ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ‘ದಿಲ್‌ ಪಸಂದ್‌’ ಸವಿದ ಮೇಘಾ ಶೆಟ್ಟಿ

Last Updated 6 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಎಂಬಿಎ ಓದಿಕೊಂಡು ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಹೊತ್ತಿದ್ದ ಮೇಘಾ ಶೆಟ್ಟಿ ಅವರನ್ನು ಇದ್ದಕ್ಕಿದ್ದಂತೆಯೇ ಬಣ್ಣದ ಲೋಕ ಕರೆಯಿತು. ‘ಜೊತೆಜೊತೆಯಲಿ’ ಧಾರಾವಾಹಿಗೆ ಬಣ್ಣ ಹಚ್ಚಿದ ಮೇಘಾ ಅವರನ್ನು ಬೆಳ್ಳಿ ತೆರೆಯೂ ಅರಸಿ ಬಂದಿತು. ‘ತ್ರಿಬಲ್‌ ರೈಡಿಂಗ್‌’ ಮತ್ತು ‘ದಿಲ್‌ ಪಸಂದ್‌’ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಈ ಹೊತ್ತಿನಲ್ಲಿ ಮೇಘಾ ಅವರ ಜೊತೆಗೊಂದಿಷ್ಟು ಮಾತು...

***

ಕಿರುತೆರೆಯಿಂದ ಬೆಳ್ಳಿ ತೆರೆಗೆ ಹೋಗುವ ಬದಲಾವಣೆ ಹೇಗಿತ್ತು?
ಕಷ್ಟವೆನಿಸಲಿಲ್ಲ. ಕಿರುತೆರೆಯಲ್ಲಿ ಕ್ಯಾಮೆರಾ ಎದುರಿಸಿ ಅಭಿನಯಿಸಿದ ಅನುಭವ ಇತ್ತಲ್ಲಾ. ಹಾಗಾಗಿ ಸರಳವೆನಿಸಿತು. ಚಿತ್ರದಲ್ಲಿ ಅಭಿನಯಿಸುವಾಗ ಅವೆಲ್ಲಾ ನೆರವಾದವು. ಹಾಗಾಗಿ ತುಂಬಾ ಖುಷಿಪಟ್ಟಿದ್ದೇನೆ.

‘ದಿಲ್‌ ಪಸಂದ್‌’ ಚಿತ್ರದ ಅನುಭವ?
ತುಂಬಾ ಖುಷಿಯಾಗಿ ಅನುಭವಿಸಿಕೊಂಡು ಈ ಚಿತ್ರದಲ್ಲಿ ತೊಡಗಿದ್ದೇನೆ. ಒಂಥರಾ ಪರಕಾಯ ಪ್ರವೇಶ ಇಲ್ಲಿ ಇದೆ. ಈ ಚಿತ್ರದಲ್ಲಿ ತುಂಬಾ ಮುಗ್ಧ ಹುಡುಗಿಯ ಪಾತ್ರ ನನ್ನದು. ಎಷ್ಟು ಮುಗ್ಧತೆ ಎಂದರೆ ನಾಯಕ (ಡಾರ್ಲಿಂಗ್‌ ಕೃಷ್ಣ) ಒಂದು ವೇಳೆ ವಿಷ ತಂದು ಕೊಟ್ಟರೂ ಅದನ್ನು ಅಮೃತ ಎಂದು ಭಾವಿಸಿಯೇ ಕುಡಿಯುವ ಮನಸ್ಥಿತಿ. ಇಂಥ ಪಾತ್ರ ನನ್ನದು. ಜೊತೆಗೆ ನಿಶ್ವಿಕಾ ನಾಯ್ಡು ಅವರ ಜೊತೆಗೂ ಅದ್ಭುತ ಹೊಂದಾಣಿಕೆಯೂ ಇತ್ತು. ಹಾಗಾಗಿ ಇಡೀ ಚಿತ್ರ ತಂಡ ಖುಷಿ ಪಟ್ಟಿದೆ.

‘ತ್ರಿಬಲ್‌ ರೈಡಿಂಗ್‌’ಗಿಂತ ಮೊದಲೇ ‘ದಿಲ್‌ ಪಸಂದ್‌’ ಬರುತ್ತಿದೆಯಲ್ಲಾ?
ಎರಡೂ ಚಿತ್ರಗಳು ಈಗಾಗಲೇ ಸಿದ್ಧವಾಗಿವೆ. ಆಯಾ ತಂಡದ ಯೋಜನೆಗಳು ಬೇರೆಯೇ ಇರುತ್ತವೆ. ‘ತ್ರಿಬಲ್‌ ರೈಡಿಂಗ್‌’ನ ಹಾಡುಗಳೂ ಬಿಡುಗಡೆಯಾಗಿವೆ. ಅಲ್ಲಿ ಯಾವ ಕೆಲಸವೂ ಬಾಕಿ ಇಲ್ಲ. ಸ್ವಲ್ಪ ವಿಳಂಬ ಆಗಿರಬಹುದು. ಆದರೆ, ಎರಡೂ ಚಿತ್ರಗಳು ಪ್ರೇಕ್ಷಕನಿಗೆ ತುಂಬಾ ಹಿಡಿಸುತ್ತವೆ. ಖುಷಿ ಕೊಡುತ್ತವೆ.

‘ದಿಲ್‌ ಪಸಂದ್‌’ನ್ನು ನಾವು ಯಾಕೆ ನೋಡಬೇಕು?
ಬಾಯಿ ಹುಣ್ಣಾಗುವಷ್ಟು ನಗದೇ ಬಹಳ ಕಾಲವಾಗಿದೆಯೇ? ಈ ಚಿತ್ರ ನೋಡಿ. ನಿಮ್ಮನ್ನು ಪೂರ್ತಿ ನಗಿಸುತ್ತದೆ. ಮನಸ್ಸಿಗೆ ನಿರಾಳತೆ ಉಂಟು ಮಾಡುತ್ತದೆ. ಕುಟುಂಬ ಸಮೇತ ನೋಡಬೇಕಾದ ಸದಭಿರುಚಿಯ ಚಿತ್ರವಿದು. ಪೂರ್ಣ ಪೈಸಾ ವಸೂಲ್‌ ಸಿನಿಮಾ. ಹಾಗಾಗಿ ಪ್ರೇಕ್ಷಕರು ಈ ಚಿತ್ರ ನೋಡಬೇಕು.

ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ನಿಮ್ಮ ಸಿದ್ಧತೆ ಏನಿತ್ತು?
ಏನೂ ಇರಲಿಲ್ಲ. ಅದೊಂಥರಾ ವರ ಎಂದೇ ಹೇಳಬೇಕು. ಎಂಬಿಎ ಓದುತ್ತಿದ್ದವಳನ್ನು ಕಿರುತೆರೆಗೆ ಕರೆತಂದದ್ದೇ ಜೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು. ನನ್ನ ಕಾಲೇಜಿನ ಪರೀಕ್ಷೆಗಳೆಲ್ಲಾ ಮುಗಿಯುವವರೆಗೆ ಕಾದು ಆ ಬಳಿಕ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಆಯ್ಕೆ ಮಾಡಿದರು. ಅದೇನೋ ಗೊತ್ತಿಲ್ಲ. ಒಂದು ಸ್ಕ್ರಿಪ್ಟ್‌ ಕೊಟ್ಟಾಗ ಸ್ವಲ್ಪ ಓದಿಕೊಂಡು ಪರಕಾಯ ಪ್ರವೇಶ ಮಾಡಿಬಿಡುತ್ತೇನೆ. ಮುಖ್ಯವಾಗಿ ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಅವರ ಆಶೀರ್ವಾದ ಸಿಕ್ಕಿದೆ. ಇದೇ ಕಾರಣ ಎನ್ನಬೇಕು.

ಕುಟುಂಬದ ಬಗ್ಗೆ ಹೇಳಿ.
ನನ್ನ ತಂದೆ ಸುರೇಶ್‌ ಶೆಟ್ಟಿ ರಂಗಭೂಮಿ ಕಲಾವಿದರು. ಅಮ್ಮ ಗೃಹಿಣಿ. ಹಿರಿಯ ಅಕ್ಕ ಧಾರಾವಾಹಿ ನಿರ್ಮಾಪಕಿ. ತೆಲುಗು ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಎರಡನೇ ಅಕ್ಕ ಮೇಕಪ್‌ ಮತ್ತು ಫ್ಯಾಷನ್‌ ಡಿಸೈನಿಂಗ್‌ ಕ್ಷೇತ್ರದಲ್ಲಿದ್ದಾರೆ. ಹೀಗೆ ನಮ್ಮ ಕುಟುಂಬಕ್ಕೆ ಕಲಾ ಕ್ಷೇತ್ರದ ನಂಟು ಇದೆ. ಅದು ನನ್ನ ಮೂಲಕವೂ ಮುಂದುವರಿದಿದೆ.

ಅಭಿಮಾನಿಗಳು ಎಲ್ಲಿ ಹೆಚ್ಚು ಇದ್ದಾರೆ? ಕಿರುತೆರೆಯಲ್ಲೋ ಅಥವಾ ಬೆಳ್ಳಿ ತೆರೆಯಲ್ಲೋ?
ಬೆಳ್ಳಿತೆರೆಯಲ್ಲಿ ಇತ್ತೀಚೆಗಷ್ಟೇ ಕಾಣಿಸಿಕೊಂಡಿದ್ದೇನೆ. ಈ ಕ್ಷೇತ್ರಕ್ಕೆ ಕರೆತಂದ ಕಿರುತೆರೆಯನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಅಷ್ಟೊಂದು ಕೆಲಸ ಕಲಿಸಿದೆ. ಬೆಳೆಸಿ, ಪೋಷಿಸಿದೆ. ಜನ ಗುರುತಿಸಿ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಅಷ್ಟೂ ತಂಡಕ್ಕೆ ಆ ಕ್ಷೇತ್ರಕ್ಕೆ, ಅವರ ಆಶೀರ್ವಾದಕ್ಕೆ ನಾನು ಋಣಿ.

ಮುಂದಿನ ಕನಸುಗಳು?‌
ಖಂಡಿತಾ ತುಂಬಾ ಇವೆ. ಒಂದಿಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಅದಕ್ಕಾಗಿ ಸ್ವಲ್ಪ ಸಮಯವೂ ಬೇಕು. ಶೀಘ್ರವೇ ತಿಳಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT