ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರಜ್ವಲ್‌ ದೇವರಾಜ್‌ ಸಂದರ್ಶನ: ಎರಡು ಭಾಗಗಳಲ್ಲಿ ಬರುತ್ತಾನೆ 'ರಾಕ್ಷಸ'

Published : 6 ಮಾರ್ಚ್ 2025, 23:30 IST
Last Updated : 6 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ಪ್ರ

ಸಿನಿಮಾ ಮತ್ತು ನಿಮ್ಮ ಪಾತ್ರದ ಕುರಿತು ಹೇಳಿ.

‘ರಾಕ್ಷಸ’ ಈ ಹಿಂದೆ ತೆರೆಕಂಡಿದ್ದ ನನ್ನದೇ ‘ಜಂಟಲ್‌ ಮನ್‌’ ಚಿತ್ರದೊಂದಿಗೆ ನಂಟು ಹೊಂದಿರುವ ಪಾತ್ರ. ಇಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಇಲಾಖೆಯಲ್ಲಿ ಆತನಿಗೆ ರಾಕ್ಷಸ ಎಂಬ ಹೆಸರು ಇರುತ್ತದೆ. ಕೆಲಸದಲ್ಲಿ ಬಹಳ ನಿಷ್ಠಾವಂತ ಅಧಿಕಾರಿ. ಈ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಈಗ ತೆರೆಗೆ ಬರುತ್ತಿರುವುದು ಸೀಕ್ವೆಲ್‌ ಕಥೆ. ಇದರ ಹಿಂದಿನ ಕಥೆ ನಂತರ ಬರುತ್ತದೆ. ಆತ ಯಾಕೆ ರಾಕ್ಷಸನಾದ, ಅದಕ್ಕೆ ಕಾರಣ ಏನು ಎಂಬುದು ಆ ಭಾಗದ ಕಥೆಯಲ್ಲಿದೆ.

ಪ್ರ

ಇದು ಅಪ್ಪ–ಮಗಳಿಗೆ ಸಂಬಂಧಿಸಿದ ಕಥೆಯೇ?

ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವವರ ಬದುಕಿನ ಕಥೆ. ಕೆಲಸದಲ್ಲಿ ಕಳೆದು ಹೋಗುವ ಅಪ್ಪನಿಗೆ ಮಗಳು, ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಅದರಿಂದ ಏನೆಲ್ಲ ಆಗುತ್ತದೆ ಎಂಬ ಭಾವನಾತ್ಮಕ ಎಳೆಯೊಂದು ಚಿತ್ರದಲ್ಲಿದೆ. ಇನ್ನೊಂದೆಡೆ ಆತನ ಮೇಲೆ ಬ್ರಹ್ಮರಾಕ್ಷಸನ ದಾಳಿಯಾಗುತ್ತದೆ. ಅದರಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ? ಅದಕ್ಕೆ ಕಾರಣವೇನು? ಎಂಬಿತ್ಯಾದಿ ಅಂಶಗಳು ಇನ್ನೊಂದು ಟ್ರ್ಯಾಕ್‌ನಲ್ಲಿ ಬರುತ್ತದೆ. ಒಟ್ಟಾರೆಯಾಗಿ ಇಡೀ ಕುಟುಂಬ ಕುಳಿತು ನೋಡಬಹುದಾದ ಮನರಂಜನಾತ್ಮಕ ಚಿತ್ರವಿದು.

ಪ್ರ

ಬಿಡುಗಡೆ ಪೂರ್ವ ಮಾರಾಟವಾಗದೆ ಇರುವುದರಿಂದ ಚಿತ್ರ ಬಿಡುಗಡೆ ವಿಳಂಬವಾಯಿತೆ?

ಸಿನಿಮಾ ಪ್ರಾರಂಭಿಸಿ ಅಂದುಕೊಂಡಂತೆ ಮುಗಿಸಿದರೆ ಬಿಡುಗಡೆಯೂ ತಕ್ಷಣ ಆಗುತ್ತದೆ. ಕಾರಣಾಂತರಗಳಿಂದ ಸಿನಿಮಾ ಪೂರ್ಣಗೊಳ್ಳುವುದೇ ವಿಳಂಬವಾಗಿದೆ. ಬಿಸಿನೆಸ್‌ ಆಗದೆ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎಂಬುದೆಲ್ಲ ಸುಳ್ಳು. ಈ ಚಿತ್ರದ ವಿತರಣೆ ಹಕ್ಕುಗಳು ಈಗಾಗಲೇ ಮಾರಾಟಗೊಂಡಿವೆ. ಉಳಿದ ವಹಿವಾಟು ಬಿಡುಗಡೆಗೆ ಮೊದಲೇ ಮುಗಿದಿದೆ. ಈಗೀಗ ನನಗೆ ಇಡೀ ಸಿನಿಮಾದಲ್ಲಿ ಭಾಗಿಯಾಗದಿದ್ದರೆ ಕಷ್ಟ ಎಂಬುದು ಅರ್ಥವಾಗಿದೆ. ಹೀಗಾಗಿ ಕೇವಲ ನಟನೆಗೆ ಸೀಮಿತವಾಗಿ ಉಳಿಯದೆ ಈ ವಿಷಯಗಳಲ್ಲಿಯೂ ಭಾಗಿಯಾಗುತ್ತಿದ್ದೇನೆ.

ಪ್ರ

ಹೀರೋಯಿಸಂ ಹೊಂದಿರುವ ಸಿದ್ಧಸೂತ್ರದ ಚಿತ್ರಗಳಿಗೆ ಜನ ಮನ್ನಣೆ ಸಿಗುತ್ತಿಲ್ಲವೇ?

ಹಾಗೇನಿಲ್ಲ, ಕಳೆದ ವರ್ಷ ಹಿಟ್‌ ಆದ ನಾಲ್ಕು ಸಿನಿಮಾಗಳು ಹೀರೊಗಳದ್ದೆ. ಸಿನಿಮಾ ಚೆನ್ನಾಗಿದ್ದು, ಪ್ರಚಾರ ಸರಿಯಾಗಿದ್ದರೆ ಜನ ಬಂದೇ ಬರುತ್ತಾರೆ. ನಾವಾದರೂ ಸುಮ್ಮನೆ ಮನೆಯಲ್ಲಿ ಕುಳಿತಾಗ ಯಾವ ಒಳ್ಳೆಯ ಚಿತ್ರ ಬಂದಿದೆ ಎಂದು ನೋಡುತ್ತೇವೆ. ಜನಕ್ಕೆ ಮನರಂಜನೆ ಯಾವಾಗಲೂ ಬೇಕು. ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿ ಬಂದಾಗ ಜನ ಬರುತ್ತಾರೆ. ನನ್ನ ಹಿಂದಿನ ‘ಗಣ’ ಚಿತ್ರ ಪ್ರಚಾರವಿಲ್ಲದೆ ತೆರೆಗೆ ಬಂತು. ಚಿತ್ರ ಬಂದಿದ್ದು ಯಾರಿಗೂ ಗೊತ್ತಾಗಲಿಲ್ಲ. ಜನ ಬರಬೇಕಿದ್ದರೆ ಪ್ರಚಾರವೂ ಬಹಳ ಮುಖ್ಯ. ಚಿತ್ರ ಬರುತ್ತಿರುವ ವಿಷಯ ಅವರಿಗೆ ತಲುಪಬೇಕು. 

ಪ್ರ

ಈಗ ಸಿನಿಪಯಣ ಸವಾಲು ಎನ್ನಿಸುತ್ತಿದೆಯಾ?

ನಾನು ಯಾವಾಗಲೂ ಬಹಳ ಕೂಲ್‌ ಆಗಿರುವ ವ್ಯಕ್ತಿ. ಎಲ್ಲಿಯೂ ವಿವಾದಗಳಿಗೆ ಸಿಲುಕಿಕೊಳ್ಳುವುದಿಲ್ಲ. ಯಾರ ತಂಟೆಗೂ ಹೋಗುವುವವನಲ್ಲ. ಹೀಗಾಗಿ ಬಹಳ ಕೂಲ್‌ ಆಗಿಯೇ ನಡೆಯುತ್ತಿದೆ. 18ನೇ ವಯಸ್ಸಿನಲ್ಲಿಯೇ ‘ಸಿಕ್ಸರ್‌’ ಹೊಡೆದು, ಈ ಪಯಣ 40 ಸಿನಿಮಾಗಳ ಸನಿಹಕ್ಕೆ ಬಂದು ನಿಂತಿರುವುದು ಖುಷಿಯ ಸಂಗತಿ. ಈ ಪ್ರಯಾಣದಲ್ಲಿ ಹಿಟ್‌ ಸಿನಿಮಾಗಳಿವೆ. ತೋಪಾದ ಸಿನಿಮಾಗಳೂ ಇವೆ. ಒಳ್ಳೆಯ ಸಿನಿಮಾಗಳು ಸೋತಿದ್ದು ಇದ್ದೆ. ಆದರೂ ಬಂಡವಾಳ ಹಾಕಿದವರಿಗೆ ಮೋಸವಾಗುವುದಿಲ್ಲ. ಒಂದಷ್ಟು ಮರಳಿ ಬರುವಷ್ಟು ಮಾರ್ಕೆಟ್‌ ಉಳಿಸಿಕೊಂಡಿರುವೆ ಎಂಬ ಖುಷಿಯಿದೆ.

ಪ್ರ

ನಿಮ್ಮ ಮುಂದಿನ ಸಿನಿಮಾಗಳು...

ಈ ಚಿತ್ರದ ನಿರ್ದೇಶಕ ಲೋಹಿತ್‌ ನಿರ್ದೇಶನದಲ್ಲಿಯೇ ಮಾಡಿದ ಮತ್ತೊಂದು ಚಿತ್ರ ‘ಮಾಫಿಯಾ’ ಬಿಡುಗಡೆಗೆ ಸಿದ್ಧವಿದೆ. ರಾಜಕಲೈ ಕುಮಾರ್ ನಿರ್ದೇಶನದ ‘ಚೀತಾ’ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ‘ಕರಾವಳಿ’ ಒಂದು ಭಿನ್ನ ಕಥೆಯ ಚಿತ್ರ. ಚಿತ್ರೀಕರಣದ ಹಂತದಲ್ಲಿದೆ. ಇದಕ್ಕೆ ಗೆಟಪ್‌ ಬದಲಿಸಬೇಕು. ದೇಹದ ಗಾತ್ರದಲ್ಲಿ ಬದಲಾವಣೆಯಿದೆ. ಹೀಗಾಗಿ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಇದಾದ ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT