್ಳುವವರು ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲಾ ಕಡೆಯೂ ಇರುತ್ತಾರೆ. ಡ್ರಗ್ಸ್‌ ಜನರ ಕೈಗೆ ಸಿಗದಂತೆ ಆ ಜಾಲ ಮಟ್ಟಹಾಕಬೇಕು. ಇಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ, ಅದು ಸುದ್ದಿಗೆ ಸೀಮಿತವಾಗುತ್ತದೆ.

* ಚಿತ್ರತಾರೆಯರು ಸಮಾಜಕ್ಕೆ ಮಾದರಿಯಾಗಿರಬೇಕಲ್ಲವೇ?
ಖಂಡಿತಾ ಹೌದು. ಒಬ್ಬ ನಟನ ಆಫ್‌ ಸ್ಕ್ರೀನ್‌ ಬದುಕನ್ನು ನೋಡಿ, ಚಿತ್ರದ ಪಾತ್ರವನ್ನಲ್ಲ. ಏಕೆಂದರೆ ಕೆಲವೊಂದು ಪಾತ್ರದ ಮೂಲಕ ಹೇಗೆ ಬದುಕಬೇಕೆಂದು, ಇನ್ನು ಕೆಲವು ಪಾತ್ರಗಳ ಮೂಲಕ ಹೇಗೆ ಬದುಕಬಾರದೆಂದು ಹೇಳುತ್ತಿರುತ್ತೇವೆ. ಜನರಿಗೆ ಎರಡೂ ಆಯ್ಕೆಗಳನ್ನು ಕೊಟ್ಟಿರುತ್ತೇವೆ. ಬದುಕಿನ ಎಲ್ಲ ಆಯಾಮಗಳನ್ನು ತೆರೆದಿಡುವುದು ಕಲೆ ಅಥವಾ ಕಲಾವಿದನ ಕರ್ತವ್ಯ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವುದು ಜನರ ವಿವೇಚನೆಗೆ ಬಿಟ್ಟಿದ್ದಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು