ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನ ‘ನಿಧಿ’

Last Updated 18 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಚಂದನವನಕ್ಕೆ ಹೊಸ ಭರವಸೆಯ ‘ನೀಲಿಹಕ್ಕಿ’ಯಾಗಿ ಕಾಲಿಟ್ಟು ಮಿಂಚಿದ ಶ್ರೀನಿಧಿ ಹೊಸ ಅವಕಾಶಗಳ ಹೊಸ್ತಿಲಿನಲ್ಲಿದ್ದಾರೆ.

ಗೋವಾದಲ್ಲಿ ನ.20 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡದ ನಾಲ್ಕು ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಅವುಗಳಲ್ಲಿ ಗಣೇಶ ಹೆಗಡೆ ನಿರ್ದೇಶನದ ‘ನೀಲಿ ಹಕ್ಕಿ’ ಮತ್ತು ಸಾಗರ್ ಪುರಾಣಿಕ್ ಅವರ ನಿರ್ದೇಶನದ ‘ಡೊಳ್ಳು’ ಚಿತ್ರಗಳು ಹೊಸ ವಿಚಾರದ, ಹೊಸ ಹೊಳಹು ಇರುವ ಚಿತ್ರಗಳೆನಿಸಿವೆ. ಈ ಎರಡೂ ಚಿತ್ರಗಳ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಟಿ ಉದಯೋನ್ಮುಖ ಪ್ರತಿಭೆ, ಮಲೆನಾಡಿನ ಕೂಸು ನಿಧಿ ಹೆಗಡೆ.

ಶಿರಸಿ ಸಮೀಪದ ತ್ಯಾಗಲಿಯವರಾಗಿರುವ ನಿಧಿ ನಾಗರಾಜ ಹೆಗಡೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮನಃಶಾಸ್ತ್ರದಲ್ಲಿ ರ‍್ಯಾಂಕ್‌ ಗಳಿಸಿದವರು. ನಟನೆಯ ಕಿಂಚಿತ್‌ ಹಿನ್ನೆಲೆಯಿಲ್ಲದಿದ್ದರೂ ಸ್ವಯಂಪ್ರತಿಭೆ, ಸಾಮರ್ಥ್ಯದಿಂದ ಕನ್ನಡ ಚಿತ್ರದಲ್ಲಿ ಭರವಸೆ ಮೂಡಿಸಿರುವ ಸಹಜ ಚೆಲುವೆ. ಹೈದರಾಬಾದಿನ ಅನ್ನಪೂರ್ಣ ಮಾಧ್ಯಮ ಮತ್ತು ನಟನಾ ಕಾಲೇಜಿನಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಚಿಕ್ಕವಳಿದ್ದಾಗಲೇ ಅಭಿನಯದ ಒಲವು ಹೊಂದಿದ್ದ ನಿಧಿಗೆ ‘ಕಡೇಪಕ್ಷ ಪದವಿನಾದ್ರೂ ಮುಗಿಸಿ ನಿನ್ನಿಷ್ಟದ ಸಿನಿಮಾ ಕ್ಷೇತ್ರಕ್ಕೆ ಸೇರು’ ಎಂಬುದು ಅಪ್ಪ–ಅಮ್ಮ ಮಾಡಿದ್ದ ತಾಕೀತು. ಹೆತ್ತವರ ಮಾತು ಮೀರದ ಮಗಳು ಮನಃಶಾಸ್ತ್ರದಲ್ಲಿ ಪದವಿ ಓದಿ ರ‍್ಯಾಂಕ್‌ ಅನ್ನೂ ಗಳಿಸಿದರು. ಅಲ್ಲಿಂದ ಮುಂದೆ ಅವರಿಷ್ಟದಂತೆ ಅಭಿನಯದಲ್ಲಿ ತೊಡಗಿಕೊಂಡರು. ತಾವು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಎರಡು ಚಿತ್ರಗಳು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಸಂಭ್ರಮ, ಖುಷಿಯನ್ನು ನಿಧಿ ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಈಗಾಗಲೇ ಹಲವು ಕಿರುಚಿತ್ರಗಳಲ್ಲಿ ಅಭಿನಯಿಸಿರುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಶಿರಸಿ ಪರಿಸರದಲ್ಲಿ ಚಿತ್ರೀಕರಣವಾಗಿರುವ ‘ನೀಲಿ ಹಕ್ಕಿ’ ಚಿತ್ರ ಈಗಾಗಲೇ ನ್ಯೂಯಾರ್ಕ್ ಚಲನಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿದೆ. ರಿಷಬ್ ಶೆಟ್ಟಿ ಅವರ ‘ಕಥಾ ಸಂಗಮ’ ಚಿತ್ರದಲ್ಲಿ ಲಚ್ಚವ್ವ ಕಥೆಯಲ್ಲಿ ಮುಖ್ಯ ಪಾತ್ರದಲ್ಲೂ ನಟಿಸಿದ ಖುಷಿಯಿದೆ. ಇವುಗಳ ಜೊತೆಗೆ ಹಲವಾರು ಕಿರುಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದೇನೆ. ‘ನುತ್ತಾ’ ಅನ್ನುವ ಕಿರುಚಿತ್ರದ ನಟನೆಗೆ ಪೋರ್ಟ್ ಬ್ಲೇರ್ ಚಿತ್ರೋತ್ಸವದಲ್ಲಿ ಉತ್ತಮ ನಟಿ ಪ್ರಶಸ್ತಿ ಪಡೆದಿರುವೆ. ನನ್ನ ಅಭಿನಯದ ‘ನಾನ್ ದೇವ್ರು’ ಅನ್ನುವ ಕಿರುಚಿತ್ರ, ತೆಲುಗಿನಲ್ಲೂ ಡಬ್ ಆಗಿ ಪ್ರದರ್ಶನ ಕಂಡಿದ್ದು, 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಷ್ಟೇ ಅಲ್ಲ; ’ಚಿತ್ರ ಭಾರತಿ’ ಚಿತ್ರೋತ್ಸವದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ’ ಎನ್ನುವಾಗ ನಿಧಿ ಅವರ ಮಾತಿನಲ್ಲಿ ಸಂಭ್ರಮ ಮನೆಮಾಡಿತ್ತು.

ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಜಾಹೀರಾತೊಂದರಲ್ಲಿ ನಿಧಿ ಹೆಗಡೆ ಅವರನ್ನು ಬಳಸಿಕೊಂಡಿದೆ. ಸದ್ಯ ಇನ್ನೂ ಹಲವಾರು ಚಿತ್ರಗಳಲ್ಲಿ ನಿಧಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವುವೆಲ್ಲವೂ ಕಲಾತ್ಮಕ ಚಿತ್ರಗಳೆನಿಸಿದ್ದು, ಮುಂದೆ ಕಮರ್ಷಿಯಲ್‌ ಸಿನಿಮಾದಲ್ಲೂ ಅಭಿನಯವನ್ನು ಮುಂದುವರಿಸುವ ಬಯಕೆ ನಿಧಿ ಅವರದ್ದು.

ನಿಧಿಯ ಭಾವನಾತ್ಮಕ, ಕಲಾತ್ಮಕ ಅಭಿನಯ ಅವರಿಗೆ ಇನ್ನಷ್ಟು ಅವಕಾಶಗಳಿಗೆ ದಾರಿ ಮಾಡಿಕೊಟ್ಟಿದೆ. ಚಿತ್ರರಂಗದಲ್ಲಿ ಮತ್ತಷ್ಟು ಭರವಸೆಯನ್ನು ಕಟ್ಟಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT