ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview - ಚೈತ್ರಾ ಜೆ ಆಚಾರ್‌ | ಸಾಗರದಾಚೆಗಿನ ‘ಸುರಭಿ’ಯ ಅಂತರಾಳ

Last Updated 25 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

‘ಸೋಜುಗದ ಸೂಜು ಮಲ್ಲಿಗೆ’ ಚೈತ್ರಾ ಜೆ ಆಚಾರ್‌, ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಹೊರಟ ‘ಮನು’ವಿನ ಜೊತೆಗೆ ‘ಸುರಭಿ’ಯಾಗಿ ಹೆಜ್ಜೆಹಾಕಿದ್ದಾರೆ. ಈ ಹೊಸ ಪ್ರೊಜೆಕ್ಟ್‌ ಬಗ್ಗೆ ಸಿನಿಮಾ ಪುರವಣಿ ಜೊತೆ ಚೈತ್ರಾ ಮಾತಿಗಿಳಿದಿದ್ದು ಹೀಗೆ...

***

ಎಂಜಿನಿಯರಿಂಗ್‌ ಓದಿದ ಚೈತ್ರಾ ಬಣ್ಣದ ಲೋಕ ಪ್ರವೇಶಿಸಿದ್ದು ಹೇಗೆ?
ನನ್ನ ತಂದೆಯ ಊರು ತುಮಕೂರು. ನಾನು ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಹಾಗಾಗಿ ನಾನು ಬೆಂಗ್ಳೂರು ಹುಡ್ಗಿ. ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎನ್ನುವ ಸಣ್ಣ ಸುಳಿವೂ ನನಗೆ ಇರಲಿಲ್ಲ. ಸಿನಿಮಾ ಹಿನ್ನೆಲೆಯೂ ನನಗೆ ಇಲ್ಲ. ಶಾಲಾ ದಿನಗಳಲ್ಲಿ ಹಾಗೂ ಪದವಿಯ ಸಂದರ್ಭದಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದೆಯಾಗಿದ್ದೆ. ಪದವಿಯ ಬಳಿಕ ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಸೇರುವ ಬಯಕೆ ನನ್ನದಾಗಿತ್ತು. ಆದರೆ ಪೋಷಕರ ಒತ್ತಡದ ಕಾರಣ ಎಂಜಿನಿಯರಿಂಗ್‌ ಸೇರಿಕೊಂಡೆ. ಎಂಜಿನಿಯರಿಂಗ್‌ನ ಅಂತಿಮ ವರ್ಷದಲ್ಲಿದ್ದಾಗ ಅನೀಶ್‌ ಅವರ ವಿಂಕ್‌ವಿಸಿಲ್‌ ಪ್ರೊಡಕ್ಷನ್ಸ್‌ ‘ಬೆಂಗಳೂರು ಕ್ವೀನ್ಸ್‌’ ಎಂಬ ವೆಬ್‌ಸರಣಿಗೆ ಕಾಸ್ಟಿಂಗ್‌ ಕಾಲ್‌ ಮಾಡಿತ್ತು. ಈ ಸಂದರ್ಭದಲ್ಲಿ ‘ಸೈಲೆಂಟ್‌ ಸ್ವಾತಿ’ ಎಂಬ ಪಾತ್ರಕ್ಕೆ ನನ್ನ ಫೋಟೊವನ್ನು ನನ್ನ ಸ್ನೇಹಿತೆಯರು ನನಗೇ ತಿಳಿಯದ ಹಾಗೆ ಕಳುಹಿಸಿದ್ದರು. ಈ ಪಾತ್ರಕ್ಕೆ ನನ್ನ ಆಯ್ಕೆಯಾಗಿತ್ತು. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದೆ. ಹೀಗೆ ಇಲ್ಲಿಂದ ನನ್ನ ಸಿನಿಪಯಣ ಆರಂಭವಾಯಿತು.

ಬೆಳ್ಳಿತೆರೆಯ ಪಯಣ...
ವೆಬ್‌ಸರಣಿ ಬಳಿಕ ಗುರುಪ್ರಸಾದ್‌ ಅವರ ನಿರ್ದೇಶನದ ‘ಅದೇಮಾ’ ಚಿತ್ರಕ್ಕೆ ಆಡಿಷನ್‌ ನೀಡಿದ್ದೆ. ಇದು ನಾನು ಒಪ್ಪಿಕೊಂಡಿದ್ದ ಮೊದಲ ಸಿನಿಮಾ. ಆದರೆ ಕಾರಣಾಂತರಗಳಿಂದ ಇದರ ಚಿತ್ರೀಕರಣ ಅರ್ಧದಲ್ಲೇ ಸ್ಥಗಿತವಾಯಿತು. ಇದಾದ ಬಳಿಕ ರಾಜ್‌ ಬಿ.ಶೆಟ್ಟಿ ಅವರಿದ್ದ ‘ಮಹಿರ’ ಸಿನಿಮಾಗೆ ಆಡಿಷನ್‌ ನೀಡಿದ್ದೆ. ಇದು ನನ್ನ ಮೊದಲ ಸಿನಿಮಾ. ಇದಾದ ಬಳಿಕ ನೇರವಾಗಿ ನನಗೆ ಆಫರ್‌ಗಳು ಬರಲು ಆರಂಭವಾದವು. ಹೀಗಾಗಿ ನನಗೆ ಕಿಕ್‌ಸ್ಟಾರ್ಟ್‌ ನೀಡಿದ ಸಿನಿಮಾ ‘ಮಹಿರ’. ಬಳಿಕ ‘ತಲೆದಂಡ’, ‘ಆದೃಶ್ಯ’, ‘ಗಿಲ್ಕಿ’ ಹೀಗೆ ಸಾಲು ಸಾಲು ಸಿನಿಮಾಗಳು ಕೈಹಿಡಿದವು. ಪರಂವಃ ಸ್ಪಾಟ್ಲೈಟ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ‘ಸ್ಟ್ರಾಬೆರಿ’ ಸಿನಿಮಾದಲ್ಲೂ ನಾನು ನಟಿಸಿದ್ದು, ನಾಗರಾಜ್‌ ಸೋಮಯಾಜಿ ನಿರ್ದೇಶನದ ‘ಅಕಟಕಟ’ ಸಿನಿಮಾ ಪ್ರಿಪ್ರೊಡಕ್ಷನ್‌ ಹಂತದಲ್ಲಿದೆ. ನವೆಂಬರ್‌–ಡಿಸೆಂಬರ್‌ನಲ್ಲಿ ಇದರ ಚಿತ್ರೀಕರಣ ಆರಂಭವಾಗಬಹುದು.

‘ತಲೆದಂಡ’ ಸಿನಿಮಾದ ಅನುಭವ...
ನಟನೆಯ ಬಗ್ಗೆ ನನಗೆ ಒಲವಿತ್ತು. ಅದು ಗಂಭೀರವಾದ ಪಾತ್ರವಾಗಿರಲಿ ಅಥವಾ ಹಾಸ್ಯ ಪ್ರಧಾನ ಚಿತ್ರವಾಗಿರಲಿ ನನಗೆ ನಟನೆಯಷ್ಟೇ ಕಾಣುತ್ತಿತ್ತು. ನನಗೆ ಕಥೆ, ಪಾತ್ರ ಸೆಳೆಯುತ್ತದೇ ವಿನಾ ಅದು ಕಮರ್ಷಿಯಲ್‌ ಸಿನಿಮಾವೇ ಅಥವಾ ಕಲಾತ್ಮಕ ಚಿತ್ರವೇ ಎನ್ನುವುದನ್ನು ನಾನು ನೋಡುವುದಿಲ್ಲ. ಈ ಕಥೆಯಲ್ಲಿ ನನ್ನ ಪಾತ್ರವನ್ನು ತೆಗೆದುಹಾಕಿದರೆ ಸಿನಿಮಾ ಅಪೂರ್ಣ ಎನ್ನುವಂತಿದ್ದರೆ ಕಣ್ಣುಮುಚ್ಚಿ ಆ ಪಾತ್ರವನ್ನು ನಾನು ಒಪ್ಪಿಕೊಳ್ಳುತ್ತೇನೆ. ತೆರೆಯ ಮೇಲೆ ಐದು ನಿಮಿಷವೇ ಆ ಪಾತ್ರ ಬರಲಿ, ಆ ಪಾತ್ರ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿಯುವಂತಿರಬೇಕು. ಇಂಥ ಪಾತ್ರ ನನಗೆ ‘ತಲೆದಂಡ’ ಸಿನಿಮಾದಲ್ಲಿ ದೊರಕಿತ್ತು. ಸೋಲಿಗರ ಹುಡುಗಿ ಪಾತ್ರ ಸವಾಲಿನಿಂದ ಕೂಡಿತ್ತು. ಬೆಂಗ್ಳೂರು ಹುಡ್ಗಿಯಾಗಿ ಆ ಭಾಷೆ ಕಲಿತೆ. ಸಂಚಾರಿ ವಿಜಯ್‌ ಅವರ ಜೊತೆಗಿನ ನಟನೆ ಕ್ಷಣಕ್ಷಣವೂ ನೆನಪುಗಳ ಬುತ್ತಿ ತೆರೆಯುತ್ತದೆ. ರಾಷ್ಟ್ರಪ್ರಶಸ್ತಿ ವಿಜೇತ ನಟನಾದರೂ, ಯಾವ ಹಮ್ಮು ಇಲ್ಲದೆ ಜೊತೆಗೆ ಬೆರೆಯುತ್ತಿದ್ದರು, ನಮ್ಮ ಸಲಹೆಗಳಿಗೆ ಕಿವಿಯಾಗುತ್ತಿದ್ದರು. ನಮಗೂ ನಟನೆಯ ಹಲವು ಸಲಹೆ ನೀಡುತ್ತಿದ್ದರು. ಪರಕಾಯ ಪ್ರವೇಶದ ನಟನೆ ಅವರದ್ದು. ವಿಜಯ್‌ ಅವರನ್ನುನೆನಪಿಸಿಕೊಂಡಾಗಲೆಲ್ಲ, ಮಾತನಾಡುವಾಗೆಲ್ಲ ನಾನು ಭಾವುಕಳಾಗುತ್ತೇನೆ.

‘ಸಪ್ತ ಸಾಗರದಾಚೆ..’ ಚೈತ್ರಾ ಹೆಜ್ಜೆ ಇಟ್ಟ ಕ್ಷಣ...
‘ಬ್ಲಿಂಕ್‌’ ಸಿನಿಮಾದ ಚಿತ್ರೀಕರಣದಲ್ಲಿದ್ದ ವೇಳೆ ನನಗೆ ‘ಸಪ್ತ ಸಾಗರದಾಚೆ ಎಲ್ಲೋ’(ಎಸ್‌ಎಸ್‌ಇ) ಸಿನಿಮಾ ತಂಡದಿಂದ ಕರೆಬಂದಿತ್ತು. ಈ ತಂಡ ಇನ್ನೊಂದು ಸಿನಿಮಾ ಮಾಡುತ್ತಿರಬೇಕು ಅದಕ್ಕಾಗಿ ಆಡಿಷನ್‌ಗೆ ಕರೆಯುತ್ತಿದ್ದಾರೆ ಎಂದು ನನಗನಿಸಿತು. ವಾರದ ನಂತರ ನಾನು ‘ಎಸ್‌ಎಸ್‌ಇ’ ಕಚೇರಿಗೆ ಹೋದೆ. ನಿರ್ದೇಶಕ ಹೇಮಂತ್‌ ಎಂ. ರಾವ್‌ ಅವರು ಎದುರಿಗೆ ಕುಳಿತು ಎಸ್‌ಎಸ್‌ಇ ದ್ವಿತೀಯಾರ್ಧದ ಕಥೆ ಹೇಳುತ್ತಾ, ‘ಸುರಭಿ’ ಎಂಬ ಪಾತ್ರವನ್ನು ನೀವು ಮಾಡಬೇಕು ಎಂದರು. ನನಗಿನ್ನೂ ನೆನಪಿದೆ. ಎಂಜಿನಿಯರಿಂಗ್‌ ಓದುತ್ತಿರುವಾಗ ಹೇಮಂತ್‌ ಅವರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾವನ್ನು ಆರೇಳು ಸಲ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿದ್ದೆ. ನನ್ನ ಫೇವರೆಟ್‌ ನಿರ್ದೇಶಕರು ಅವರು. ಈಗ ಅವರೇ ನನ್ನನ್ನು ಅವರ ಸಿನಿಮಾಗೆ ಆಯ್ಕೆ ಮಾಡಿದ್ದಾರೆ ಎಂದು ಆ ಕ್ಷಣದಲ್ಲಿ ನಂಬದಾದೆ. ಅಂದು ನನ್ನ ಕನಸು ನನಸಾಗಿತ್ತು.

ಯಾರು ಈ ‘ಸುರಭಿ’?
‘ಸುರಭಿ’ ಎಲ್ಲ ಹುಡುಗಿಯರಂತೆ ಸಾಮಾನ್ಯ ಹುಡುಗಿ. ಎಲ್ಲರ ರೀತಿ ಕಚೇರಿಗೆ ಹೋಗಿ ದುಡಿಯುವ ಹುಡುಗಿ. ವೃತ್ತಿ ವಿಚಾರದಲ್ಲಿ ಯಾವುದೇ ವಿಶೇಷ ಇಲ್ಲ. ಆದರೆ ಒಳಗೆಷ್ಟು ಪ್ರೀತಿ ಇದ್ದರೂ, ಅಳುಕು ಇದ್ದರೂ ಹೊರಗಡೆ ತೋರಿಸಿಕೊಳ್ಳದ ವ್ಯಕ್ತಿತ್ವ ಅವಳದ್ದು. ಜೀವನದಲ್ಲಿ ಬಹಳಷ್ಟು ಸಂಕಷ್ಟ, ಕಷ್ಟ ಅನುಭವಿಸಿದ್ದಾಳೆ. ಇದನ್ನೆಲ್ಲಾ ಪಕ್ಕಕ್ಕೆ ಇಟ್ಟು ಜೀವನ ನಡೆಸುತ್ತಿರುವವಳೇ ‘ಸುರಭಿ’. ಈ ಪಾತ್ರವನ್ನು ಡಿಕೋಡ್‌ ಮಾಡುವುದು ಇತರರಿಗೆ ಅಷ್ಟು ಸುಲಭವಲ್ಲ. ತನ್ನ ಸುತ್ತ ಒಂದು ರೇಖೆ ಬರೆದುಕೊಂಡು ಬೇರೆ ಯಾರನ್ನೂ ಹತ್ತಿರ ಸೇರಿಸದೆ ಬದುಕುವವಳು ಆಕೆ. ಸುರಭಿ ಹಾಡುತ್ತಾಳೆ, ಗುನುಗುತ್ತಾಳೆ, ಆದರೆ ಗಾಯಕಿ ಅಲ್ಲ. ‘ಸುರಭಿ’ಗೆ ‘ಮನು’(ರಕ್ಷಿತ್‌ ಶೆಟ್ಟಿ) ಎಂಬ ಪಾತ್ರದ ಜೊತೆ ಹೇಗೆ ಸಂಬಂಧ ಬೆಳೆಯುತ್ತದೆ ಎನ್ನುವುದೇ ಕಥೆ. ಇದನ್ನು ಅದ್ಭುತವಾಗಿ ಹೇಮಂತ್‌ ಹೆಣೆದಿದ್ದಾರೆ. ನಾನು ಈ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಎಷ್ಟು ಉತ್ಸುಕಳಾಗಿದ್ದೇನೋ ಅಷ್ಟೇ ಭಯ ಒಳಗಿದೆ. ರಕ್ಷಿತ್‌ ಅವರ ಜೊತೆ ನಟನೆಯ ಕಾರ್ಯಾಗಾರ ಶೀಘ್ರದಲ್ಲೇ ಆರಂಭವಾಗಲಿದೆ.

* ಪರಂವಃ ಎನ್ನುವ ದೊಡ್ಡ ಬ್ಯಾನರ್‌ನಡಿ ಕೆಲಸ ಮಾಡಿದ ಅನುಭವ ಹೇಗಿತ್ತು?
ನಾನು ರಕ್ಷಿತ್‌ ಶೆಟ್ಟಿ ಅವರ ಫ್ಯಾನ್‌. ಪರಂವಃದಡಿ ಇನ್ನೊಂದೆರಡು ಸಿನಿಮಾ ಮಾಡಿದರೆ ನಾನು ರಕ್ಷಿತ್‌ ಅವರಿಂದ ಪಿಂಚಣಿ ಕೇಳಬೇಕಾಗುತ್ತದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ‘ಸೋಜುಗದಾ ಸೂಜು ಮಲ್ಲಿಗೆ’ ಹಾಡು ಹಾಡಿದ್ದೆ, ನಂತರ ‘ಸ್ಟ್ರಾಬೆರಿ’, ಇದೀಗ ‘ಎಸ್‌ಎಸ್‌ಇ’ ಹೀಗೆ ಪರಂವಃ ಜೊತೆ ಬ್ಯಾಕ್‌ ಟು ಬ್ಯಾಕ್‌ ಅಸೋಸಿಯೇಷನ್‌ ಇದ್ದೇ ಇದೆ.

ನನ್ನ ಕೆಲಸದ ಮುಖಾಂತರ ಇಂತಹ ತಂಡದ ಜೊತೆ ಸೇರುತ್ತಿರುವುದು ನನಗೆ ಹೆಚ್ಚಿನ ಸ್ಫೂರ್ತಿ ನೀಡುತ್ತದೆ. ಸಿನಿಮಾ ಮೇಲೆ ರಕ್ಷಿತ್‌ ಅವರಿಗೆ ಇರುವ ಹುಚ್ಚು, ಅತಿಯಾದ ಅಭಿಮಾನ ನನ್ನನ್ನೂ ಆಕರ್ಷಿಸಿದೆ. ಕಥೆಯನ್ನು ನೋಡಿ ಎಕ್ಸೈಟ್‌ ಆಗುವ ವ್ಯಕ್ತಿ ಅವರು. ರಕ್ಷಿತ್‌ ಅವರು ನಿರ್ಮಾಪಕನಾಗಿ ತುಂಬಾ ದುಡ್ಡು ಮಾಡಬೇಕು. ಏಕೆಂದರೆ ಅವರು ಅದನ್ನು ಮತ್ತೆ ಸಿನಿಮಾಗೆ ಹೂಡುತ್ತಾರೆ, ಇದರಿಂದ ಕಲಾವಿದರಿಗೆ ಅವಕಾಶ ಸಿಗುತ್ತದೆ. ಈ ಮಾತು ಹೇಳುವಾಗ ಕೊಂಚ ಸ್ವಾರ್ಥವೂ ಇದೆ.

ಸದ್ಯಕ್ಕೆ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಒಂದೆರಡು ಕಥೆಗಳು ಇಷ್ಟವಾಗಿದೆ. ಒಂದು ಪಾತ್ರವನ್ನು ಪೂರ್ಣಗೊಳಿಸಿ ಮತ್ತೊಂದು ಪಾತ್ರಕ್ಕೆ ಧುಮುಕುವ ನಿಯಮ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT